ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಂಗತಿ ಹರಿದಾಡುತ್ತಿದೆ. ಎಡಭುಜದ ನೋವಿನಿಂದ ನರಳುತ್ತಿದ್ದ ವ್ಯಕ್ತಿಯೊಬ್ಬರು ಮೂವರು ಸೂಪರ್-ಸ್ಪೆಷಾಲಿಟಿ ವೈದ್ಯರನ್ನು ಭೇಟಿಯಾಗಿ, ಅನೇಕ ಪರೀಕ್ಷೆಗಳನ್ನು ಮಾಡಿಸಿ, ಅನಂತರ ಅದು ಸಾಮಾನ್ಯ ಕಾಯಿಲೆ ಎಂದು ಪತ್ತೆಯಾದ ಪ್ರಸಂಗ. ವೈದ್ಯಕೀಯ ಸೂಪರ್-ಸ್ಪೆಷಾಲಿಟಿ ಯಾವ ರೀತಿಯಲ್ಲಿ ಆರೋಗ್ಯಸಮಸ್ಯೆಯನ್ನು ಆಮೂಲಾಗ್ರವಾಗಿ ಪರಿಶೀಲಿಸಲು ಅಡ್ಡಿಯಾಗಿದೆ ಎನ್ನುವುದಕ್ಕೆ ಇದೊಂದು ಷರಾ.

ಇದು ಬಹುತೇಕ ರೋಗಿಗಳು ಮನಗಂಡಿರುವ ಇಂದಿನ ವಾಸ್ತವದ ಚಿತ್ರಣ. ಎದೆನೋವು ಎಂದು ಹೃದ್ರೋಗತಜ್ಞರ ಬಳಿ ಹೋಗಿ, ಹತ್ತಾರು ಸಾವಿರ ರೂಪಾಯಿಗಳ ಪರೀಕ್ಷೆಗಳನ್ನು ಮಾಡಿಸಿ, ಬಳಿಕ ‘ನಿಮ್ಮ ಹಾರ್ಟು ನಾರ್ಮಲ್ಲಾಗಿದೆ. ಏನೂ ಔಷಧ ಬೇಕಿಲ್ಲ’ ಎನಿಸಿಕೊಂಡ ರೋಗಿ, ‘ನನಗೆ ಎದೆನೋವು ಇನ್ನೂ ಇದೆ’ ಎನ್ನುತ್ತಾರೆ. ‘ಹಾಗಿದ್ದರೆ ಗಾಸ್ಟ್ರಿಕ್ ಆಗಿರಬಹುದು. ಹೊಟ್ಟೆಯ ತಜ್ಞರ ಬಳಿ ಹೋಗಿ’ ಎನ್ನುವ ಉತ್ತರ ಬರುತ್ತದೆ. ಮತ್ತೆ ಸಾವಿರಾರು ರೂಪಾಯಿಗಳ ವೆಚ್ಚದ ಮುಂದಿನ ಪರೀಕ್ಷೆಗಳ ಸರದಿ; ರೋಗಿಗೆ ಮಾತ್ರ ಆತಂಕದ ನಿವಾರಣೆ ಇಲ್ಲ!

ಹೀಗೇಕೆ ಆಗುತ್ತಿದೆ? ಇದಕ್ಕೆ ಪರಿಹಾರವೇನು? – ಎಂದು ಯೋಚಿಸುವಾಗ, ಇತರ ದೇಶಗಳಲ್ಲಿ ಏನಾಗುತ್ತಿದೆ ಎನ್ನುವುದನ್ನು ಗಮನಿಸಬಹುದು. ಮುಂದುವರೆದ ದೇಶಗಳಲ್ಲಿ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಎಂಬ ಮೂರು ವೈದ್ಯಕೀಯ ಹಂತಗಳಿವೆ. ಯಾವುದೇ ರೋಗಿಗೆ ಮೊದಲು ಚಿಕಿತ್ಸೆ ನೀಡುವವರು ಪ್ರಾಥಮಿಕ ಹಂತದ ವೈದ್ಯರು. ಅವರು ರೋಗಿಯ ಕಾಯಿಲೆಯ ವಿವರಗಳನ್ನು ಕೇಳಿ ತಿಳಿದು, ಭೌತಿಕ ಪರೀಕ್ಷೆ ಮಾಡಿ, ರೋಗಿಯ ರೋಗಲಕ್ಷಣಗಳಿಗೆ ಯಾವುದು ಅತ್ಯಂತ ಸಾಮಾನ್ಯ ಕಾರಣವೋ ಅವುಗಳಿಗೆ ಚಿಕಿತ್ಸೆ ನೀಡುತ್ತಾರೆ. ರೋಗ ಗುಣವಾಗದಿದ್ದರೆ, ಅದರ ಮುಂದಿನ ಕಾರಣಗಳ ಪತ್ತೆಕಾರ್ಯ ನಡೆಯುತ್ತದೆ. ಪ್ರಾಥಮಿಕ ಹಂತದಲ್ಲಿ ಪ್ರಯೋಗಾಲಯದ ಪರೀಕ್ಷೆಗಳು ತೀರಾ ಕಡಿಮೆ. ಶೇಕಡಾ 80ರಷ್ಟು ಕಾಯಿಲೆಗಳು ಈ ಹಂತದಲ್ಲೇ ಗುಣವಾಗುತ್ತವೆ. ಇಲ್ಲವಾದರೆ ಪ್ರಾಥಮಿಕ ಹಂತದಿಂದ ರೋಗಿ ದ್ವಿತೀಯ ಹಂತಕ್ಕೆ ಏರಬೇಕಾಗುತ್ತದೆ.

ದ್ವಿತೀಯ ಹಂತದ ವೈದ್ಯರ ವಿದ್ಯಾರ್ಹತೆ ಹೆಚ್ಚು; ಮೊದಲ ಹಂತದಲ್ಲಿ ಗುಣವಾಗದ ರೋಗಿಗಳನ್ನು ಪರೀಕ್ಷಿಸಿದ ಅನುಭವವೂ ಹೆಚ್ಚು. ಇದರ ಆಧಾರದಮೇಲೆ ಅವರು ಕೆಲವು ಪರೀಕ್ಷೆಗಳನ್ನು ಮಾಡಿ ಚಿಕಿತ್ಸೆಯನ್ನು ನೀಡುತ್ತಾರೆ. ರೋಗಿಯ ಕಾಯಿಲೆಯ ಕಾರಣಗಳು ಎರಡನೆಯ ಹಂತದಲ್ಲಿ ಬಹುತೇಕ ಪತ್ತೆಯಾಗುತ್ತವೆ. ನೂರಕ್ಕೆ ತೊಂಬತ್ತೈದಕ್ಕಿಂತ ಅಧಿಕ ರೋಗಿಗಳಿಗೆ ಈ ಹಂತ ಸಾಕಾಗುತ್ತದೆ. ಈ ಸ್ತರದ ಚಿಕಿತ್ಸೆಗೂ ಗುಣವಾಗದ ಪ್ರತಿಶತ ಐದಕ್ಕಿಂತ ಕಡಿಮೆ ರೋಗಿಗಳು ಮಾತ್ರ ಸೂಪರ್-ಸ್ಪೆಷಾಲಿಟಿ ಎನ್ನುವ ಮೂರನೆಯ ಹಂತದ ವಿಶ್ಲೇಷಣೆಗೆ ಒಳಪಡಬೇಕಾಗುತ್ತದೆ. ಇಲ್ಲಿ ಆಯಾ ಕಾಯಿಲೆಯ ವಿಶೇಷ ತಜ್ಞರು ಇರುತ್ತಾರೆ. ಈ ಹಂತದಲ್ಲಿ ಪ್ರಯೋಗಾಲಯದ ಪರೀಕ್ಷೆಗಳು ಅಧಿಕ ಮತ್ತು ದುಬಾರಿ. ಮುಂದುವರೆದ ದೇಶಗಳಲ್ಲಿ ತುರ್ತುಪರಿಸ್ಥಿತಿಯನ್ನು ಹೊರತುಪಡಿಸಿ ಯಾವ ರೋಗಿಯೂ ಸೀದಾ ಮೂರನೇ ಹಂತದ ತಜ್ಞವೈದ್ಯರನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಮೊದಲ ಶ್ರೇಣಿಯಿಂದ ಎರಡನೇ ಶ್ರೇಣಿಗೆ, ಅನಂತರವೇ ಮೂರನೆಯ ಶ್ರೇಣಿಗೆ ಅಧಿಕೃತವಾಗಿ ವರ್ಗಾವಣೆ ಆಗಬೇಕು. ವ್ಯವಸ್ಥೆಯ ಶಿಸ್ತು ಹಾಗಿದೆ. ಒಂದು ವೇಳೆ ವ್ಯವಸ್ಥೆಯ ಶಿಸ್ತನ್ನು ಮೀರಬೇಕೆಂದರೆ ಅದಕ್ಕೆ ಬಹಳ ದುಬಾರಿ ವೆಚ್ಚವನ್ನು ತೆರಬೇಕಾಗುತ್ತದೆ.

ನಮ್ಮ ದೇಶದಲ್ಲಿ ಇಂತಹ ವರ್ಗೀಕರಣ ಇಲ್ಲ. ನಮ್ಮ ಆರೋಗ್ಯವ್ಯವಸ್ಥೆ ತೀರಾ ವಿಲಕ್ಷಣವಾಗಿ ರೂಪುಗೊಂಡಿದೆ. ನಮಗೆ ಶಿಸ್ತಿನ ಅಗತ್ಯವೇ ಇಲ್ಲ. ಎಲ್ಲವೂ ಝಟ್-ಪಟ್ ವೇಗದಿಂದ ಆಗಬೇಕು. ವ್ಯವಸ್ಥೆಯಲ್ಲಿ ಬಿಗಿ ಇಲ್ಲ; ಅಧಿಕೃತ ವರ್ಗಾವಣೆ ಬೇಕಿಲ್ಲ; ರೋಗನಿದಾನದ ಪ್ರಕ್ರಿಯೆಯ ಹಂತಗಳ ಅರಿವಿಲ್ಲ. ಔಷಧವನ್ನು ತೆಗೆದುಕೊಂಡ ಅಲ್ಪಕಾಲದಲ್ಲಿಯೇ ಸಮಸ್ಯೆ ಸರಿಹೋಗದಿದ್ದರೆ ನಮಗೆ ಚಡಪಡಿಕೆ. ಮೊದಲನೆಯ ಭೇಟಿಗೆ ಕಾಯಿಲೆ ಗುಣವಾಗದಿದ್ದರೆ ಆ ವೈದ್ಯನೇ ಅಸಮರ್ಥ; ಅವನ ಕೈಗುಣ ಸರಿಯಿಲ್ಲ. ಇದರಮೇಲೆ ಗೂಗಲ್ ಮಹಾಶಯನ ನೆರವು ಬೇರೆ! ತಲೆನೋವು ಎಂದಾಕ್ಷಣ ಏಕ್ದಂ ನರರೋಗತಜ್ಞರನ್ನು ಭೇಟಿ ಆಗಬಹುದು. ತಲೆನೋವಿನ ನೂರಾರು ಕಾರಣಗಳನ್ನೂ ಆ ತಜ್ಞರೇ ಪರಿಷ್ಕರಿಸಬೇಕು. ಸಮಯದ, ಒತ್ತಡದ ರೀತ್ಯಾ ಇದು ಬಹಳ ತ್ರಾಸದ ಕೆಲಸ. ಯಾವ ಕೆಲಸವನ್ನು ಮುಂದುವರೆದ ದೇಶಗಳಲ್ಲಿ ಮೂರು ವೈದ್ಯರು ಸಾಕಷ್ಟು ಸಮಯ ತೆಗೆದುಕೊಂಡು ಮಾಡುತ್ತಾರೋ, ಅದೇ ಕೆಲಸವನ್ನು ಇಲ್ಲಿ ಮೇಲಿನ ಸ್ತರದ ಒಬ್ಬ ತಜ್ಞ ಕೆಲವೇ ನಿಮಿಷಗಳಲ್ಲಿ ಮಾಡುವುದು ಅಸಮಂಜಸ. ನಮ್ಮ ದೇಶದ ರೋಗಿಗಳ ಸಂಖ್ಯಾಬಾಹುಳ್ಯ ಈ ಒತ್ತಡವನ್ನು ಅಧಿಕಗೊಳಿಸುತ್ತದೆ. ಅಲ್ಲದೇ, ಮೂರನೆಯ ಸ್ತರದ ತಜ್ಞವೈದ್ಯನ ಮಾತು ಅಂತಿಮ ಎನಿಸಿಕೊಳ್ಳುವುದರಿಂದ, ಆತ ಅವಕಾಶಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ತನ್ನ ಬಳಿ ಬಂದ ಪ್ರತಿ ರೋಗಿಗೂ ಎಲ್ಲಾ ರೀತಿಯ ದುಬಾರಿ ಪರೀಕ್ಷೆಗಳನ್ನು ನಡೆಸಿ ತನ್ನ ತೀರ್ಪು ನೀಡಬೇಕಾಗುತ್ತದೆ. ಹೀಗಾಗಿ ಪ್ರಯೋಗಾಲಯಗಳಿಗೆ ಸುಗ್ಗಿ. ಇಂತಹ ಸಂದರ್ಭದಲ್ಲಿ ಅವರ ಮಧ್ಯೆ ಅನೈತಿಕ ಒಪ್ಪಂದಗಳು ಏರ್ಪಡುವುದು ಸಾಧ್ಯ. ಇಂತಹ ಅಶಿಸ್ತಿನ ಪರಿಸರದಲ್ಲಿ ಕೊನೆಗೆ ಕಂಗೆಟ್ಟು ಹೋಗುವುದು ರೋಗಿಯೇ.

ಈ ಸಮಸ್ಯೆಗಳನ್ನು ಮೀರಬೇಕಂದರೆ ನಮ್ಮ ಸರ್ಕಾರಕ್ಕೆ ಒಂದು ಸ್ಪಷ್ಟ ಆರೋಗ್ಯ ನೀತಿ ಬೇಕು. ನಮ್ಮ ದೇಶದ ವಿಚಿತ್ರ ಸಮಸ್ಯೆಗಳಿಗೆ ನಮ್ಮದೇ ಆದ ವಿನೂತನ ಪರಿಹಾರಗಳು ಬೇಕು. ಶ್ರೇಣೀಕೃತ ಆರೋಗ್ಯವ್ಯವಸ್ಥೆಯ ನಿರ್ಮಾಣವನ್ನು ಸರ್ಕಾರ ಜಾರಿಗೊಳಿಸಬೇಕು. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ವರ್ಗೀಕೃತ ಶ್ರೇಣಿ ನೀಡಬೇಕು. ಅವುಗಳಲ್ಲಿ ಇರುವ ಅನುಕೂಲಕ್ಕೆ ತಕ್ಕಂತೆ, ಅವುಗಳು ಮಾಡಬಹುದಾದ ಚಿಕಿತ್ಸೆಯನ್ನು ನಿಯಂತ್ರಿಸಬೇಕು. ರೋಗಿಗಳಿಗೆ ಅಂತಿಮವಾಗಿ ಒಳಿತನ್ನು ಮಾಡಲು ಇಡೀ ವ್ಯವಸ್ಥೆಯಲ್ಲಿ ಶಿಸ್ತು ಅತ್ಯಗತ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.