ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Handwriting| ಆಡದೇ ಉಳಿದ ಮಾತು ಕೈಬರಹದಲ್ಲಿ: ವ್ಯಕ್ತಿತ್ವ ವಿವರಿಸುವ ಬರವಣಿಗೆ

Last Updated 20 ಜನವರಿ 2023, 19:30 IST
ಅಕ್ಷರ ಗಾತ್ರ

‘Handwriting is mind writing’ ಅಂತ ಹೇಳ್ತಾರೆ. ಹೌದು ನಮ್ಮ ಕೈಬರಹ ಮನಸ್ಸನ್ನು ಅರ್ಥೈಸಿಕೊಳ್ಳಲು ಇರುವ ಸಾಧನ. ಹಾಗಾಗಿ ಕೈಬರಹ‌ವನ್ನು ವಿಶ್ಲೇಷಿಸುವುದರ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ಸುಲಭವಾಗಿ ಅರಿಯಬಹುದು.

ಹೀಗೆ ಹೇಳಿದ ತಕ್ಷಣ ಸ್ವಲ್ಪ ಅಚ್ಚರಿ ಅನಿಸಬಹುದು. ಆದರೆ, ನಿಜಕ್ಕೂ ಸಾಧ್ಯವಿದೆ. ಕೈಬರಹ ವ್ಯಕ್ತಿತ್ವವನ್ನು ಅನಾವರಣ ಗೊಳಿಸುತ್ತದೆ. ಅಂತರ್ಮುಖಿಯೋ, ಬಹಿರ್ಮುಖಿಯೋ, ಆತ್ಮವಿಶ್ವಾಸದ ಮಟ್ಟ, ವ್ಯಕ್ತಿಗಿರುವ ಸಾಮಾಜಿಕ ಕೌಶಲಗಳು, ಸ್ವಭಾವತಃ ಇರುವ ಸಾಮರ್ಥ್ಯವು ನಡೆಸುವ ವೃತ್ತಿಗೆ ಎಷ್ಟು ಪೂರಕ ಹೀಗೆ ಹಲವು ವಿಚಾರಗಳನ್ನು ಕೈಬರಹ ವಿಶ್ಲೇಷಿಸಿ ತಿಳಿಯಬಹುದು.

ಮಕ್ಕಳ ಬೆಳವಣಿಗೆಗೆ ವಿಶ್ಲೇಷಣೆ ಪೂರಕ: ಮಗನೊ, ಮಗಳು ಸರಿಯಾಗಿ ಓದುತ್ತಿಲ್ಲ, ಓದಿದ್ದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಥವಾ ಓದಿದ್ದು ನೆನಪಿನಲ್ಲಿ ಉಳಿಯುತ್ತಿಲ್ಲ. ಓದಿನ ಕಡೆ ಗಮನ ಹರಿಸುತ್ತಿಲ್ಲ ಎಂಬ ದೂರುಗಳು ಸಾಮಾನ್ಯವಾಗಿ ಪೋಷಕರಿಂದ ಬರುತ್ತವೆ. ಇದರ ಹಿಂದೆ ಅನೇಕ ಕಾರಣಗಳಿರಬಹುದು. ಆ ಕಾರಣಗಳು ಯಾರ ಅರಿವಿಗೂ ಬಾರದೇ ಹೋಗಬಹುದು. ಮಕ್ಕಳಿಗೂ ತಮ್ಮ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲು ಆಗದೇ ಇರಬಹುದು. ಆದರೆ, ಅವರ ಕೈಬರಹ ಮಾತ್ರ ಆಡದೇ ಉಳಿದ ಮಾತುಗಳನ್ನು ತೆರೆದಿಡುತ್ತದೆ. ಇದರ ವಿಶ್ಲೇಷಣೆಯಿಂದ ಸೂಕ್ಷ್ಮವಾಗಿ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಇದು ಸರಿಯಾದ ಸಮಯಕ್ಕೆ ಅವರ ಭಾವನೆಗಳಿಗೆ ಸ್ಪಂದಿಸಲು ಅನುವು ಮಾಡಿಕೊಡುತ್ತದೆ.

ಕೈಬರಹ ವಿಶ್ಲೇಷಣೆಯಿಂದ ಆಗುವ ಪ್ರಯೋಜನಗಳೇನು?: ಕೆಲವು ಮಕ್ಕಳ ಬರವಣಿಗೆ ಓದಲು ಆಗದ ಹಾಗೇ ಇರುತ್ತದೆ. ಇನ್ನು ಕೆಲವರು ದುಂಡಾಗೇನೋ ಬರೆಯುತ್ತಾರೆ. ಆದರೆ ವ್ಯಾಕರಣದೋಷವಿರುತ್ತದೆ. ಇನ್ನು ಕೆಲವರಿಗೆ ಮೌಖಿಕವಾಗಿ ಹೇಳಲು ಇಷ್ಟಪಡುತ್ತಾರೆ, ಬರೆಯುವುದು ಕಷ್ಟ ಅವರಿಗೆ. ಕೆಲವು ಮಕ್ಕಳು ಹೋಂವರ್ಕ್‌ ಅಪೂರ್ಣಗೊಳಿಸುತ್ತಾರೆ. ಅವರ ಅತಿಯಾದ ತುಂಟತನ, ಸುಳ್ಳು ಹೇಳುವ ಸ್ವಭಾವ, ದೋಷಪೂರಿತ ವರ್ತನೆಗಳನ್ನು ( behavioral issues) ಕೈಬರಹದಲ್ಲಿ ಸುಲಭವಾಗಿ ಪತ್ತೆ ಹಚ್ಚಬಹುದು.

ಶಕ್ತಿ, ಸಾಮರ್ಥ್ಯ ಅರಿಯಲು ರಹದಾರಿ: ಕೈಬರಹ ಸಮಸ್ಯೆ ಅಷ್ಟೆ ಅಲ್ಲ ವ್ಯಕ್ತಿಯ ಶಕ್ತಿ, ಸಾಮರ್ಥ್ಯವನ್ನು ಹೇಳುತ್ತದೆ. ಸ್ವಭಾವದತ್ತವಾಗಿ ಇರುವ ಕಲಿಕಾ ಶೈಲಿಯನ್ನು(learning styles) ತಿಳಿಸುತ್ತದೆ. ಆ ಶೈಲಿಗೆ ಅನುಗುಣವಾಗಿ ಪೋಷಕರು ತಮ್ಮ ಮಕ್ಕಳಿಗೆ ಪಾಠ ಹೇಳಿಕೊಡಬಹುದು. ಅತಿಯಾದ ನಿರೀಕ್ಷೆ, ದೋಷಪೂರಿತ ಮನೆ ವಾತಾವರಣ, ಸಿಂಗಲ್‌ ಪೇರೆಂಟ್, ಸಂಬಂಧಗಳಲ್ಲಿನ ಬಿರುಕು, ದಂಪತಿ ಜಗಳ ಎಲ್ಲವೂ ಮಗುವಿನ ಭಾವಾನಾತ್ಮಕ ನಡವಳಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೆಲಿಕ್ಯಾಪ್ಟರ್‌ ಪೇರೆಂಟಿಂಗ್‌ನಿಂದ ರೋಸಿಹೋಗುವ ಮಕ್ಕಳು ಒಂದೋ ಅಂತರ್ಮುಖಿಯಾಗಿ ತಮ್ಮ ಆಸಕ್ತಿಗಳಿಂದ ವಿಮುಖರಾಗುತ್ತಾರೆ.

ದೌರ್ಬಲ್ಯವಲ್ಲ ಅದು ಸಾಮರ್ಥ್ಯ: ಮಗು ತುಂಬಾ ಮಾತನಾಡುತ್ತದೆ. ಆಟ ಆಡುತ್ತದೆ, ಅತಿಯಾದ ತುಂಟತನ, ಅತಿಯಾದ ವಾದ, ಥಟ್ಟನೇ ಭಾವನಾತ್ಮಕವಾಗಿ ಸ್ಪಂದಿಸುವುದು, ಬಹುಬೇಗ ಜನರ ಸಂಪರ್ಕ ಸಾಧಿಸುವುದು, ಅರೆ ಗಳಿಗೆಯೂ ಸುಮ್ಮನಿರದ ಚುರುಕುತನ ಹೀಗೆ ಹಲವಾರು ಗುಣಗಳನ್ನು ತಾಯಂದಿರು ದೌರ್ಬಲ್ಯವೆಂಬಂತೆ ಬಿಂಬಿಸುತ್ತಾರೆ. ಆದರೆ, ಇವು ಮೇಲ್ನೋಟಕ್ಕೆ ದೌರ್ಬಲ್ಯವೆನಿಸಿದರೂ ಇದನ್ನು ಸಾಮರ್ಥ್ಯವಾಗಿ ಬದಲಿಸಬಹುದು. ಇಂಥ ಸಂದರ್ಭದಲ್ಲಿ ಬೈದೋ, ಹೊಡೆದೂ ಮಕ್ಕಳನ್ನು ತೆಪ್ಪಗಿರಿಸುವ ಬದಲು ಸಾಮರ್ಥ್ಯವನ್ನು ಪ್ರತಿಭೆಯಾಗಿ ಮಾರ್ಪಾಡು ಮಾಡಬೇಕು.

ವಿಶ್ಲೇಷಣಾ ಪ್ರಕ್ರಿಯೆ ಹೀಗಿರಲಿದೆ: ದುಂಡಗೆ ಕೈಬರಹವಿದ್ದರೆ ಸಾಲದು, ಬರಹ ತೆರೆದಿಡುವ ವ್ಯಕ್ತಿಗತ ಸಮಸ್ಯೆಗಳಿಗೆ ಉತ್ತರವೂ ಸಿಗಬೇಕು. ಮಗು ಎದುರಿಸುತ್ತಿರುವ ಯಾವುದೇ ಬಗೆಯ ಭಾವನಾತ್ಮಕ ಮತ್ತು ನಡವಳಿಕೆಯ ಸಮಸ್ಯೆಗಳನ್ನು ತಿಳಿಸುವ ಕೈಬರಹವನ್ನು ಹಂತ ಹಂತವಾಗಿ ತಿದ್ದಿ, ಪರಿಹಾರ ನೀಡಬಹುದು.

ಮೊದಲ ಹಂತದಲ್ಲಿ ಕೈಬರಹದಲ್ಲಿ ಸ್ಪಷ್ಟತೆ ತರಲು ಪ್ರಯತ್ನಿಸಲಾಗುವುದು. ವೇಗವನ್ನು ಹೆಚ್ಚಳ ಮಾಡಲಾಗುವುದು. ಕೈಬರಹ ಒಪ್ಪವಾಗುವಂತೆ ಮಾಡಲಾಗುವುದು. ನಂತರ ನಿಧಾನಕ್ಕೆ ಕೈಬರಹದ ಮೂಲಕ ಮಗುವಿನ ಮನಸ್ಸಿನಾಳಕ್ಕೆ ಇಳಿಯಲು ಪ್ರಯತ್ನಿಸಲಾಗುವುದು. ಅಲ್ಲಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಮಗುವಿನೊಂದಿಗೆ ಸೌಹಾರ್ದ ಸಂಬಂಧವನ್ನು ಬೆಳೆಸಲಾಗುವುದು. ನಂತರ ಮಗು ನಿಧಾನಕ್ಕೆ ತನ್ನೊಳಗೆ ಆಗುತ್ತಿರುವ ಸಮಸ್ಯೆಗಳನ್ನು ಬಿಚ್ಚಿಡುವಂತೆ ಪ್ರೇರೇಪಿಸಲಾಗುವುದು. ಸಮಸ್ಯೆಯ ತೀವ್ರತೆ ಅರಿತು ಸಮಾಲೋಚನೆ ನೀಡಲಾಗುವುದು.

(ಲೇಖಕರು: ಕೈಬರಹ ತಜ್ಞೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT