ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣ ಚರ್ಮವೇ? ಮನೆಯಲ್ಲೇ ಇದೆ ಮದ್ದು

Last Updated 6 ಫೆಬ್ರುವರಿ 2021, 1:22 IST
ಅಕ್ಷರ ಗಾತ್ರ

ಹಲವರಿಗೆ ಚಳಿಗಾಲದಲ್ಲಿ ಮಾತ್ರ ಒಣ ತ್ವಚೆ ಇದ್ದರೆ, ಇನ್ನು ಕೆಲವರಿಗೆ ವರ್ಷವಿಡೀ ಚರ್ಮ ಒಣಗಿಕೊಂಡಿರುತ್ತದೆ. ಹಾಗೆಯೇ ಕೂದಲು ಕೂಡ ಸತ್ವವಿಲ್ಲದೇ ಒಣಗಿಕೊಂಡು ತುದಿ ಸೀಳುತ್ತದೆ. ಸಾಮಾನ್ಯವಾಗಿ ಒಣ ಹವೆ, ತೈಲ ಗ್ರಂಥಿ ಮುಚ್ಚಿಕೊಳ್ಳುವುದು, ಪೋಷಕಾಂಶದ ಕೊರತೆಯ ಜೊತೆ ಕೆಲವೊಂದು ಔಷಧಿಗಳು ಕೂಡ ಈ ಒಣ ತ್ವಚೆಗೆ ಕಾರಣ.

*ಹಿಂದೆ ನಿತ್ಯ ಕೊಬ್ಬರಿ ಎಣ್ಣೆಯನ್ನು ಮೈಗೆ ಮಸಾಜ್‌ ಮಾಡಿಕೊಂಡು ಸ್ನಾನ ಮಾಡುವ ಅಭ್ಯಾಸ ಬಹುತೇಕರಲ್ಲಿತ್ತು. ಅಜ್ಜ– ಅಜ್ಜಿಯ ತಲೆಮಾರಿನವರು ಈ ರೂಢಿ ಇಟ್ಟುಕೊಂಡಿದ್ದರು. ಕೊಬ್ಬರಿ ಎಣ್ಣೆಯಲ್ಲದೆ ಹರಳೆಣ್ಣೆ, ಸಾಸಿವೆ ಎಣ್ಣೆ, ಎಳ್ಳೆಣ್ಣೆಯನ್ನೂ ಬಳಸುತ್ತಿದ್ದರು. ಇದರಲ್ಲಿ ಯಾವುದಾದರೂ ಒಂದು ಬಗೆಯ ಎಣ್ಣೆಯನ್ನು ಬಿಸಿ ಮಾಡಿ ಇಡೀ ದೇಹಕ್ಕೆ ಮಸಾಜ್‌ ಮಾಡಿಕೊಂಡು 15 ನಿಮಿಷ ಬಿಟ್ಟು ಸ್ನಾನ ಮಾಡಿದರೆ ಸೂಕ್ತ. ಬಾದಾಮಿ ಎಣ್ಣೆಯನ್ನೂ ಬಳಸಬಹುದು. ವಾರಕ್ಕೆ ಎರಡು ಸಲ ಈ ರೀತಿ ಮಾಡುವುದರಿಂದ ತ್ವಚೆಗೆ ತೇವಾಂಶ ಸೇರಿಕೊಳ್ಳುವುದಲ್ಲದೇ ನಯವಾಗಿ ಹೊಳೆಯುವ ಚರ್ಮ ನಿಮ್ಮದಾಗಬಹುದು. ಹಾಗೆಯೇ ಮಸಾಜ್‌ ಮಾಡುವುದರಿಂದ ರಕ್ತ ಪರಿಚಲನೆಯೂ ಸುಧಾರಿಸುತ್ತದೆ.

*ಹಾಲಿನ ಕೆನೆ ತ್ವಚೆಗೆ ಲೇಪಿಸುವುದು ಸಾಂಪ್ರದಾಯಿಕ ಪದ್ಧತಿ. ಕೆನೆಗೆ ಕೆಲವು ಹನಿ ಲಿಂಬೆ ರಸ, ಸ್ವಲ್ಪ ಗುಲಾಬಿ ಪನ್ನೀರು (ರೋಸ್‌ ವಾಟರ್‌) ಸೇರಿಸಿ ಕಲೆಸಿ ಮುಖಕ್ಕೆ, ಕೈಕಾಲಿಗೆ ಹಚ್ಚಿಕೊಳ್ಳಿ. ಅರ್ಧ ತಾಸು ಬಿಟ್ಟು ನೀರಿನಿಂದ ತೊಳೆದರೆ ನಯವಾದ ಚರ್ಮ ನಿಮ್ಮದಾಗುತ್ತದೆ.

*ಬಾದಾಮಿಯನ್ನು ಪುಡಿ ಮಾಡಿಟ್ಟುಕೊಳ್ಳಿ. ಒಂದು ಚಮಚ ಬಾದಾಮಿ ಪುಡಿಗೆ ಸ್ವಲ್ಪ ಬೆಚ್ಚನೆಯ ನೀರು ಸೇರಿಸಿ ಕಲೆಸಿ. ಇದನ್ನು ಮುಖಕ್ಕೆ ಹಚ್ಚಿ ವೃತ್ತಾಕಾರವಾಗಿ ಮಸಾಜ್‌ ಮಾಡಿ. ಸತ್ತ ಜೀವಕೋಶಗಳು ಉದುರಿ ಹೋಗುತ್ತವೆ. ಅರ್ಧ ತಾಸು ಹಾಗೆಯೇ ಬಿಟ್ಟು ಬೆಚ್ಚನೆಯ ನೀರಿನಿಂದ ತೊಳೆಯಿರಿ. ಬಾದಾಮಿಯಲ್ಲಿರುವ ಫ್ಯಾಟಿ ಆ್ಯಸಿಡ್‌ ಚರ್ಮವನ್ನು ನಯವಾಗಿಡುತ್ತದೆ.

*ಮೊಣಕೈ, ಮೊಣಕಾಲು ಅಥವಾ ಪಾದ ಒಣಗಿಕೊಂಡು ಒರಟಾಗಿದ್ದರೆ ಹೆಸರುಬೇಳೆ ಹಿಟ್ಟಿಗೆ ಮೊಸರು ಸೇರಿಸಿ ಮಸಾಜ್‌ ಮಾಡಿ. ಅರ್ಧ ತಾಸು ಬಿಟ್ಟು ತೊಳೆದುಕೊಂಡು ಯಾವುದಾದರೂ ಮಾಯಿಶ್ಚರೈಸರ್‌ ಲೇಪಿಸಿ.

*ಒಣ ಚರ್ಮವನ್ನು ನಿರಂತರವಾಗಿ ತೇವವಾಗಿಡಬೇಕಾಗುತ್ತದೆ. ಲೋಳೆಸರದ ಜೆಲ್‌ ನೈಸರ್ಗಿಕ ಮಾಯಿಶ್ಚರೈಸರ್‌. ಹಾಗೆಯೇ ಕೋಕೊವಾ ಬೆಣ್ಣೆ ಅಥವಾ ಶಿಯಾ ಬೆಣ್ಣೆಗೆ ಅವೊಕಾಡೊ ಎಣ್ಣೆ ಮತ್ತು ರೋಸ್‌ ಎಣ್ಣೆ ಸೇರಿಸಿ ಮುಖಕ್ಕೆ ಲೇಪಿಸುವ ಕ್ರೀಂ ತಯಾರಿಸಿಕೊಳ್ಳಬಹುದು.

ಇವುಗಳ ಜೊತೆ ಆಹಾರದಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಸಾಕಷ್ಟು ಸೊಪ್ಪು, ಪೋಷಕಾಂಶಗಳಿಂದ ಕೂಡಿದ ಊಟ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT