ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿಯರಲ್ಲಿ ದುಗುಡನಕಾರಾತ್ಮಕ ಭಾವನೆ ಬೇಡ

ಅಕ್ಷರ ಗಾತ್ರ

ಈ ಕೋವಿಡ್-19 ಪಿಡುಗು ಶುರುವಾದಾಗ ಮಂಜುಳ ತನ್ನ ಎಂಟನೇ ತಿಂಗಳ ಗರ್ಭವಾಸ್ಥೆಯಲ್ಲಿದ್ದು ಕಾತುರದಿಂದ ತನ್ನ ಮಗುವಿನ ಆಗಮನವನ್ನು ಎದುರು ನೋಡುತ್ತಿದ್ದಳು. ಆದರೆ ಈ ಕೊರೊನಾ ಸೋಂಕಿನ ಕುರಿತು ಹೊರಬರುತ್ತಿರುವ ಎಲ್ಲ ನಕಾರಾತ್ಮಕ ಸುದ್ದಿಗಳು ಅವಳನ್ನು ಆತಂಕಕ್ಕೀಡು ಮಾಡುತ್ತಿವೆ.

‘ಈ ರೋಗದಿಂದ ನನ್ನನ್ನು ನಾನು ಹೇಗೆ ಕಾಪಾಡಿಕೊಳ್ಳಲಿ? ಈ ವೈರಸ್‌ನ ಪರಿಣಾಮ ನನ್ನ ಮಗುವಿನ ಮೇಲೆ ಉಂಟಾಗುತ್ತದೆಯೇ? ಗರ್ಭಿಣಿಯರು ಸ್ಯಾನಿಟೈಸರ್ (ಕ್ರಿಮಿನಾಶಕ ) ಗಳನ್ನು ಇಷ್ಟು ಹೆಚ್ಚಾಗಿ ಬಳಸುವುದು ಉಚಿತವೇ? ಹೆರಿಗೆಯ ವೇಳೆ ನನ್ನ ಜೊತೆಗಿರಲು ಅಮ್ಮನಿಗೆ ಆಸ್ಪತ್ರೆ ಅನುಮತಿ ಕೊಡುತ್ತದೆಯೇ ಅಥವಾ ನಾನು ಒಂಟಿಯಾಗಿರಬೇಕೆ? ಹೆರಿಗೆ ನೋವು ಕಾಣಿಸಿಕೊಂಡಾಗ ನನಗೆ ಆಸ್ಪತ್ರೆಗೆ ಹೋಗಲು ವಾಹನ ಸಿಗುತ್ತದೆಯೇ ? ಪ್ರಸವ ಪೂರ್ವ ಸ್ಕ್ಯಾನ್ ಮಾಡಲು ಆಸ್ಪತ್ರೆಗೆ ಹೋಗುವುದು ಈ ಪರಿಸ್ಥಿತಿಯಲ್ಲಿ ಸುರಕ್ಷಿತವೇ? ನನ್ನ ಮಗುವಿಗೆ ಇಂತಹ ಸಮಯದಲ್ಲಿ ಸ್ತನ್ಯಪಾನ ಮಾಡುವುದರಿಂದ ಏನಾದರೂ ತೊಂದರೆ ಉಂಟಾಗಬಹುದೇ?’ ಇವೇ ಮೊದಲಾದ ಪ್ರಶ್ನೆಗಳು ಆಕೆಯನ್ನು ಕಾಡುತ್ತಿವೆ.

ಇವಿಷ್ಟು ಆತಂಕಗಳ ಜೊತೆಗೆ ‘ಸಂಪ್ರದಾಯದಂತೆ ಸೀಮಂತ ಮಾಡಲಾಗುತ್ತಿಲ್ಲವಲ್ಲಾ.. ಇದರಿಂದ ಬೇರೆ ಏನು ಪರಿಣಾಮ ಕಾದಿದೆಯೋ?’ ಎಂಬ ಹೆದರಿಕೆಯೂ ಗರ್ಭಿಣಿಯನ್ನು ಸತಾಯಿಸುತ್ತಿದೆ.

ಈ ರೀತಿಯ ಹಲವಾರು ಯೋಚನೆಗಳಿಂದ ಮಂಜುಳಾಳ ಗರ್ಭವಾಸ್ಥೆಯ ಸಂತೋಷವು ನಿರಂತರ ಚಿಂತೆಯಾಗಿ ಬದಲಾಗಿದೆ. ಹಾಗಾದರೆ ಗರ್ಭಿಣಿಯರು ಇಂತಹ ಆತಂಕಗಳನ್ನು ಹೇಗೆ ನಿಭಾಯಿಸುವುದು? ಅವರ ಕುಟುಂಬದವರು ಈ ಕುರಿತಾಗಿ ಏನು ಮಾಡಬಹುದು?

ಪರಿಹಾರಗಳು

* ಬೇರೆಯವರ ಜೊತೆಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು

* ಸೂಕ್ತವಾದ ಸಿದ್ಧತೆ ಮಾಡಿಕೊಳ್ಳುವುದು

* ಆತಂಕ ಉಂಟುಮಾಡುವ ಯೋಚನೆಗಳಿಗೆ ಪರಿಹಾರ ಕಂಡುಕೊಳ್ಳುವುದು

* ಸಕಾರಾತ್ಮಕ ಆಲೋಚನೆ, ಸಂತೋಷ ತರುವ ಕ್ಷಣಗಳನ್ನು ಹಂಚಿಕೊಳ್ಳುವುದು.

* ನಿರಂತರವಾಗಿ ಚಿಂತೆಯಲ್ಲಿ ಮುಳುಗುವುದರ ಬದಲು ನಿಮಗೆ ಗಾಬರಿಯನ್ನು ಉಂಟುಮಾಡುತ್ತಿರುವ ಯೋಚನೆ/ ಚಿಂತೆಯನ್ನು ನಿಖರವಾಗಿ ಗುರುತಿಸಿಕೊಂಡು ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ.

* ಗರ್ಭಿಣಿಯರಿಗೆ ಮಾಡುವಂತಹ ಸೀಮಂತ ಮುಂತಾದ ಸಂಪ್ರದಾಯಗಳನ್ನು ಆಚರಿಸಲು ಈ ಸಂದರ್ಭದಲ್ಲಿ ಸಾಧ್ಯವಿಲ್ಲ. ಬೇರೆ ವಿಶಿಷ್ಟ ರೀತಿಗಳಲ್ಲಿ ನಿಮ್ಮನ್ನು ಸಂತೋಷಪಡಿಸಿಕೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ ಕುಟಂಬದವರು ಮಾತ್ರ ಸೇರಿಕೊಂಡು ಒಂದು ಸಣ್ಣ ಕಾರ್ಯಕ್ರಮ ಮಾಡಿ ಫೋಟೊ, ವಿಡಿಯೊಗಳನ್ನು ನಿಮ್ಮ ಸ್ನೇಹಿತರೊಂದಿಗೆ, ಸಂಬಂಧಿಕರೊಂದಿಗೆ ಹಂಚಿಕೊಳ್ಳಬಹುದು.

* ಅತೀ ಮುಖ್ಯವಾದ ದೂರವಾಣಿ ಸಂಖ್ಯೆಗಳನ್ನು (ಆ್ಯಂಬುಲೆನ್ಸ್, ಆಸ್ಪತ್ರೆ, ಹತ್ತಿರದ ಸಂಬಂಧಿಕರು ) ಎಲ್ಲ ಸಮಯದಲ್ಲೂ ನಿಮ್ಮ ಬಳಿ ಇಟ್ಟುಕೊಳ್ಳಿ . ನಿಮ್ಮ ವೈದ್ಯರು ಮತ್ತು ಆಸ್ಪತ್ರೆಯ ಸಂಪರ್ಕ ಸಂಖ್ಯೆಗಳನ್ನೂ ಮತ್ತು ನಿಮ್ಮ 'ತಾಯಿ ಕಾರ್ಡ್' ಅಥವಾ 'ಗರ್ಭಿಣಿ ಕಾರ್ಡ್' ಮುಂತಾದ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ನಿಮ್ಮ ಹತ್ತಿರದ ಕುಟುಂಬದವರಿಗೆ ಮುಂಚಿತವಾಗಿ ಕಳಿಸಿ. ಲಾಕ್ ಡೌನ್ ಇರುವ ಈ ಪರಿಸ್ಥಿತಿಯಲ್ಲಿ ಪೊಲೀಸ್‌ಗೆ ತೋರಿಸಲು/ ವಾಹನದಲ್ಲಿ ಸಂಚರಿಸಲು ನಿಮ್ಮ ಕುಟುಂಬದವರಿಗೆ ಸಹಾಯವಾಗುತ್ತದೆ.
ಬೆಂಕಿಗೆ ಪೆಟ್ರೋಲ್ ಸುರಿಯುವಂತೆ ನಿಮ್ಮ ಚಿಂತೆಗಳನ್ನು ಇನ್ನಷ್ಟು ಕೆರಳಿಸಬಹುದಾದಂತಹ ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿರಿ

* ನಿಮಗಾಗಿ ಒಂದು ‘ಸಮಾಧಾನ ಪೆಟ್ಟಿಗೆ ’ (ಕಂಫರ್ಟ್‌ ಬಾಕ್ಸ್‌) ತಯಾರಿಸಿಕೊಳ್ಳಿ- ಇದರಲ್ಲಿ ನಿಮಗೆ ಪ್ರಿಯವಾಗಿರುವ ಭಾವಚಿತ್ರಗಳಿರಬಹುದು, ಸುವಾಸನೆಯುಳ್ಳ ಯಾವುದೇ ವಸ್ತು ಇರಬಹುದು, ಮನಸ್ಸಿಗೆ ಹತ್ತಿರವಾದಂತಹ ಹಾಡಿನ ಸಾಲುಗಳಿರಬಹುದು- ಹೀಗೆ ನಿಮ್ಮ ಮನಸ್ಸಿಗೆ ಸಮಾಧಾನ ಕೊಡುವಂತಹ ಯಾವುದೇ ವಸ್ತುಗಳನ್ನು ನಿಮ್ಮ ಪೆಟ್ಟಿಗೆಯಲ್ಲಿಟ್ಟು ಆಗಾಗ ಅದನ್ನು ನೋಡುತ್ತಿರಿ. ಮನಸ್ಸಿಗೆ ನೆಮ್ಮದಿ ಎನಿಸುತ್ತದೆ.

* ನಿಮ್ಮ ವೈದ್ಯರ/ ದಾದಿಯರ ಸಂಪರ್ಕವನ್ನು ನಿರಂತರವಾಗಿ ಇಟ್ಟುಕೊಳ್ಳಿ.

(ಲೇಖಕಿಯರು ವೈದ್ಯೆಯರು, ಗರ್ಭಾವಸ್ಥೆ ಹಾಗೂ ಪ್ರಸವೋತ್ತರದ ಮನೋವೈದ್ಯಕೀಯ ಘಟಕ,
ಮನೋವೈದ್ಯಕೀಯ ವಿಭಾಗ ನಿಮ್ಹಾನ್ಸ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT