ಶನಿವಾರ, ಅಕ್ಟೋಬರ್ 16, 2021
22 °C

ವ್ಯರ್ಥ ವ್ಯಥೆ ವ್ಯರ್ಥ... ವರ್ತಮಾನದಲ್ಲಿ ಬದುಕುವುದೇ ಈ ಸಮಸ್ಯೆಗೆ ಪರಿಹಾರ

ರಘು ವಿ. Updated:

ಅಕ್ಷರ ಗಾತ್ರ : | |

Prajavani

ಬದುಕಿನ ಅನೇಕ ಸಮಸ್ಯೆಗಳು ತೆರೆದುಕೊಳ್ಳುವುದು ಮನದ ಬಾಗಿಲಿನ ಮೂಲಕ. ಬಹುತೇಕ ವ್ಯಥೆ ಅಥವಾ ಚಿಂತೆಗಳು ಭ್ರಮಾತ್ಮಕವಾದವು. ಮನಸ್ಸು ಸದಾ ಭೂತ ಅಥವಾ ವರ್ತಮಾನದಲ್ಲಿ ಚಲಿಸುವುದರಿಂದ ಈ ಸಮಸ್ಯೆ. ಚಿಂತಕ, ಫ್ರೆಂಚ್ ನವೋದಯ ಕಾಲದ ತತ್ತ್ವಜ್ಞಾನಿ ಮಿಕೆಲ್ ಡು ಮೊಂಟೇನ್ ಹೇಳುತ್ತಾನೆ: ‘ನನ್ನ ಬದುಕು ಅನೇಕ ದುರ್ಘಟನೆಗಳಿಂದ ತುಂಬಿದೆ. ಆದರೆ ಇವುಗಳಲ್ಲಿ ಬಹುತೇಕವಾದವು ಘಟಿಸಲೇ ಇಲ್ಲ!’ ಈ ಮಾತುಗಳ ಹಿಂದಿರುವ ವ್ಯಂಗ್ಯವನ್ನು, ಅದು ವ್ಯಕ್ತಪಡಿಸುವ ಆಶಯವನ್ನು ಅರ್ಥಮಾಡಿಕೊಳ್ಳಬೇಕು ನಾವು. ‘ಯಾರು ಹೆದರುವರೋ ಅವರು ಸಂಕಟಪಡುತ್ತಾರೆ. ಅವರು ಅದಾಗಲೇ ಭಯದ ಕಾರಣದಿಂದ ಹೆದರಿಕೆಯ ಫಲಾನುಭವಿಗಳಾಗಿರುತ್ತಾರೆ’ ಎಂಬುವವೂ ಕೂಡ ಅವನ ಮಾತುಗಳೇ. ವ್ಯಥೆಯಿಂದ ಚಿಂತೆ. ಚಿಂತೆಯಿಂದ ಚಿತೆ.

ವರ್ತಮಾನದಲ್ಲಿ ಬದುಕುವುದೇ ಈ ಸಮಸ್ಯೆಗೆ ಪರಿಹಾರವಾದರೂ ಅದು ಸುಲಭವಲ್ಲ. ಸತತ ಪ್ರಯತ್ನದಿಂದ ಅದು ಸಿದ್ಧಿಸುವುದು. ವರ್ತಮಾನದಲ್ಲಿ ಬದುಕುವುದೆಂದರೆ ಯಾರಿಗೂ ಯಾವುದಕ್ಕೂ ಅಂಟಿಕೊಳ್ಳದೆ ಇರುವುದು. ಒಬ್ಬ ಸಾಧುವಿಗೆ ಮಹಾರಾಜನೊಬ್ಬ ವಜ್ರವೊಂದನ್ನು ದಾನಮಾಡಿದ. ಆ ಸಾಧು ಅದನ್ನು ತನ್ನ ಜೋಳಿಗೆಯಲ್ಲಿರಿಸಿಕೊಂಡು ಹೊರಟ. ಅವನ ಪಾಲಿಗೆ ಅದೊಂದು ಕಲ್ಲು ಅಷ್ಟೆ. ಮಾರ್ಗಮಧ್ಯದಲ್ಲಿ ಅವನು ಜೋಳಿಗೆಯನ್ನು ಬುಡಮೇಲು ಮಾಡಬೇಕಾದ ಸಂದರ್ಭದಲ್ಲಿ ಅದು ಕಳ್ಳನೊಬ್ಬನ ಕಣ್ಣಿಗೆ ಬಿತ್ತು. ಅವನು ಅದನ್ನು ಅಪಹರಿಸಬೇಕೆಂದು ಸಾಧುವನ್ನು ಹಿಂಬಾಲಿಸುತ್ತ ಹೊರಟ. ಜನನಿಬಿಡ ಪ್ರದೇಶ ತಲುಪಿದ ಬಳಿಕ ಸಾಧುವಿನ ಮುಂದೆ ಹಾರಿ ತನ್ನ ಕತ್ತಿಯನ್ನು ಅವನ ಕೊರಳಿಗಿಟ್ಟು ವಜ್ರವನ್ನು ತನಗೆ ನೀಡುವಂತೆ ಗದರಿಸಿದ. ಸಾಧು ಮರುಮಾತಾಡದೆ ಶಾಂತನಾಗಿಯೇ ಅದನ್ನು ತೆಗೆದು ಕಳ್ಳನ ಕೈಗಿತ್ತು ಹಾದಿಯಲ್ಲಿ ಮುಂದುವರೆದ. ಅತ್ತ ಕಳ್ಳ ಪರಮಾನಂದದಿಂದ ಹೊರಟನಾದರೂ ಅವನ ಮನಸ್ಸಿನಲ್ಲಿ ಒಂದು ಅಲೆ ಎದ್ದಿತು. ಹೀಗೆ ಅನಾಯಾಸವಾಗಿ ಕೊಟ್ಟುಬಿಡುವ ಮನಸ್ಸು ಹೇಗೆ ಬರಲು ಸಾಧ್ಯ? ಮೂರು ದಿನ ಕಳೆಯಿತು. ಕಳ್ಳ ಮತ್ತೆ ಸಾಧುವನ್ನು ಅರಸುತ್ತ ಹೊರಟ. ಅವನೆದುರು ನಿಂತ. ಸಾಧು ಕಳ್ಳನನ್ನು ಕಂಡು ಮತ್ತೇನು ಬೇಕು ಎಂದು ಪ್ರಶ್ನಿಸಿದಾಗ, ತಾನು ಪಡೆದ ವಜ್ರವನ್ನು ಅವನ ಬಳಿಯಿಟ್ಟು, ‘ಸ್ವಾಮಿ, ನನಗೇನೂ ಬೇಡ. ಆದರೆ ಇಷ್ಟು ಸಲೀಸಾಗಿ ವಸ್ತುಗಳನ್ನು ಒಪ್ಪಿಸಿ ನಿರ್ಲಿಪ್ತನಾಗಿ ನಡೆಯುವ ಮಾರ್ಗವನ್ನು ತೋರಿಸಿಬಿಡಿ, ಅಷ್ಟೆ ಸಾಕು’ ಎಂದ. ದಾಸಪರಂಪರೆಯಲ್ಲಿ ನಾವು ಕಾಣುವ ಅಥವಾ ಜಗತ್ತಿನ ಎಲ್ಲ ಭಕ್ತಿಪಂಥದವರಲ್ಲಿ ನಾವು ಕಾಣುವುದು ಇದನ್ನೇ. ನಾವೆಲ್ಲ ಕಳ್ಳರೇ; ಆದರೆ ಅಂತಹ ಸಾಧು ದೊರೆಯುವವರೆಗೆ ಕಾಯಬೇಕು. ಆ ಪರಿವರ್ತನೆಯ ಕ್ಷಣ ಬರಬೇಕು.

ಚಿಂತೆಯ ಸ್ವರೂಪವನ್ನು ಅರ್ಥ ಮಾಡಿಕೊಂಡಾಗ ಅದು ಹೇಗೆ ನಮ್ಮ ಮೇಲೆ ಪ್ರಭಾವ ಬೀರಬಹುದೆಂಬ ಸ್ಪಷ್ಟ ಅರಿವಾಗುವುದು. ಮೂಲದಲ್ಲಿ ಅದೊಂದು ಸಣ್ಣ ಹನಿಯಾಗಿ ತೊಟ್ಟಿಕ್ಕಿ ಝರಿಯಾಗಿ ಬದಲಾಗಿ ಕೊನೆಗೆ ನದಿಯಾಗಿ ನಮ್ಮನ್ನು ಕೊಚ್ಚಿಹಾಕುತ್ತದೆ. ಇದೊಂದು ರಮ್ಯಚಿತ್ರವೆನಿಸಿದರೂ ಚಿಂತಿತರಾದವರ ಪರಿಸ್ಥಿತಿ ಬಹಳ ನೋವಿನಿಂದ ಕೂಡಿರುತ್ತದೆ. ಅದು ಮನಸ್ಸಿನ, ದೇಹದ ಎಲ್ಲ ಶಕ್ತಿಯನ್ನೂ ಚೈತನ್ಯವನ್ನೂ ಹೀರಿಬಿಡುವುದು. ‘ಚಿಂತೆ ಎಂಬುದು ಮನಸ್ಸಿನೊಳಗಿನ ಭಯದ ಸಣ್ಣ ಹರಿವು. ಅದನ್ನು ಬೆಳೆಯಗೊಟ್ಟರೆ ಅದು ನಮ್ಮ ಉಳಿದೆಲ್ಲ ಆಲೋಚನೆಗಳಿಗೆ ನಾಲೆ ಕೊರೆದು, ನಿರ್ವಿಣ್ಣರನ್ನಾಗಿಸುವುದು’ ಎನ್ನುತ್ತಾನೆ, ಅಮೆರಿಕದ ಬರಹಗಾರ ಆರ್ಥರ್ ಸೊಮರ್ಸ್ ರೋಚ್. ಮನಶ್ಶಾಸ್ತ್ರಜ್ಞರು ಕೂಡ ಇದನ್ನೇ ಅನುಮೋದಿಸುತ್ತಾರೆ.

ಚಿಂತೆ ವ್ಯಾಪಿಸಿಕೊಂಡು ಅದು ಮನೋರೋಗವಾದರೂ ಆದೀತು. ಆದುದರಿಂದ ಅದನ್ನು ಸಮರ್ಥವಾಗಿ ಎದುರಿಸುವ ಉಪಾಯಗಳನ್ನು ಅರಿತಿರಬೇಕು. ಒಳ್ಳೆಯ ಸಕಾರಾತ್ಮಕ ಆಲೋಚನೆಗಳನ್ನು ಮನಸ್ಸಿನಲ್ಲಿ ಬಿತ್ತುವುದು ಇದರ ಮೊದಲ ಹೆಜ್ಜೆ. ನಾವು ನಿರೀಕ್ಷಿಸಿದ ಚಿಂತೆಯ ಅತಿ ಕೆಟ್ಟ ಫಲಿತಾಂಶ ಏನಿರಬಹುದು ಎಂದು ಆಲೋಚಿಸಿ ಅದಕ್ಕೆ ಸಿದ್ಧರಾಗಿರುವುದು ಎರಡನೆಯ ಹೆಜ್ಜೆ. ನಿರ್ಧಾರಗಳನ್ನು ತಳೆಯುವ ಕುರಿತೇ ಹೆಚ್ಚಿನ ಚಿಂತೆಗಳಿರುತ್ತವೆ. ಮತ್ತು ನಿರ್ಧಾರ ಹೊಂದಲು ಬೇಕಾದ ಪೂರ್ಣಪ್ರಮಾಣದ ಮಾಹಿತಿ ಪಡೆಯದೆ ನಿರ್ಧಾರಗಳನ್ನು ಕೈಗೊಳ್ಳುವುದು ಮತ್ತೂ ಹೆಚ್ಚಿನ ಚಿಂತೆಗೆ ಕಾರಣವಾಗುವುದು. ಸಂಪೂರ್ಣ ಮಾಹಿತಿ ಕಲೆಹಾಕಿ, ಆಳವಾದ ವಿಮರ್ಶೆ ಮಾಡಿದ ಬಳಿಕ ನಿರ್ಧಾರ ಕೈಗೊಳ್ಳುವುದೇ ಇದಕ್ಕೆ ಇರುವ ಪರಿಹಾರ, ಇದು ಮೂರನೆಯ ಹೆಜ್ಜೆ. ಚಿಂತೆಗೆ ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿ ಒಂದೊಂದಾಗಿ ತಾರ್ಕಿಕವಾಗಿ ಅವುಗಳನ್ನು ಇಲ್ಲವಾಗಿಸುವುದು ನಾಲ್ಕನೆಯ ಹೆಜ್ಜೆ. ಚಿಂತೆ ನಮ್ಮ ದೈನಂದಿನ ಕೆಲಸಗಳಿಗೆ ತೊಂದರೆ ನೀಡದಂತೆ ಸಕ್ರಿಯವಾಗಿ ಸದಾ ಕೆಲಸದಲ್ಲಿ ಮುಳುಗುವುದು ಚಿಂತೆಯನ್ನು ಇಲ್ಲವಾಗಿಸುವ ಐದನೆಯ ಹೆಜ್ಜೆ. ಬದುಕು ನಾವಂದುಕೊಂಡಷ್ಟು ದೀರ್ಘವೂ ಅಲ್ಲ, ಸಂಕೀರ್ಣವೂ ಅಲ್ಲ. ಆದುದರಿಂದ ಇದ್ದುದನ್ನು ಇದ್ದಂತೆ ಸ್ವೀಕರಿಸಲು ಕಲಿಯುವುದು ಆರನೆಯ ಹೆಜ್ಜೆ. ಬದುಕು ನಾವಂದುಕೊಂಡಂತೆ ಇಲ್ಲ, ಅದನ್ನು ಹೀಗೆ ಹಾಗೆ ತಿದ್ದಬೇಕು ಎಂದು ಚಿಂತಿತರಾಗುವುದರಲ್ಲಿ ಅರ್ಥವೇ ಇಲ್ಲ. ಆದರೆ ನಮ್ಮೊಳಗಿನ ಅನಂತ ಸಾಧ್ಯತೆಯ ಪರಿಷ್ಕರಣೆ, ಅನಾವರಣಗಳತ್ತ ಮನಸ್ಸು ಓಡಿದಾಗ ಚಿಂತೆ ಇಲ್ಲವಾಗುವುದು. ಇದು ಏಳನೆಯ ಹೆಜ್ಜೆ. ತನ್ನ ಬಗೆಗಿನ ಸ್ವಾನುಕಂಪ ಅಥವಾ ಸ್ವಾನುತಾಪವೇ ಚಿಂತೆಯ ಬಳ್ಳಿ ಹರಡಲು ಆಧಾರವಾಗುವ ಚಪ್ಪರ. ಆದುದರಿಂದ ಅದನ್ನು ಕತ್ತರಿಸಿಹಾಕಿ ಆತ್ಮವಿಶ್ವಾಸದಿಂದ ನಡೆಯುವುದು ಎಂಟನೆಯ ಹೆಜ್ಜೆ. ಭಯದ ಕಾರಣದಿಂದ ಚಿಂತೆ. ಭಯಕ್ಕೆ ಕಾರಣ ಆತ್ಮವಿಶ್ವಾಸದ ಕೊರತೆ.

ಶತ್ರುಗಳು ಲಗ್ಗೆಯಿಕ್ಕುವುದು ದುರ್ಬಲ ಕೋಟೆಗಳಿಗೆ. ಬಲಿಷ್ಠವಾದ ದೇಹ ಮತ್ತು ದೃಢಮನಸ್ಸೇ ಚಿಂತೆಗಳಿಗೆಲ್ಲ ಪರಿಹಾರ. ಸ್ವಾಮಿ ವಿವೇಕಾನಂದರ ನುಡಿ ನಮಗೆ ಮಾರ್ಗದರ್ಶಕವಾಗಲಿ. ‘ಕಬ್ಬಿಣದಂತಹ ಮಾಂಸಖಂಡ, ಉಕ್ಕಿನ ನರಮಂಡಲ, ಮಿಂಚಿನಂತಹ ಮಸ್ತಿಷ್ಕ’ ನಮ್ಮ ಗುರಿಯಾಗಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು