ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯವಂತ ವೈದ್ಯರ ‘ಕ್ಯಾಡ್‌’ ಸೇವೆ

Last Updated 20 ಜುಲೈ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಎರಡು ವರ್ಷಗಳ ಹಿಂದಿನ ಘಟನೆ. ಅಂದು ಸಂಸೆ ಎಸ್‌.ಕೆ.ಮೇಗಲ್‌ನ‌ ಕೃಷಿಕರೊಬ್ಬರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ಅಂದು ಭಾರತ್‌ ಬಂದ್‌. ಹೇಗೊ ಆಟೊ ಹಿಡಿದು ಆ ರೈತರನ್ನು ಕಳಸದಲ್ಲಿದ್ದ ಡಾ. ವಿಕ್ರಮ್‌ ಪ್ರಭು ಅವರ ಬಳಿ ಕರೆದೊಯ್ದರು. ಆ ರೈತರಿಗೆ ಇಸಿಜಿ ಮಾಡಿಸಲಾಯಿತು. ಆ ವರದಿಯನ್ನು ವಾಟ್ಸ್‌ಆ್ಯಪ್‌ ಮೂಲಕ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದಯ ರೋಗ ವಿಭಾಗದ ಮುಖ್ಯಸ್ಥ ಡಾ. ಪದ್ಮನಾಭ ಕಾಮತ್‌ ಅವರಿಗೆ ತಲುಪಿಸಲಾಯಿತು. ವರದಿ ನೋಡಿ, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆತರಲು ಸೂಚಿಸಿದರು ವೈದ್ಯರು. ರಾತ್ರಿ 11 ಗಂಟೆಗೆ ಮಂಗಳೂರು ಆಸ್ಪತ್ರೆಯಲ್ಲಿ ಆ ರೈತರಿಗೆ ಆಂಜಿಯೊಪ್ಲಾಸ್ಟಿ ಮಾಡಿದರು. ಅವರು ಬದುಕುಳಿದರು.

ಡಾ. ಪದ್ಮನಾಭ ಕಾಮತ್ ಹೀಗೆ ವಾಟ್ಸ್ಆ್ಯಪ್‌ ಮೂಲಕವೇ ವರದಿ ಪಡೆದು ನೂರಾರು ಜೀವಗಳನ್ನು ಉಳಿಸಿದ್ದಾರೆ. ‘ಕಾರ್ಡಿಯಾಲಜಿ ಅಟ್‌ ಡೋರ್‌ಸ್ಟೆಪ್‌–ಕ್ಯಾಡ್(‌ಮನೆ ಬಾಗಿಲಿಗೆ ಹೃದಯ ಚಿಕಿತ್ಸೆ) ಮೂಲಕ ಹಳ್ಳಿಗಳಲ್ಲಿದ್ದ ರೋಗಿಗಳ ಮನೆಬಾಗಿಲಿಗೆ ಈ ಹೃದಯದ ಚಿಕಿತ್ಸೆಯನ್ನು ಕೊಂಡೊಯ್ದಿದ್ದಾರೆ.

ಹೇಗೆ ಆರಂಭವಾಯಿತು..
ಆರು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಬಣಕಲ್‌ನ ಆಟೊಚಾಲಕರೊಬ್ಬರಿಗೆ ಹೃದಯಾಘಾತವಾಯಿತು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆತರುವ ಹೊತ್ತಿಗೆ ಸಾವನ್ನಪ್ಪಿದ್ದರು. ಈ ಘಟನೆ ಡಾ. ಪದ್ಮನಾಭ ಕಾಮತರ ‌ಹೃದಯವನ್ನು ಹಿಂಡಿತು. ಪ್ರಥಮ ಚಿಕಿತ್ಸೆ ಇಲ್ಲದೇ ಆ ವ್ಯಕ್ತಿ ಮೃತಪಟ್ಟಿದ್ದರು. ಆ ದಿನವೇ ಪದ್ಮನಾಭ ಅವರು ಹೃದ್ರೋಗಕ್ಕೆ ಒಳಗಾಗುವವರಿಗೆ ಅವರ ಊರಲ್ಲೇ ಚಿಕಿತ್ಸೆ ಸಿಗುವಂತೆ ಮಾಡಬೇಕೆಂದು ತೀರ್ಮಾನಿದರು. ಆಗ ರೂಪುಗೊಂಡಿದ್ದೇ ‘ಕಾರ್ಡಿಯಾಲಜಿ ಅಟ್ ಡೋರ್‌ಸ್ಟೆಪ್ (ಸಿಎಡಿ–ಕ್ಯಾಡ್‌) ವಾಟ್ಸ್‌ಆ್ಯಪ್‌ ಗ್ರೂಪ್‌. ಎಲ್ಲೇ ಹೃದಯಾಘಾತ ಸಂಭವಿಸಿದರೂ ಸ್ಥಳೀಯ ವೈದ್ಯ ಅಥವಾ ಸಿಬ್ಬಂದಿ ಮೂಲಕ ರೋಗಿಯ ಮಾಹಿತಿ ಪಡೆದು ಅಗತ್ಯ ಸಲಹೆ, ವೈದ್ಯಕೀಯ ಉಪಚಾರ ಮತ್ತು ಚಿಕಿತ್ಸೆ ಸೂಚಿಸುವುದು ಇದರ ಉದ್ದೇಶ.

ಆರಂಭದಲ್ಲಿ ಡಾ. ಮನೀಶ್ ಕೆ. ರೈ ಅವರ ಸಹಕಾರದೊಂದಿಗೆ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ವಿವಿಧ 20 ಜಿಲ್ಲೆಗಳ ಎಲ್ಲ ಸರ್ಕಾರಿ ಮತ್ತು ಖಾಸಗಿ ವೈದ್ಯರು, ಆಂಬ್ಯುಲೆನ್ಸ್‌ ಚಾಲಕರ ಮಾಹಿತಿ ಸಂಗ್ರಹಿಸಿದರು. ‘ಸಿಎಡಿ’ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದರು. ವಾಟ್ಸ್‌ಆ್ಯಪ್‍ನಲ್ಲೇ ರೋಗಿಯ ಇಸಿಜಿ ತರಿಸಿಕೊಂಡು, ಅಗತ್ಯ ಸಲಹೆ, ವೈದ್ಯಕೀಯ ಉಪಚಾರ ಮತ್ತು ಚಿಕಿತ್ಸೆ ಸೂಚಿಸಲಾರಂಭಿಸಿದರು.

ಈಗ ಚಿಕಿತ್ಸೆ ಮಾರ್ಗದರ್ಶನ ನೀಡುವ ಜತೆಗೆ, ರಾಜ್ಯದ 20 ಜಿಲ್ಲೆಗಳಲ್ಲಿರುವ 230 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಕೆಲ ಜನೌಷಧಿ ಕೇಂದ್ರಗಳಿಗೆ ದಾನಿಗಳ ನೆರವಿನೊಂದಿಗೆ ₹1 ಕೋಟಿ ಮೊತ್ತದ ಇಸಿಜಿ ಯಂತ್ರಗಳು,ಹೃದಯಾಘಾತ ಸಂಭವಿಸಿದರೆ ಶೀಘ್ರವೇ ಪತ್ತೆಹಚ್ಚುವ ರಕ್ತಪರೀಕ್ಷಾ ಕಿಟ್ ಮತ್ತು ತುರ್ತಾಗಿ ನೀಡಬೇಕಾದ ಕೆಲ ಔಷಧಗಳನ್ನು ಕೊಡಿಸಿದ್ದಾರೆ.

ಸದ್ಯ ಪದ್ಮನಾಭ ಅವರ ನಾಲ್ಕು ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ 2500 ಸದಸ್ಯರಿದ್ದಾರೆ. ಅದರಲ್ಲಿ 700 ಮಂದಿ ವೈದ್ಯರು ಮತ್ತು ಸಿಬ್ಬಂದಿ ಇದ್ದಾರೆ. ಈ ಗುಂಪುಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತವೆ. ಪ್ರತಿದಿನ 200 ರಿಂದ 250 ಇಸಿಜಿಗಳನ್ನು ನೋಡಿ ಡಾ.ಪದ್ಮನಾಭ ಕಾಮತ್ ಈ ಗುಂಪುಗಳಲ್ಲಿ ಸೂಕ್ತ ಸಲಹೆ ನೀಡುತ್ತಿದ್ದಾರೆ. ಈ ಕೆಲಸದಿಂದಾಗಿ ಬಳ್ಳಾರಿ, ಚಿತ್ರದುರ್ಗದ ಕೊನೆಭಾಗದ ಹಳ್ಳಿಗಳಲ್ಲಿರುವ ರೋಗಿಗಳಿಗೂ ನಿಮಿಷಗಳಲ್ಲೇ ಮಂಗಳೂರಿನ ಹೃದಯರೋಗ ತಜ್ಞರ ಸಲಹೆ ಸಿಗುವಂತಾಗಿದೆ.

ಕೊರೊನಾ ದಿನಗಳಲ್ಲಿ ನೆರವು
ಸದ್ಯ 30 ವೈದ್ಯರು ಈ ಕೆಲಸದಲ್ಲಿ ತೊಡಗಿದ್ದು 2 ವರ್ಷದಲ್ಲಿ ಇದೇ ಮಾದರಿಯಲ್ಲಿ 23 ಸಾವಿರಕ್ಕೂ ಹೆಚ್ಚು ಇಸಿಜಿಗಳನ್ನು ವಿಶ್ಲೇಷಿಸಿ, ಚಿಕಿತ್ಸೆ ನೀಡಿದ್ದಾರೆ. ವಿಶೇಷ ಎಂದರೆ ಕೊರೊನಾ ಸೋಂಕಿನ ಈ ದಿನಗಳಲ್ಲಿ 2000ಕ್ಕೂ ಹೆಚ್ಚು ಇಸಿಜಿಗಳನ್ನು ಪರಿಶೀಲಿಸಿ, ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ 204 ಜನರ ಜೀವ ಉಳಿಸಿದ್ದಾರೆ ಡಾ. ಪದ್ಮನಾಭ.

‘ಯಾವ ಹೃದ್ರೋಗಿಗೂ ಚಿಕಿತ್ಸೆಯ ವಿಳಂಬದಿಂದ ಸಾವು ಬರಬಾರದು ಎಂಬ ಸದುದ್ದೇಶದಿಂದ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಶ್ರಮಿಸಿದ್ದೇವೆ. ಇದು ನಿರಂತರವಾಗಿ ನಡೆಯಲು ಬಹಳ ತ್ಯಾಗವನ್ನೂ ಮಾಡಬೇಕಾಗಿದೆ. ಆದರೆ ಸಮಾಜಕ್ಕೆ ಈ ಸೇವೆ ಮಾಡುತ್ತಿರುವ ಬಗ್ಗೆ ಅತ್ಯಂತ ಹೆಮ್ಮ, ತೃಪ್ತಿ ಇದೆ’ ಎಂದು ಡಾ. ಪದ್ಮನಾಭ ಕಾಮತ್ ವಿನಮ್ರತೆಯಿಂದ ಹೇಳುತ್ತಾರೆ.

‘ರಾಷ್ಟ್ರಮಟ್ಟದಲ್ಲಿ ಇದೇ ಮಾದರಿಯಲ್ಲಿ ಹೃದಯ ಉಳಿಸುವ ಕೆಲಸ ಆಗಬೇಕು. ಅದು ನಮ್ಮ ಮುಂದಿನ ಗುರಿಯೂ ಹೌದು’ ಎನ್ನುತ್ತಾರೆ ಅವರು.

ಹೃದ್ರೋಗ ಸಂಬಂಧಿಸಿದ ವಿಚಾರಗಳಿಗೆ ಸಹಾಯವಾಣಿ ಸಂಖ್ಯೆ:97432 87599

ಜೀವ ರಕ್ಷಕ ಆಂಬ್ಯುಲೆನ್ಸ್‌ ನೆರವು
ಕಳೆದ ವರ್ಷದ ಮಳೆಗಾಲದಲ್ಲಿ ‌ಮಹಿಳೆಯೊಬ್ಬರು ಹೃದಯಾಘಾತಕ್ಕೆ  ಒಳಗಾಗಿದ್ದರು. ಅವರನ್ನು ಸಾಮಾನ್ಯ ಆಂಬ್ಯುಲೆನ್ಸ್‌ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಮಧ್ಯೆ ರಸ್ತೆ ಸಮಸ್ಯೆಯಾದ್ದರಿಂದ ಆಸ್ಪತ್ರೆ ತಲುಪುವುದು ವಿಳಂಬವಾಗಿ, ಆಕೆ ಬದುಕುಳಿಯಲಿಲ್ಲ. ಈ ಘಟನೆಯಿಂದ ಬೇಸರಗೊಂಡ ಪದ್ಮನಾಭ ಕಾಮತ್, ಹಳ್ಳಿಯಲ್ಲಿರುವ ಆಸ್ಪತ್ರೆಗಳಿಗೂ ಜೀವರಕ್ಷಕ ಸೌಲಭ್ಯ ಇರುವ ಆಂಬ್ಯುಲೆನ್ಸ್ ಸಿಗಬೇಕು ಎಂದು ತೀರ್ಮಾನಿಸಿದರು. ಮೊದಲ ಪ್ರಯತ್ನವಾಗಿ ಎಂಆರ್‌ಪಿಎಲ್‌ ಸಂಸ್ಥೆಯಿಂದ ಸಿಎಸ್‌ಆರ್‌ ಕಾರ್ಯಕ್ರಮದ ಅಡಿಕಳಸದ ಕಾವೇರಿ ಆಸ್ಪತ್ರೆಗೆ ಆಂಬ್ಯುಲೆನ್ಸ್‌ ಖರೀದಿಗಾಗಿ ₹20 ಲಕ್ಷ ಕೊಡಿಸಿದರು.

ಕರ್ಣಾಟಕ ಬ್ಯಾಂಕ್ ₹7 ಲಕ್ಷ ವೆಚ್ಚದಲ್ಲಿ ಜೀವರಕ್ಷಕ ವೆಂಟಿಲೇಟರ್ ಮತ್ತಿತರ ಆಧುನಿಕ ಆರೋಗ್ಯ ಪರಿಕರಗಳನ್ನು ಆಂಬ್ಯುಲೆನ್ಸ್‌ ಒದಗಿಸಿತು. ಜೊತೆಗೆ ಆಂಬ್ಯುಲೆನ್ಸ್‌ ಚಾಲಕರೇ ಬಳಸಬಹುದಾದ ಸರಳ ಇಸಿಜಿ ಯಂತ್ರವೊಂದನ್ನು ಕೊಡಿಸಿದರು ಪದ್ಮನಾಭ. ಈ ಯಂತ್ರವನ್ನು ರೋಗಿಯ ಎದೆಯ ಮೇಲೆ ಇಟ್ಟರೆ ಸಾಕು, ರೋಗಿಯ ಹೃದಯದ ಸ್ಥಿತಿಗತಿ‌ ಎರಡು ನಿಮಿಷದಲ್ಲಿ ಕಾಮತ್‌ರಿಗೆ ಮಾಹಿತಿ ತಲುಪುತ್ತದೆ. ಈ ಆಂಬ್ಯುಲೆನ್ಸ್‌ ಈಗ ಸಾರ್ವತ್ರಿಕವಾಗಿಯೂ ಬಳಕೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT