ಶುಕ್ರವಾರ, ಅಕ್ಟೋಬರ್ 22, 2021
29 °C

ಸುಖಿ ದಾಂಪತ್ಯಕ್ಕೆ ಸಿದ್ಧ ಮಾದರಿ ಇದೆಯೇ?

ಡಾ. ಬ್ರಹ್ಮಾನಂದ ನಾಯಕ Updated:

ಅಕ್ಷರ ಗಾತ್ರ : | |

ದಂಪತಿ ಪರಸ್ಪರ ಕಚ್ಚಾಡುವುದೇಕೆ ಎಂಬುದು ಮದುವೆಯಾದವರಿಗೆ ಚೆನ್ನಾಗಿ ಅರ್ಥವಾಗುತ್ತದೆ. ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸಿದರೂ, ಗೌರವಿಸಿದರೂ ಹೆಚ್ಚಿನ ಸಂದರ್ಭ ಪರಿಸ್ಥಿತಿ ಬಿಗಡಾಯಿಸಿಬಿಡುತ್ತದೆ. ಇದಕ್ಕೆ ಕಾರಣ ಪ್ರತಿಯೊಬ್ಬರ ಮನಸ್ಸಿನಲ್ಲೂ ವೈವಾಹಿಕ ಜೀವನದ ಬಗ್ಗೆ ವಿಭಿನ್ನವಾದ ಸಿದ್ಧ ಮಾದರಿ ‘ಟೆಂಪ್ಲೇಟ್‌’ ಕೂತಿರುವುದು.

‘ಆಕೆ ನನಗಾಗಿ ಅಡುಗೆ ಮಾಡಬೇಕಿತ್ತು. ಇದು ಪ್ರೀತಿಯ ದ್ಯೋತಕ ಅಲ್ಲವೇ?’ ಆತ ಪ್ರಶ್ನಿಸಿದರೆ, ‘ಅವನು ಮನೆಗೆಲಸದಲ್ಲಿ ನನಗೆ ಸಹಾಯವನ್ನೇ ಮಾಡುವುದಿಲ್ಲ’ ಎಂಬುದು ಆಕೆಯ ದೂರು.

***

‘ಸಾರ್ವಜನಿಕವಾಗಿ ಓಡಾಡುವಾಗ ನನ್ನ ಕೈ ಹಿಡಿದುಕೊಂಡರೆ ಆತನಿಗೇನೂ ನಷ್ಟವಿಲ್ಲವಲ್ಲ’ ಆಕೆ ಮೂತಿ ಉದ್ದ ಮಾಡಿದರೆ, ‘ಈ ರೀತಿ ಬಹಿರಂಗವಾಗಿ ಪ್ರೀತಿಯ ಪ್ರದರ್ಶನ ನಾಚಿಕೆಗೇಡು. ಪ್ರೇಮವೆಂಬುದು ಮಲಗುವ ಮನೆಗೆ ಸೀಮಿತವಾಗಿರಬೇಕು’ ಎಂಬುದು ಆತನ ಉವಾಚ.

***

‘ಎಲ್ಲವನ್ನೂ ತನ್ನ ತಾಯಿಗೆ ಹೇಳುತ್ತಾನೆ. ನನ್ನ ಅತ್ತೆ ಪ್ರತಿಯೊಂದಕ್ಕೂ ಮಧ್ಯೆ ತಲೆ ಹಾಕಿದರೆ ನನಗೆ ಕಿರಿಕಿರಿ’ ಎನ್ನುವುದು ಆಕೆಯ ದೂರಾದರೆ, ‘ಅಮ್ಮನಿಗೆ ನನ್ನ ಮೇಲೆ ಎಷ್ಟು ಪ್ರೀತಿಯಿದೆ ಎಂದರೆ ಯಾವಾಗಲೂ ನನ್ನ ಒಳಿತನ್ನೇ ಬಯಸುತ್ತಾಳೆ’ ಎಂಬುದು ಆತನ ಸಮರ್ಥನೆ.

ಇಂತಹ ಬಹಳಷ್ಟು ರೀತಿಯ ಬಿಕ್ಕಟ್ಟು ದಾಂಪತ್ಯದಲ್ಲಿ ಸಾಮಾನ್ಯ. ಅದರಲ್ಲೂ ಹೊಸದಾಗಿ ಮದುವೆಯಾದ ದಂಪತಿಯಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಕಲಹ ಏಳುತ್ತದೆ. ಹೀಗಾಗಿ ಯಾವ ರೀತಿಯ ‘ದಾಂಪತ್ಯದ ಮಾದರಿ’ ಅಥವಾ ಸರಳವಾಗಿ ‘ವೆಡ್ಡಿಂಗ್‌ ಟೆಂಪ್ಲೇಟ್‌’ ನಿಮಗೆ ಬೇಕು ಎಂಬುದನ್ನು ನೀವೇ ಅರ್ಥ ಮಾಡಿಕೊಂಡು ರೂಪಿಸಿಕೊಳ್ಳಬೇಕು.

ಹೊಂದಾಣಿಕೆಗೆ ನಿಮ್ಮದೇ ಯೋಜನೆ ಇರಲಿ
ದಾಂಪತ್ಯ ಹೊಂದಾಣಿಕೆಯಿಂದ ನಡೆಯುವುದು ಹೇಗೆ ಎಂಬುದನ್ನು ನೀವೇ ಆಲೋಚಿಸಿಕೊಂಡು ಯೋಜನೆ ಹಾಕಿಕೊಳ್ಳಬೇಕು. ಉದಾಹರಣೆಗೆ ಪರಸ್ಪರ ಹೇಗೆ ನಡೆದುಕೊಳ್ಳಬೇಕು, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಇತ್ಯಾದಿ. ಸರಳವಾಗಿ ಹೇಳುವುದಾದರೆ ಒಬ್ಬ ಒಳ್ಳೆಯ ಪತಿ ಮತ್ತು ಒಳ್ಳೆಯ ಪತ್ನಿಯ ವ್ಯಾಖ್ಯೆಯನ್ನು ನೀವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಕೆಲವು ಮೂಲಭೂತ ನಿಯಮಗಳನ್ನು ಹಾಕಿಕೊಳ್ಳಬೇಕಾದರೆ ನಿಮ್ಮ ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡು ಮದುವೆಗೆ ಮುನ್ನವೇ ಒಂದಿಷ್ಟು ಚರ್ಚೆ ಮಾಡುವುದು ಸೂಕ್ತ. ವಿವಾಹಕ್ಕಿಂತ ಮೊದಲು ಇದು ಸಾಧ್ಯವಾಗದಿದ್ದರೂ ಪರವಾಗಿಲ್ಲ, ವೈವಾಹಿಕ ಜೀವನದ ಆರಂಭದಲ್ಲೇ ಇದಕ್ಕೆ ನಾಂದಿ ಹಾಕಿಕೊಳ್ಳಬಹುದು.

ದಾಂಪತ್ಯದ ಮಾದರಿ ರೂಪಿಸುವುದು ಹೇಗೆ?
ಸಾಮಾನ್ಯವಾಗಿ ಚಿಕ್ಕವರಿದ್ದಾಗ ಮನೆಯಲ್ಲಿ, ಸಂಬಂಧಿಕರ ಕುಟುಂಬಗಳಲ್ಲಿ ಆಗುಹೋಗುಗಳನ್ನು ನೋಡಿ ನಮ್ಮ ಸುಪ್ತಾವಸ್ಥೆಯಲ್ಲಿ ದಾಂಪತ್ಯ ಜೀವನದ ಒಂದು ಮಾದರಿ ಮುದ್ರೆ ಒತ್ತಿರುತ್ತದೆ. ಆದರೆ ವಯಸ್ಕರಾದಾಗ ಪ್ರಜ್ಞಾಪೂರ್ವಕವಾಗಿ ನಮ್ಮ ಪಾಲಕರ ದಾಂಪತ್ಯವನ್ನು ಆದರ್ಶಪ್ರಾಯವೆಂದು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಆದರೆ ಸುಪ್ತಾವಸ್ಥೆಯಲ್ಲಿ ಅದು ಹಾಗೇ ಕೂತಿರುತ್ತದೆ. ಪರಿಸ್ಥಿತಿ ಎದುರಾದಾಗ ನಮ್ಮ ಪಾಲಕರ ಪ್ರತಿಕ್ರಿಯೆಗಳನ್ನೇ ನಾವು ಅನುಕರಿಸುತ್ತೇವೆ.

ನಿಮ್ಮ ತಂದೆ– ತಾಯಿ ಒಳ್ಳೆಯ ಮಾದರಿ ದಾಂಪತ್ಯ ನಡೆಸಿದ್ದಾರೆ, ಅದೇ ನಿಯಮಗಳನ್ನು ನೀವೂ ಅನುಸರಿಸಬೇಕು ಎಂದುಕೊಂಡರೆ ಕೆಲವೊಮ್ಮೆ ಅದು ಸೂಕ್ತ ಎನಿಸುವುದಿಲ್ಲ. ಏಕೆಂದರೆ ವ್ಯಕ್ತಿ, ಸಂದರ್ಭ ಎರಡೂ ವಿಭಿನ್ನವಾಗಿರಬಹುದು.

ದಾಂಪತ್ಯದ ಮಾದರಿ ಗಂಡು ಮತ್ತು ಹೆಣ್ಣು ಇಬ್ಬರದ್ದೂ ಒಂದೇ ಆಗಿದ್ದರೆ, ಆರಾಮವಾಗಿ ನಡೆದುಕೊಂಡು ಹೋಗುತ್ತದೆ. ಸಾಮಾನ್ಯವಾಗಿ ಹಿರಿಯರು ಕೂತು ಮದುವೆ ನಿಶ್ಚಯಿಸುವಾಗ ಒಂದೇ ರೀತಿಯ ಹಿನ್ನೆಲೆಯನ್ನು ಹುಡುಕುವುದು ಇದೇ ಕಾರಣಕ್ಕೆ. ಇಬ್ಬರದ್ದೂ ವಿಭಿನ್ನ ಮನೋಭಾವ ಇದ್ದರೆ ಸಣ್ಣಪುಟ್ಟ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಪರಸ್ಪರ ಮಾತುಕತೆ, ಅಭಿಪ್ರಾಯ ಹೇಳಿಕೊಂಡು ಅರ್ಥ ಮಾಡಿಕೊಳ್ಳುವುದರಿಂದ ಈ ರೀತಿಯ ಮಾದರಿ ದಾಂಪತ್ಯಕ್ಕೆ ನಾಂದಿ ಹಾಡಬಹುದು.

ಮೂಲಭೂತ ಪ್ರಶ್ನೆಗಳು
* ಪೋಷಕರ ಜೊತೆ ಇರುವುದೇ ಅಥವಾ ಬೇರೆ ಮನೆ ಮಾಡುವುದೇ?
* ಮನೆಗೆಲಸ ಯಾರು ಮಾಡುವುದು ಹಾಗೂ ಸಂಪಾದನೆ ಯಾರು ಮಾಡುವುದು?
* ಕೆಲಸವನ್ನು ಹೇಗೆ ಹಂಚಿಕೊಳ್ಳುವುದು

ಉದ್ಯೋಗಸ್ಥ ದಂಪತಿಯಾಗಿದ್ದರೆ...
* ಮಗುವಾದ ನಂತರ ಅಥವಾ ಸಂದರ್ಭ ಬಂದಾಗ ಯಾರ ಉದ್ಯೋಗಕ್ಕೆ ಹೆಚ್ಚು ಮಹತ್ವ ನೀಡಬೇಕು?
* ಭವಿಷ್ಯದಲ್ಲಿ ನಿಮ್ಮ ವೃತ್ತಿಯ ಗುರಿಯೇನು?
* ತೀರಾ ಮಹತ್ವಾಕಾಂಕ್ಷಿಯೇ?
* ಉಳಿತಾಯದ ಬಗ್ಗೆ ನಿಮ್ಮ ಯೋಜನೆಯೇನು?
* ಎಲ್ಲಿ ಮನೆ ಮಾಡುವುದು?
* ಎಂತಹ ವಾಹನ ಖರೀದಿಸುವುದು?
* ಭವಿಷ್ಯದಲ್ಲಿ ಹಣಕಾಸು ನಿರ್ವಹಣೆ ಹೇಗೆ?
* ಕುಟುಂಬದ ಇತರ ಸದಸ್ಯರ ಜೊತೆ ಹೇಗಿರುವುದು?
* ಪೋಷಕರನ್ನು ನೋಡಿಕೊಳ್ಳುವುದು ಹೇಗೆ?
* ಬಿಕ್ಕಟ್ಟು, ವೈಮನಸ್ಯ ಬಂದಾಗ ಹೇಗೆ ನಿಭಾಯಿಸುತ್ತೀರಾ? ಜಗಳವಾಡುತ್ತೀರಾ ಅಥವಾ ಮೌನವಹಿಸುತ್ತೀರಾ? ಕುಳಿತು ಮಾತನಾಡಿ ಪರಿಹರಿಸಿಕೊಳ್ಳುತ್ತೀರಾ?

ನಿಮ್ಮ ದಾಂಪತ್ಯ ಜೀವನದ ಪ್ರಾಥಮಿಕ ಮಾದರಿ ವಿಭಿನ್ನವಾಗಿರಬಹುದು. ಇದಕ್ಕೆ ನಿಮ್ಮ ವಿಭಿನ್ನ ಹಿನ್ನಲೆ ಕಾರಣ. ಹೀಗಾಗಿ ಹೊಂದಾಣಿಕೆಗೆ ಪ್ರಯತ್ನಿಸಿದರೆ ಎಲ್ಲವೂ ಸರಿ ಹೋಗುತ್ತದೆ ಎಂಬ ಆಶಾಭಾವನೆ ಮುಖ್ಯ.

ದಿನ ಕಳೆದಂತೆ ಅಂತಿಮ ಮಾದರಿಯನ್ನು ಸಿದ್ಧಪಡಿಸಬಹುದು. ಆಗೊಮ್ಮೆ, ಈಗೊಮ್ಮೆ ತಪ್ಪುಗಳಾದರೂ ಒಬ್ಬರನ್ನೊಬ್ಬರು ಆಕ್ಷೇಪಿಸದೆ, ಒಪ್ಪಿಕೊಂಡು, ಪರಸ್ಪರ ಗೌರವಿಸುವುದನ್ನು ಕಲಿತರೆ ದಾಂಪತ್ಯ ಜೀವನದ ಸವಿಯನ್ನು ಉಣ್ಣಬಹುದು.

* ನಿಮ್ಮ ಪೋಷಕರಿಗೆ ಹೊಂದಿಕೆಯಾದದ್ದು ನಿಮಗೆ ಆಗದೇ ಇರಬಹುದು.
* ಸಂಗಾತಿ ನಿಮ್ಮ ಪೋಷಕರಂತೆ ನಡೆದುಕೊಳ್ಳಬೇಕು ಎಂದು ನಿರೀಕ್ಷೆ ಮಾಡಬೇಡಿ.
* ನಿಮಗೆ ಹೇಗೆ ಅನುಕೂಲವೋ ಹಾಗೆ ಯೋಜನೆ ರೂಪಿಸಿಕೊಳ್ಳಿ.

ತಪ್ಪು– ಸರಿ ಎಂದು ಅರ್ಥೈಸುತ್ತ ಕೂರಬೇಡಿ.
* ಇನ್ನೊಬ್ಬರ ಅವಶ್ಯಕತೆಗೆ ಅನುಗುಣವಾಗಿ ಅನುಸರಿಸಿಕೊಂಡು ಹೋಗಿ.
* ಬಿಕ್ಕಟ್ಟು ಬಂದಾಗ ಸರಿಯಾದ ರೀತಿಯಲ್ಲಿ ಮನವರಿಕೆ ಮಾಡಿಕೊಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು