ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗ್ರಹಿಸುವುದೇಕೆ? ಆನಂದಿಸಿ!

ಏನಾದ್ರೂ ಕೇಳ್ಬೋದು
Last Updated 1 ನವೆಂಬರ್ 2019, 19:30 IST
ಅಕ್ಷರ ಗಾತ್ರ

ನಾವು ಗಂಡ-ಹೆಂಡತಿ ಇಬ್ಬರೂ ಶಿಕ್ಷಕರು. ಗಂಡ ಸ್ಫುರದ್ರೂಪಿ, ನಾನು ಅಷ್ಟು ಚೆನ್ನಾಗಿಲ್ಲ. ಓದುತ್ತಿದ್ದಾಗ ಇದ್ದ ಪ್ರಿಯತಮೆಯನ್ನು ಅವರಿನ್ನೂ ಮರೆತಿಲ್ಲ. ಒಂದೇ ಕಡೆ ಕೆಲಸ ಮಾಡ್ತಾರೆ. ಸಂಬಂಧಿಕರ ಎದುರು ನನ್ನನ್ನು ಅವಮಾನಿಸುತ್ತಾರೆ. ಏನು ಮಾತನಾಡಿದ್ರೂ ಜಗಳ, ಎಲ್ಲರೆದುರು ನನ್ನ ಬಗೆಗೆ ಚಾಡಿ, ಬಂಧುಗಳಿಂದ ದೂರ, ನನಗೆ ಅಸಹ್ಯವಾಗುವಷ್ಟು ಹೆಂಗಸರ ಹುಚ್ಚು ಇವು ಅವರ ಸ್ವಭಾವಗಳು. ನನಗೆ ಅಮ್ಮ ಇಲ್ಲ. ಏನು ಮಾಡಲಿ?
-ಹೆಸರು, ಊರು ಬೇಡ

ಉತ್ತರ: ವಿವರಣೆಯನ್ನು ನೋಡಿದರೆ ನಿಮ್ಮ ಪತಿಗೆ ಮತ್ತು ದಾಂಪತ್ಯಕ್ಕೆ ದೀರ್ಘಕಾಲದ ಮನೋಚಿಕಿತ್ಸೆಯ ಅಗತ್ಯವಿದೆ. ಅವರನ್ನು ಸರಿದಾರಿಗೆ ತಂದು ದಾಂಪತ್ಯವನ್ನು ಉಳಿಸಿಕೊಳ್ಳುವುದು ನಿಮ್ಮೊಬ್ಬರದೇ ಜವಾಬ್ದಾರಿ ಹೇಗಾಗುತ್ತದೆ? ಅಸಾಧ್ಯವಾದ ಅಂತಹ ಜವಾಬ್ದಾರಿಯನ್ನು ಹೊತ್ತುಕೊಂಡು ಅದನ್ನು ನಿಭಾಯಿಸಲು ಆತ್ಮಗೌರವವನ್ನು ಬಲಿಕೊಡುತ್ತಾ ಖಾಲಿಯಾಗಿ ಬದುಕುತ್ತಿದ್ದೀರಿ ಎನ್ನಿಸುತ್ತಿಲ್ಲವೇ? ನಂಬಿಕೆ, ಪರಸ್ಪರ ಗೌರವವಿಲ್ಲದ ದಾಂಪತ್ಯದಲ್ಲಿ ಪ್ರೀತಿ ಸಮಾಧಾನವನ್ನು ಹೇಗೆ ಹುಡುಕುತ್ತೀರಿ? ನೀವು ಆತ್ಮಗೌರವವನ್ನು ಕಳೆದುಕೊಂಡಷ್ಟೂ ಹೆಚ್ಚು ಅವಮಾನವನ್ನು ಎದುರಿಸಬೇಕಾಗಬಹುದಲ್ಲವೇ? ಅಂತರಂಗದಲ್ಲಿ ನರಕವನ್ನು ಅನುಭವಿಸುತ್ತಾ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ದಾಂಪತ್ಯವನ್ನು ಉಳಿಸಿಕೊಳ್ಳುವುದು ಅಥವಾ ಆತ್ಮಗೌರವವನ್ನು ಬಲಿಕೊಡದೆ ಬದುಕುತ್ತಾ ಸಾಮಾಜಿಕ ಹೋರಾಟಗಳನ್ನು ದಿಟ್ಟವಾಗಿ ಎದುರಿಸುವುದು, ಇವೆರೆಡರಲ್ಲಿ ಯಾವುದು ನಿಮ್ಮ ಆಯ್ಕೆ? ಪತಿಗೆ ನಿಮ್ಮ ಆಯ್ಕೆಗಳನ್ನು ವಿವರಿಸಿ, ಅವರು ದಾಂಪತ್ಯ ಚಿಕಿತ್ಸೆಗೆ ಒಪ್ಪುವುದಾದರೆ ಪ್ರಯತ್ನಿಸಿ. ಮಾತನಾಡುವುದು ಕಷ್ಟವೆನ್ನಿಸಿದರೆ ಎಲ್ಲವನ್ನೂ ಬರೆದು ತಿಳಿಸಿ. ವಾದವಿವಾದಗಳಿಗೆ ಅವಕಾಶ ಕೊಡಬೇಡಿ. ನಿಷ್ಕ್ರಿಯರಾಗಿದ್ದರೆ ಅಂತರಂಗದ ನರಕವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ ಎಂದರ್ಥ.

ನಿಮಗೊಬ್ಬ ಮಗಳಿದ್ದು ಅವಳು ಮದುವೆಯಾದ ಮೇಲೆ ಇಂತಹದೇ ಪರಿಸ್ಥಿತಿಯಲ್ಲಿದ್ದರೆ ಅವಳಿಗೆ ಏನು ಸಲಹೆ ಕೊಡುತ್ತೀರಿ? ನಿಮಗೆ ಮಾಡಲಾಗದಿರುವುದನ್ನು ಅವಳಿಗೆ ಉಪದೇಶಿಸುವಂತಿಲ್ಲ ಎನ್ನುವ ಎಚ್ಚರವಿರಲಿ.

**
ವೃತ್ತಿ ವ್ಯಾಪಾರ, ಮದುವೆಯಾಗಿ ಮಕ್ಕಳಿದ್ದಾರೆ. ಯೋಗಾಭ್ಯಾಸ, ಬರೆಯುವುದು, ಸಮಾಜಸೇವೆ ಮುಂತಾದ ಒಳ್ಳೆಯ ಹವ್ಯಾಸಗಳಿವೆ. ಕಾಮದ ಬಯಕೆ ಹೆಚ್ಚಾಗಿದೆ. ಹಿಂದೆ ಕಾಮಪ್ರಚೋದಕ ಪುಸ್ತಕ ಓದುತ್ತಿದ್ದೆ, ಈಗ ವಿಡಿಯೊ ನೋಡುತ್ತೇನೆ. ಸುಂದರ ಮಹಿಳೆಯನ್ನು ನೋಡಿದರೆ ಪ್ರಚೋದನೆಯಾಗುತ್ತದೆ. ಇಲ್ಲಿಯವರೆಗೆ ತಪ್ಪು ಕೆಲಸ ಮಾಡಿಲ್ಲ. ಮುಂದೆ ಮಾಡಬಹುದೆನ್ನುವ ಭಯ. ನಿಯಂತ್ರಣಕ್ಕೆ ಸಲಹೆ ಕೊಡಿ.
–ಹೆಸರು, ಊರು ಬೇಡ

ಉತ್ತರ: ನಿಮ್ಮ ಪ್ರಾಮಾಣಿಕತೆ ಮತ್ತು ಬರವಣಿಗೆಯ ಸ್ಪಷ್ಟತೆಗೆ ಅಭಿನಂದಿಸುತ್ತೇನೆ. ನಿಮ್ಮ ದೃಷ್ಟಿಕೋನದಲ್ಲಿ ಸಾಂಸ್ಕೃತಿಕವಾಗಿ ಬಂದಿರುವ ತಪ್ಪುಕಲ್ಪನೆಗಳು ಎದ್ದುಕಾಣುತ್ತವೆ. ಕಾಮದ ಬಯಕೆಯನ್ನು ಹೆಚ್ಚು ಕಡಿಮೆಯೆಂದು ಅಳೆಯಲಾಗುವುದಿಲ್ಲ. ಪತ್ನಿ ನಿಮ್ಮ ಬಯಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದಾದರೆ ಅವರಲ್ಲಿ ಕಡಿಮೆ ಬಯಕೆಯಿದೆ ಎಂದಲ್ಲ. ನಿಮ್ಮಿಬ್ಬರ ಸಂಬಂಧದಲ್ಲಿ ಆತ್ಮೀಯತೆಯ ಕೊರತೆಯಿದೆ ಎಂದರ್ಥ.

ಒಂದು ಕಷ್ಟದ ಆದರೆ ನಿಧಾನವಾಗಿ ಉತ್ತಮ ಫಲನೀಡುವ ಪ್ರಯತ್ನ ಮಾಡಿ. ಕಾಮ ದಾಂಪತ್ಯಗಳ ಬಗೆಗಿನ ನಿಮ್ಮ ಅಭಿಪ್ರಾಯ, ಕಾಮವನ್ನು ದಾಂಪತ್ಯದಲ್ಲಿ ಮಾತ್ರ ಪೂರೈಸಿಕೊಳ್ಳಬೇಕೆಂಬ ನಿಮ್ಮ ಆಸಕ್ತಿ, ನಿಮ್ಮ ಸಧ್ಯದ ಬಯಕೆಗಳು, ಕಷ್ಟಗಳು ಎಲ್ಲವನ್ನು ಸ್ಪಷ್ಟವಾಗಿ ಬರೆದಿಟ್ಟುಕೊಂಡು ಪತ್ನಿಯ ಜೊತೆ ಮಾತನಾಡಿ. ಅವರ ಅಭಿಪ್ರಾಯ ಕೇಳಿ. ಅವರಿಗೆ ಉತ್ತರಿಸಲು ಕಷ್ಟವಾಗಬಹುದು ಅಥವಾ ಅವರು ನಿಮ್ಮನ್ನು ದೂಷಿಸಬಹುದು. ಅವರಲ್ಲೂ ತಪ್ಪ ತಿಳಿವಳಿಕೆಗಳಿರಬಹುದು. ಪತ್ನಿ ಕೋಪಗೊಂಡರೆ ಅವರಿಂದ ಮಾನಸಿಕವಾಗಿ ದೂರವಾಗದೆ ನಿಮ್ಮ ಪ್ರೀತಿ ಪ್ರಾಮಾಣಿಕತೆಯನ್ನು ವ್ಯಕ್ತಪಡಿಸುತ್ತಲೇ ಇರಿ. ದಾಂಪತ್ಯಕ್ಕೆ ಬೆಲೆಕೊಡುವ ನಿಮ್ಮ ಬದ್ಧತೆಯ ಮನವರಿಕೆಯಾದರೆ ಅವರು ನಿಮ್ಮನ್ನು ಗೌರವಿಸುತ್ತಾರೆ. ಆಗ ಕಾಮವನ್ನು ಆನಂದಿಸಲು ಇಬ್ಬರಿಗೂ ಒಪ್ಪಿಗೆಯಾಗುವ ಮಾರ್ಗಗಳನ್ನು ಹುಡುಕಿಕೊಳ್ಳಲು ಸಾಧ್ಯವಿದೆ.

ಕಾಮವನ್ನು ನಿಗ್ರಹಿಸುವ ಬಗೆಗಲ್ಲ, ದಾಂಪತ್ಯದಲ್ಲಿ ಕಾಮವನ್ನು ಆನಂದಿಸುವ ಮಾರ್ಗಗಳನ್ನು ಹುಡುಕಿ.

**
ನನ್ನ ಗೆಳೆಯ ಡಿಪ್ಲೋಮಾ ಓದಿ ಕೆಲಸ ಮಾಡುತ್ತಿದ್ದಾನೆ. ಡ್ರೈವಿಂಗ್‌ನಲ್ಲಿ ಆಸಕ್ತಿಯಿದ್ದು ಸ್ವಂತ ಉದ್ಯೋಗಕ್ಕೆ ಹಣದ ಸಮಸ್ಯೆಗಳಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದಿದ್ದರೂ ಇಸ್ರೋ ಪರೀಕ್ಷೆ ಉತ್ತೀರ್ಣನಾಗುವ ಸಾಮರ್ಥ್ಯವಿಲ್ಲ. ಸಾಧನೆ ಮಾಡೇ ಮಾಡುತ್ತಾನೆ ಎನ್ನುವುದು ನನ್ನ ನಂಬಿಕೆ. ನನ್ನ ಗೊಂದಲಗಳಿಗೆ ಉತ್ತರ ನೀಡಿ.
–ಹೆಸರು, ಊರು ಬೇಡ

ಉತ್ತರ: ನಿಮ್ಮ ಗೆಳೆಯನೇ ನೇರವಾಗಿ ಪ್ರಶ್ನೆ ಕೇಳಬಹುದಿತ್ತಲ್ಲವೇ? ಪತ್ರದಲ್ಲಿನ ವ್ಯಾಕರಣವನ್ನು ಗಮನಿಸಿದರೆ ಇದು ನಿಮ್ಮದೇ ಸಮಸ್ಯೆಯಿರಬಹುದು ಎನ್ನಿಸುತ್ತದೆ. ಸಮಸ್ಯೆ ಯಾರದ್ದೇ ಆದರೂ ಅನಾಮಧೇಯರಾಗಿ ಉಳಿಯಬಹುದಾದ ಅಂಕಣದಲ್ಲೂ ನಿಮ್ಮದೇ ಜೀವನದ ಸಮಸ್ಯೆಯನ್ನು ನೇರವಾಗಿ ಕೇಳಲಾರದಷ್ಟು ಹಿಂಜರಿಕೆ ಎದ್ದು ಕಾಣುತ್ತದೆ. ಇದೇ ಹಿಂಜರಿಕೆ, ಕೀಳರಿಮೆಗಳು ನಿಮ್ಮ ಪ್ರಯತ್ನಗಳಿಗೆ ಅಡ್ಡಬರುತ್ತಿವೆ. ನಿಮ್ಮ ಆಸೆ ಆಸಕ್ತಿಗಳನ್ನು ನಿಮ್ಮೊಳಗೇ ಒಪ್ಪಿಕೊಳ್ಳದಿದ್ದಾಗ ಬೇರೆಯವರಿಗೆ ಹೇಗೆ ಹೇಳುತ್ತೀರಿ? ನಿಮ್ಮ ಅಗತ್ಯಗಳನ್ನು ನಿಮ್ಮದೆಂದು ಹೇಳಿಕೊಳ್ಳದಿದ್ದರೆ ನಿಮಗೆ ಸಹಾಯ ಹೇಗೆ ಸಿಗುತ್ತದೆ?

ಸಾಧನೆಗಳ ಬಗೆಗೆ ನಂತರ ಯೋಚಿಸೋಣ. ಮೊದಲು ನಿಮ್ಮ ಹಿಂಜರಿಕೆ, ಕೀಳರಿಮೆಗಳಿಗೆ ಉತ್ತರ ಹುಡುಕಿಕೊಂಡು ಆತ್ಮಗೌರವ ಗಳಿಸಿಕೊಳ್ಳಿ. ನಂತರ ಬೇಕಾದ್ದನ್ನು ಸಾಧಿಸಬಹುದು ಮತ್ತು ಸಾಧಿಸಿದ್ದರಲ್ಲಿ ತೃಪ್ತಿ ಪಡೆಯಬಹುದು.

(ಲೇಖಕರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT