ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕದ ಕಾಯಿಲೆಯೇ?

Last Updated 28 ಜೂನ್ 2019, 19:30 IST
ಅಕ್ಷರ ಗಾತ್ರ

ಆತಂಕವು ಒಂದಲ್ಲ, ಹಲವಾರು ಸಲ ಬಹುತೇಕರನ್ನು ಕಾಡಿಯೇ ಇರುತ್ತದೆ. ಅದೊಂದು ರೀತಿಯ ಎಚ್ಚರಿಕೆಯ ಗಂಟೆ. ಅಪಾಯದ ಮುನ್ಸೂಚನೆ ದೊರೆತಾಗ, ಆತಂಕವು ಜೀವಿಯ ಹೃದಯ ಬಡಿತವನ್ನು ಹೆಚ್ಚಿಸಿ, ದೇಹದ ಪ್ರಮುಖ ಅಂಗಗಳಿಗೆ ರಕ್ತಸಂಚಾರ ಹೆಚ್ಚುವಂತೆ ಮಾಡುತ್ತದೆ. ಮೈಯೆಲ್ಲ ಕಣ್ಣಾಗುವಂತೆ ಜಾಗೃತಗೊಳಿಸುತ್ತದೆ. ಸ್ನಾಯುಗಳು ಬಿಗಿಯುತ್ತವೆ. ಅಪಾಯವನ್ನು ಎದುರಿಸುವ ಇಲ್ಲವೇ ಪರಿಸ್ಥಿತಿಯಿಂದ ಪಲಾಯನಗೈಯಲು ಆತಂಕವು ದೇಹ ಹಾಗೂ ಮನಸ್ಸನ್ನು ಸಜ್ಜುಗೊಳಿಸುತ್ತದೆ.

ಸೇಲ್ಸ್‌ಮನ್‌ನಿಗೆ ಮಾಸಾಂತ್ಯದ ಟಾರ್ಗೆಟ್‌ನ ಬಗೆಗಿನ ಆತಂಕವಿಲ್ಲದಿದ್ದರೆ, ಆತನಿಗೆ ಕೆಲಸ ಮಾಡಲು ಪ್ರೇರಣೆ ಬರದಿರಬಹುದು. ಆರಕ್ಷಕರಿಗೆ ಅಪರಾಧಗಳನ್ನು ತಡೆಗಟ್ಟುವ ಬಗ್ಗೆ ಆತಂಕವಿಲ್ಲದಿದ್ದರೆ, ಸಮಾಜದಲ್ಲಿ ಕ್ರೌರ್ಯ ಹೆಚ್ಚಬಹುದು. ಇದೇ ರೀತಿ ನಮ್ಮೆಲ್ಲರಿಗೂ ಆತಂಕವು ನಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ನಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು ಪ್ರೇರೆಪಿಸುತ್ತದೆ. ಆದರೆ, ನೈಸರ್ಗಿಕವಾದ ಹಾಗೂ ವ್ಯಕ್ತಿಯ ಉಳಿವಿಗೆ ಸಹಾಯ ಮಾಡುವ ಆತಂಕ ಒಂದೆಡೆಯಾದರೆ, ವಿಪರೀತವಾದ ಹಾಗೂ ಯಾತನಾದಾಯಕ ಅನಾರೋಗ್ಯಕರ ಆತಂಕ ಇನ್ನೊಂದೆಡೆ!

ಆತಂಕ ಎನ್ನುವುದು ಉದ್ವೇಗದ ಭಾವ. ಅಪಾಯಕಾರಿ ಇಲ್ಲವೇ ಒತ್ತಡಭರಿತ ಸನ್ನಿವೇಶಗಳನ್ನು ಎದುರು ನೋಡುತ್ತಿರುವಾಗ ಎದೆ ಬಡಿತ, ರಕ್ತದೊತ್ತಡ ಹಾಗೂ ಉಸಿರಾಟದ ವೇಗ ಹೆಚ್ಚುತ್ತದೆ. ಮಾಂಸಖಂಡಗಳು ಸಂಕುಚಿತಗೊಳ್ಳುತ್ತವೆ. ವ್ಯಕ್ತಿಯು ಅತ್ಯಂತ ಎಚ್ಚರಿಕೆಯಿಂದ ಪರಿಸರವನ್ನು ಗ್ರಹಿಸುತ್ತಾನೆ. ನಂತರ ಈ ಸನ್ನಿವೇಶಗಳನ್ನು ಎದುರಿಸಿದ ಮೇಲೆ ದೇಹ ಹಾಗೂ ಮನಸ್ಸು ಸಹಜ ಸ್ಥಿತಿಗೆ ಮರಳುತ್ತವೆ. ಇದು ಸ್ವಾಭಾವಿಕ ಪ್ರಕ್ರಿಯೆ. ಆದರೆ, ಯಾವಾಗಲೂ ಆತಂಕದ ಮನಸ್ಥಿತಿಯಲ್ಲಿಯೇ ಇದ್ದು, ಮನಸ್ಸು ಹಾಗೂ ದೇಹಕ್ಕೆ ರಿಲ್ಯಾಕ್ಸ್ ಆಗಲು ಸಾಧ್ಯವಾಗದ ಸ್ಥಿತಿಯನ್ನು ಆತಂಕದ ಕಾಯಿಲೆ (Anxiety Disorder) ಎನ್ನುತ್ತೇವೆ.

ಶೇ 5 ರಷ್ಟು ಜನರು ಒಂದಲ್ಲ ಒಂದು ರೀತಿಯ ಆತಂಕದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಳೆದ ಒಂದು ದಶಕದಲ್ಲಿ ಈ ಕಾಯಿಲೆಯ ಪ್ರಮಾಣ ಹೆಚ್ಚಿದೆ.

ಗುಣ ಲಕ್ಷಣಗಳು

ಈ ಕಾಯಿಲೆಯಲ್ಲಿ ಚಡಪಡಿಕೆ ಹಾಗೂ ಮನಸ್ಸಿನ ಪ್ರಕ್ಷುಬ್ಧತೆ ಸಾಮಾನ್ಯ. ಯೋಚನೆಗಳು ರೈಲಿನ ಬೋಗಿಗಳಂತೆ ಒಂದಾದ ಮೇಲೊಂದು ಸತತವಾಗಿ ಬರುತ್ತಿರುತ್ತವೆ. ಮನಸ್ಸು ನಿಂತ ನೀರಂತೆ ಶಾಂತವಾಗಿರದೆ, ರಭಸವಾದ ಅಲೆಗಳಿಂದ ತುಂಬಿದ ಸಮುದ್ರದಂತಿರುತ್ತದೆ. ಕಲ್ಪಿತ ಪರಿಸ್ಥಿತಿಗಳ ಬಗ್ಗೆ ಚಿಂತೆ ಹೆಚುತ್ತದೆ. ಸದಾ ಕಿರಿಕಿರಿ, ಸಮಾಧಾನದಿಂದ ಒಂದೆಡೆ ಕೂರಲಾಗುವುದಿಲ್ಲ. ಕೆಲಸದಲ್ಲಿ ಏಕಾಗ್ರತೆಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಏನೋ ತಳಮಳ. ಅನಿಶ್ಚಿತತೆಯನ್ನು ನಿಭಾಯಿಸಲು ಕೂಡ ಸಾಮರ್ಥ್ಯ ಇರುವುದಿಲ್ಲ. ವಿಶೇಷವಾಗಿ, ತಮ್ಮ ಪ್ರೀತಿಪಾತ್ರರು ಹೊರಗೆ ಹೋಗಿದ್ದರೆ, ಅವರ ಸುರಕ್ಷತೆಯ ಬಗ್ಗೆ ಸ್ಪಷ್ಟವಾದ ಕಾರಣಗಳಿಲ್ಲದಿದ್ದರೂ ಅವಾಸ್ತವಿಕವಾದ ಚಿಂತೆ ಕಾಡುತ್ತದೆ. ನಿರ್ಧಾರ ತೆಗೆದುಕೊಳ್ಳುವುದರಲ್ಲಿ ದೃಢತೆ ಇರುವುದಿಲ್ಲ.

ಸದಾ ಹೆಚ್ಚಿದ ಎದೆಬಡಿತ, ಬೆವರುವಿಕೆ, ಅಧಿಕ ರಕ್ತದೊತ್ತಡ ಸಾಮಾನ್ಯ. ಕೆಲವೊಮ್ಮೆ ಈ ಲಕ್ಷಣಗಳಿಂದ ವ್ಯಕ್ತಿಯು ತನಗೆ ಹೃದಯ ಸಂಬಂಧಿ ಕಾಯಿಲೆಯಿರಬಹುದು ಎಂಬ ಶಂಕೆಯಿಂದ ಇನ್ನಷ್ಟು ಆತಂಕಕ್ಕೊಳಗಾಗಿ ಪದೇ ಪದೇ ಆಸ್ಪತ್ರೆಗೆ ಎಡತಾಕಬಹುದು.

ಸತತವಾದ ಸ್ನಾಯು ಬಿಗಿತದಿಂದ ಮೈ–ಕೈ ನೋವು, ಸುಸ್ತು, ತಲೆನೋವು ಕಾಣಿಸಿಕೊಳ್ಳುತ್ತವೆ. ಚೈತನ್ಯ, ಉತ್ಸಾಹ ಕಡಿಮೆಯಾಗುತ್ತದೆ. ಆಮ್ಲೀಯತೆ, ಅಜೀರ್ಣ, ತಲೆಸುತ್ತು ಉಂಟಾಗಬಹುದು.

ನಿದ್ರಾಹೀನತೆ ಅತಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಮನಸ್ಸನ್ನು ಒಂದೆಡೆ ನಿಲ್ಲಿಸಲಾಗದ ಕಾರಣ, ದೈಹಿಕವಾಗಿ ಬಳಲಿದ್ದರೂ ನಿದ್ರೆ ಬರುವುದಿಲ್ಲ.

ಆತಂಕದ ಕಾಯಿಲೆಗೆ ಕಾರಣಗಳೇನು?

ಒತ್ತಡಭರಿತ ಜೀವನಶೈಲಿ, ಕಷ್ಟಕರವಾದ ಕೆಲಸದ ವಾತಾವರಣ, ವೈಯಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳು, ಅನುವಂಶೀಯತೆ, ಅತಿಯಾದ ಭಾವುಕತೆ, ಕೆಲಸದಲ್ಲಿ ಪರಿಪೂರ್ಣತೆ ಹಂಬಲಿಸುವ ಭಾವನೆ, ಥೈರಾಯ್ಡ್‌ ಸಮಸ್ಯೆ, ಮದ್ಯಪಾನ, ಧೂಮಪಾನ ಇತ್ಯಾದಿ ದುಶ್ಚಟಗಳು ಆತಂಕದ ಕಾಯಿಲೆಗೆ ಮುಖ್ಯ ಕಾರಣಗಳು.
ಮೆದುಳಿನ ಅನೇಕ ಭಾಗಗಳಲ್ಲಿ ಸೆರೊಟೋನಿನ್‌ನಂತಹ ನರವಾಹಕಗಳ ಪ್ರಮಾಣದಲ್ಲಿ ಉಂಟಾಗುವ ಏರುಪೇರಿನಿಂದ ಆತಂಕದ ಕಾಯಿಲೆಯ ಲಕ್ಷಣಗಳು ಉದ್ಭವಿಸುತ್ತವೆ.
ಕೆಲವರು ಆತಂಕವನ್ನು ದೂರವಿರಿಸಲು ಸ್ವಚಿಕಿತ್ಸೆಯಾಗಿ ಮದ್ಯಪಾನದ ಮೊರೆ ಹೋಗುತ್ತಾರೆ. ಅಲ್ಪ ಸಮಯ ಅವರಿಗೆ ಸಮಾಧಾನವೆನಿಸಬಹುದು. ಆದರೆ, ಮದ್ಯಪಾನವು ಆತಂಕದ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುವುದೇ ಹೊರತು, ಗುಣಪಡಿಸುವುದಿಲ್ಲ.

ವೈದ್ಯರ ಸಲಹೆ ಅಗತ್ಯ

ಆತಂಕದಿಂದ ದಿನನಿತ್ಯದ ವೈಯಕ್ತಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ತೊಂದರೆಯಾದರೆ ವೈದ್ಯರ ಸಲಹೆಯನ್ನು ಪಡೆಯಬೇಕು. ದೀರ್ಘಕಾಲದವರೆಗೆ ಆತಂಕದಿಂದ ಬಳಲುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಜಠರದ ಅಲ್ಸರ್, ಖಿನ್ನತೆ, ದುಶ್ಚಟಗಳು ಹಾಗೂ ಇನ್ನೂ ಅನೇಕ ಮಾರಕ ದೈಹಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

ಚಿಕಿತ್ಸೆ

ಔಷಧೋಪಚಾರ ಹಾಗೂ ಯೋಚನೆಯಿಂದ ಉಂಟಾಗುವ ನಡವಳಿಕೆಯನ್ನು ಬದಲಿಸುವ ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (ಸಿಬಿಟಿ)ಯಿಂದ ಈ ಕಾಯಿಲೆಯನ್ನು ಗುಣಪಡಿಸಬಹುದು. ಯೋಗ, ಪ್ರಾಣಾಯಾಮ ಹಾಗೂ ಧ್ಯಾನಗಳು ಪೂರಕ ಚಿಕಿತ್ಸೆಗಳಾಗಿವೆ.

ಆತಂಕ ದೂರವಿಡಲು ಸಲಹೆಗಳು
* ಆರೋಗ್ಯಕರ ಹಾಗೂ ಶಿಸ್ತಿನ ಜೀವನಶೈಲಿಯನ್ನು ರೂಢಿಸಿಕೊಳ್ಳಿ
*ನಿಯಮಿತ ಆಹಾರ, ನಿದ್ದೆ, ದೈಹಿಕ ಚಟುವಟಿಕೆ, ಯೋಗ, ಪ್ರಾಣಾಯಾಮ, ಧ್ಯಾನಗಳಿಂದ ಮನಸ್ಸು ಹಾಗೂ ದೇಹಗಳೆರಡೂ ಪ್ರಫುಲ್ಲಿತ ಹಾಗೂ ಆರೋಗ್ಯಕರವಾಗಿರುತ್ತವೆ.
*ಅತಿಯಾದ ಕಾಫಿ, ಚಹಾ ಹಾಗೂ ಶಕ್ತಿದಾಯಕ ಎನರ್ಜಿ ಪೇಯಗಳನ್ನು ವರ್ಜಿಸಿ. ದೇಹದಲ್ಲಿ ಕೆಫಿನ್ ಪ್ರಮಾಣ ಜಾಸ್ತಿಯಾದರೆ, ಆತಂಕದ ಚಿಹ್ನೆಗಳು ಹೆಚ್ಚಬಹುದು.
*ಮದ್ಯಪಾನ, ಧೂಮಪಾನ ಇತ್ಯಾದಿ ದುಶ್ಚಟಗಳಿಂದ ದೂರವಿರಿ
*ಮೊಬೈಲ್, ಕಂಪ್ಯೂಟರ್‌ಗಳನ್ನು ಅವಶ್ಯಕತೆಗೆ ಅನುಸಾರವಾಗಿ ಮಿತವಾಗಿ ಬಳಸಿ

ಸಮಯದ ನಿರ್ವಹಣೆ: ಒತ್ತಡವಿರುವ ಕೆಲಸಗಳಲ್ಲಿ ಸಮಯದ ನಿರ್ವಹಣೆ ಸಮರ್ಪಕವಾಗಿ ಮಾಡುವುದರಿಂದ, ಕೊನೆಯ ಕ್ಷಣದಲ್ಲಿ ಉಂಟಾಗುವ ಆತಂಕವನ್ನು ಕಡಿಮೆ ಮಾಡಬಹುದು.
ನಿಮ್ಮ ಸಾಮರ್ಥ್ಯವನ್ನು ಅರಿತುಕೊಂಡು, ವಾಸ್ತವಿಕವಾದ ಗುರಿಗಳನ್ನು ಹೊಂದಿ. ಅವಾಸ್ತವಿಕವಾದ ಆಸೆ, ಅಪೇಕ್ಷೆಗಳಿಂದ ಒತ್ತಡ, ನಿರಾಸೆ ಹಾಗೂ ಆತಂಕ ಹೆಚ್ಚಬಹುದು.
ಆರೋಗ್ಯ ಸಮಸ್ಯೆಗಳಿಗೆ ಸ್ವಚಿಕಿತ್ಸೆ ಬೇಡ. ಇದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯಿರಿ.

(ಲೇಖಕ,ಮನೋವೈದ್ಯರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT