ಶನಿವಾರ, ಡಿಸೆಂಬರ್ 4, 2021
24 °C

ಗ್ರೀನ್ ಟೀ ಎಷ್ಟು ಕಪ್‌ ಸೇವಿಸಬಹುದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗ್ರೀನ್ ಟೀ ಸೇವನೆ ದೇಹಾರೋಗ್ಯಕ್ಕೆ ಬಹಳ ಉತ್ತಮ ಎಂದು ಲಾಗಾಯ್ತಿನಿಂದ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಹಲವರು ಇದನ್ನು ಬಳಸಿ ಒಳ್ಳೆಯ ಪರಿಣಾಮ ಪಡೆದಿದ್ದಾರೆ. ದೇಹದಲ್ಲಿನ ಕೊಬ್ಬು ಕರಗಿಸುವುದು, ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹೊರ ಹಾಕುವುದು.. ಹೀಗೆ ನಾನಾ ಕಾರಣಗಳಿಂದ ಪ್ರತಿದಿನ ಗ್ರೀನ್ ಟೀ ಸೇವಿಸುತ್ತಾರೆ. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಗ್ರೀನ್‌ ಟೀಗೆ ಬೇಡಿಕೆ ಹೆಚ್ಚಿದೆ. ಇದರಲ್ಲಿ ಅಪಾರ ಪ್ರಮಾಣದ ಆ್ಯಂಟಿಆಕ್ಸಿಡೆಂಟ್ ಅಂಶವಿರುವ ಕಾರಣ ಇದರ ಸೇವನೆ ಉತ್ತಮ. ಯಾರೋ ಹೇಳಿದರು ಎಂದ ಮಾತ್ರಕ್ಕೆ ಬೆಳಿಗ್ಗೆಯೋ ಸಂಜೆಯೋ ಅಥವಾ ರಾತ್ರಿ ಮಲಗುವ ಮೊದಲೋ ಹೀಗೆ ಗ್ರೀನ್ ಟೀ ಕುಡಿಯುತ್ತೇವೆ. ಆದರೆ ದಿನದಲ್ಲಿ ಎಷ್ಟು ಪ್ರಮಾಣದಲ್ಲಿ ಈ ಪಾನೀಯ ಕುಡಿಯಬೇಕು ಎಂಬುದರ ಅರಿವು ಹಲವರಿಗಿರುವುದಿಲ್ಲ. ಜೊತೆಗೆ ಅದರ ಸೇವನೆಯಿಂದಾಗುವ ಉಪಯೋಗಗಳ ಬಗ್ಗೆಯೂ ಅರಿವಿರುವುದಿಲ್ಲ. ಇಲ್ಲಿದೆ ಈ ಕುರಿತು ಮಾಹಿತಿ...

ಗ್ರೀನ್‌ ಟೀ ಸೇವನೆಯ ಉಪಯೋಗ

ಗ್ರೀನ್‌ ಟೀ ಸೇವನೆಯ ಬಗ್ಗೆ ಒಂದೊಂದು ಅಧ್ಯಯನಗಳಲ್ಲಿ ಒಂದೊಂದು ರೀತಿ ವಿವರಿಸಲಾಗಿದೆ. ಅಧ್ಯಯನಗಳ ಪ್ರಕಾರ ಒಂದು ಕಪ್‌ ಗ್ರೀನ್ ಕುಡಿಯುವವರಿಗೂ ಹಾಗೂ 5 ಕಪ್ ಗ್ರೀನ್ ಟೀ ಕುಡಿಯುವವರಿಗೂ ಭಿನ್ನ ರೀತಿಯ ಆರೋಗ್ಯಕ್ಕೆ ಸಂಬಂಧಿಸಿ ಉಪಯೋಗಗಳಿವೆ.

ಚಯಾಪಚಯ ಕ್ರಿಯೆ

ಗ್ರೀನ್‌ ಟೀ ಸೇವನೆಯಿಂದ ಮನುಷ್ಯನ ದೇಹದಲ್ಲಿ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಇದರಲ್ಲಿ ಕ್ಯಾಟೆಚಿನ್‌ ಹಾಗೂ ಕೆಫೀನ್ ಎಂಬ ಎರಡು ಅಂಶಗಳು ಅಧಿಕವಾಗಿದ್ದು ಇವು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತವೆ. ಜೊತೆಗೆ ದೇಹದಲ್ಲಿನ ಕೊಬ್ಬಿನಾಂಶ ಹೊರ ಹಾಕಲು ಇದು ಸಹಕಾರಿ.

ಉರಿಯೂತ ಕಡಿಮೆ ಮಾಡುತ್ತದೆ

ಗ್ರೀನ್‌ ಟೀಯಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಅಂಶವಿದೆ. ಉರಿಯೂತವು ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದೊಂದಿಗೆ ಸಂಪರ್ಕ ಹೊಂದಿದೆ.

ಹೃದಯಾಘಾತ ಹಾಗೂ ಸ್ಟ್ರೋಕ್‌ ತಡೆಗೆ

ಗ್ರೀನ್ ಟೀಯಲ್ಲಿನ ಕೆಲವು ಅಂಶಗಳು ಹೃದಯಾಘಾತ, ಸ್ಟ್ರೋಕ್‌ ಹಾಗೂ ಕೆಲವು ಕ್ಯಾನರ್‌ಗೆ ಸಂಬಂಧಿಸಿದ ರೋಗಗಳನ್ನು ಆರಂಭದಲ್ಲೇ ನಿಯಂತ್ರಿಸುತ್ತವೆ. ಜಪಾನ್‌ ಮೂಲದ ಅಧ್ಯಯನವೊಂದರ ಪ್ರಕಾರ ದಿನಕ್ಕೆ ಒಂದು ಅಥವಾ ಅದಕ್ಕಿಂತ ಕಡಿಮೆ ಕಪ್‌ ಗ್ರೀನ್ ಕುಡಿಯುವವರಿಗಿಂತ, ಐದು ಅಥವಾ ಐದಕ್ಕಿಂತ ಹೆಚ್ಚು ಕಪ್ ಗ್ರೀನ್ ಟೀ ಕುಡಿಯುವವರಲ್ಲಿ ಹೃದಯಕ್ಕೆ ಸಂಬಂಧಿಸಿದ ತೊಂದರೆಯಿಂದಾಗಿ ಸಾಯುವವರ ಸಂಖ್ಯೆ ಶೇ 16ಕ್ಕಿಂತಲೂ ಕಡಿಮೆ ಇದೆ ಹಾಗೂ ಬೇರೆ ಯಾವುದೇ ರೀತಿಯಿಂದ ಸಾಯುವವರ ಸಂಖ್ಯೆ ಶೇ 26 ಕ್ಕಿಂತಲೂ ಕಡಿಮೆ ಇದೆಯಂತೆ.

ದಿನದಲ್ಲಿ ಎಷ್ಟು ಪ್ರಮಾಣದಲ್ಲಿ ಗ್ರೀನ್ ಟೀ ಸೇವಿಸಬೇಕು?

ಅಧ್ಯಯನಗಳ ಪ್ರಕಾರ ದಿನದಲ್ಲಿ ಮೂರರಿಂದ ಆರು ಕಪ್‌ಗಳಷ್ಟು ಗ್ರೀನ್ ಟೀ ಕುಡಿಯುವುದು ಉತ್ತಮ.

ಟೈಪ್‌ –2 ಮಧುಮೇಹದ ತೊಂದರೆ ಹೊಂದಿರುವವರು ಮೂರು ಅಥವಾ ಅದಕ್ಕಿಂತ ಹೆಚ್ಚು ಕಪ್ ಟೀ ಸೇವಿಸುವುದು ಸೂಕ್ತ.

ಹೃದಯದ ಸಮಸ್ಯೆಯಿಂದ ಸಾವನ್ನಪ್ಪುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ದಿನಕ್ಕೆ ಐದು ಕಪ್‌ನಷ್ಟು ಗ್ರೀನ್ ಟೀ ಕುಡಿಯುವವರಲ್ಲಿ ಹೃದಯ ಸಮಸ್ಯೆ ಪ್ರಮಾಣ ಕಡಿಮೆ ಇದೆ ಎನ್ನುತ್ತದೆ ಅಧ್ಯಯನ. ಅಷ್ಟೇ ಅಲ್ಲದೇ 65 ವರ್ಷಕ್ಕಿಂತ ಮೇಲಿನವರು ದಿನದಲ್ಲಿ ಮೂರರಿಂದ ಐದು ಕಪ್ ಗ್ರೀನ್ ಟೀ ಕುಡಿಯುವುದರಿಂದ ಅವರಲ್ಲಿ ನರವ್ಯೂಹಕ್ಕೆ ಸಂಬಂಧಿಸಿದ ಚಟುವಟಿಕೆಗಳು ಸುಧಾರಿಸುತ್ತವೆ.

ಆತಂಕ, ನಿದ್ರಾಹೀನತೆಯಂತಹ ಮಾನಸಿಕ ಸಮಸ್ಯೆಯಿಂದ ಬಳಲುವವರು ಗ್ರೀನ್ ಟೀ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡುವುದು ಉತ್ತಮ.

ದಿನಕ್ಕೊಂದು ಕಪ್ ಗ್ರೀನ್ ಟೀ ಕುಡಿಯುವುದರಿಂದ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉಪಯೋಗಗಳಿವೆ. ಗ್ರೀನ್ ಟೀಯನ್ನು ಒಮ್ಮಲೆ ಐದಾರು ಕಪ್‌ ಕುಡಿಯುವ ಅಭ್ಯಾಸ ಬೇಡ. ನಿಧಾನಕ್ಕೆ ಒಂದು ಕಪ್‌ನಿಂದ ಆರಂಭಿಸಿ, ನಂತರ ದಿನದಲ್ಲಿ 3–4 ಕಪ್‌ವರೆಗೆ ಅಭ್ಯಾಸ ಮಾಡಿಕೊಳ್ಳಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು