ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರಂಗ ಅಂಕಣದ ‍ಪ್ರಶ್ನೆ: ಮಕ್ಕಳೇಕೆ ಹೊಡೆಯುತ್ತಾರೆ?

ಅಕ್ಷರ ದಾಮ್ಲೆ
Published : 27 ಸೆಪ್ಟೆಂಬರ್ 2024, 23:34 IST
Last Updated : 27 ಸೆಪ್ಟೆಂಬರ್ 2024, 23:34 IST
ಫಾಲೋ ಮಾಡಿ
Comments

ನನ್ನ ಮಗ ಇದೀಗ ನಾಲ್ಕನೆ ಕ್ಲಾಸು. ಆದರೆ ವಿಪರೀತ ಹಿಂಸೆ ಕೊಡ್ತಾನೆ. ಶಾಲೆಯಲ್ಲಿಯೂ ತನ್ನ ಸಹಪಾಠಿಗಳಿಗೆ ಹೊಡಿ ಬಡಿ ಮಾಡ್ತಾನೆ. ಮನೆಯಲ್ಲಿ ನನಗೂ ತನ್ನ ತಲೆಯಿಂದ ಗುದ್ದೋದು, ಜೋರಾಗಿ ಗಿಂಡೋದು ಮಾಡ್ತಾನೆ. ಜೋರು ಮಾಡಿದರೆ ತಾನೇ ತನ್ನ ಕೈ ಕಚ್ಚಿಕೊಳ್ಳುತ್ತಾನೆ. ಇಲ್ಲವೇ ಹಣೆ ಚಚ್ಚಿಕೊಳ್ಳುತ್ತಾನೆ. ಯಾಕೆ ಹೀಗೆ ವರ್ತಿಸುತ್ತಾನೆ? ಅವನಿಗೆ ಸಮಾಲೋಚನೆ ಅಥವಾ ಚಿಕಿತ್ಸೆಯ ಅಗತ್ಯವಿದೆಯೇ?


ಹೆಸರು ಬೇಡ, ಧಾರವಾಡ

ಕೆಲವೊಂದು ಬಾರಿ ಮಕ್ಕಳ ವರ್ತನೆಗಳು ಹೇಗೆ ಮತ್ತು ಯಾಕೆ ಬದಲಾಗುತ್ತವೆ ಎನ್ನುವುದು ಅರ್ಥವಾಗುವುದಿಲ್ಲ. ಆದರೆ ನಿಮ್ಮ ಮಗನ ವರ್ತನೆಗಳನ್ನು ಗಮನಿಸಿದಾಗ ಮಕ್ಕಳ ಬೆಳವಣಿಗೆಯ ಜೊತೆಗೆ ಆಗುವಂತಹ ಮಾನಸಿಕ ಬದಲಾವಣೆಗಳ ಕುರಿತು ಅಧ್ಯಯನ ಮಾಡಿದ ಜೀನ್ ಪ್ಯಾಜೆ ಅನ್ನುವವರ ಒಂದು ಕಥನ ನೆನಪಾಗುತ್ತದೆ. ಅವರು ತಮ್ಮ ಮಗಳನ್ನೇ ಗಮನಿಸುತ್ತಾ ಆಕೆ ಬೆಳೆಯುತ್ತಿದ್ದ ಹಾಗೆಯೇ ಏನೇನೆಲ್ಲಾ ಬದಲಾವಣೆಗಳನ್ನು ತೋರಿಸುತ್ತಾಳೆ ಅಂತ ದಾಖಲಿಸುತ್ತಾ ತಮ್ಮ ಸಿದ್ಧಾಂತವನ್ನು ಬೆಳೆಸಿದವರು.

ಒಂದು ಬಾರಿ ಅವರ ಸ್ನೇಹಿತ ಅವರ ಮನೆಗೆ ಊಟಕ್ಕೆ ಬರುತ್ತಾರೆ. ಹಾಗೆ ಬಂದಾಗ, ಅವರ ಮಗ ಬಹಳ ಹಠಮಾರಿತನವನ್ನು ತೋರಿಸುತ್ತಿರುತ್ತಾನೆ. ಅಂದರೆ, ಆತನಿಗೆ ಬೇಕಾದ ಹಾಗೆ ಏನಾದರೂ ಆಗದಿದ್ದರೆ, ಆತ ನೆಲದ ಮೇಲೆ ಹೊರಳಾಡಿ ತನಗೆ ಬೇಕಾದದ್ದನ್ನು ಗಿಟ್ಟಿಸಿಕೊಳ್ಳುವಂತಹ ವರ್ತನೆಯನ್ನು ತೋರ್ಪಡಿಸುತ್ತಿದ್ದ. ಅಂತೂ ಆತನನ್ನು ಹೇಗೋ ಸಂಭಾಳಿಸಿಕೊಂಡು ಪ್ಯಾಜೆ ಅವರ ಗೆಳೆಯ ತಮ್ಮ ಮನೆಗೆ ಮರಳುತ್ತಾರೆ. ಮರುದಿನ ಪ್ಯಾಜೆ ಅವರಿಗೆ ಒಂದು ಆಶ್ಚರ್ಯಕರ ವರ್ತನೆ ಅವರ ಮಗಳಲ್ಲಿ ಕಂಡುಬರುತ್ತದೆ. ಅಲ್ಲಿಯವರೆಗೆ ಯಾವುದೇ ತೀವ್ರತೆರನಾದ ಹಠಮಾರಿತನವನ್ನು ತೋರಿಸದಿದ್ದ ಆಕೆ, ಆ ದಿನ ಹಿಂದಿನ ದಿನ ಅವರ ಗೆಳೆಯನ ಮಗ ಹೇಗೆ ವರ್ತಿಸುತ್ತಿದ್ದನೋ ಹಾಗೆಯೇ ಆಕೆಯೂ ವರ್ತಿಸುತ್ತಿದ್ದಳು. ಇದರಿಂದ ಪ್ಯಾಜೆ ಅವರು ಅರ್ಥೈಸಿಕೊಂಡ ವಿಷಯವೇನೆಂದರೆ ಮಕ್ಕಳು ಇತರೆ ಮಕ್ಕಳ ವರ್ತನೆಗಳನ್ನು ಬಹಳ ಸುಲಭವಾಗಿ ಅನುಕರಿಸುತ್ತಾರೆ. ಮಾತ್ರವಲ್ಲ, ಇತರೆ ಮಕ್ಕಳಿಗೆ ಆ ರೀತಿಯ ವರ್ತನೆಗಳನ್ನು ತೋರಿಸುವುದರಿಂದ ಲಾಭವಾಗುತ್ತಿದೆ ಎಂದರೆ ಅದನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಅವರಿಗೆ ಹೆಚ್ಚು ಸಮಯ ಬೇಕಾಗುವುದಿಲ್ಲ.

ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮಗನ ವರ್ತನೆಯನ್ನು ಗಮನಿಸಿ ಮತ್ತು ವಿಮರ್ಶಿಸಿ. ಬಹುಷಃ ಆತನಿಗೆ ಆ ರೀತಿಯ ಮಾದರಿಗಳು ಶಾಲೆಯಲ್ಲಿ ಅಥವಾ ಹೊರಗಡೆ ಎಲ್ಲೋ ಕಾಣಸಿಕ್ಕಿದೆ. ಮತ್ತು ಅದು ಹೆಚ್ಚು ಲಾಭದಾಯಕ ಅಂತಲೂ ಅನ್ನಿಸಿರಬೇಕು. ಈ ವರ್ತನೆಗಳನ್ನು ಕಡಮೆ ಮಾಡಲು ಜೋರು ಮಾಡುವ ಬದಲು ಆತನಿಗೆ ಅವುಗಳನ್ನು ಯಾಕೆ ಮಾಡಬಾರದು ಎಂಬುದನ್ನು ತಿಳಿ ಹೇಳಿ. ಮತ್ತು ಆತ ಮತ್ತೂ ಅಂತಹುದೇ ವರ್ತನೆಗಳನ್ನು ಮುಂದುವರೆಸಿದರೆ, ಅದರಿಂದ ನೋವಾಗುತ್ತದೆ ಅನ್ನುವುದರ ಬದಲು ನಿರ್ಲಕ್ಷ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಿ. ಯಾವಾಗ ತನ್ನ ಬಲ ಪ್ರಯೋಗದಿಂದ ಕೆಲಸಗಳು ಸಾಧ್ಯವಾಗುದಿಲ್ಲ ಎಂದು ಆತನಿಗೆ ತಿಳಿಯುತ್ತದೋ, ಆವಾಗ ತನ್ನಿಂದ ತಾನಾಗಿಯೇ ಆ ರೀತಿಯ ವರ್ತನೆಗಳನ್ನು ಕಡಮೆ ಮಾಡುತ್ತಾನೆ. ಇಷ್ಟೆಲ್ಲಾ ಮಾಡಿದ ಮೇಲೂ ಯಾವುದೇ ವ್ಯತ್ಯಾಸವಾಗದಿದ್ದಲ್ಲಿ, ಮನಃಶ್ಶಾಸ್ತ್ರಜ್ಞರ ಬಳಿ ಒಮ್ಮೆ ಕರೆದುಕೊಂಡು ಹೋಗಿ, ಅಗತ್ಯವಿದ್ದಲ್ಲಿ ಚಿಕಿತ್ಸೆ ಕೊಡಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT