ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಶುವಿನ ಚರ್ಮದ ಮರ್ಮಗಳು

Last Updated 5 ಡಿಸೆಂಬರ್ 2022, 23:15 IST
ಅಕ್ಷರ ಗಾತ್ರ

ಈಗಷ್ಟೇ ಕಣ್ಣುಬಿಡುತ್ತಿರುವ ಹಸುಗೂಸಿಗೆ ಎದೆಹಾಲುಣಿಸಿದ ನಂತರ ಮಗುವಿನ ತಾಯಿಯನ್ನು ಕಾಡುವ ಅತ್ಯಂತ ಸಹಜ ಪ್ರಶ್ನೆ ಮಗುವಿಗೆ ಸ್ನಾನ ಮಾಡಿಸುವ ಕುರಿತಾಗಿರುತ್ತದೆ. ವಿವಿಧ ಪ್ರದೇಶದ ಜನರಲ್ಲಿ ಅವರವರ ಸಂಸ್ಕೃತಿ ಮತ್ತು ಕಟ್ಟುಪಾಡುಗಳಿಗೆ ಅನುಗುಣವಾಗಿ ಮಗುವಿಗೆ ಸ್ನಾನ ಮಾಡಿಸುವ‌ ಕ್ರಮಗಳು ರೂಪಿತವಾಗಿವೆ. ಮಗುವಿನ ತ್ವಚೆಗೆ ಬಳಸುವ ಉತ್ಪನ್ನಗಳ ವಿಚಾರಕ್ಕೆ ಬಂದಾಗಲೂ ಕೆಲವೊಂದಕ್ಕೆ ವೈಜ್ಞಾನಿಕ ಆಧಾರಗಳಿದ್ದರೆ, ಉಳಿದವುಗಳನ್ನು ಜನರು ತಮ್ಮ ನಂಬಿಕೆ ಅನುಸಾರವಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ.

ದೇಹದ ಆರೋಗ್ಯ ರಕ್ಷಣೆಯಲ್ಲಿ ತ್ವಚೆಯ ಪಾತ್ರ ಪ್ರಮುಖವಾದದ್ದು. ಅದರ ಕರ್ತವ್ಯವು ಬಾಹ್ಯಸೌಂದರ್ಯವನ್ನು ಹೆಚ್ಚಿಸುವುದಕ್ಕೆ ಮಾತ್ರ ಸೀಮಿತವಾಗಿರದೆ ದೇಹದ ತಾಪಮಾನ ಮತ್ತು ನೀರಿನಾಂಶದ ನಿಯಂತ್ರಣ, ಸೂಕ್ಷ್ಮಾಣುಜೀವಿಗಳಿಂದ ರಕ್ಷಣೆ, ವಿಟಮಿನ್ ಡಿ ಉತ್ಪಾದನೆ – ಹೀಗೆ ತ್ವಚೆಗೆ ಬಹುಮುಖ ಜವಾಬ್ದಾರಿಗಳಿವೆ. ನವಜಾತ ಶಿಶುಗಳ ತ್ವಚೆಯು ವಯಸ್ಕರ ತ್ವಚೆಗಿಂತ ಸೂಕ್ಷ್ಮವಾಗಿರುತ್ತದೆ. ಆದುದರಿಂದ ನಾವು ಬಳಸುವ ರಾಸಾಯನಿಕಗಳು ಶಿಶುಗಳ ತ್ವಚೆಗೆ ಹಾನಿ ಮಾಡಬಹುದು; ಜೊತೆಗೆ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ವಯಸ್ಕರ ತ್ವಚೆಗೆ ಹೋಲಿಸಿದಾಗ ಶಿಶುಗಳ ತ್ವಚೆಯ ರಕ್ಷಣಾ ಕವಚವಾದ ಎಪಿಡರ್ಮಿಸ್ ಪದರವು ತೆಳುವಾಗಿರುತ್ತದೆ ಮತ್ತು ತ್ವಚೆಯಲ್ಲಿ ಮೆಲನಿನ್ ಪ್ರಮಾಣವೂ ಕಡಿಮೆಯಿರುತ್ತದೆ. ಈ ಕಾರಣಗಳಿಂದ ಶಿಶುಗಳ ತ್ವಚೆಗೆ ತಿಕ್ಕಾಟ ಮತ್ತು ಯುವಿ ವಿಕರಣಗಳಿಂದ ಹೆಚ್ಚು ಹಾನಿಯಾಗುವ ಸಂಭವವಿರುತ್ತದೆ. ಮಗುವಿನ ತ್ವಚೆಯ ಮೇಲೆ ಯಾವುದೇ ಬ್ಯಾಕ್ಟೀರಿಯಾ ಬೆಳೆಯದಿರಲಿ ಎಂಬ ಕಾರಣಕ್ಕೆ ಪ್ರಕೃತಿಯು ಅದರ ಪಿಎಚ್ ಆಮ್ಲೀಯವಾಗಿರುವಂತೆ (Acidic) ನೋಡಿಕೊಂಡಿದೆ.

ನವಜಾತ ಶಿಶುವಿನ ಜನನವಾದ ತಕ್ಷಣ ಪ್ರಕೃತಿಯು ಆ ಮಗುವಿನ ತ್ಜಚೆಯ ಮೇಲೆ ‘ವರ್ನಿಕ್ಸ್ ಕೇಸಿಯೋಸಾ’ ಎಂಬ ಎಣ್ಣೆಯಂಶ ಹೆಚ್ಚಾಗಿರುವ ಪದರವನ್ನು ನೀಡಿರುತ್ತದೆ. ಶಿಶುವಿನ ದೇಹದ ತಾಪಮಾನ ನಿಯಂತ್ರಣ ಮತ್ತು ಮಗುವಿನ ತ್ವಚೆಯಿಂದ ನೀರಿನಾಂಶ ಹೆಚ್ಚು ಸೋರುವುದನ್ನು ತಡೆಯುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಕಾರಣ, ಮಗುವು ಆಸ್ಪತ್ರೆಯಿಂದ ಮನೆಗೆ ತೆರಳುವ ತನಕ ಸ್ನಾನವನ್ನು ಮಾಡಿಸದಿದ್ದರೂ ಮಗುವಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ.

ಮನೆಯಲ್ಲಿ ನವಜಾತ ಶಿಶುವಿಗೆ ಸ್ನಾನ ಮಾಡಿಸುವಾಗ ಕೆಲವೊಂದು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಸ್ನಾನಕ್ಕೆ ಉಗುರುಬೆಚ್ಚಗಿನ ನೀರನ್ನೇ ಬಳಸಬೇಕು. ಶಿಶುವನ್ನು ವಿವಸ್ತ್ರಗೊಳಿಸಿದ ನಂತರ ಮಗುವಿನ ದೇಹದ ತಾಪಮಾನವು ಶೀಘ್ರವಾಗಿ ಕಡಿಮೆಯಾಗುವ ಕಾರಣದಿಂದ ಸ್ನಾನದ ಕಾರ್ಯವನ್ನು ಐದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಮಾಡಿ ಮುಗಿಸಬೇಕು. ಮಗುವಿನ ತಲೆಯು ಮಗುವಿನ ದೇಹ ಅತಿ ದೊಡ್ಡ ಭಾಗವಾಗಿರುವ ಕಾರಣದಿಂದ ಅದನ್ನು ಹೆಚ್ಚು ಸಮಯ ಒದ್ದೆಯಾಗಿಟ್ಟಲ್ಲಿ ಮಗುವಿನ ದೇಹದ ತಾಪಮಾನವು ವೇಗವಾಗಿ ಕಡಿಮೆಯಾಗಬಹುದು. ಹಾಗಾಗಿ ಮಗುವಿನ ತಲೆಯನ್ನು ಕೊನೆಯಲ್ಲಿ ತೊಳೆಯುವುದು ಮತ್ತು ಶೀಘ್ರವಾಗಿ ಒಣಗಿಸುವುದು ಉತ್ತಮ. ಮಗುವಿಗೆ ತನ್ನ ನಾಸಿಕವನ್ನು ನೀರು ಬಂದಾಗ ಮುಚ್ಚಿಕೊಳ್ಳುವ ಸಾಮರ್ಥ್ಯವಿಲ್ಲದ ಕಾರಣದಿಂದ ಸ್ನಾನ ಮಾಡಿಸುವಾಗ ಮಗುವಿನ ನಾಸಿಕದ ಮೂಲಕ ಅದರ ಶ್ವಾಸಕೋಶದೊಳಗೆ ನೀರು ಪ್ರವೇಶಿಸದಂತೆ ಎಚ್ಚರ ವಹಿಸಬೇಕು. ಮಗುವಿನ ಹೊಕ್ಕಳ ಬಳ್ಳಿಯು ಒಂದೆರಡು ವಾರದಲ್ಲಿ ಒಣಗಿ ಬೀಳುವುದರಿಂದ ಅದರ ಸ್ವಚ್ಛತೆಯ ಬಗ್ಗೆಯೂ ಗಮನ ಇರಬೇಕು.

ಮಾರುಕಟ್ಟೆಯಲ್ಲಿರುವ ಹೆಚ್ಚಿನ ಸಾಬೂನುಗಳು ಮತ್ತು ಹ್ಯಾಂಡ್ ವಾಶ್‌ಗಳು ಕ್ಷಾರೀಯ ಗುಣವನ್ನು (Alkaline) ಹೊಂದಿರುತ್ತದೆ. ಇದರಿಂದ ಆಮ್ಲೀಯತೆಯಿರುವ ಶಿಶುವಿನ ತ್ವಚೆಗೆ ಹಾನಿಯಾಗುತ್ತದೆ. ಅಂತಹ ಸಾಬೂನುಗಳು ಶಿಶುಗಳ ತ್ವಚೆಯಲ್ಲಿರುವ ಎಣ್ಣೆಯಂಶವನ್ನು ಹೀರಿ ತ್ವಚೆಯನ್ನು ಶುಷ್ಕವಾಗಿಸುತ್ತದೆ. ಈ ರಾಸಾಯನಿಕ ಕ್ರಿಯೆಗಳಿಂದ ಶಿಶುಗಳ ತ್ವಚೆಯು ಪಿಎಚ್ ಬದಲಾಗಿ ಅದು ಕ್ಷಾರಗುಣದತ್ತ ತಿರುಗಿದಲ್ಲಿ ಆ ತ್ವಚೆಯು ಕೆಲವು ಅಪಾಯಕಾರಿ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಕಾರಿಯಾಗಬಲ್ಲದು. ಈ ಕಾರಣಗಳಿಂದಾಗಿ ಜಾಹಿರಾತು ಪ್ರಪಂಚದ ಮೇಲಾಟಗಳಿಗೆ ಮಾರುಹೋಗದೆ ಶಿಶುಗಳ ತ್ವಚೆಯ ಮೇಲೆ ಯಾವುದೇ ಸೌಂದರ್ಯವರ್ಧಕ ಉತ್ಪನ್ನಗಳನ್ನು ವೈದ್ಯರ ಸಲಹೆ ಪಡೆಯದೆ ಬಳಸಬಾರದು.

ಮಗುವಿನ ತ್ವಚೆಯು ತನ್ನಲ್ಲಿರುವ ಸೂಕ್ಷ್ಮರಂಧ್ರಗಳ ಮೂಲಕ ಉಸಿರಾಡುವುದರಿಂದ ಮಗುವಿನ ತ್ವಚೆಯ ಮೇಲೆ ಪೌಡರ್ ಬಳಸುವುದರಿಂದ ಆ ರಂಧ್ರಗಳು ಮುಚ್ಚಿಕೊಂಡು ಬೊಕ್ಕೆಗಳು ಏಳಬಹುದು. ಸುಗಂಧ ದ್ರವ್ಯಗಳನ್ನು ಇಷ್ಟಪಡುವ ಹಿರಿಯರು ಅದನ್ನು ಮಗುವಿಗೆ ಹಚ್ಚಿ ಸಂತೋಷ ಪಡುವ ತಪ್ಪು ಕೆಲಸವನ್ನು ಮಾಡುತ್ತಾರೆ. ದುರದೃಷ್ಟವಶಾತ್ ಮಗುವಿನ ನಾಸಿಕಕ್ಕೆ ಈ ಮಾದರಿಯ ಗಾಢವಾದ ಪರಿಮಳಗಳಿಂದ ವಿಪರೀತ ಕಿರಿಕಿರಿಯಾದರೂ ಮಗುವಿಗೆ ಅದನ್ನು ಅಭಿವ್ಯಕ್ತಿಗೊಳಿಸಲು ಸಾಧ್ಯವಿಲ್ಲ. ಹುಬ್ಬುಗಳಿಗೆ ಹಚ್ಚುವ ಕಾಡಿಗೆಯೂ ಆದಷ್ಟು ತೆಳುವಾಗಿರದಿದ್ದರೆ ಅದು ಕಣ್ಣಿನ ಸಂಪರ್ಕಕ್ಕೆ ಬಂದು ಮಗುವಿನ ಕಣ್ಣುಗಳಿಗೆ ಹಾನಿಯನ್ನು ಮಾಡಬಹುದು.

ಇತ್ತೀಚಿನ ವರ್ಷಗಳಲ್ಲಿ ಡೈಪರ್ ಬಳಕೆಯೂ ಹೆಚ್ಚಾಗಿರುವುದರಿಂದ ಡೈಪರ್ ಬಳಸುವ ಜಾಗದ ತ್ವಚೆಯಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತದೆ. ಮಗುವಿನ ಮಲ–ಮೂತ್ರಗಳು ಕ್ಷಾರಗುಣವನ್ನು ಹೊಂದಿರುವುದರಿಂದ ಸದಾ ಕಾಲ ಡೈಪರ್ ಧರಿಸಿರುವ ಮಗುವಿನ ತ್ವಚೆಗೆ ಹಾನಿಯುಂಟಾಗುತ್ತದೆ. ಮನೆಯಲ್ಲಿರುವಾಗ ಮಗುವಿಗೆ ಡೈಪರ್ ರೆಸ್ಟ್ ಕೊಡುವುದರಿಂದ ಡೈಪರ್ ಕಾರಣದಿಂದ ಬರುವ ತ್ವಚೆಯ ಸಮಸ್ಯೆಗಳನ್ನು ತಪ್ಪಿಸಬಹುದು. ಶಿಶುಗಳ ದೇಹಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದು ಭಾರತದಲ್ಲಿ ಸರ್ವೇಸಾಮಾನ್ಯವಾಗಿದೆ. ಹೆಚ್ಚಿನ ಗ್ರಾಮೀಣ ಭಾಗದಲ್ಲಿ ಸಾಂಪ್ರದಾಯಿಕವಾಗಿ ತೆಂಗಿನ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿಸಿದ ನಂತರ ಮಗುವಿಗೆ ಸ್ನಾನ ಮಾಡಿಸುತ್ತಾರೆ. ತೆಂಗಿನ ಎಣ್ಣೆಯು ತ್ವಚೆಯ ಶುಷ್ಕತೆಯನ್ನು ಕಡಿಮೆಮಾಡುವ ಕಾರಣದಿಂದ ಮತ್ತು ತ್ವಚೆಗೆ ಅಲರ್ಜಿಯನ್ನು ಉಂಟುಮಾಡುವ ಸಂಭವವು ತೆಂಗಿನ ಎಣ್ಣೆಯಲ್ಲಿ ಅತಿ ಕಡಿಮೆಯಿರುವ ಕಾರಣದಿಂದ ಮಕ್ಕಳ ತ್ವಚೆಗೆ ಇದು ಹೆಚ್ಚು ಸೂಕ್ತವಾಗಿದೆ.

ಮಗುವಿನ ತ್ವಚೆಯ ಆರೋಗ್ಯವು ಮಗುವಿನ ಸಮಗ್ರ ಆರೋಗ್ಯ ಮತ್ತು ಉತ್ತಮ ಬೆಳವಣಿಗೆಯ ಪ್ರತಿಬಿಂಬವಾಗಿರುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT