ಬುಧವಾರ, ಆಗಸ್ಟ್ 4, 2021
21 °C

ಏನಾದ್ರೂ ಕೇಳಬಹುದು: ಭಯ ಶತ್ರುವಲ್ಲ ಮಿತ್ರ

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

Prajavani

ಖಾಸಗಿ ಕಂಪನಿ ಉದ್ಯೋಗಿ. ಕಳೆದೊಂದು ವರ್ಷದಿಂದ ಆಗಾಗ ಭಯವಾಗುತ್ತದೆ. ಎದೆಯ ಬಲಭಾಗದಲ್ಲಿ ಉಸಿರು ಕಟ್ಟಿದಂತೆ ಆಗುತ್ತದೆ. ಇತ್ತೀಚೆಗೆ ಹೆಚ್ಚಾಗಿದೆ. ಕೆಲಸ ಮಾಡಲು ಆಗದೆ ಒತ್ತಡದಿಂದ ತಲೆನೋವು ಬರುತ್ತದೆ. ಯಾರಿಗೂ ಇಲ್ಲದ ಭಯ ನನಗೇಕೆ ಎಂದು ಯೋಚಿಸಿದರೆ ಕಾರಣಗಳು ಹೊಳೆಯುವುದಿಲ್ಲ. ಈ ವರ್ಷ ಮದುವೆ ಮಾಡುವುದಾಗಿ ಮನೆಯವರು ಹೇಳಿದ್ದಾರೆ. ಭಯದಿಂದ ಹೊರಬಂದ ಮೇಲೆ ಆಗಬೇಕೆಂದು ಆಸೆ. ಪರಿಹಾರ ತಿಳಿಸಿ.

ಹೆಸರು ಊರು ತಿಳಿಸಿಲ್ಲ.

ಪತ್ರದಲ್ಲಿ ನಿಮ್ಮ ಸರಳತೆ ಮತ್ತು ಪ್ರಾಮಾಣಿಕತೆ ಎದ್ದು ಕಾಣಿಸುತ್ತದೆ. ಇವುಗಳನ್ನು ಮುಂದೆಯೂ ಹಾಗೆಯೇ ಉಳಿಸಿಕೊಳ್ಳಿ. ಭಯದ ಕಾರಣಗಳು ಬುದ್ಧಿಗೆ ಸುಲಭವಾಗಿ ಹೊಳೆಯುವುದಿಲ್ಲ. ಭಯ ನೀವಂದುಕೊಳ್ಳುವಷ್ಟು ಅಪಾಯಕಾರಿಯಲ್ಲ. ಮೊದಲು ಭಯದಿಂದ ಓಡುವುದನ್ನು ನಿಲ್ಲಿಸಿ. ಭಯವಾದಾಗ ಕಾರಣಗಳನ್ನು ಹುಡುಕದೆ ದೀರ್ಘವಾಗಿ ಉಸಿರಾಡುತ್ತಾ ನಿಮ್ಮ ಎದೆಬಡಿತವನ್ನು ಗಮನಿಸಿ. ಕೆಲವು ನಿಮಿಷಗಳಲ್ಲಿ ದೇಹದಲ್ಲಿ ಕಾಣಿಸುವ ಕಿರಿಕಿರಿಗಳು ಕಡಿಮೆಯಾಗುತ್ತವೆ. ದೀರ್ಘವಾಗಿ ಉಸಿರಾಡುತ್ತಾ 10ನಿಮಿಷ ದೇಹದ ಭಾಗಗಳನ್ನು ಗಮನಿಸುವ ಅಭ್ಯಾಸವನ್ನು ಮನೆಯಲ್ಲಿ ದಿನಕ್ಕೆ ಹಲವಾರು ಬಾರಿ ಮಾಡಿ.

ಭಯ ಎಲ್ಲರ ಅನಿವಾರ್ಯವಾದ ಅನುಭವ. ಅದನ್ನು ಶತ್ರುವಿನಂತೆ ಓಡಿಸಬೇಕಾಗಿಲ್ಲ. ಅದು ನಿಮ್ಮ ಬಗೆಗೆ ನಿಮ್ಮ ಮನಸ್ಸಿನಲ್ಲಿರುವ ಹಿಂಜರಿಕೆಗಳ ಬಗೆಗೆ ಸೂಚನೆ ನೀಡಿ ಸಹಾಯ ಮಾಡಲು ಪ್ರಯತ್ನಿಸುತ್ತದೆ. ಈ ಹಿಂಜರಿಕೆ ನಿಮ್ಮ ವಿವಾಹಕ್ಕೆ ಸಂಬಂಧಿಸಿರಬಹುದೇ ಯೋಚಿಸಿ. ನಿಮ್ಮ ಆರ್ಥಿಕ ಪರಿಸ್ಥಿತಿ, ಉದ್ಯೋಗವನ್ನು ನಿಭಾಯಿಸುವ ಬಗೆಗೆ ನಿಮಗಿರುವ ಅನುಮಾನಗಳು, ಲೈಂಗಿಕ ವಿಚಾರಗಳಲ್ಲಿನ ಅಸ್ಪಷ್ಟತೆ- ಹೀಗೆ ನಿಮ್ಮಲ್ಲಿ ಹಲವಾರು ಬಗೆಯ ಹಿಂಜರಿಕೆಗಳಿರಬಹುದು.  ಇವೆಲ್ಲವನ್ನೂ ಅರ್ಥಮಾಡಿಕೊಂಡು ಬದಲಾಯಿಸಲು ಪ್ರಯತ್ನಿಸುತ್ತಾ ಹೋಗಿ. ಬದಲಾವಣೆಗಳು ನಿಧಾನವಾಗಿ ಆಗುತ್ತವೆ. ಆದರೆ ಒಮ್ಮೆ ಮನಸ್ಸಿನಲ್ಲಿ ಆಶಾಭಾವನೆ ಮೂಡಿದರೆ ಭಯವನ್ನು ನಿಭಾಯಿಸುವುದು ಸುಲಭ. ನಿಮಗೆ ಮಾತ್ರೆಗಳ ಅಗತ್ಯವಿಲ್ಲ. ಅಗತ್ಯವಿದ್ದರೆ ಆಪ್ತಸಮಾಲೋಚಕರನ್ನು ಸಂಪರ್ಕಿಸಿ. 

***

ಐಟಿಐ ಮುಗಿಸಿ ಮನೆಯಲ್ಲಿಯೇ ಪಿಯುಸಿ ಓದಿ ಈಗ ಬಿಎ ವ್ಯಾಸಂಗ ಮಾಡುತ್ತಿದ್ದೇನೆ. ಪಾಠಗಳು ಅರ್ಥವಾಗುವುದಿಲ್ಲ ಮತ್ತು ಓದಿರುವುದು ನೆನಪಿರುವುದಿಲ್ಲ. ಹೇಗೆ ಕಲಿಯಬೇಕು ತಿಳಿಸಿ.

ಹೆಸರು ಊರು ಇಲ್ಲ

ಪತ್ರವನ್ನು ನೋಡಿದರೆ ಎಸ್ಸೆಸ್ಸೆಲ್ಸಿ ನಂತರ ಬೇರೆಯ ವಿದ್ಯಾರ್ಥಿಗಳ ಶಿಕ್ಷಣದಂತೆ ನಿಮ್ಮದು ಮುಂದುವರೆಯಲಿಲ್ಲ ಎನ್ನುವ ಬೇಸರ ನಿಮ್ಮ ಮನಸ್ಸಿನಲ್ಲಿರುವಂತಿದೆ. ಮೊದಲು ಐಟಿಐ, ನಂತರ ಪಿಯು. ಈಗ ಬಿಎ- ಹೀಗೆ ವಿದ್ಯಾಭ್ಯಾಸ ಖಚಿತ ಗುರಿಗಳಿಲ್ಲದೆ ಸಾಗಿರುವುದು ನಿಮ್ಮನ್ನು ಕಾಡುತ್ತಿರಬಹುದೇ? ಜೊತೆಗೆ ಹೆಚ್ಚುತ್ತಿರುವ ವಯಸ್ಸು ಮತ್ತು ದುಡಿಮೆಯ ಮುಂದಿನ ದಾರಿಗಳ ಬಗೆಗೂ ನಿಮ್ಮಲ್ಲಿ ಹಲವಾರು ಆತಂಕಗಳಿರಬಹುದೇ? ಹೀಗೆ ಮನಸ್ಸಿನಲ್ಲಿ ಬೇಸರ ಆತಂಕಗಳಿದ್ದಾಗ ಪಾಠಗಳು ಅರ್ಥವಾಗದಿರುವುದು ನೆನಪು ಉಳಿಯದಿರುವುದು ಸಹಜ.

ಹಾಗಾಗಿ ಮೊದಲು ನಿಮ್ಮ ಬದುಕಿನ ಹಾದಿಯನ್ನು ಹಿಂತಿರುಗಿ ನೋಡಿ, ಮುಂದಿನದರ ಕುರಿತು ಸ್ಪಷ್ಟತೆ ಮೂಡಿಸಿಕೊಳ್ಳಿ. ಅಗತ್ಯವಿದ್ದರೆ ತಾತ್ಕಾಲಿಕ ದುಡಿಮೆಯ ದಾರಿಗಳನ್ನು ಹುಡುಕಿಕೊಂಡು ಓದನ್ನು ಮುಂದುವರೆಸಿ.

(ಲೇಖಕ: ಶಿವಮೊಗ್ಗದಲ್ಲಿ ಮನೋಚಿಕಿತ್ಸಕ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು