ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ–ಕುಶಲ: ಮುಂದೂಡುವ ಚಕ್ರವನ್ನು ಮುರಿಯಿರಿ..

ಸಂಜೆ 5 ಗಂಟೆಯಾಗಿ ಹೋಗಿದೆ. ನಿಮಗೆ ಗೊತ್ತು ನೀವು ಆ ಕೆಲಸ ಇಷ್ಟು ಹೊತ್ತಿಗೆ ಮಾಡಿ ಮುಗಿಸಬೇಕಾಗಿತ್ತು.
Published 20 ಮೇ 2024, 16:21 IST
Last Updated 20 ಮೇ 2024, 16:21 IST
ಅಕ್ಷರ ಗಾತ್ರ

ಸಂಜೆ 5 ಗಂಟೆಯಾಗಿ ಹೋಗಿದೆ. ನಿಮಗೆ ಗೊತ್ತು ನೀವು ಆ ಕೆಲಸ ಇಷ್ಟು ಹೊತ್ತಿಗೆ ಮಾಡಿ ಮುಗಿಸಬೇಕಾಗಿತ್ತು. ಆದರೆ ಯಾಕೋ ಮುಂದೂಡುತ್ತಲೇ ಇದ್ದೀರಿ. ಇನ್ನೇನು ಪಟ್ಟಾಗಿ ಕುಳಿತು ಮುಗಿಸೇಬಿಡಬೇಕು ಅನ್ನುವ ಹೊತ್ತಿಗೆ ಮನಸ್ಸು ಮತ್ತೇನನ್ನೋ ಹುಡುಕಿಕೊಳ್ಳುತ್ತದೆ. ಊಟ ಮಾಡಿಬಿಡೋಣ ಅನಿಸುತ್ತದೆ. ಇನ್ನೊಂದು ರೀಲ್ ನೋಡಿಯೇ ಶುರು ಮಾಡೋಣ ಅನ್ನಿಸುತ್ತದೆ.

ಇದನ್ನು ಮನೋವೈಜ್ಞಾನಿಕವಾಗಿ ಮುಂದೂಡುವ ಚಕ್ರ - ‘Cycle of procrastination’ ಎಂದು ಕರೆಯಲಾಗುತ್ತದೆ. ‘ನಾಳೆ ಮಾಡಬೇಕಾದ್ದನ್ನು ಇಂದೇ ಮಾಡು’ ಎಂದು ಬೇರೆಯವರಿಗೆ ಹೇಳಿದಷ್ಟು ಸುಲಭವಲ್ಲ, ಈ ಚಕ್ರವನ್ನು ಮುರಿಯುವುದು. ನಮ್ಮೆಲ್ಲರಿಗೂ ಈ ಸಮಸ್ಯೆ ಆಗಾಗ್ಗೆ ಎದುರಾಗುತ್ತದೆ. ಮುಂದೂಡುವ ಚಕ್ರವನ್ನು ಮುರಿಯುವುದು ಹೇಗೆ?

ಕೆಲಸವನ್ನು ಮುಂದೂಡುವುದು ಯಾವಾಗಲೂ ಸಮಸ್ಯೆಯೇ ಆಗಬೇಕಿಲ್ಲ. ಆದ್ಯತೆಯ ಮೇಲೆ ಕೆಲವನ್ನು ನಾವು ತಕ್ಷಣ ಮಾಡಬಹುದು, ಮತ್ತೆ ಕೆಲವನ್ನು ನಂತರ ಮಾಡಬಹುದು. ಇದು ಮುಂದೂಡುವ ಸಮಸ್ಯೆಯಲ್ಲ. ಸರಿಯಾದ ಕಾರಣವಿಲ್ಲದೆ, ನಾವು ಮಾಡದಿರುವುದು, ತೊಂದರೆಗಳನ್ನು ತಂದೊಡ್ಡಬಹುದು ಎಂಬ ಅರಿವಿನ ಮಧ್ಯೆಯೂ ನಾವು ಕೆಲಸವನ್ನು ಮುಂದೂಡುವುದು ‘ಮುಂದೂಡುವ ಸಮಸ್ಯೆ’ ಎನಿಸಿಕೊಳ್ಳುತ್ತದೆ.

ಒಂದು ಕೆಲಸವನ್ನು ಮಾಡಲು ಬೇಕಾಗುವ ಪ್ರೇರಣೆ ಎಂಬುದು ಮಿದುಳು-ಮನಸ್ಸುಗಳ ಕಾರ್ಯವಷ್ಟೆ. ಅದರ ಹಿಂದಿರುವ ವೈಜ್ಞಾನಿಕತೆಯನ್ನು ಮೊದಲು ಗಮನಿಸುವುದು ಅತ್ಯಗತ್ಯ. ‘ಮುಂದೂಡುವಿಕೆ’ ಮಿದುಳಿನ ರಕ್ಷಣಾತ್ಮಕ ವ್ಯವಸ್ಥೆಗಳಲ್ಲಿ ಒಂದು. ನಾವು ಮುಂದೂಡುತ್ತಿರುವ ಕೆಲಸವನ್ನು ನಾವು ಮಾಡಬೇಕೆಂದಾಗ ಮಿದುಳು ಅದೊಂದು ‘ಎದುರಾಗುತ್ತಿರುವ ಅಪಾಯ’ ಎಂಬಂತೆ ಗ್ರಹಿಸುತ್ತದೆ. ಓಡು-ಹೋರಾಡು ಇಲ್ಲವೆ ತಟಸ್ಥನಾಗು – ಎಂಬಂತಹ ಈ ಪರಿಸ್ಥಿತಿಯಲ್ಲಿ ಸಹಜವಾಗಿ ನಾವು ಕಡಿಮೆ ಒತ್ತಡದ ಮತ್ತೊಂದು ಕೆಲಸಕ್ಕೆ ಮನಸ್ಸನ್ನು ವರ್ಗಾಯಿಸುತ್ತೇವೆ.

ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ಮುಂದೂಡುವ ಚಕ್ರ ಕಂಡುಬರುವ ಪ್ರಮಾಣ  ಶೇ. 50. ಸುಮಾರು ಶೇ. 95 ಜನ ಆಗಾಗ್ಗೆ ಈ ಸಮಸ್ಯೆಗೆ ಒಳಗಾಗುತ್ತಾರೆ ಎನ್ನುತ್ತವೆ, ಅಧ್ಯಯನಗಳು. ಸ್ವಲ್ಪ ತಡವಾಗಿ ಮಾಡಿದರೆ ತಲೆ ಹೋಗುವಂತದ್ದೇನಾದೀತು ಎಂದು ಕೆಲವರೆನ್ನಬಹುದು. ಆದರೆ ಆರ್ಥಿಕತೆಗೆ ಸಂಬಂಧಿಸಿದಂತೆ, ಕೌಟುಂಬಿಕ ಸಂಬಂಧಗಳಲ್ಲಿ-ಆರೋಗ್ಯದ ವಿಷಯಗಳಲ್ಲಿ ಮುಂದೂಡುವ ಚಕ್ರ ಹರಿದಾಡಿ, ಜೀವನವನ್ನೇ ಹದಗೆಡಿಸಬಹುದು.

ಮುಂದೂಡುವ ಚಕ್ರಕ್ಕೆ ಮತ್ತೊಂದು ಹೆಸರು ‘ಸೋಮಾರಿತನ’ವೆ?! ಖಂಡಿತ ಅಲ್ಲ. ಮುಂದೂಡುವ ಚಕ್ರದ ಸಮಸ್ಯೆಯಿಂದ ನರಳುವ ಜನರಲ್ಲಿ ಹೆಚ್ಚಿನವರು ಕ್ರಿಯಾಶೀಲರು; ಪರಿಪೂರ್ಣತೆಯ ಕಡೆಗೆ ತುಡಿಯುವವರು. ತಾವೇ ಹಾಕಿಕೊಂಡ ಗುಣಮಟ್ಟ -ನಿರೀಕ್ಷೆಗಳಂತೆ ತಮ್ಮ ಕೆಲಸ ಸಾಗದಿದ್ದರೆ – ಎಂಬ ಆತಂಕವೇ ಮುಖ್ಯವಾಗಿ ಹಿನ್ನೆಲೆಯಲ್ಲಿ ನಿಂತು ಅವರ ಮುಂದೂಡುವುದನ್ನು ಪ್ರಚೋದಿಸುತ್ತದೆ. ಸೋಮಾರಿತನವನ್ನು ನಾವು ಅನುಭವಿಸುವಾಗ, ನಮಗೆ ಏನೂ ಮಾಡಲಾಗುವುದಿಲ್ಲ; ಶಕ್ತಿಯೇ ಇಲ್ಲ ಎಂಬಂತೆ ಭಾಸವಾಗುತ್ತದೆ. ಮುಂದೂಡುವ ಚಕ್ರದಲ್ಲಿ ಸಿಲುಕಿರುವಾಗ ಹಾಗಲ್ಲ, ಬಿಡುವಿಲ್ಲದೆ, ಮಾಡಬೇಕಾದ ಕೆಲಸವನ್ನು ಬದಿಗಿರಿಸಿ, ಆ ಕ್ಷಣಕ್ಕೆ ಬೇಡವಾದ ಬೇರೆ ಬೇರೆ ಕೆಲಸಗಳನ್ನು ಮನಸ್ಸು ಹುಡುಕಿಕೊಳ್ಳುತ್ತದೆ. ಅವರಿಗೆ ‘ಸೋಮಾರಿ’ ಎಂಬ ತಪ್ಪಿತಸ್ಥ ಭಾವದಿಂದ, ಆ ಕೆಲಸ ಮಾಡದಿರುವುದರ ಬಗೆಗಿನ ಅಪರಾಧಿಪ್ರಜ್ಞೆಯಿಂದ ಬಿಡುಗಡೆ ಬೇಕು! ಹಾಗಾಗಿ ಒತ್ತಡ ಕಡಿಮೆ ಮಾಡಲು ಮತ್ತಷ್ಟು, ಕೆಲವೊಮ್ಮೆ ಇಷ್ಟವೂ ಆಗದ (ಪುಸ್ತಕ ಜೋಡಿಸುವ/ಅಡಿಗೆ ಮನೆ ಸ್ವಚ್ಛಗೊಳಿಸುವ) ಕೆಲಸಗಳನ್ನು ಮನಸ್ಸು ಹುಡುಕಿಕೊಳ್ಳುತ್ತದೆ.

ಮುಂದೂಡುವ ಚಕ್ರದಲ್ಲಿ ಸಿಲುಕಿಕೊಳ್ಳುವ ಕಾರಣಗಳು ಏನೇ ಇರಲಿ, ಅದರ ಫಲಿತಾಂಶ ಮಾತ್ರ ಒಂದೇ. ಮತ್ತೆ ಮತ್ತೆ ಮುಂದೂಡುವುದರಿಂದ ನಾಚಿಕೆ-ಕೀಳರಿಮೆ-ಹತಾಶೆ-ಆತಂಕಗಳು ಕಾಡುತ್ತವೆ. ಮೊದಲು ತಾತ್ಕಾಲಿಕವಾಗಿ ಮುಂದೂಡುವುದು ಒತ್ತಡವನ್ನು ಆ ಕ್ಷಣಕ್ಕೆ ಕಡಿಮೆ ಮಾಡಿದರೂ, ಕ್ರಮೇಣ ಅದು ಒಂದು ಅನಾರೋಗ್ಯಕರ ರಕ್ಷಣಾ ತಂತ್ರವಾಗಿಬಿಡಬಹುದು. ಅದರ ಪರಿಣಾಮವಾಗಿ ನಾವು ಸುಲಭವಾಗಿ ಮಾಡುತ್ತಿದ್ದ ಕೆಲಸಗಳೂ ಸಾಧ್ಯವಾಗದಿರಬಹುದು.

ಮುಂದೂಡುವ ಚಕ್ರವನ್ನು ಮುರಿಯಲು ಸಾಧ್ಯವಿದೆ! ನಾವು ಒಂದು ಕೆಲಸವನ್ನು ಮುಂದೂಡುವುದು ಅದರೊಂದಿಗೆ ನಾವು ಜೋಡಿಸಿಕೊಂಡಿರರುವ ಅತಂಕ-ಅತಿ ನಿರೀಕ್ಷೆ ಮೊದಲಾದ ಋಣಾತ್ಮಕ ಭಾವನೆಗಳಿಂದ ತಾನೆ? ಅವುಗಳನ್ನು ಎದುರಿಸಲು, ಅವು ನಾವಂದುಕೊಂಡಷ್ಟು ಅಪಾಯವಲ್ಲ ಎಂಬುದನ್ನು ಅರಿಯಲು, ಕೆಲಸ ಮಾಡಿ ಮುಗಿಸಿ ಅವುಗಳಿಂದ ಹಗುರಾಗುವುದೇ ದಾರಿ. ನಿಮ್ಮ ಹಿಂದಿನ ಅನುಭವಗಳನ್ನು ನೆನೆಸಿಕೊಳ್ಳಿ. ನೀವು ಆ ಕೆಲಸಕ್ಕೆ ಅನಿವಾರ್ಯವಾಗಿ ಕೊನೆಯ ಗಳಿಗೆಯಲ್ಲಿ ತೊಡಗಿದಾಗಲೂ, ನೀವಂದುಕೊಂಡಷ್ಟು ಸಮಯ ಬೇಕಾಗಲಿಲ್ಲ; ಮೊದಲು ಎಣಿಸಿದಷ್ಟು ಕಷ್ಟಕರವಾಗಿರಲಿಲ್ಲ; ಮಾಡುವಾಗ ಸಂತೋಷವೇ ಆಗಿತ್ತು, ಇತ್ಯಾದಿ. ನೀವು ಮುಂದೂಡುವ ಚಕ್ರದಲ್ಲಿ ಸಿಲುಕಿರುವುದರ ಕಾರಣ ಮುಂದಿರುವ ಕೆಲಸ ಕಷ್ಟಕರವಾದದ್ದು, ಎನ್ನುವುದಕ್ಕಿಂತ ನಿಮ್ಮ ಭಾವನೆಗಳನ್ನು ನಿಭಾಯಿಸಲು ಕಷ್ಟವಾಗಿರುವುದು ಎಂಬುದು ಮನಗಾಣಬೇಕಾದ ಮಹತ್ವದ ಅಂಶ. ಮುಂದೂಡುವುದರಿಂದ ತಾತ್ಕಾಲಿಕವಾಗಿ ಸಿಕ್ಕುವ ಹಗುರವಾದ ಭಾವ, ಕೆಲಸ ಮುಗಿಸುವುದರಿಂದ ನಿಜವಾಗಿ ಸಿಕ್ಕುವ ಸಂತಸ-ಹೊರೆ ಇಳಿದ ಭಾವಗಳಾಗಲು ಸಾಧ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT