ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ: ಹೊಟ್ಟೆ ಕಿಚ್ಚಿನ ಬೆಳಕು!

Last Updated 2 ಜನವರಿ 2023, 19:30 IST
ಅಕ್ಷರ ಗಾತ್ರ

ಸಹಜವಾಗಿ ನಾವೆಲ್ಲರೂ ಹೊಟ್ಟೆಕಿಚ್ಚಿನ ಭಾವವನ್ನು ಯಾವುದಾದರೊಂದು ಕ್ಷಣದಲ್ಲಿ ಅನುಭವಿಸಿರುತ್ತೇವೆ. ಆದರೆ ‘ಹೊಟ್ಟೆಕಿಚ್ಚು’ ನಿಮಗಾಗಿದೆಯೇ ಎಂಬ ಪ್ರಶ್ನೆಗೆ ‘ಹೌದು’ ಎಂದು ಉತ್ತರಿಸಲು ಹಿಂದೆ ಮುಂದೆ ನೋಡುತ್ತೇವೆ. ನಮಗೆ ಹೊಟ್ಟೆಕಿಚ್ಚು ಉಂಟಾಗಿದೆ – ಎಂದು ಒಪ್ಪಿಕೊಳ್ಳುವುದು ನಾಚಿಕೆ ಪಡುವಂತಹ, ತಲೆತಗ್ಗಿಸುವಂತಹ ಸಂಗತಿ ಎಂದೇ ನಮ್ಮ ಗ್ರಹಿಕೆ. ಆದರೆ ಹೊಟ್ಟೆಕಿಚ್ಚನ್ನು ಧನಾತ್ಮಕವಾಗಿ ಪರಿವರ್ತಿಸಿಕೊಳ್ಳಬಹುದು.

ಕರುಳಿಗೂ ಮೆದುಳಿಗೂ ಸಂಬಂಧವಿದೆ ಎನ್ನುವುದನ್ನು ವಿಜ್ಞಾನ ಬಲವಾಗಿ ದೃಢಪಡಿಸಿದೆ. ಮೆದುಳು-ಮನಸ್ಸುಗಳಲ್ಲಿ ಉಂಟಾಗುವ ‘ಅಸೂಯೆ’, ‘ಈರ್ಷ್ಯೆ’ ಎಂಬ ಮನಃಸ್ಥಿತಿಗೆ ನಮ್ಮ ಭಾಷೆ ಕೊಟ್ಟಿರುವ ನುಡಿಗಟ್ಟು ‘ಹೊಟ್ಟೆ ಉರಿ’, ‘ಹೊಟ್ಟೆಕಿಚ್ಚು’. ಅಂದರೆ ಹೊಟ್ಟೆಕಿಚ್ಚಿನ ಮೂಲ ಮನಸ್ಸೇ. ‘ನಿನಗೇನು ಸಿಕ್ಕಿದೆ, ಅದು ನನಗೆ ಬೇಕು'’ ಎಂಬ ಮನದ ಮಾತು, ಮತ್ತೊಬ್ಬರ ಹಣ/ಅಂತಸ್ತು/ಅಂಕ/ ರೂಪ/ ಹೆಸರು /ಯಶಸ್ಸು ಇತ್ಯಾದಿಗಳ ಬಗೆಗೆ ಹುಟ್ಟಿದಾಗ ಅದು ಹೊಟ್ಟೆಕಿಚ್ಚು ಎನಿಸಿಕೊಳ್ಳುತ್ತದೆ. ಅಣ್ಣ-ತಮ್ಮ-ಅಕ್ಕ-ತಂಗಿಯರ ನಡುವಿನ ಚಿಕ್ಕ-ಪುಟ್ಟ ಜಗಳದಿಂದ ಹಿಡಿದು, ಇತರರ ಅಭಿವೃದ್ಧಿಯನ್ನು ನೋಡಿ ಸಹಿಸದೆ ಅವರಿಗೆ ಪ್ರಾಣಾಪಾಯ ಮಾಡುವಂತಹ ಗಂಭೀರ ನಡವಳಿಕೆಯವರೆಗೂ ಇದು ಕಾರಣವಾಗಬಹುದು. ಹೊಟ್ಟೆಕಿಚ್ಚು ಹಲವು ಬೇರೆ ಬೇರೆ ಭಾವಗಳನ್ನು ಒಟ್ಟಾಗಿಸಿದ ಸಂಕೀರ್ಣ ಭಾವನೆ. ಅದರಲ್ಲಿ ಕೋಪ, ದುಃಖ, ಹತಾಶೆ - ಇವೇ ಮೊದಲಾದ ಭಾವನೆಗಳ ಮಿಶ್ರಣವಿದೆ. ಹೊಟ್ಟೆಕಿಚ್ಚಿನಲ್ಲಿರುವ ವ್ಯಕ್ತಿ ತನಗೆ ಈಗ ಸಿಕ್ಕಿರುವುದನ್ನು ಪೂರ್ತಿಯಾಗಿ ಪಕ್ಕಕ್ಕೆ ತಳ್ಳುತ್ತಾನೆ, ಮತ್ತೊಬ್ಬರಿಗೆ ಸಿಕ್ಕಿರುವುದಕ್ಕಾಗಿ ಹಾತೊರೆಯುತ್ತಾನೆ.

ಹೊಟ್ಟೆಕಿಚ್ಚು ವಿವಿಧ ರೀತಿಗಳಲ್ಲಿ ವ್ಯಕ್ತವಾಗಬಹುದು. ಯಶಸ್ಸು /ಅವಕಾಶ ಸಿಕ್ಕ ವ್ಯಕ್ತಿಗಳಿಗೆ ನೋವುಂಟುಮಾಡುವಂಥ ಮಾತನಾಡುವುದು; ಅವರ ಯಶಸ್ಸು / ಸಾಧನೆಗಳನ್ನು ಪೂರ್ಣ ನಿರ್ಲಕ್ಷಿಸಿ, ತಾವು ಅದನ್ನು ಗಮನಿಸಿಯೇ ಇಲ್ಲ ಎಂಬಂತೆ ತೋರಿಸಿಕೊಳ್ಳುವುದು; ಅವರಿಗೆ ಅರ್ಹತೆಯಿರದಿದ್ದರೂ ಅದು ಹೇಗೋ ದೊರಕಿದೆ, ಅದರ ಕಾರಣ ಅದೃಷ್ಟ ಅಥವಾ ಪ್ರಭಾವ ಎಂದು ಆಗಾಗ್ಗೆ ಹೇಳುವುದು; ಇತರರೊಡನೆ ಅವರ ಬಗ್ಗೆ ಕೀಳಾಗಿ ಮಾತನಾಡುವುದು - ಇವೆಲ್ಲವೂ ಹೊಟ್ಟೆಕಿಚ್ಚು ವ್ಯಕ್ತವಾಗುವ ಸಾಮಾನ್ಯ ರೀತಿಗಳು.

ಹೊಟ್ಟೆಕಿಚ್ಚಿನ ಭಾವನೆ ಪ್ರಬಲವಾದದ್ದು. ನಾವು ನೋಡುವ ದೃಷ್ಟಿಯ ಮೇಲೆ ತೆಳುವಾದ ತೆರೆಯೆಳೆದು ಬಿಡುವ ಶಕ್ತಿ ಅದಕ್ಕಿದೆ. ಸ್ಪಷ್ಟವಾಗಿ ಕಾಣುತ್ತಿರುವಂಥದ್ದನ್ನೂ ನೋಡಲು ನಾವು ಅಸಮರ್ಥರಾಗಬಹುದು; ಅಥವಾ ಇರುವ ವಿಷಯ ಬೇರೆಯೇ ಆಗಿ ಕಾಣುವಂತಾಗಬಹುದು. ದಂಪತಿಗಳು ಮತ್ತು ಮಕ್ಕಳು - ಈ ಎರಡೂ ಗುಂಪುಗಳಲ್ಲಿ ಇದು ಕಂಡು ಬರುತ್ತದೆ. ಅಂದರೆ ಹೆಚ್ಚು ಅಂಕ ಗಳಿಸಿದ ಸಹಪಾಠಿಗೆ, ಟೀಚರ್ ‘ಪಾರ್ಶಿಯಾಲಿಟಿ’ ಮಾಡಿದ್ದಾರೆ; ‘ಅವನು ತಪ್ಪು ಬರೆದರೂ ಅಂಕ ಕೊಟ್ಟಿದ್ದಾರೆ’ ಎಂದು ಮಕ್ಕಳು ಹೇಳಬಹುದು. ಸುಮ್ಮನೇ ಅತ್ತ-ಇತ್ತ ನೋಡುತ್ತಿರುವ ಪತಿ, ಮತ್ತೊಬ್ಬ ಮಹಿಳೆಯನ್ನೇ ದಿಟ್ಟಿಸಿ ಗಮನಿಸುತ್ತಿದ್ದಾರೆ ಎಂದು ಪತ್ನಿ ಅವನನ್ನು ದೂರಬಹುದು.

ಹೊಟ್ಟೆಕಿಚ್ಚು ಮೂಡಿಸುವ ಇಂಥ ತೆರೆಯು ಸಾಧಕರ ಪರಿಶ್ರಮವನ್ನು ಗಮನಿಸದಿರುವಂತೆಯೂ ಮಾಡಿಬಿಡುತ್ತದೆ. ಪ್ರಾಕೃತಿಕವಾಗಿ ನಮ್ಮೆಲ್ಲರಲ್ಲಿ ಇರುವ ಸಾಮಾನ್ಯ ಗುಣವೆಂದರೆ ಪರಿಶ್ರಮ ಪಡಲು ಸೋಮಾರಿತನ ಮತ್ತು ಪ್ರಶಂಸೆ-ಯಶಸ್ಸುಗಳಿಗಾಗಿ ಹಾತೊರೆಯುವುದು.

ಹಾಗಿದ್ದರೆ ಹೊಟ್ಟೆಕಿಚ್ಚಿನಿಂದ ನಾವು ಕಲಿಯಲು, ನಮ್ಮ ಲಾಭಕ್ಕಾಗಿ ಅದನ್ನು ಪರಿವರ್ತಿಸಿಕೊಳ್ಳುವುದು ಸಾಧ್ಯವೇ? ‘ಸಾಧ್ಯವಿದೆ’ ಎನ್ನುತ್ತದೆ, ಮನೋವಿಜ್ಞಾನ. ಹೇಗೆ? ನಿಮಗೆ ಮತ್ತೊಬ್ಬರ ಸಾಧನೆ/ಯಶಸ್ಸಿನಿಂದ ‘ಇರಿಟೇಟ್’ ಆಗುವಾಗ (ಅಂದರೆ ನಿಮಗೆ ಹೊಟ್ಟೆಕಿಚ್ಚಾದಾಗ) ಹೀಗೆ ಅನುಸರಿಸಿ:

• ಮೊದಲು ನಿಮಗೆ ಉಂಟಾಗುತ್ತಿರುವ ಭಾವನೆಯನ್ನು ‘ಹೊಟ್ಟೆಕಿಚ್ಚು’ ಎಂದು ಒಪ್ಪಿಕೊಳ್ಳಿ. ಅದು ಅಸಹಜ ಭಾವನೆಯಲ್ಲ; ‘ಮತ್ತೊಬ್ಬರಿಗೆ ಸಿಕ್ಕಿದ್ದು ನಮಗೆ ಸಿಕ್ಕಿಲ್ಲ‘ ಎಂಬ ನೋವಿನಿಂದ ಉಂಟಾಗಿದ್ದು.

• ನಿಮಗೆ ದೊರಕಿರುವ ಅಥವಾ ನಿಮ್ಮಲ್ಲಿರುವ ಒಳ್ಳೆಯ ಅಂಶಗಳನ್ನು ಗುರುತಿಸಿ, ಅದಕ್ಕಾಗಿ ಸಂತಸ ಪಡುವುದು ಬಲು ಮುಖ್ಯ.

• ಅಸೂಯೆಯು ಎಳೆಯುವ ತೆರೆಯನ್ನು ಪ್ರಯತ್ನಪೂರ್ವಕವಾಗಿ ಕಿತ್ತು ಹಾಕಿ. ಪರಿಶ್ರಮದ ಕಡೆ ಮನಸ್ಸನ್ನು ಕೇಂದ್ರೀಕರಿಸಿ. ನಿಮ್ಮಲ್ಲಿ ಪ್ರತಿಭೆ -ಅದೃಷ್ಟ ಕಡಿಮೆ ಎನಿಸಿದರೂ ಸರಿಯೆ, ಪರಿಶ್ರಮ ನಿಮ್ಮನ್ನು ಬಲು ಎತ್ತರಕ್ಕೆ ಕೊಂಡೊಯ್ಯಬಲ್ಲದು.

• ಸಂಬಂಧಗಳಲ್ಲಿ, ವಿಶೇಷವಾಗಿ ದಾಂಪತ್ಯದಲ್ಲಿ ಅಸೂಯೆ ಉಂಟಾದಾಗ, ವ್ಯಂಗ್ಯ-ಕೊಂಕು ಮಾತುಗಳನ್ನು ಬದಿಗಿಟ್ಟು, ನಿಮಗಾಗುತ್ತಿರುವ ನೋವನ್ನು ನೇರವಾಗಿ ಹೇಳುವುದು ಅಗತ್ಯ. ಎಷ್ಟೋ ಬಾರಿ ಇಲ್ಲಿ ಇನ್ನೊಬ್ಬರಿಗೆ ಏನೋ ಸಿಕ್ಕಿದೆ ಎನ್ನುವುದಕ್ಕಿಂತ ‘ನಮಗೆ ಏನೋ ಸಿಕ್ಕಿಲ್ಲ’ ಎಂಬ ನೋವು ಮುಖ್ಯವಾಗುತ್ತದೆ.

• ನಿಮಗೆ ಏನನ್ನಿಸುತ್ತಿದೆ (ಅದು ಇತರರ ಬಗೆಗೇ ಆಗಲಿ, ಎಷ್ಟೇ ಕೆಟ್ಟ ಅಭಿಪ್ರಾಯವೇ ಆಗಲಿ) ಎನ್ನುವುದನ್ನು ಬರೆಯುವುದು ಸೂಕ್ತ. ಆಗ ನಿಮ್ಮ ಯೋಚನಾ ಸರಣಿಯೇ ಅಸಂಬದ್ಧ ಎನಿಸಬಹುದು! ಹೊಟ್ಟೆಕಿಚ್ಚಿನಿಂದ ಹೊರಬರುವುದು ಸುಲಭ ಎನಿಸಬಹುದು.

• ಆತ್ಮವಿಶ್ವಾಸದ ಕುಸಿಯುವಿಕೆಯನ್ನು ಸರಿಪಡಿಸಿಕೊಳ್ಳುವ ಸುಲಭ ದಾರಿಗಳೆಂದರೆ ಪ್ರಾಮಾಣಿಕತೆ, ಸರಿಯಾದ ಸಂವಹನ ಮತ್ತು ತನಗಿರುವ ಧನಾತ್ಮಕ ಸಂಗತಿಗಳ ಬಗೆಗೆ ಗಮನಿಸುವಿಕೆ. ಹಾಗಾಗಿ ನಿಮಗೆ ಗೆಲುವು ಸಿಕ್ಕಿಲ್ಲ ಎಂದು ಸಂಕಟವೇ ಆಗುತ್ತಿದ್ದರೂ, ಇನ್ನೊಬ್ಬರಿಗೆ ಸಿಕ್ಕಿದೆ ಎಂದು ಅಸೂಯೆಯಾಗುತ್ತಿದ್ದರೂ, ಆ ಕ್ಷಣದಲ್ಲಿ ಅಭಿನಂದನೆ ಹೇಳುವುದು ಬೇಕೇ ಬೇಕು. ಕೇವಲ ಗೆಲುವು/ಅಂಕ/ದುಡ್ಡು ಇವುಗಳಷ್ಟೇ ಮುಖ್ಯವಲ್ಲ, ‘ಸಂತಸವಾಗಿರುವುದು’ ‘ತೃಪ್ತ ಮನಸ್ಸು’ – ಇವು ಬಹಳ ಅಗತ್ಯ.

ಹೊಟ್ಟೆಕಿಚ್ಚು ಸುಡುವುದು ನಮ್ಮನ್ನೇ! ಅದರ ಶಕ್ತಿಯನ್ನು ‘ಪರಿಶ್ರಮ’ವಾಗಿ ಪರಿವರ್ತಿಸಿಕೊಂಡರೆ, ಅದು ಸಾಧನೆಯಾಗಿ ಬದಲಾಗಬಹುದು. ಮುಂದಿನ ಬಾರಿ ಹೊಟ್ಟೆಕಿಚ್ಚಿನ ಅನುಭವವಾದಾಗ, ‘ನನಗೇನೂ ಅವರ ಮೇಲೆ ಹೊಟ್ಟೆಕಿಚ್ಚಿಲ್ಲ’ ಎಂದು ತಳ್ಳಿಹಾಕಬೇಡಿ. ‘ಹೌದು ನನಗೆ ಹೊಟ್ಟೆಕಿಚ್ಚಾಗುತ್ತಿದೆ’ ಎಂದು ಒಪ್ಪಿಕೊಂಡು ಅದನ್ನು ಪರಿಶ್ರಮವಾಗಿಸಲು ಪ್ರಯತ್ನಿಸಿ. ಆಗ ಯಶಸ್ಸು ನಿಮ್ಮದಾಗುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT