ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ | ರೋಗಭೀತಿ ಎಂಬ ರೋಗ

Last Updated 20 ಸೆಪ್ಟೆಂಬರ್ 2022, 6:03 IST
ಅಕ್ಷರ ಗಾತ್ರ

‘ಸಣ್ಣ ವಿಷಯವನ್ನು ಯಾವತ್ತೂ ದೊಡ್ಡದಾಗಿ ಮಾಡಿ ಹೇಳಬೇಡಿ. ಆದರೆ ದೊಡ್ಡ ವಿಷಯ ಮಾತ್ರ ಸಂಕ್ಷಿಪ್ತವಾಗಿರಲಿ.’

– ಪೈಥಾಗೋರಸ್

ಹೊರರೋಗಿ ವಿಭಾಗಕ್ಕೆ ಬಂದ 30 ವರ್ಷದ ನಮ್ಮ ಕಾರ್ಖಾನೆಯ ಉದ್ಯೋಗಿಯೊಬ್ಬರು ‘ಡಾಕ್ಟರೇ, ಎದೆಯ ಎಡ ಭಾಗದಲ್ಲಿ ಚುಚ್ಚಿದಂತೆ ಆಗುತ್ತದೆ. ಇದು ಹಾರ್ಟ್ ಅಟ್ಯಾಕ್‌ನ ಮುನ್ಸೂಚನೆಗಳೇ?’ ಎಂದು ಪ್ರಶ್ನಿಸಿದರು. ಬಿ.ಪಿ., ಇ.ಸಿ.ಜಿ. ತಪಾಸಣೆ ಮಾಡಿಸಿಕೊಂಡು ಹೋದ ಅವರು ಮತ್ತೆರಡು ದಿನಗಳ ನಂತರ ಬಂದು ‘ಡಾಕ್ಟರೇ, ಅದೇನೋ ‘ಟ್ರಿಪಲ್ ವೆಸೆಲ್ ಡೀಸೀಸ್ ’ ಇದೆಯಂತೆ. ಹೀಗಾಗಿ ನನಗೆ ಹಾರ್ಟ್‌ಗೆ ಸಂಬಂಧಿಸಿದ ಇಕೊ, ಸಿ.ಟಿ. ಪರೀಕ್ಷೆಗಳನ್ನೆಲ್ಲಾ ಮಾಡಿಸಿಬಿಡಿ’ ಎಂದು ಆತಂಕದಿಂದ ಹೇಳಿದನು.

ಅವರ ಅಂಗೈನಲ್ಲಿದ್ದ ‘ಗೂಗಲ್ ಡಾಕ್ಟರ್‌’ ನನ್ನನ್ನು ನೋಡಿ ನಗುತಿತ್ತು!

ಇತ್ತೀಚಿಗೆ ಫಿಟ್ ಆಂಡ್ ಫೈನ್ ಆಗಿರುವವರ ಹಠಾತ್ ಸಾವುಗಳು ನಮ್ಮ ಯುವಪೀಳಿಗೆಯಲ್ಲಿ ಸಹಜವಾಗಿಯೇ ಆತಂಕ ಸೃಷ್ಠಿಸಿದೆ. ಹಾಗೆಯೇ ಹೆಚ್ಚುತ್ತಿರುವ ಕ್ಯಾನ್ಸರ್ ಕಾಯಿಲೆ, ವರದಿಯಾಗುತ್ತಿರುವ ಭಯಾನಕ ಸಾಂಕ್ರಾಮಿಕ ರೋಗಗಳು ವೈದ್ಯಕೀಯ ಕ್ಷೇತ್ರಕ್ಕೂ ಸವಾಲಾಗಿವೆ. ಎದೆನೋವು, ಎದೆಯುರಿ; ಹಾಗೆಯೇ ತಲೆನೋವು, ಹೊಟ್ಟೆನೋವು ಇಂತಹ ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವ ಕಾಲವಲ್ಲವಿದು. ಹೀಗೆಂದು ಅತಿಯಾದ ಉತ್ಪ್ರೇಕ್ಷೆ ಮತ್ತು ಭಯಗಳೂ ಸಲ್ಲವು.

ಒಂದೆರಡು ದಿವಸದ ತಲೆನೋವಿಗೆ ಬ್ರೇನ್ ಟ್ಯೂಮರ್ ಆಗಿರಬಹುದೇ? ಹೊಟ್ಟೆನೋವಿಗೆ ಕ್ಯಾನ್ಸರ್ ಇರಬಹುದೇ? ಹೀಗೆ ಯಾವಾಗಲೂ ಅನಾರೋಗ್ಯದ ಬಗ್ಗೆ ವಿಪರೀತ ಆತಂಕ ಸುಮಾರು 3ರಿಂದ 5 ಪ್ರತಿಶತ ಜನರನ್ನು ಇಂದು ಕಾಡುತ್ತಿದೆ. ಗಂಭೀರ ಕಾಯಿಲೆಗಳಿಗೆ ತುತ್ತಾಗಬಹುದೇನೋ ಎಂಬ ಭಯದಿಂದ ಪದೇ ಪದೇ ವೈದ್ಯಕೀಯ ಪರೀಕ್ಷೆಗಳಿಗೆ ಇಂಥವರು ಒಳಪಡುತ್ತಾರೆ. ವೈದ್ಯಕೀಯ ವರದಿಗಳಲ್ಲಿ ಕಾಯಿಲೆಯ ಬಗ್ಗೆ ಯಾವ ಪುರಾವೆ ಇಲ್ಲದಿದ್ದರೂ ಯಾವಾಗಲೂ ಆತಂಕ–ಭೀತಿಗಳಲ್ಲಿರುತ್ತಾರೆ. ಇಂತಹ ರೋಗಭೀತಿಯನ್ನು ವೈದ್ಯವಿಜ್ಞಾನದಲ್ಲಿ ‘ನೊಸೊಫೋಬಿಯಾ’ ಎನ್ನುತ್ತಾರೆ; ‘ವೈದ್ಯಕೀಯ ವಿದ್ಯಾರ್ಥಿಗಳ ಕಾಯಿಲೆ’ ಎಂಬ ಹೆಸರೂ ಇದೆ.

ಇಂದು ಜನ ಸಾಮಾನ್ಯರಲ್ಲಿ ಹೆಚ್ಚುತ್ತಿರುವ ಈ ರೋಗಗಳ ಭೀತಿಗೆ, ಮಾಹಿತಿ ತಂತ್ರಜ್ಞಾನದಿಂದ ಸುಲಭವಾಗಿ ಸಿಗುವ ವೈದ್ಯಕೀಯ ಜ್ಞಾನವೇ ಕಾರಣವೆನ್ನಬಹುದು. ಅನುವಂಶಿಕತೆ ಇಲ್ಲವೆ ಬಾಲ್ಯದ ಅಹಿತಕರ ಇತಿಹಾಸ ಇದಕ್ಕೆ ಪೂರಕವಾಗಬಹುದು.

ರೋಗದ ಇಂತಹ ಭೀತಿಗಳು ಮೊದಲು ಆತಂಕಗಳಾಗಿ ಪ್ರಾರಂಭಗೊಂಡು, ಬಳಿಕ ರೋಗದ ಭ್ರಮೆಯಾಗಿ, ಕಾಲಕ್ರಮೇಣ ಮನೋರೋಗವೂ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಯೋಚನೆಗಳಿಂದಾಗುವ ಸಮಸ್ಯೆಗಳಾವುವು ಎಂದು ಅರಿತು, ಅವಕ್ಕೆ ಶೀಘ್ರವಾಗಿ ಪರಿಹಾರಗಳನ್ನು ಕಂಡುಕೊಳ್ಳುವುದು ಅತ್ಯಗತ್ಯ.

ಸಮಸ್ಯೆಗಳು
1. ರೋಗಗಳ ಭಯವೇ ಒಂದು ಒತ್ತಡವಾಗಿ ಪರಿಣಮಿಸಿ ಅದರೊಟ್ಟಿಗೆ ನಿದ್ರಾಹೀನತೆ, ಅಧಿಕ ರಕ್ತದ ಒತ್ತಡ – ಹೀಗೆ ಹಲವು ಕಾಯಿಲೆಗಳು ಹುಟ್ಟುತ್ತವೆ.
2. ಅವರ ಜೊತೆಗಾರರೂ ಒತ್ತಡದ ಬದುಕನ್ನು ಬಾಳಬೇಕಾಗುತ್ತದೆ.
3. ಸಂಬಂಧಗಳಲ್ಲಿ ಬಿರುಕು, ವೈಯಕ್ತಿಕ ಹಾಗು ವೃತ್ತಿಜೀವನದಲ್ಲಿ ತೊಡಕುಗಳುಂಟಾಗುತ್ತವೆ.
4. ಅನಗತ್ಯ ತಪಾಸಣೆ ಮತ್ತು ಚಿಕಿತ್ಸೆಗಳಿಂದ ಅಡ್ಡಪರಿಣಾಮಗಳು ಸೇರಿದಂತೆ ಆರ್ಥಿಕ ಹೊರೆಯಾಗುತ್ತದೆ.
5. ವೈದ್ಯರನ್ನೂ ಆಸ್ಪತ್ರೆಗಳನ್ನೂ ಬದಲಾಯಿಸಿದರೂ ಸಮಾಧಾನ ಸಿಗದೆ ಖಿನ್ನತೆಗೊಳಗಾಗುತ್ತಾರೆ.

ಪರಿಹಾರಗಳು
1. ‘ಯದ್ ಭಾವಂ ತದ್ ಭವತಿ’–ನಮ್ಮ ಯೋಚನೆಗಳಂತೆ ನಮ್ಮ ಹೊರ ಬದುಕು. ಹೀಗಾಗಿ ಧನಾತ್ಮಕ ಚಿಂತನೆಗೆ ಸಹಾಯಕಾರಿಯಾಗುವಂತಹ ಓದು, ಸಂಗೀತ, ಪ್ರವಾಸ, ಯೋಗ, ಧ್ಯಾನ ಮುಂತಾದ ಉತ್ತಮ ಹವ್ಯಾಸಗಳು ನಿಮ್ಮ ಸಂಗಾತಿಗಳಾಗಲಿ.
2. ಕಾಯಿಲೆಗಳನ್ನು ಅತ್ಯಂತ ರೋಚಕವಾಗಿ ಬಿತ್ತರಿಸುವ ಟಿ.ವಿ ಮಾಧ್ಯಮಗಳಿಂದ ದೂರವಿರಿ. ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಅತಿಯಾದ ಅಧ್ಯಯನ ಬೇಡ.
3. 30 ವರ್ಷ ಮೇಲ್ಪಟ್ಟ ಸ್ತ್ರೀ–ಪುರುಷರೆಲ್ಲರೂ ವಾರ್ಷಿಕ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಿ.
4. ಆರೋಗ್ಯದಾಯಕ ಆಹಾರ–ವಿಹಾರಗಳನ್ನು ನಿಮ್ಮದಾಗಿಸಿಕೊಳ್ಳಿ. ಒಳ್ಳೆಯ ಜೀವನಶೈಲಿಯನ್ನು ರೂಢಿಸಿಕೊಳ್ಳಿ.
5. ಸಮಸ್ಯೆಗಳು ತಲೆದೋರಿದಲ್ಲಿ ವೈದ್ಯಕೀಯ ನೆರವನ್ನು ತಕ್ಷಣ ಪಡೆಯಿರಿ.
ಅತಿಯಾದರೆ ಅಮೃತವೂ ವಿಷವಂತೆ! ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಆದರೆ ಅನಗತ್ಯ ಭೀತಿಗಳು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT