ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ: ಹಿರಿತನದ ಹಾದಿಯಲ್ಲಿ

Published 1 ಮೇ 2023, 23:30 IST
Last Updated 1 ಮೇ 2023, 23:30 IST
ಅಕ್ಷರ ಗಾತ್ರ

ರಘು ವಿ.

ಭಾರತ ಮುಂದಿನ ದಶಕಗಳಲ್ಲಿ ಅತಿ ಹೆಚ್ಚು ಯುವಸಂಪನ್ಮೂಲವನ್ನು ಹೊಂದಲಿರುವ ರಾಷ್ಟ್ರವೆಂದು ಬಿಂಬಿತವಾಗಿದೆ. ಈ ಯುವಜನರು ದೇಶಕ್ಕೆ ಶೋಭೆಯನ್ನು ತರಬಲ್ಲರೋ ಇಲ್ಲವೋ ಎಂಬುದು ಮನನೀಯ ವಿಚಾರ. ತಮ್ಮ ನಡೆ-ನುಡಿ, ಆಚಾರ-ವ್ಯವಹಾರಗಳಿಂದ ಕೀರ್ತಿ ತರುವರೋ ಅಥವಾ ಅಪಕೀರ್ತಿ ತರುವರೋ ಎಂಬುದು ಇಂದು ಮಕ್ಕಳಾಗಿರುವ ಅವರನ್ನು ನಾವು ಹೇಗೆ ತಿದ್ದಬಲ್ಲೆವೆಂಬುದರ ಮೇಲೆ ಅವಲಂಬಿತವಾಗಿದೆ. ನೆನಪಿರಲಿ ಇಂದು ಜಾಗತಿಕ ಮಟ್ಟದಲ್ಲಿ ವಿವಧ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಯುತ ಹುದ್ದೆಗಳಿಗೆ ಆಯ್ಕೆ ನಡೆಯುವಾಗ ಅಂಕಗಣಿಕೆಯ ಜೊತೆಗೆ ಗುಣಗಣಿಕೆಯೂ ನಡೆಯುತ್ತದೆ. ಒಬ್ಬ ಅಭ್ಯರ್ಥಿ ಸಂದರ್ಶನಕ್ಕ ಹಾಜರಾದಾಗ, ಅವನು ಕಛೇರಿಗೆ ಕಾಲಿಟ್ಟ ಕ್ಷಣದಿಂದ ಅವನ ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.

ಚತುಷ್ಫಥ
ಮಕ್ಕಳು ಮುಖ್ಯವಾಗಿ ನಾಲ್ಕು ಆಯಾಮಗಳಲ್ಲಿ ತಮ್ಮ ನಡೆಯನ್ನು ಕಲಿಯಬೇಕು. ಏಕೆಂದರೆ ಮುಂದೆ ಅವರು ನಾಲ್ಕು ವಲಯಗಳಲ್ಲಿ ವರ್ತಿಸಬೇಕಾಗುತ್ತದೆ. ಮಾತು, ವರ್ತನೆ, ಜವಾಬ್ದಾರಿ, ಸ್ನೇಹಭಾವ - ಇವೇ ಆ ನಾಲ್ಕು ಆಯಾಮಗಳು. ಅವರು ಕಲಿತ ವರ್ತನೆಗಳು ಕುಟುಂಬವಲಯ, ಬಂಧುವಲಯ, ಸಾರ್ವಜನಿಕ ವಲಯ ಮತ್ತು ಉದ್ಯೋಗವಲಯಗಳಲ್ಲಿ  ಪ್ರತಿಫಲಿತವಾಗುವುದರಿಂದ ಅವು ಸರಿಯಾಗಿ ರೂಪುಗೊಳ್ಳಬೇಕು.

ವರ್ತನೆಗಳು ಪುನರಭ್ಯಾಸದಿಂದ ರೂಪಿತವಾಗುವವು. ಮುಖ್ಯವಾಗಿ ಮನೆಯಲ್ಲಿ ಅವರು ಹಿರಿಯರನ್ನು ಗಮನಿಸುತ್ತ ಕಲಿಯುತ್ತಾರೆ. ಪುಟ್ಟಮಕ್ಕಳು ಮನೆಯಾಟ, ಸ್ಕೂಲಾಟ ಆಡುವುದನ್ನು ಗಮನಿಸಿದರೆ ಅವರ ಕೌಟುಂಬಿಕ ವಾತಾವರಣದ ಚಿತ್ರಣ ದೊರೆತುಬಿಡುತ್ತದೆ. ಮನೆಯ ಸಾಕುಪ್ರಾಣಿಗಳೂ ಮನೆಯವರ ಸ್ವಭಾವವನ್ನು ರೂಢಿಸಿಕೊಳ್ಳುತ್ತವೆಂದರೆ, ಇನ್ನು ಮಕ್ಕಳು ಕುಟುಂಬದ ಸದಸ್ಯರ ಸ್ವಭಾವವನ್ನು ರೂಢಿಸಿಕೊಳ್ಳುವುದರಲ್ಲೇನು ಅಚ್ಚರಿ? ಭಾಷೆಯ ಕಲಿಕೆಯಿಂದ ಮೊದಲ್ಗೊಂಡು ಎಲ್ಲವೂ ಅನುಕರಣೆಯ ಪ್ರತಿಫಲನ.

ಮಾತು
‘ನನ್ನ ಮಗ ತುಂಬ ಒರಟಾಗಿ ಮಾತನಾಡುತ್ತಾನೆ... ಅವನಿಗೆ ಬುದ್ಧಿ ಹೇಳಿ’ ಎಂದು ಬೆಳೆದ ಮಗನನ್ನು ಎದುರಿಗೆ ಕೂರಿಸಿದ ಸಂದರ್ಭಗಳಿವೆ. ನಾನು ಮುಗಳ್ನಕ್ಕು ‘ನೀವು ನಿಮ್ಮ ಪತ್ನಿಯೊಂದಿಗೆ ಮಾತನಾಡುವುದನ್ನು ಧ್ವನಿಮುದ್ರಿಸಿ ಕೇಳಿ’ ಎಂದು ಹೇಳಿದ್ದೇನೆ. ಮನೆಯಲ್ಲಿ ಹಿರಿಯರು ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕು. ವಿನಾ ಕಾರಣ ಧ್ವನಿ ಏರಿಸಬಾರದು, ಕೋಪಗೊಂಡರೂ ಅದನ್ನು ವ್ಯಕ್ತಪಡಿಸುವ ಮಾರ್ಗ ಹಿಂಸಾಮಾರ್ಗವಾಗಿರಬಾರದು. ಕೋಪ ಮುಕ್ತಚರ್ಚೆಗೆ ನಾಂದಿಯಾಗಬೇಕು, ಭಿನ್ನಾಭಿಪ್ರಾಯಗಳ ಪರಿಹಾರಕ್ಕೆ ಸೂತ್ರ ಕಂಡುಕೊಳ್ಳಬೇಕು. ಮಕ್ಕಳು ಇವುಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಯಾವುದೇ ಕಾರಣಕ್ಕೂ ಕೆಟ್ಟ ಪದಗಳನ್ನು, ಅಶ್ಲೀಲ ಮಾತುಗಳನ್ನು, ಬೈಗುಳಗಳನ್ನು ಬಳಸಬಾರದು. ಇವು ಮನೋವಿಕಾರದ ಅಭಿವ್ಯಕ್ತಿ. ಮಕ್ಕಳು ಇವುಗಳನ್ನು ಬೇಗ ಹೆಕ್ಕಿ ತಮ್ಮದಾಗಿಸಿಕೊಳ್ಳುತ್ತಾರೆ. 

ಕೃತಿ
ಮನೆಯ ವಸ್ತುಗಳನ್ನು ಬಳಸುವಾಗ ಅಲ್ಲೊಂದು ಶಿಸ್ತು ಓರಣವಿರಬೇಕು. ಹಾಸಿಗೆಯಿಂದ ಎದ್ದ ಕೂಡಲೆ ಹೊದಿಕೆಯನ್ನು ಮಡಿಸಿಟ್ಟು, ತಲೆದಿಂಬನ್ನು ಸರಿಪಡಿಸುವ ಅಭ್ಯಾಸ ನಮ್ಮದಾಗಿದ್ದರೆ ನಮ್ಮ ಮಕ್ಕಳು ಕೂಡ ವಸ್ತುಗಳನ್ನು ಒಪ್ಪವಾಗಿಡುವುದನ್ನು ಕಲಿಯುತ್ತಾರೆ. ಮನೆಯಲ್ಲಿ ಪ್ರತಿ ವಸ್ತುವಿಗೂ ಒಂದು ಸ್ಥಾನ ನಿಗದಿಯಾಗಬೇಕು. ಪ್ರತಿನಿತ್ಯವೂ ಮನೆಯ ಸದಸ್ಯರೆಲ್ಲ ಸೇರಿ ಟಿ.ವಿ.ಯ ರಿಮೋಟ್‌ ಹುಡುಕುತ್ತಾರೆಂದರೆ ಅಲ್ಲಿ ಯಾವ ವ್ಯವಸ್ಥೆಯಿದ್ದೀತು? ಬಳಸಿದ ಪೊರಕೆ ಎಲ್ಲಿಡಬೇಕು, ನಲ್ಲಿಯಲ್ಲಿ ಯಾವ ಭರದಲ್ಲಿ ನೀರು ಬಿಡಬೇಕು, ಸ್ನಾನದ ಬಳಿಕ ಚೌಕವನ್ನು ಎಲ್ಲಿ ಹರವಬೇಕು – ಇವೆಲ್ಲವನ್ನು ಮಕ್ಕಳು ನೋಡಿ ಕಲಿಯುತ್ತಾರೆ. ಮುಂದೆ ಸಾರ್ವಜನಿಕ ಸ್ಥಳಗಳಲ್ಲೂ ಇದನ್ನೇ ಪಾಲಿಸುತ್ತಾರೆ. ಕೆಲವರಿಗೆ ಪದೇ ಪದೇ ಉಗುಳುವ ಅಭ್ಯಾಸ. ಅವರ ಮಕ್ಕಳೂ ಇದನ್ನೇ ಕಲಿಯುತ್ತಾರೆ, ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಳ್ಳುತ್ತಾರೆ. ಪುಸ್ತಕ ಲೇಕನಿಗಳನ್ನು ಬಳಸುವುದನ್ನು ಕೂಡ ಅವರು ಮನೆಯಲ್ಲಿಯೇ ಕಲಿಯುತ್ತಾರೆ.

ಜವಾಬ್ದಾರಿ
ಮನೆಯ ಆಗುಹೋಗುಗಳಿಗೆ ಮನೆಯ ಹಿರಿಯರು ಹೇಗೆ ಸ್ಪಂದಿಸುತ್ತಾರೆಂದು ಮಕ್ಕಳು ಗಮನಿಸುತ್ತಿರುತ್ತಾರೆ. ಪರಸ್ಪರ ಸಂಬೋಧನೆ ಹೇಗಿದೆ, ಪ್ರೀತಿವಿಶ್ವಾಸದ ಅಭಿವ್ಯಕ್ತಿ ಹೇಗಿದೆ, ಹೊಂದಾಣಿಕೆ ಹೇಗಿದೆ ಎಂದು ಅವರ ಸೂಕ್ಷ್ಮ ಮನಸ್ಸು ಗ್ರಹಿಸುತ್ತಿರುತ್ತದೆ. ತಂದೆ–ತಾಯಿಗಳು ಅಜ್ಜ–ಅಜ್ಜಿಯರಿಗೆ ಗೌರವ ನೀಡದಿದ್ದರೆ ಮಗುವು ಹಿರಿಯರಿಗೆ ಗೌರವ ಸಲ್ಲಿಸಬೇಕೆಂಬ ಪಾಠವನ್ನು ಕಲಿಯುವುದಿಲ್ಲ. ಯಾರಾದರೂ ಕಾಯಿಲೆ ಮಲಗಿದಾಗ ಮನೆಯ ಇತರರು ಅವರನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದನ್ನೂ ಅದು ಗಮನಿಸುತ್ತದೆ. ನೆರವಾಗುವ ಉದಾರತೆ ಬೆಳೆಯುವುದೊ ಅಳಿಯುವುದೋ? ರಸ್ತೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಕುಸಿದರೆ ಸುತ್ತಲಿನವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಗಮನಿಸುವಾಗ ಅವರ ಕುಟುಂಬದ ಮೌಲ್ಯಗಳ ಚಿತ್ರಣ ದೊರೆಯುತ್ತದೆ.

ಸ್ನೇಹಭಾವ
ಸಮಾಜವೆಂಬುದು ವ್ಯಕ್ತಿಯೆಂಬ ವಿವಿಧ ಮೂಲಘಟಕಗಳ ಮೊತ್ತ. ಕುಟುಂಬದ ಸದಸ್ಯರ ನಡುವೆ ಸ್ನೇಹಭಾವವಿದ್ದರೆ ಆ ಮನೆಯಲ್ಲಿ ಬೆಳೆದ ಮಗು ವಿಶ್ವಪ್ರೇಮಿಯಾಗುತ್ತದೆ. ಹೊಂದಿಕೊಳ್ಳುವ ಗುಣವನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಕಲಿಸಬೇಕು. ಸಮವಯಸ್ಕರೊಂದಿಗೆ ಹಂಚಿಕೊಳ್ಳುವುದನ್ನು ಪ್ರೋತ್ಸಾಹಿಸಬೇಕು. ಪ್ರತ್ಯೇಕತೆಯ ಭಾವ ಇರದಂತೆ ಆದರೆ ಆತ್ಮವಿಶ್ವಾಸ ಉಳಿವಂತೆ ಬೆಳೆಸುವುದು ಒಂದು ಸವಾಲು. ಇಂದು ‘ಟೀಂ ಬಿಲ್ಡಿಂಗ್‌’, ‘ಟೀಂ ಸ್ಪಿರಿಟ್‌’ ಬೋಧನೆಯ ವಿಷಯವಾಗುತ್ತಿವೆ. ಆದರೆ ಅನೇಕ ಒಟ್ಟುಕುಟುಂಬಗಳಲ್ಲಿ ಬೆಳೆದವರು, ಊರಹಬ್ಬ ಉತ್ಸವ ಮುಂತಾದವುಗಳಲ್ಲಿ ಪಾಲ್ಗೊಳ್ಳುವ ಮನೆಗಳಲ್ಲಿ ಬೆಳೆದವರು ಈ ‘ಟೀಂ’ಸೂತ್ರವನ್ನು ತಮಗೆ ತಿಳಿಯದೆಯೇ ಅಳವಡಿಸಿಕೊಂಡುಬಿಟ್ಟಿರುತ್ತಾರೆ. ಹಿರಿಯರು ಸಾರ್ವಜನಿಕ ಸ್ಥಳಗಳಲ್ಲಿ, ಎಂದರೆ ರಸ್ತೆಗಳು, ಬಸ್‌ ನಿಲ್ದಾಣ, ಮೆಟ್ರೊ, ಪಾರ್ಕ್‌, ಪೂಜಾಸ್ಥಳಗಳು, ಹೊಟೇಲ್‌ – ಇಂಥ ಸ್ಥಳಗಳಲ್ಲಿ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಮಕ್ಕಳು ಗಮನಿಸುತ್ತಿರುತ್ತವೆ. ಮಕ್ಕಳು ನಾಗರಿಕರಾಗಿ ರೂಪುಗೊಳ್ಳಲು ಇಂಥ ಸ್ಥಳಗಳೇ ನಿಜವಾದ ಪಾಠಶಾಳೆಗಳು ಎಂಬುದನ್ನು ಪಾಲಕರು, ಪೋಷಕರು ಮರೆಯಬಾರದು.

ಒಟ್ಟಿನಲ್ಲಿ, ‘ಬೆಳೆಯುವ ಮಕ್ಕಳಿಗೆ ನಾವೊಂದು ಮಾದರಿ’ – ಎಂದು ಮನೆಯವರೂ ಇತರ ಹಿರಿಯರೂ ಅರಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT