ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದ ಹವಾಮಾನ ಕೇಶ, ಚರ್ಮ ಆರೈಕೆ ಹೇಗೆ?

Published 25 ಮೇ 2024, 0:28 IST
Last Updated 25 ಮೇ 2024, 0:28 IST
ಅಕ್ಷರ ಗಾತ್ರ
ಮೆಲನಿನ್‌ ಪ್ರಮಾಣದ ಆಧಾರದ ಮೇಲೆ ಚರ್ಮದ ಸಹಜ ಆರೈಕೆ ಅವಲಂಬಿಸಿರುತ್ತದೆ.  ಬೇಸಿಗೆಯ ಶಾಖಕ್ಕೆ ಚರ್ಮದಲ್ಲಿ ಹೆಚ್ಚು ಜಿಡ್ಡಿನಂಶ ಉತ್ಪಾದನೆಯಾದರೆ, ಮಳೆಗಾಲದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ಚರ್ಮ ಹಾಗೂ ಕೂದಲಿನ ಆರೈಕೆ ಮಾಡಿಕೊಳ್ಳುವುದು ಅನಿವಾರ್ಯ. ಚರ್ಮ ಹಾಗೂ ಕೂದಲು ನಳನಳಿಸುತ್ತಿದ್ದರೆ ಮುಪ್ಪನ್ನು ದೂರ ಇಟ್ಟ ಹಾಗೆ. ಆದರೆ, ಇವರೆಡೂ ಚೆನ್ನಾಗಿರಬೇಕೆಂದರೆ ಒಂದಷ್ಟು ಆರೈಕೆ ಮಾಡಿಕೊಳ್ಳಲೇಬೇಕು. ಅದಕ್ಕಾಗಿ ಇಲ್ಲಿವೆ ಕೆಲವು ಸಲಹೆಗಳು

ಸತ್ವಯುತ ಆಹಾರ

ಸತ್ವಯುತ ಆಹಾರವನ್ನು ಸಮಪ್ರಮಾಣದಲ್ಲಿ ನಿಗದಿತ ಸಮಯಕ್ಕೆ ಸೇವನೆ ಮಾಡುವುದು ಅವಶ್ಯಕ. ಚರ್ಮ ಹಾಗೂ ಕೂದಲಿಗೆ ಬಾಹ್ಯವಾಗಿ ಕ್ರೀಮ್, ಸೀರೆಮ್‌ ಬಳಸುವುದರ ಜತೆಗೆ ಊಟದಲ್ಲಿ ಪೋಷಕಾಂಶ ಇರುವಂತೆ ನೋಡಿಕೊಳ್ಳಬೇಕು. ವಿಟಮಿನ್‌ಯುಕ್ತ ಆಹಾರ ಸೇವನೆ ಮಾಡಬೇಕು. ವಿಟಮಿನ್‌ ‘ಇ’ ಮತ್ತು ‘ಸಿ’ ಹೇರಳವಾಗಿರುವ ಸೊಪ್ಪು, ತರಕಾರಿ, ಹಣ್ಣುಗಳ ಸೇವನೆ ಯಥೇಚ್ಛವಾಗಿರಲಿ. ಮಳೆಗಾಲದಲ್ಲಿ ಕುಡಿಯುವ ನೀರಿನ ಪ್ರಮಾಣ ಕಡಿಮೆಯಾಗದಿರಲಿ. ನೀರು ಕುಡಿದಷ್ಟು ದೇಹ ತಂಪಾಗಿರುವುದಲ್ಲದೇ, ನಿರ್ಜಲೀಕರಣವಾಗದಂತೆ, ಚರ್ಮ ಒಣಗದಂತೆ ತಡೆಯುತ್ತದೆ. ಒಣ ಚರ್ಮ ಬೇಗ ಸುಕ್ಕುಗಟ್ಟುವ ಸಾಧ್ಯತೆ ಇರುವುದರಿಂದ ನೀರು ಕುಡಿಯುತ್ತಿರುವುದು ಅವಶ್ಯಕ.

ಆಗಾಗ ಮುಖ ತೊಳೆಯುತ್ತಿರಿ

ಕಾಲ ಯಾವುದಾದರೇನೂ ಎಷ್ಟೇ ಒತ್ತಡದ ಕೆಲಸವಿದ್ದರೂ ಆಗಾಗ ಮುಖ ತೊಳೆಯುವುದನ್ನು ಮರೆಯದಿರಿ. ಸಾಬೂನು, ಕ್ರೀಂ ಯಾವುದನ್ನೂ ಬಳಸದೇ ತಣ್ಣೀರಿನಲ್ಲಿ ಆಗಾಗ ಮುಖ ತೊಳೆದು, ಶುಭ್ರ ಬಟ್ಟೆಯಲ್ಲಿ ಒರೆಸಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದರಿಂದ ದೂಳು ಮುಕ್ತವಾಗುವುದಲ್ಲದೇ, ಚರ್ಮದಲ್ಲಿ ಅಲರ್ಜಿಯಾಗುವುದನ್ನು ತಪ್ಪಿಸಬಹುದು. ‌

ಸೂಕ್ತ ಉತ್ಪನ್ನ ಬಳಸಿ

ನಿಮ್ಮ ಚರ್ಮ, ಕೂದಲು ಯಾವ ಮಾದರಿಯದ್ದು ಎಂಬುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಿ. ಜಿಡ್ಡಿನ ಚರ್ಮ, ಒಣ ಚರ್ಮ, ಜಿಡ್ಡಿನ ಕೂದಲು, ಒಣ ಕೂದಲು ಹೀಗೆ ಈ ಮಾದರಿಗನುಗುಣವಾಗಿ ಕ್ರೀಂಗಳು, ಕ್ಲೇನ್ಸರ್‌, ಮಾಯಿಶ್ಚರೈಸರ್‌ ಲಭ್ಯವಿರುತ್ತದೆ. ಯಾವುದೇ ಕ್ರೀಂಗಳನ್ನು ಮುಖಕ್ಕೆ ಹಚ್ಚುವ ಮೊದಲು ಕೈಗೆ ಹಚ್ಚಿ ಅದರ ಫಲಿತಾಂಶವನ್ನು ಗಮನಿಸಿ. ಮಳೆಗಾಲದಲ್ಲಿ ಸನ್‌ಸ್ಕ್ರೀನ್‌ ಬಳಸಿ. ಮನೆಯಲ್ಲಿ ಫೇಸ್‌ ಹಾಗೂ ಹೇರ್‌ಪ್ಯಾಕ್ ಮಾಡಿಕೊಳ್ಳಿ. ರಾಸಾಯನಿಕಅಂಶಗಳಿಂದ ಮುಕ್ತವಾಗಿರುವ ತರಕಾರಿ ಹಾಗೂ ಹಣ್ಣುಗಳನ್ನು ಬಳಸಿ ಫೇಸ್ ಹಾಗೂ ಹೇರ್‌ ಪ್ಯಾಕ್ ಮಾಡಿಕೊಳ್ಳಬಹುದು. ಲಘು, ನೀರಿನಂಶ ಆಧಾರಿತ  ಮಾಯಿಶ್ಚರೈಸರ್ ಬಳಸಿ. 

ಆಯಿಲಿಂಗ್ ಮಾಡಿಸಿ

ಕೂದಲು ಹಾಗೂ ತಲೆಬುರಡೆಗೆ ಶುದ್ಧ ಕೊಬ್ಬರಿ ಎಣ್ಣೆಯನ್ನು ವಾರಕ್ಕೊಮ್ಮೆ ಬಳಸಿ ಮಸಾಜ್ ಮಾಡಿ. ಇದರಿಂದ ರಕ್ತಸಂಚಾರ ಸಮರ್ಪಕವಾಗಿ ಆಗಿ ಕೂದಲು ಚೆನ್ನಾಗಿ ಬೆಳೆಯುತ್ತದೆ. ತಲೆಹೊಟ್ಟು ಕಡಿಮೆಯಾಗುತ್ತದೆ. ಮಳೆಯಲ್ಲಿ ಕೂದಲು ನೆನೆದಿದ್ದರೆ ಸೂಕ್ತ ಶಾಂಪೂ ಬಳಸಿ,ಕೂದಲು ತೊಳೆಯುವುದನ್ನು ಮರೆಯದಿರಿ. 3ರಿಂದ 4 ತಿಂಗಳಿಗೊಮ್ಮೆ ಕೂದಲಿಗೆ ಕತ್ತರಿ ಹಾಕಿ. ಟ್ರಿಮ್ ಮಾಡಿಸುವುದರಿಂದ ಬೆಳವಣಿಗೆ ಸಮರ್ಪಕವಾಗಿ ಆಗುತ್ತದೆ.  ಸೀಳು ಕೂದಲುಗಳಿದ್ದರೆ ಕೂದಲ ಬೆಳವಣಿಗೆಯಾಗದು. 

– ಡಾ.ವಿಜಯಗೌರಿ ಭಂಡಾರು, ಚರ್ಮವೈದ್ಯರು, ಸಾಕ್ರಾ ವರ್ಲ್ಡ್‌ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT