ಭಾನುವಾರ, ಡಿಸೆಂಬರ್ 8, 2019
20 °C

ಕೈ ತೊಳೆಯುವುದಕ್ಕೂ ಇದೆ ವೈಜ್ಞಾನಿಕ ಪದ್ಧತಿ!

Published:
Updated:

ನಾವು ನಿತ್ಯ ಹಲವಾರು ಬಾರಿ ಕೈ ತೊಳೆದುಕೊಳ್ಳುವ ಕ್ರಿಯೆಯನ್ನು ನಮಗೆ ಅರಿವಿಲ್ಲದಂತೆಯೇ ಮಾಡುತ್ತಿರುತ್ತೇವೆ. ನೀರು ಮತ್ತು ಸಾಬೂನಿನಿಂದ ಕೈ ತೊಳೆಯುವುದು ಸೋಂಕುಗಳನ್ನು ತಡೆಗಟ್ಟುವ ಖಚಿತವಾದ ವಿಧಾನ. ದಿನವಿಡೀ ನಾವು ಕೈಗಳಿಂದ ಬಹಳಷ್ಟು ವಸ್ತುಗಳನ್ನು ಮುಟ್ಟುತ್ತೇವೆ. ಇದು ಅನಿವಾರ್ಯ ಕೂಡಾ. ಹಾನಿಕಾರಕ ಸೂಕ್ಷ್ಮಜೀವಿಗಳು ನಮ್ಮ ಕೈಗೆ ಅಂಟಿಕೊಳ್ಳುತ್ತವೆ. ಅದೇ ಕೈಗಳಿಂದ ಕ್ರಿಮಿಗಳು ಕಣ್ಣು, ಮೂಗು, ಬಾಯಿಗಳಿಗೆ ಹರಡಬಹುದು. ಕೈಗಳನ್ನು ಸೂಕ್ಷ್ಮಜೀವಿ ರಹಿತವಾಗಿ ಇಡುವುದು ಅಸಾಧ್ಯ. ಆದರೆ ಆಗಾಗ ಕೈ ತೊಳೆಯುವುದರಿಂದ ಬ್ಯಾಕ್ಟೀರಿಯಾ, ವೈರಸ್ ಹಾಗೂ ಇತರ ಹಾನಿಕಾರಕ ಸೂಕ್ಷ್ಮಜೀವಿಗಳ ಹರಡುವಿಕೆಯನ್ನು ಬಹಳಷ್ಟು ತಡೆಗಟ್ಟಬಹುದು.

ಯಾವಾಗ ಕೈ ತೊಳೆಯಬೇಕು?

ಈ ಕೆಲಸಗಳನ್ನು ಮಾಡುವ ಮೊದಲು

* ಆಹಾರ ತಯಾರಿಸುವ, ತಿನ್ನುವ ಮುಂಚೆ

* ರೋಗಿಗಳ ಉಪಚಾರದ ಮೊದಲು, ಗಾಯಗಳ ಪಟ್ಟಿ ಕಟ್ಟುವ ಮೊದಲು

* ಸಂಪರ್ಕ ಮಸೂರಗಳನ್ನು ( ಕಾಂಟ್ಯಾಕ್ಟ್ ಲೆನ್ಸ್) ಹಾಕುವ ಅಥವಾ ತೆಗೆಯುವ ಮೊದಲು.

ಈ ಕೆಲಸಗಳ ನಂತರ

* ಆಹಾರ ತಯಾರಿಸಿ, ತಿಂದ ನಂತರ

* ಶೌಚಾಲಯ ಉಪಯೋಗಿಸಿದ ನಂತರ, ಮಕ್ಕಳ ಡಯಾಪರ್‌ಗಳನ್ನು ಬದಲಿಸಿದ ನಂತರ, ಮಕ್ಕಳಿಗೆ ಶೌಚಾಲಯದಲ್ಲಿ ಸಹಾಯ ನೀಡಿದ ನಂತರ

* ಪ್ರಾಣಿಗಳನ್ನು ಮುಟ್ಟಿದ ನಂತರ, ಪ್ರಾಣಿಗಳ ಆಹಾರ ಹಾಗೂ ತ್ಯಾಜ್ಯಗಳ ವಿಲೇವಾರಿ ಮಾಡಿದ ನಂತರ

* ಕೆಮ್ಮು, ಸೀನುಗಳ ನಂತರ, ಮೂಗು ಸ್ವಚ್ಛಗೊಳಿಸಿದ ನಂತರ

* ಕಸ ವಿಲೇವಾರಿ ಮಾಡಿದ ನಂತರ

* ರೋಗಿಗಳಿಗೆ ಸಹಾಯ ಮಾಡಿದ ನಂತರ

* ಇದಲ್ಲದೇ ಯಾವಾಗ ಕೈ ಕೊಳಕಾಗಿದೆ ಎನಿಸುತ್ತದೆಯೋ ಆವಾಗ ಕೈ ತೊಳೆಯುವುದು ಉತ್ತಮ ಅಭ್ಯಾಸ.

ವಿಧಾನ

ನೀರು ಮತ್ತು ಸಾಬೂನು ಅತ್ಯುತ್ತಮ. ಮಾರುಕಟ್ಟೆಯಲ್ಲಿ ದೊರೆಯುವ ವಿಶಿಷ್ಟ ಆ್ಯಂಟಿ ಸೆಪ್ಟಿಕ್ ಸಾಬೂನುಗಳಷ್ಟೇ ಸಾಮಾನ್ಯ ಸಾಬೂನುಗಳೂ ಉಪಯುಕ್ತ. ಹರಿಯುವ ಶುದ್ಧವಾದ, ತಣ್ಣಗಿನ ಅಥವಾ ಉಗುರು ಬೆಚ್ಚಗಿನ ನೀರು ಉಪಯೋಗಿಸಬಹುದು. ಬೆಚ್ಚಗಿನ ನೀರು ಉತ್ತಮ. ಮೊದಲು ಕೈ ಒದ್ದೆ ಮಾಡಿಕೊಂಡು ಸೋಪು ಹಚ್ಚಿ ನೊರೆ ಬರಿಸಿಕೊಳ್ಳಬೇಕು. ಎರಡೂ ಕೈಗಳ ಎಲ್ಲಾ ಭಾಗಗಳನ್ನೂ ಸುಮಾರು 20 ಸೆಕೆಂಡ್‌ ಕಾಲ ಉಜ್ಜಬೇಕು. ಉಜ್ಜುವಾಗ ಕ್ರಮಪ್ರಕಾರವಾಗಿ ಎರಡೂ ಅಂಗೈಗಳು, ಅಂಗೈಗಳ ಹಿಂಭಾಗ, ಹೆಬ್ಬೆರಳನ್ನೂ ಸೇರಿಸಿ ಪ್ರತಿಬೆರಳು, ಬೆರಳುಗಳ ನಡುವಿನ ಜಾಗ, ಉಗುರು ಹಾಗೂ ಬೆರಳ ತುದಿಗಳು, ಮಣಿಗಂಟಿನ ಜಾಗಗಳನ್ನು ಸ್ವಚ್ಛಗೊಳಿಸಬೇಕು. ನಂತರ ನೀರಿಗೆ ಕೈ ಒಡ್ಡಿ ಸಾಬೂನು ಹೋಗುವಂತೆ ತೊಳೆಯಬೇಕು. ಸ್ವಚ್ಛವಾದ ಕೈ ಒರೆಸುವ ಬಟ್ಟೆ, ಟಿಶ್ಯೂ ಪೇಪರ್ ಅಥವಾ ಬಿಸಿಗಾಳಿ ಸೂಸುವ ಯಂತ್ರಗಳ ಸಹಾಯದಿಂದ ಕೈಗಳನ್ನು ಒಣಗಿಸಬೇಕು. ತೊಳೆದು ಹೊರ ಬರುವಾಗ ಬಾಗಿಲ ಹಿಡಿಕೆ ಹಿಡಿಯಲು ಒಂದು ಟಿಶ್ಶೂ ಪೇಪರ್ ಉಪಯೋಗಿಸಿ ನಂತರ ಬಿಸಾಡುವುದು ಉತ್ತಮ. ಈ ಆದರ್ಶವಾದ ಸೌಕರ್ಯಗಳು ನಮ್ಮ ದೇಶದಲ್ಲಿ ಜನಸಾಮಾನ್ಯರಿಗೆ ಲಭ್ಯವಿಲ್ಲದಿರುವುದು ಖೇದಕರ.

ಸಾಬೂನು- ನೀರಿನ ಬದಲು ಆಲ್ಕೊಹಾಲ್ ಆಧಾರಿತ ದ್ರಾವಣಗಳೂ ಲಭ್ಯ. ಸ್ವಲ್ಪ ದ್ರಾವಣವನ್ನು ಕೈಯಲ್ಲಿ ತೆಗೆದುಕೊಂಡು ಇಡೀ ಕೈಯನ್ನು ಉಜ್ಜಿದರೆ ತನ್ನಿಂದ ತಾನೇ ಆವಿಯಾಗುತ್ತದೆ ಹಾಗೂ ಕೈಯನ್ನು ಸ್ವಚ್ಛಗೊಳಿಸುತ್ತದೆ. ಇವುಗಳು ನೀರು ಮತ್ತು ಸಾಬೂನುಗಳಷ್ಟಲ್ಲದಿದ್ದರೂ ಪ್ರಾಯೋಗಿಕವಾಗಿ ಉಪಯುಕ್ತ.

ತೀವ್ರನಿಗಾ ಘಟಕಗಳಲ್ಲಿ..

ಆಸ್ಪತ್ರೆಗಳ ತೀವ್ರನಿಗಾ ಘಟಕಗಳಲ್ಲಿ ವೈದ್ಯಕೀಯ ಸಿಬ್ಬಂದಿಗಳು ಕಡ್ಡಾಯವಾಗಿ ಕೈ ತೊಳೆಯುವ ಅಭ್ಯಾಸ ಅಳವಡಿಸಿಕೊಳ್ಳಲು ಆರಂಭಿಸಿದಂದಿನಿಂದ ಹಲವಷ್ಟು ಸೋಂಕುಗಳನ್ನು ತಡೆಗಟ್ಟಲಾಗಿದೆ. ಸೋಂಕುಗಳು ತೀವ್ರವಾದ ಸೆಪ್ಸಿಸ್‌ಗೆ ತಿರುಗುವುದನ್ನು ತಡೆಗಟ್ಟುವುದರಲ್ಲೂ ಇದು ಸಾಕಷ್ಟು ಸಹಾಯ ಮಾಡಿದೆ. ಇದರ ಬಗ್ಗೆ ಆಸ್ಪತ್ರೆಗಳ ಎಲ್ಲಾ ಸಿಬ್ಬಂದಿಗಳಿಗೂ ತಿಳಿವಳಿಕೆ ನೀಡಲಾಗುತ್ತದೆ.

ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಚಿಕಿತ್ಸೆ ನಡೆಸುವ ವೈದ್ಯರು ಮತ್ತು ಸಹಾಯಕರು ಕೈ ತೊಳೆಯುವ ವಿಧಾನ ವಿಭಿನ್ನ ಮತ್ತು ಹೆಚ್ಚು ಹೊತ್ತು ತೆಗೆದುಕೊಳ್ಳುವಂತದ್ದು. ಇಲ್ಲಿನ ಕೈ ತೊಳೆಯುವ ಸ್ಥಳದ ನಿರ್ಮಾಣವೂ ವಿಭಿನ್ನ. ನಲ್ಲಿಗಳು ಎತ್ತರದಲ್ಲಿದ್ದು, ಉದ್ದ ಹಿಡಿಕೆ ಹೊಂದಿರಬೇಕು ಅಥವಾ ಸೆನ್ಸರ್‌ ಸಹಾಯದಿಂದ ಕಾರ್ಯ ಪ್ರವೃತ್ತವಾಗಬೇಕು. ನೀರಿನ ಬೇಸಿನ್ ಮೂರು ನಾಲ್ಕು ಅಡಿಗಳಷ್ಟಾದರೂ ಆಳವಿರಬೇಕು. ಕೈ ತೊಳೆಯಲು ಸುಮಾರು ಐದು ನಿಮಿಷಗಳಷ್ಟಾದರೂ ಬೇಕು. ನೀರು, ಸಾಬೂನುಗಳನ್ನು ಹಾಕಿಕೊಂಡ ನಂತರ ಉಜ್ಜುವ ( ಇದಕ್ಕೋಸ್ಕರ ಇರುವ ಪ್ರತ್ಯೇಕ ವಸ್ತು) ಬ್ರಷ್‌ನಿಂದ ಉಗುರುಗಳು, ಬೆರಳುಗಳು, ಹಸ್ತಗಳ ಎರಡೂ ಬದಿಗಳು, ಮೊಣಕೈ ಗಂಟಿಗಿಂತ ಮೂರು ಇಂಚು ಮೇಲಿನವರೆಗೆ ಕೈಗಳನ್ನು ಉಜ್ಜಬೇಕು. ತಿಕ್ಕಿದ ಹಸ್ತ ಯಾವಾಗಲೂ ಮೇಲಿರುವಂತೆ ನೋಡಿಕೊಳ್ಳಬೇಕು. ಸ್ವಚ್ಛಗೊಳಿಸಿದ ಹಸ್ತ ಬ್ರಷ್ ಬಿಟ್ಟರೆ ಬೇರೆ ಎಲ್ಲೂ ತಗಲಬಾರದು. ತಿಕ್ಕಿದ ನಂತರ ಬೆರಳುಗಳನ್ನು ಹರಿಯುವ ನೀರಿನ ಕೆಳಗೆ ಲಂಬವಾಗಿ ಹಿಡಿದು ನೀರು ಕೆಳ ಹರಿಯುತ್ತಾ ಕೈಯ ಇತರ ಭಾಗಗಳಲ್ಲಿರುವ ಸಾಬೂನನ್ನು ತೊಳೆಯಬೇಕು. ನಂತರ ನಲ್ಲಿಯನ್ನು ನಿಲ್ಲಿಸಲು ಹಸ್ತ ಉಪಯೋಗಿಸುವಂತಿಲ್ಲ. ಕೈ ತೊಳೆಯುವಾಗ ಬೀಳುವ ನೀರಿನ ಕಣಗಳು ತಿರುಗಿ ಕೈ ಮೇಲೆ ಹಾರದಂತೆ ಆಳವಾದ ಸಿಂಕ್‌ಗಳು ಇರಬೇಕು. ನೀರು ಉಗುರು ಬೆಚ್ಚಗಿದ್ದರೆ ಉತ್ತಮ. ಹೆಚ್ಚು ಬಿಸಿ ಇದ್ದರೆ ಸಿಬ್ಬಂದಿಯ ಕೈಗೆ ಹಾನಿಯಾಗಬಹುದು. ತಣ್ಣಗಿನ ನೀರು ಸಾಬೂನಿನ ನೊರೆ ಬರಿಸಲು ಹೆಚ್ಚು ಪರಿಣಾಮಕಾರಿಯಾಗದು. ಏನೇ ಆದರೂ ಶಸ್ತ್ರಚಿಕಿತ್ಸೆಯ ಮೊದಲು ತೆಗೆದುಕೊಳ್ಳುವ ಜಾಗ್ರತೆಗಳಿಂದಾಗಿ ಸೋಂಕಿನ ಸಂಭಾವ್ಯತೆ ಕಡಿಮೆಯಾಗುವುದರಲ್ಲಿ ಎರಡು ಮಾತಿಲ್ಲ.

ಪದೇ ಪದೇ ಸಾಬೂನು ಉಪಯೋಗಿಸಿ ಕೈ ತೊಳೆದಾಗ ಕೈ ಚರ್ಮ ತುಂಬಾ ಒಣಗಿ ತೊಂದರೆಯಾಗುವ ಸಾಧ್ಯತೆಗಳಿವೆ. ರೋಗಕಾರಕ ಜೀವಿಗಳ ಜೊತೆಗೆ ಸಾಮಾನ್ಯವಾಗಿರುವ ಹಾನಿ ಮಾಡದ ಜೀವಿಗಳೂ ನಾಶವಾಗಿ ತೊಂದರೆಯಾಗುವ ಸಾಧ್ಯತೆಗಳಿವೆಯೇ ಎಂಬ ಪ್ರಶ್ನೆ ಏಳಬಹುದು. ವಿಪರೀತವಾಗಿ ಕೈ ಕೊಳಕಾಗಿದೆ ಎಂದು ಇಡೀ ದಿನ ಕೈತೊಳೆಯುತ್ತಾ ಕಳೆಯುವ ‘ಗೀಳುರೋಗ’ದ ರೋಗಿಗಳು ಸೂಕ್ತ ಮನೋವೈದ್ಯರಿಂದ ಚಿಕಿತ್ಸೆಗೊಳಗಾಗುವ ಅವಶ್ಯಕತೆ ಇದೆ.

ಇದನ್ನೂ ಓದಿ: ನ್ಯುಮೋನಿಯಾ ಅಪಾಯಕ್ಕೆ ಲಸಿಕೆ ಉಪಾಯ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು