ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಶಿಲೀಂಧ್ರ; ಹೆದರಿಕೆ ಬೇಡ, ಎಚ್ಚರಿಕೆ ಇರಲಿ

Last Updated 31 ಮೇ 2021, 19:30 IST
ಅಕ್ಷರ ಗಾತ್ರ

ಕೋವಿಡ್‌ನ ಆತಂಕದ ಜೊತೆಯಲ್ಲಿಯೇ ‘ಬ್ಲ್ಯಾಕ್‌ ಫಂಗಸ್‌’ ಕೂಡ ಜನರನ್ನು ಆತಂಕಕ್ಕೆ ತಳ್ಳಿದೆ. ಈ ಸಮಸ್ಯೆಯ ಪರಿಚಯ, ಪರಿಹಾರದ ಮಾರ್ಗಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ...

ಈಗ ಎಲ್ಲರ ಗಮನ ಸೆಳೆದು, ಆತಂಕಕ್ಕೆ ಕಾರಣವಾಗಿರುವುದು Mucormycosis; ಇದು ಬೂಜಿನಿಂದಾಗುವ (Fungus) ಒಂದು ಕಾಯಿಲೆ. ‘ಬ್ಲ್ಯಾಕ್‌ ಫಂಗಸ್‌’ (ಕಪ್ಪು ಶಿಲೀಂಧ್ರ) ಹೆಸರಿನಿಂದ ಕುಖ್ಯಾತಿಯನ್ನು ಪಡೆದಿದೆ.

ಬೂಜು/ಶಿಲೀಂಧ್ರ – ಇದು ಪದರವುಳ್ಳ ಏಕಕೋಶ ಜೀವಿ; ಬ್ಯಾಕ್ಟೀರಿಯ ಪದರರಹಿತ ಏಕಕೋಶ ಜೀವಿ. ಜಗತ್ತಿನಲ್ಲಿ ಬೇರೆ ಬೇರೆ ಜಾತಿಯ ಲಕ್ಷಾಂತರ ಶಿಲೀಂಧ್ರಗಳಿವೆ. ಶಿಲೀಂಧ್ರಗಳು ಮನುಷ್ಯನಿಗೆ ಉಪಯೋಗಕಾರಿಯಾಗಿರುವುದೇ ಹೆಚ್ಚು. ಉದಾಹರಣೆಗೆ ಬ್ರೆಡ್ ತಯಾರಿಕೆಯಲ್ಲಿ ಉಪಯೋಗಿಸುವ yeast, ಬಿಯ್‌ನ ತಯಾರಿಕೆಯಲ್ಲಿ ಹುದುಗುವಿಕೆಗೆ ಉಪಯೋಗಿಸುವ saccharomyces, ತಿನ್ನಲು ಉಪಯೋಗಿಸುವ ಅಣಬೆ – ಹೀಗೆ ಹತ್ತು ಹಲವಾರು.

ಇತ್ತೀಚಿಗೆ ಕೋವಿಡ್‌ಗೆ ನೀಡುತ್ತಿರುವ ಚಿಕಿತ್ಸೆಯಲ್ಲಿ ಹೆಚ್ಚು ಸ್ಟೀರಾಯ್ಡ್ ಉಪಯೋಗಿಸುತ್ತಿರುವ ಕಾರಣದಿಂದಾಗಿ ‘ಕಪ್ಪು ಶಿಲೀಂಧ್ರ’ (ಕರಿಬೂಜು/Black Fungus) ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಬೇರೆಯ ಬೂಜಿನ ಕಾಯಿಲೆಗಳಿಗೆ ಹೋಲಿಸಿದರೆ ಈ ಕಪ್ಪು ಶಿಲೀಂಧ್ರ ಅತಿ ಶೀಘ್ರದಲ್ಲಿ ದೇಹದ ಬಹುಭಾಗಗಳಿಗೆ ಹರಡುವ ಸಾಮರ್ಥ್ಯ ಹೊಂದಿದೆ; ಇದು ರಕ್ತನಾಳಗಳಿಗೆ ಹಬ್ಬುವ (Angioinvasive) ಶಕ್ತಿಯನ್ನು ಹೊಂದಿರುವುದೇ ಇದಕ್ಕೆ ಕಾರಣವಾಗಿದೆ.

ಬೇರೆಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಕಪ್ಪು ಶಿಲೀಂಧ್ರ ಕಾಯಿಲೆಯ ಸಾಧ್ಯತೆ ಅತಿ ಹೆಚ್ಚು. ಭಾರತದಲ್ಲಿ ಮಧುಮೇಹವನ್ನು ಸರಿಯಾಗಿ ನಿಯಂತ್ರಿಸಿಕೊಳ್ಳದಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಬಹುದು. ಕೋವಿಡ್‌ಗೆ ಎಗ್ಗಿಲ್ಲದಂತೆ ಸ್ಟೀರಾಯ್ಡ್‌ಗಳನ್ನು ಉಪಯೋಗಿಸುತ್ತಿರುವುದರಿಂದ, ರೋಗಿಗಳ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಾಗಿ, ದೇಹದ ರೋಗನಿರೋಧಕಶಕ್ತಿ ಕುಗ್ಗಿ ಈ ಬೂಜುಕಾಯಿಲೆ ಅಮರಿಕೊಳ್ಳುತ್ತಿದೆ. ಇತರೆ ದೇಶಗಳಲ್ಲಿ ಮಧುಮೇಹವನ್ನು ಸ್ವಲ್ಪ ಮಟ್ಟಿಗಾದರೂ ನಿಯಂತ್ರಿಸುವುದರಲ್ಲಿ ಮೇಲಗೈ ಪಡೆದಿರುವುದರಿಂದ ಆ ದೇಶಗಳಲ್ಲಿ ಮಧುಮೇಹಿಗಳಿಗಿಂತ ಹೆಚ್ಚಾಗಿ ರಕ್ತದ ಕ್ಯಾನ್ಸರ್, HIV, ಅತಿಯಾದ ಕಬ್ಬಿಣದ ಅಂಶ, ಪೌಷ್ಟಿಕಾಂಶದ ಕೊರತೆ, ಅಂಗಕಸಿ (Organ transplant) ಮಾಡಿಸಿಕೊಂಡ ವ್ಯಕ್ತಿಗಳಲ್ಲಿ ಇದರ ಹರಡುವಿಕೆ ಹೆಚ್ಚು. ಒಟ್ಟಿನಲ್ಲಿ ಎಲ್ಲಿ ರೋಗನಿರೋಧಕಶಕ್ತಿ ಕಡಿಮೆಯಾಗುತ್ತದೋ ಅಲ್ಲಿ ಈ ಬೂಜು ಮೇಲುಗೈ ಸಾಧಿಸುತ್ತದೆ.

ಕಪ್ಪು ಶಿಲೀಂಧ್ರವು ನಿಸರ್ಗದಲ್ಲಿ ಎಲ್ಲ ಕಡೆ ಕಾಣಸಿಗುತ್ತದೆ; ಹೆಚ್ಚಾಗಿ ಮಣ್ಣು, ಕೊಳೆತ ಎಲೆ/ತರಕಾರಿ, ಪ್ರಾಣಿಗಳ ಮಲದಲ್ಲಿ ಇರುತ್ತದೆ. ಇದು ದೇಹವನ್ನು ನಾವು ತೆಗೆದುಕೊಳ್ಳುವ ಉಸಿರಿನ ಮೂಲಕ, ತಿನ್ನುವ ಆಹಾರದ ಮೂಲಕ ಮತ್ತು ಮೈ ಮೇಲಿನ ಗಾಯಗಳ ಮೂಲಕ ಪ್ರವೇಶಿಸಬಹುದು. ರೋಗನಿರೋಧಕಶಕ್ತಿ ಕಡಿಮೆ ಇರುವ ಮನುಷ್ಯರ ಮೈ ಹೊಕ್ಕ ಬೂಜು, ರಕ್ತನಾಳಗಳಿಗೆ ಅಂಟಿಕೊಂಡು ಆ ನಾಳಗಳಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುತ್ತದೆ. ಅದರಿಂದ ದೇಹದ ಭಾಗಗಳಿಗೆ ಹರಿಯುವ ರಕ್ತದ ಪ್ರಮಾಣ ಕಡಿಮೆಯಾಗಿ, ಆ ಭಾಗಗಳು ಕೊಳೆಯುತ್ತಾ ಬರುತ್ತವೆ. ಕಪ್ಪು ಶಿಲೀಂಧ್ರ ಹೆಚ್ಚಾಗಿ ಕಾಣಿಸಿಕೊಳ್ಳುವ ಅಂಗಗಳೆಂದರೆ ಮೂಗಿನ ಮೇಲ್ಭಾಗ; ಅಲ್ಲಿಂದ ಮೆದುಳು, ಶ್ವಾಸಕೋಶ, ಕಣ್ಣು, ಹೊಟ್ಟೆ/ಕರುಳು, ಚರ್ಮದ ಮೇಲಿನ ಗಾಯ ಮತ್ತು ರಕ್ತದಿಂದ ಸಾಗಿ ದೇಹದ ಯಾವುದೇ ಭಾಗಕ್ಕೂ ಹರಡಬಹುದಾಗಿದೆ.

ಕಾಯಿಲೆಯ ಲಕ್ಷಣಗಳು: ಮುಖದ ಮೇಲಿನ ಸ್ಪರ್ಶದ ಅನುಭವ ಕಡಿಮೆಯಾಗುವುದು ಕರಿಬೂಜು ರೋಗದ ಮೊದಲ ಲಕ್ಷಣ. ಈ ಬೂಜು ಮಿದುಳಿಗೆ ಹರಡಿ ಅಲ್ಲಿಂದ ಹೊರಡುವ ನರಗಳನ್ನು (Cranial nerves) ಆಕ್ರಮಿಸುವುದೇ ಇದಕ್ಕೆ ಕಾರಣ. ಇತರೆ ಲಕ್ಷಣಗಳು – ಮೂಗುಕಟ್ಟುವಿಕೆ, ಮೂಗಿನಿಂದ ರಕ್ತ ಸೋರುವುದು, ಮೂಗು ಮತ್ತು ಕೆನ್ನೆಗಳ ನಡುವಿನ ಭಾಗದಲ್ಲಿ ನೋವು, ಸೀನಿದಾಗ ಸಿಂಬಳದಲ್ಲಿ ಕರಿಯ ಬಣ್ಣ ಕಾಣಿಸುಕೊಳ್ಳುವುದು, ಕಣ್ಣುರಿತ, ಕಣ್ಣು ಮುಂದಕ್ಕೆ ಬಂದಂತೆ ಕಾಣುವಿಕೆ, ಕಣ್ಣಿನ ಚಲನೆಯ ಸ್ಥಗಿತ, ಜ್ವರ, ಗೊಂದಲಕ್ಕೆ ಒಳಗಾದವನಂತೆ ಕಾಣುವುದು ಮುಂತಾದುವು.

ಮುನ್ನೆಚ್ಚರಿಕೆಗಳು

ಸ್ಟೀರಾಯ್ಡ್‌ಗಳನ್ನು ಅನಾವಶ್ಯಕವಾಗಿ ತೆಗೆದುಕೊಳ್ಳದಿರುವುದು.

ದಿನವೂ ಒಗೆದು ಸ್ವಚ್ಛ ಮಾಡಿದ ಮಾಸ್ಕ್‌ಗಳನ್ನೇ ಉಪಯೋಗಿಸುವುದು. ಇಲ್ಲವಾದಲ್ಲಿ ನಮ್ಮ ಉಸಿರಿನ ತೇವಾಂಶದಿಂದ ಮಾಸ್ಕ್‌ನಲ್ಲಿ ಶಿಲೀಂಧ್ರ ಬೆಳೆದು ಉಸಿರಿನ ಮೂಲಕ ಮೂಗು, ಶ್ವಾಸಕೋಶಗಳಿಗೆ ಸುಲಭವಾಗಿ ರವಾನೆಯಾಗುತ್ತದೆ.

ಮನೆಯಲ್ಲಿ ಹವಾನಿಯಂತ್ರಣ ಉಪಯೋಗಿಸುತ್ತಿದ್ದರೆ, ಅದು ಕೂಡ ತೇವಾಂಶವನ್ನು ಹೆಚ್ಚು ಮಾಡುವುದರಿಂದ ಶಿಲೀಂಧ್ರ ಬೆಳೆಯಲು ಸಹಕಾರಿಯಾಗುತ್ತದೆ.

ಬಿಸಿನೀರಿನ ಹಬೆಯನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದರೆ ಅದು ಮೂಗಿನ ಒಳಪದರವನ್ನು ಹಾಳು ಮಾಡಿ, ಶಿಲೀಂಧ್ರ ನಮ್ಮ ದೇಹ ಸೇರಲು ಆಸ್ಪದವಾಗುತ್ತದೆ.

ಪರೀಕ್ಷೆ ಹೇಗೆ?

ಮೂಗಿನ ಒಳಭಾಗದಲ್ಲಿ ಕರಿಯ ಬಣ್ಣ ಕಾಣುವುದು ಈ ಕಾಯಿಲೆಯ ಮೊದಲ ಲಕ್ಷಣ ಎನ್ನಬಹುದು. ಸೂಕ್ಷ್ಮದರ್ಶಕದ ಮೂಲಕ ಈ ಬೂಜನ್ನು ಗುರುತಿಸಬಹುದು. ಈ ಬೂಜನ್ನು ‘ಕಲ್ಚರ್‌ ಪ್ಲೇಟ್‌’ನಲ್ಲಿ ಬೆಳೆಸಿ ಅದರ ಒಳಜಾತಿಯನ್ನು ಕಂಡುಹಿಡಿಯಬಹುದು. CT/MRI ಪರೀಕ್ಷೆಗಳಿಂದ ತಲೆಯ ಮತ್ತು ದೇಹದ ಎಷ್ಟು ಭಾಗ ಬೂಜುರೋಗಕ್ಕೆ ತುತ್ತಾಗಿದೆ ಎಂದು ಅಂದಾಜಿಸಬಹುದು.

ಲಭ್ಯವಿರುವ ಚಿಕಿತ್ಸೆ

ಕಪ್ಪು ಶಿಲೀಂಧ್ರಕ್ಕೆ ಚಿಕಿತ್ಸೆ ದುಬಾರಿ. ಕೊಳೆತ ಶರೀರದ ಭಾಗವನ್ನು ಶಸ್ತ್ರಚಿಕಿತ್ಸೆಯ ಮೂಲಕವೇ ತೆಗೆಯಬೇಕಾಗುತ್ತದೆ. ಉಳಿದ ಭಾಗಗಳಲ್ಲಿರುವ ಬೂಜಿಗೆ ‘Liposomal Amphotericin B’ ಎಂಬ ಔಷಧಿಯನ್ನು ರಕ್ತನಾಳಗಳ ಮೂಲಕ ಕೊಡಬೇಕಾಗುತ್ತದೆ. ಭಾರತದಲ್ಲಿ ‘Posaconazole’ ಎಂಬ ಮತ್ತೊಂದು ಔಷಧಿಯು ಲಭ್ಯವಿದೆ. ಇವು ದುಬಾರಿ, ಮತ್ತು ಕೆಲವೊಮ್ಮೆ ತಿಂಗಳುಗಟ್ಟಲೆ ಔಷಧಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT