ವೃತ್ತಿಜೀವನದ ಮಹತ್ವಾಕಾಂಕ್ಷೆಗಳು ಮತ್ತು ವೃತ್ತಿಪರ ಬೆಳವಣಿಗೆಗೆ ಉತ್ತಮ ಆರೋಗ್ಯವು ಪ್ರಮುಖ ಪಾತ್ರ ವಹಿಸುತ್ತದೆ. ಕೆಲಸದ ಸ್ಥಳ ಹಾಗೂ ವೇಳೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತಿ ಮುಖ್ಯ.
ಬೆಂಗಳೂರಿನ ನಾರಾಯಣ ಹೆಲ್ತ್‌ನ ಡಾ.ಕ್ರಾಂತಿ ಶಿರೀಶ್ ಖಾಡಿಲ್ಕರ್ ಅವರು ಹೇಳುವಂತೆ, ’ ದೀರ್ಘಕಾಲದ ಕೆಟ್ಟ ಜೀವನಶೈಲಿಯಿಂದ ಉಂಟಾಗುವ ಕಾಯಿಕೆ ಮಧುಮೇಹ. ಇದು ಹಲವು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಬಹುತೇಕ ಸಮಯ ಕುಳಿತೇ ಕೆಲಸ ಮಾಡುವವರು ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಧುಮೇಹವನ್ನು ನಿಯಂತ್ರಿಸುವುದು ಅವಶ್ಯಕ ಎನ್ನುತ್ತಾರೆ.
ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಸುಸ್ಥಿತಿಯಲ್ಲಿಡಲು ಇಲ್ಲಿವೆ ಕೆಲವು ಸಲಹೆಗಳು.
ಬದುಕನ್ನು ಯೋಜಿಸಿ
ಆಹಾರ, ನಿದ್ದೆ, ವ್ಯಾಯಾಮ ವಿಚಾರದಲ್ಲಿ ಶಿಸ್ತು ಅಳವಡಿಸಿಕೊಂಡರೆ ಮಧುಮೇಹ ನಿಯಂತ್ರಿಸುವುದು ಕಷ್ಟವಾಗದು. ಉತ್ತಮ ನಿದ್ದೆ ಮುಖ್ಯ. ಬೆಳಗಿನ ಉಪಾಹಾರವನ್ನು ಸೇವಿಸದೇ ಇರಬೇಡಿ. ಇದು ಸಕ್ಕರೆಯ ಮಟ್ಟವನ್ನು ಸರಿಯಾದ ಪ್ರಮಾಣದಲ್ಲಿ ಇರಿಸಲು ಸಹಾಯವಾಗುತ್ತದೆ. ಊಟದಲ್ಲಿ ಕ್ಯಾಲೋರಿಗೆ ಮಿತಿ ಹಾಕಿ, ಉಪ್ಪು ಹಾಗೂ ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡಿ.
ಸ್ನ್ಯಾಕ್ ಸ್ಮಾರ್ಟ್
ಸಹೋದ್ಯೋಗಿ ಚಿಪ್ಸ್ ಅಥವಾ ಕರಿದ ಆಹಾರ, ಕ್ಯಾಂಡಿ ತಿನ್ನುತ್ತಿದ್ದರೆ, ಯಾರಾದರೂ ಮಿಠಾಯಿ ಕೊಟ್ಟರೆ ಮತ್ತೊಮ್ಮೆ ಆರೋಗ್ಯ ಮಂತ್ರವನ್ನು ಜಪಿಸಿ. ತಿನ್ನದೇ ಇರುವುದು ಕಷ್ಟವಾಗಬಹುದು. ಮಿತಿ ಹಾಕಿಕೊಳ್ಳಿ. ಏನಾದರೂ ತಿನ್ನಲೇಬೇಕು ಎನ್ನುವ ಬಯಕೆ ಹುಟ್ಟಿದ ತಕ್ಷಣ ಹಣ್ಣುಗಳು, ಸಲಾಡ್, ಬೀಜಗಳನ್ನು ತಿನ್ನಿ. ಸಕ್ಕರೆ, ಮೊಸರು, ಕೆಫಿನ್ ಹಾಗೂ ಪಾನೀಯಗಳಿಂದ ದೂರವಿರಿ.
ಆರೋಗ್ಯಕರ ಊಟ ಮಾಡಿ
ನಿಮ್ಮ ತಟ್ಟೆಯಲ್ಲಿ ಸಮತೋಲಿತ ಆಹಾರವಿರಲಿ. ಮಧುಮೇಹಸ್ನೇಹಿ ಆಹಾರವೆಂದರೆ ಸೊಪ್ಪುಗಳು ಅದರಲ್ಲಿಯೂ ಪಾಲಕ್, (ಪಾಲಕ ಪಿಷ್ಟರಹಿತ ತರಕಾರಿಗಳು (ಕ್ಯಾರೆಟ್, ಟೊಮೊಟೊ, ಈರುಳ್ಳಿ, ಬೆಂಡೆಕಾಯಿ, ಹೂಕೋಸು), ಕಾರ್ಬೋಹೈಡ್ರೇಟ್‌ಗಳು , ಇಡೀ ಧಾನ್ಯಗಳು ಮತ್ತು ಕಂದು ಅಕ್ಕಿ, ನೇರ ಪ್ರೋಟೀನ್‌ಗಳು (ಮೊಟ್ಟೆ, ಬೀನ್ಸ್ ಮತ್ತು ಸೇರಿದಂತೆ ಚಿಕನ್) ಇರಲಿ.
ಸಮತೋಲಿತ ಆಹಾರವನ್ನು ಅನುಸರಿಸುವುದರ ಜೊತೆಗೆ, ಊಟದ ಮೊದಲು ಮತ್ತು ನಂತರ ನಿಮ್ಮ ಗ್ಲೂಕೋಸ್ ಮಟ್ಟ ಪರೀಕ್ಷಿಸಿ. ನಿರಂತರ ಗ್ಲೂಕೋಸ್ ಮಾನಿಟರಿಂಗ್ (CGM) ಸಾಧನಗಳು ದಿನವಿಡೀ ನಿಮ್ಮ ಗ್ಲೂಕೋಸ್ ಮಟ್ಟವನ್ನು ಟ್ರ್ಯಾಕ್ ಮಾಡಲು ಸಹಾಯಕವಾಗಬಹುದು.
ಔಷಧಿಯ ದಿನಚರಿ ಪಾಲಿಸಿ
ಮಧುಮೇಹವನ್ನು ಚೆನ್ನಾಗಿ ನಿರ್ವಹಿಸಲು, ಔಷಧಿಗೆ ಬದ್ಧವಾಗಿರುವುದು ಮುಖ್ಯ. ಇದು ಗ್ಲೈಸೆಮಿಕ್ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಔಷಧಿ ಸೇವನೆ ಮರೆಯದಂತೆ ರಿಮೈಂಡರ್ ಇಟ್ಟುಕೊಳ್ಳಿ.
ತಂಡಕ್ಕೆ ಗೊತ್ತಿರಲಿ: ಮಧುಮೇಹಿ ಎಂಬ ವಿಚಾರವನ್ನು ಮುಚ್ಚಿಡುವುದಕ್ಕಿಂತ ತಂಡದ ಮ್ಯಾನೇಜರ್‌ಗೆ ಇದು ತಿಳಿದಿರಲಿ. ಇದರಿಂದ ಊಟ, ವಿರಾಮಕ್ಕೆ ತಡೆಯಿಲ್ಲದ ಹಾಗೇ ಆಗುತ್ತದೆ. ತುರ್ತು ಪರಿಸ್ಥಿತಿ ಎದುರಾದರೆ ಇಡೀ ತಂಡವು ನಿಮಗೆ ನೈತಿಕ ಬೆಂಬಲ ಸೂಚಿಸಲು ಸಹಾಯಕವಾಗಬಹುದು.
ಕ್ರಿಯಾಶೀಲರಾಗಿರಿ
ಜಡ ಜೀವನಶೈಲಿಯನ್ನು ತೊರೆಯಿರಿ. ಹೊರಗೆ ಹೋಗಲು ಸಾಧ್ಯವಾಗದೇ ಹೋದರೆ ಕೆಲಸ ಮಾಡುವ ಸ್ಥಳದಲ್ಲಿ ಆಗಾಗ್ಗೆ ಕೈಕಾಲುಗಳನ್ನು ಚಾಚುವ, ಕಚೇರಿ ಸುತ್ತ ಸಣ್ಣ ನಡಿಮೆ ಮಾಡುವ, ಮೆಟ್ಟಿಲು ಹತ್ತುವ ಇಳಿಯುವ ಕೆಲಸ ಮಾಡಿ. ಊಟದ ನಂತರದ ನಡಿಗೆಯಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ ಎಂದು ಇತ್ತೀಚಿನ ಅಧ್ಯಯನ ಹೇಳಿದೆ. ವ್ಯಾಯಾಮವೆಂಬುದು ದಿನಚರಿಯ ಭಾಗವಾಗಲಿ.
ಒತ್ತಡ ನಿರ್ವಹಿಸಿ
ಒತ್ತಡದಲ್ಲಿದ್ದಾಗ ಗ್ಲೂಕೋಸ್ ಮಟ್ಟ ಬದಲಾಗುತ್ತಿರುತ್ತದೆ. ಕೆಲಸವನ್ನು ಒತ್ತಡರಹಿತವಾಗಿ ನಿಭಾಯಿಸುವ ಕಲೆಯನ್ನು ಕರಗತಮಾಡಿಕೊಳ್ಳಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಆಗಾಗ್ಗೆ ಧ್ಯಾನ ಮಾಡಲು ಪ್ರಯತ್ನಿಸಿ. ಜತೆಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿರಿ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಆದ್ಯತೆ ನೀಡಿ
ಆರೋಗ್ಯಕರ ಹೃದಯ ಕಾರ್ಯನಿರ್ವಹಣೆಯಲ್ಲಿ ಉತ್ತಮ ಕೊಲೆಸ್ಟ್ರಾಲ್‌ನ ಅಗತ್ಯವಿದೆ. ಆದರೆ ಹೆಚ್ಚಿನ ಕೊಲೆಸ್ಟ್ರಾಲ್‌ನಿಂದ ಹೃದಯ ರಕ್ತನಾಳಗಳಿಗೆ ತೊಂದರೆಯಾಗಬಹುದು. ಸರಳವಾದ ಜೀವನಶೈಲಿ ಅನುಸರಿಸಿದರೆ ಈ ಕೊಲೆಸ್ಟ್ರಾಲ್ ಮಟ್ಟವನ್ನು ಸುಸ್ಥಿತಿಯಲ್ಲಿಡಬಹುದು. ಪೋರ್ಟಿಸ್ ಆಸ್ಪತ್ರೆಯ ಹೃದ್ರೋಗ ವಿಭಾಗದ ನಿರ್ದೇಶಕ ಡಾ. ರಾಜಪಾಲ್ ಸಿಂಗ್, ‘ಕೊಲೆಸ್ಟ್ರಾಲ್ ಹತೋಟಿಯಲ್ಲಿಡಲು ಜೀವನ ಶೈಲಿಯ ಜತೆಗೆ ಔಷಧಿಯು ಮುಖ್ಯ ಪಾತ್ರ ವಹಿಸುತ್ತದೆ. ಈ ಬಗ್ಗೆ ಹೃದ್ರೋಗಿಗಳಲ್ಲಿ ತಿಳಿವಳಿಕೆ ಮೂಡಿಸುವುದು ಅಗತ್ಯ’ ಎನ್ನುತ್ತಾರೆ.
ಕೊಲೆಸ್ಟ್ರಾಲ್ ಹಾರ್ಮೋನ್ ಹಾಗೂ ವಿಟಮಿನ್ ಡಿ ತಯಾರಿಕೆ ಹಾಗೂ ಆಹಾರ ಜೀರ್ಣಿಸುವ ಕ್ರಿಯೆಯಲ್ಲಿ ಪ್ರಮುಖವಾಗಿ ಸಹಾಯ ಮಾಡುತ್ತದೆ. ಆನುವಂಶೀಯತೆ, ದೈಹಿಕ ಚಟುವಟಿಕೆ ಇಲ್ಲದಿರುವುದೂ ಹೃದ್ರೋಗ ಹೆಚ್ಚಳಕ್ಕೆ ಕಾರಣ. ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್ ಕೊಲೆಸ್ಟ್ರಾಲ್ (LDL-C) ಅನ್ನು ಸಾಮಾನ್ಯವಾಗಿ ‘ಕೆಟ್ಟ ಕೊಲೆಸ್ಟ್ರಾಲ್’ ಎಂದು ಕರೆಯಲಾಗುತ್ತದೆ, ಅದರ ಮಟ್ಟವನ್ನು ನಿಯಂತ್ರಣ ದಲ್ಲಿಡುವುದು ಮುಖ್ಯ. ಹೆಚ್ಚಿದ LDL-C ಅಪಧಮನಿಗಳಲ್ಲಿ ಪ್ಲೇಕ್ ರಚನೆ ಮಾಡುತ್ತದೆ. ಇದು ಹೃದಯಾಘಾತ ಹಾಗೂ ಪಾರ್ಶ್ವವಾಯುಗಳಂಥ ಕಾಯಿಲೆಗಳು ಬರುವಂತೆ ಮಾಡುತ್ತದೆ. ಸಾವಯವ ತರಕಾರಿಗಳ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಿ ಸಬಹುದು. ಸಮತೋಲಿತ ಆಹಾರ, ವ್ಯಾಯಾಮ ಹಾಗೂ ಸೂಕ್ತ ಔಷಧೋಪಾಚಾರದಿಂದ ನಿಯಂತ್ರಣದಲ್ಲಿಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.