ಶನಿವಾರ, ಅಕ್ಟೋಬರ್ 16, 2021
22 °C

ಕೇಶದಲ್ಲಿದೆ ಆರೋಗ್ಯದ ಸೌಂದರ್ಯ; ಕೂದಲು ಆರೈಕೆಗೆ ಪ್ರತಿಯೊಬ್ಬರೂ ಮಾಡಬೇಕಾದದ್ದು

ಡಾ. ಪ್ರಸನ್ನ ಸಂತೇಕಡೂರು Updated:

ಅಕ್ಷರ ಗಾತ್ರ : | |

Prajavani

ತಲೆಯ ಕೂದಲು ಪ್ರತಿಯೊಬ್ಬರ ಸೌಂದರ್ಯವನ್ನು ಹೆಚ್ಚಿಸುವುದು ಎಲ್ಲರಿಗೂ ಸಾಮಾನ್ಯವಾಗಿ ತಿಳಿದೇ ಇರುವ ವಿಷಯ. ತಲೆಯ ಉದ್ದ ಕೂದಲು ಮಹಿಳೆಯರಿಗೆ ತಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು. ಪುರುಷರಿಗೂ ದಟ್ಟವಾದ ತಲೆಯ ಕೂದಲು ಒಂದು ಸುಂದರ ರೂಪ ಕೊಡಬಹುದು. ಎಷ್ಟೋ ಮದುವೆಯ ಸಂಬಂಧಗಳು ಕೂಡ ತಲೆಯ ಕೂದಲಿನ ವಿಚಾರವಾಗಿ ನಿಂತು ಹೋಗಿರುವ ಸಂಭವವೂ ಇದೆ. ನೀಳವೇಣಿ, ನಾಗವೇಣಿ, ತ್ರಿವೇಣಿ, ಫಣಿವೇಣಿ – ಎಂಬ ಪದಗಳು ಸ್ತ್ರೀಯರ ಸೌಂದರ್ಯವನ್ನು ವರ್ಣಿಸುವಾಗ ಬಳಕೆಯಾದರೆ, ‘ಬೊಕ್ಕತಲೆ’, ‘ನೆರೆತ ತಲೆ’ ಎಂಬ ಪದಗಳು ಪುರುಷನ ತಲೆಯಲ್ಲಿ ಕೂದಲು ಇಲ್ಲದಿರುವುದು ಅಥವಾ ಕೂದಲು ಬಿಳಿಯಾಗಿರುವುದನ್ನು ಸೂಚಿಸಲು ಬಳಕೆಯಾಗುತ್ತಿರುತ್ತವೆ.

ಹಿಂದೆ ವೃದ್ಧಾಪ್ಯ ಹತ್ತಿರವಾಗುವ ಸಮಯದಲ್ಲಿ ಕೂದಲು ಬಿಳಿಯಾಗುವುದು ತುಂಬಾ ಸಹಜವಾಗಿತ್ತು. ವಯಸ್ಕರಲ್ಲಿ ಅಥವಾ ನಡುವಯಸ್ಸಿನವರಲ್ಲಿ ಕೂದಲು ಕಪ್ಪಾಗಿಯೇ ಇರುತಿತ್ತು. ಬೊಕ್ಕತಲೆಯವರು ಅಲ್ಲಿ ಇಲ್ಲಿ ಎಲ್ಲೋ ಒಬ್ಬರು ಇಬ್ಬರು ಅಪರೂಪಕ್ಕೆ ಕಾಣುತ್ತಿದ್ದರು. ಆದರೆ ಇತ್ತೀಚೆಗೆ ಒತ್ತಡದ ಜೀವನ ಶೈಲಿಯಿಂದ ಕೆಲವರಿಗೆ ಕೂದಲು ಚಿಕ್ಕ ವಯಸ್ಸಿಗೆ ಬಿಳಿಯಾಗುವುದು, ಉದುರುವುದು, ಬೊಕ್ಕತಲೆಯಾಗುವುದನ್ನು ಕಾಣುತ್ತಿದ್ದೆವೆ. ಈ ರೀತಿಯಾಗಲು ಕಾರಣ ಏನಿರಬಹುದು? ತಜ್ಞರನ್ನು ಕೇಳಿದರೆ ಅವರು ಕೊಡುವ ಕಾರಣಗಳು ಹಲವು. ಕೆಲವರಿಗೆ ವಂಶಪಾರಂಪರ್ಯವಾಗಿ ವಂಶವಾಹಿನಿಗಳ ಕಾರಣವಿದ್ದರೆ, ಇನ್ನು ಕೆಲವರಿಗೆ ಅನಾರೋಗ್ಯಕರ ಆಹಾರಪದ್ಧತಿಯಿಂದ ಮತ್ತು ಕೆಟ್ಟ ಜೀವನಶೈಲಿಯಿಂದ ಎಂದು ಹೇಳುತ್ತಾರೆ. ಇಲ್ಲಿ ಕೆಲವು ಪುರುಷರಿಗೆ ವಯಸ್ಸಾದಂತೆ ಆಂಡ್ರೋಜನ್ ಹಾರ್ಮೋನಿನ ಕಾರ್ಯನಿರ್ವಹಣೆಯಲ್ಲಿ ವ್ಯತಿರಿಕ್ತ ಪರಿಣಾಮಗಳಾಗುವುದರಿಂದ ಬೊಕ್ಕ ತಲೆಯಾಗುತ್ತದೆ. ಮಹಿಳೆಯರಲ್ಲೂ ಅಪರೂಪಕ್ಕೆ ಈ ಸಮಸ್ಯೆಯನ್ನು ಕಾಣಬಹುದು. ಇದು ನಿಧಾನವಾಗಿ ಸಾಗುವ ಪ್ರಕ್ರಿಯೆ.

ಇನ್ನು ಕೆಲವೊಮ್ಮೆ ಮಹಿಳೆಯರಲ್ಲಿ ಗರ್ಭಿಣಿಯರಾದಾಗ, ಹೆರಿಗೆಯ ಸಮಯದಲ್ಲಿ ಅಥವಾ ಮುಟ್ಟು ನಿಲ್ಲುವ ಕಾಲದಲ್ಲಿ ತಾತ್ಕಾಲಿಕವಾಗಿ ಕೂದಲು ಉದುರುವುದನ್ನು ಕಾಣಬಹುದು. ಇದು ಕೂಡ ಮಹಿಳೆಯರ ದೇಹದಲ್ಲಿನ ಬೇರೆ ಬೇರೆ ಹಾರ್ಮೋನುಗಳ ಕಾರಣದಿಂದ ಎಂದು ಹೇಳಬಹುದು. ಜೊತೆಗೆ ಇಂದು ವಿಶ್ವವ್ಯಾಪಿ ಸಮಸ್ಯೆಯಾಗಿರುವ ಥೈರಾಯ್ಡ್ ಹಾರ್ಮೋನಿನ ಅಸಮತೋಲನದಿಂದ ಕೂಡ ಈ ರೀತಿ ಆಗಬಹುದು. ಇನ್ನು ಕೆಲವೊಮ್ಮೆ ಚರ್ಮಕ್ಕೆ ತಗಲುವ ಹುಳುಕಡ್ಡಿ ಎಂಬ ಶಿಲೀಂಧ್ರಗಳ ಸೋಂಕಿನಿಂದ ಕೂಡ ಕೂದಲು ಉದುರಬಹುದು.

ಕೆಲವೊಮ್ಮೆ ಕ್ಯಾನ್ಸರ್, ಸಂಧಿವಾತ, ಹೃದಯಸಂಬಂಧಿ ಕಾಯಿಲೆಗಳು, ಅಧಿಕ ರಕ್ತದ ಒತ್ತಡ, ಖಿನ್ನತೆ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಸೇವಿಸುವ ಔಷಧಗಳು ದೇಹದ ಮೇಲೆ ಮಾಡುವ ವ್ಯತಿರಿಕ್ತ ಪರಿಣಾಮದಿಂದ ಕೂದಲು ಉದುರುವ ಸಂಭವ ಹೆಚ್ಚು. ಕೆಲವು ಕ್ಯಾನ್ಸರ್ ರೋಗಿಗಳ ತಲೆಗೆ ವಿಕಿರಣ ಚಿಕಿತ್ಸೆ ನೀಡಿದಾಗ ಶಾಶ್ವತವಾಗಿ ಕೂದಲು ಬೆಳೆಯದೆ ಇರಬಹುದು. ಕೆಲವೊಮ್ಮೆ ದೈಹಿಕವಾಗಿ ಅಥವಾ ಮಾನಸಿಕವಾಗಿ ಭಾವನಾತ್ಮಕ ಆಘಾತವಾದಾಗ ಕೂಡ ಕೂದಲು ಉದುರುತ್ತದೆ. ಆದರೆ ಇದು ತಾತ್ಕಾಲಿಕವಾಗಿ ಮಾತ್ರ ಎಂದು ವೈದ್ಯರು ಹೇಳುತ್ತಾರೆ. ಆ ವ್ಯಕ್ತಿಗಳು ಮತ್ತೇ ಲವಲವಿಕೆಯಿಂದ ಮೊದಲಿನಂತಾದಾಗ ಕೂದಲು ಮತ್ತೆ ಚೆನ್ನಾಗಿ ಬೆಳೆಯುತ್ತದೆ.

ಹಾಗಾದರೆ, ಹಿಂದೆ ವಯೋವೃದ್ಧರಲ್ಲಿ ಕಾಣುತ್ತಿದ್ದ ನೆರೆತ ಕೂದಲುಗಳು ಇಂದು ಚಿಕ್ಕ ವಯಸ್ಸಿನವರಲ್ಲಿಯೇ ಕಾಣುತ್ತಿರುವುದು ಏಕೆ?

ನಮಗೆ ಹೆಚ್ಚು ಹೆಚ್ಚು ವಯಸ್ಸಾಗುತ್ತ ಹೋದ ಮೇಲೆ ನಮ್ಮ ಕೂದಲುಗಳ ಬೇರಿನಲ್ಲಿರುವ ಕೆಲವು ಜೀವಕೋಶಗಳು ಸತ್ತು ಹೋಗುತ್ತವೆ. ಹಿಂದೆ ಇದು ವಯೋಮಾನಕ್ಕೆ ತಕ್ಕ ಹಾಗೆ ಆಗುತ್ತಿದ್ದ ದೈಹಿಕ ಬದಲಾವಣೆ. ಈ ಜೀವಕೋಶಗಳು ನಮ್ಮ ಕೂದಲಿನ ಬಣ್ಣವನ್ನು ನಿಯಂತ್ರಿಸುವುದರಿಂದ ಮತ್ತು ಅವುಗಳು ಮೆಲನಿನ್ ಎಂಬ ವರ್ಣದ್ರವ್ಯವನ್ನು(pigment) ಸೂಸುವುದರಿಂದ ನಮ್ಮ ಕೂದಲು ಕಪ್ಪಾಗಿರುತ್ತದೆ. ಅವುಗಳು ಬಹುಬೇಗ ಸತ್ತುಹೋದರೆ ಅಥವಾ ಅವುಗಳಿಗೆ ಬೇಕಾದ ಆಹಾರ ಮತ್ತು ಆಮ್ಲಜನಕ ರಕ್ತದ ಮೂಲಕ ಸಾಗಣೆಯಾಗದಿದ್ದರೆ ಅವುಗಳು ತಮ್ಮ ಕಾರ್ಯವನ್ನು ಬೇಗನೆ ನಿಲ್ಲಿಸಿ ಕೂದಲುಗಳು ಬೆಳ್ಳಗಾಗುತ್ತವೆ. ಕೆಲವೊಮ್ಮೆ ಬ್ಯಾಕ್ಟಿರೀಯಗಳು ಮತ್ತು ಶಿಲಿಂಧ್ರಗಳ ಸೋಂಕಿನಿಂದಲೂ ಈ ಜೀವಕೋಶಗಳು ತಮ್ಮ ಕಾರ್ಯವನ್ನು ನಿಲ್ಲಿಸಬಹುದು. ಕೆಲವು ರಾಸಾಯನಿಕಗಳು ಕೂಡ ಈ ಜೀವಕೋಶಗಳ ಕಾರ್ಯವನ್ನು ನಿಲ್ಲಿಸಿ ನಮ್ಮ ಕೂದಲ ಬೆಳವಣಿಗೆಗೆ ಅಡ್ಡಿಯಾಗಬಹುದು. ಈ ರಾಸಾಯನಿಕಗಳು ನಾವು ಕೂದಲನ್ನು ಕಪ್ಪಾಗಿಸಲು ಬಳಸುವ ಹೇರ್‌ಡೈಗಳಲ್ಲೂ ಇರಬಹುದು.

ಆಧುನಿಕ ಜೀವನಶೈಲಿಯಿಂದ ಕೆಲವು ಹಾರ್ಮೋನುಗಳ, ಅದರಲ್ಲೂ ಮುಖ್ಯವಾಗಿ ಕಾರ್ಟಿಸೋಲ್ (Cortisol) ಎಂಬ ಹಾರ್ಮೋನಿನ ಕಾರ್ಯನಿರ್ವಹಣೆಯಲ್ಲಿ ವ್ಯತಿರಿಕ್ತತೆ ಉಂಟಾಗಿ ‘ಮೆಲನಿನ್’ ಎಂಬ ವರ್ಣದ್ರವ್ಯವನ್ನು ಸೂಸುವ ಜೀವಕೋಶಗಳಲ್ಲಿನ ಕೆಲವು ವಂಶವಾಹಿನಿಗಳು ಕಾರ್ಯವನ್ನು ನಿಲ್ಲಿಸಬಹುದು. ಇನ್ನು ಕೆಲವು ಸಲ ನಾವು ತಿನ್ನುವ ಆಹಾರದಲ್ಲಿ ಕೂದಲ ಬೆಳವಣಿಗೆಗೆ ಬೇಕಾಗುವ ವಿಟಮಿನ್‌ಗಳ ಅಥವಾ ಅಮೈನೊ ಆಮ್ಲಗಳ ಕೊರತೆಯಿಂದ ಕೂಡ ಕೂದಲು ಬೆಳೆಯದೆ ಇರಬಹುದು. ಈ ಎಲ್ಲಾ ಕಾರಣಗಳಿಂದ ಕೂದಲು ಬಹುಬೇಗ ಬಿಳಿಯಾಗಬಹುದು ಅಥವಾ ಉದುರಬಹುದು.

ಈ ರೀತಿ ಆಗುವುದನ್ನು ನಾವು ಹೇಗೆ ತಡೆಗಟ್ಟಬಹುದು?

ಉತ್ತಮ ಕೂದಲ ಬೆಳವಣಿಗೆಗೆ ಕೆಲವು ಸಲಹೆಗಳು:

l ಉತ್ತಮ ಸಮತೋಲನ ಆಹಾರ.

l ಉತ್ತಮ ಜೀವನಶೈಲಿ.

l ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಿ ಸಮಯಕ್ಕೆ ಸರಿಯಾಗಿ ಏಳುವುದು.

l ಒತ್ತಡವನ್ನು ನಿಯಂತ್ರಿಸಿಕ್ಕೊಳಲು ಧ್ಯಾನ, ಯೋಗ, ವಾಯುವಿಹಾರ, ಸೂರ್ಯನಮಸ್ಕಾರಗಳನ್ನು ಮಾಡುವುದು.

l ಕೂದಲನ್ನು ಬಾಚುವಾಗ ನಿಧಾನವಾಗಿ ಮೆತ್ತಗೆ ಬಾಚುವುದು.

l ಧೂಮಪಾನ ಮತ್ತು ಮದ್ಯಪಾವನ್ನು ಮಾಡದಿರುವುದು.

l ತಲೆಯನ್ನು ಸದಾ ಶುಚಿಯಾಗಿಟ್ಟುಕೊಳ್ಳುವುದು.

l ನೆತ್ತಿಯ ಮಾಲೀಷು.

l ನೀರನ್ನು ಹೆಚ್ಚು ಕುಡಿಯುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.