ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ: ಹರೆಯದಲ್ಲಿಯೇ ಮೆನೋಪಾಸ್‌!

ಡಾ. ಶಿಲ್ಪಾ ಯೆಲ್ಲೂರ್‌
Published : 2 ಆಗಸ್ಟ್ 2024, 22:55 IST
Last Updated : 2 ಆಗಸ್ಟ್ 2024, 22:55 IST
ಫಾಲೋ ಮಾಡಿ
Comments

ಈಚೆಗೆ ಹರೆಯ ಹಾಗೂ ಇಪ್ಪತ್ತರ ಆಸುಪಾಸಿನ ಯುವತಿಯರಲ್ಲಿ ಫಲವಂತಿಕೆ ಕಡಿಮೆಯಾಗುತ್ತಿರುವ ಪ್ರಕರಣಗಳು ಕಂಡುಬರುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಇಷ್ಟೆ ಇಲ್ಲದೇ ಸಣ್ಣ ವಯಸ್ಸಿಗೆ ಮೆನೋಪಾಸ್‌ನಂಥ ಪ್ರಕರಣಗಳು ಹೆಚ್ಚುತ್ತಿವೆ.

ಮೊದಲೆಲ್ಲ ವಯಸ್ಸಾದ ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತಿದ್ದ ಈ ಸಮಸ್ಯೆ ಈಗ ಹರೆಯದ ಯುವತಿಯರನ್ನು ಆವರಿಸಿದೆ. ಇಂಥದ್ದೊಂದು ಸ್ಥಿತಿಗೆ ಕಾರಣಗಳೇನು? ಎನ್ನುವುದನ್ನು ಸ್ಥೂಲವಾಗಿ ಗಮನಿಸಿದಾಗ ಆನುವಂಶಿಕ ಹಾಗೂ ಜೈವಿಕ ಅಂಶಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅಂಡಾಶಯದ ಕಾರ್ಯವೈಖರಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದರಿಂದ ಫಲವತ್ತತೆಯಲ್ಲಿ ಗಮನಾರ್ಹ ಪರಿಣಾಮ ಬೀರುತ್ತಿದೆ.

ಅರ್ಥೈಸುವುದು ಹೇಗೆ?

ಫಲವಂತಿಕೆ ಎಂದರೆ ಅಂಡಾಶಯ ಉತ್ತಮ ಕಾರ್ಯವೈಖರಿಯನ್ನು ಹೊಂದಿರುವುದು. ಇದರಿಂದ ಸರಿಯಾದ ಸಮಯದಲ್ಲಿ ಗುಣಮಟ್ಟದ ಅಂಡಾಣುಗಳು ಬಿಡುಗೆಯಾಗುತ್ತವೆ. ಲೈಂಗಿಕ ಸಂಪರ್ಕದಿಂದ ಈ ಅಂಡಾಣುಗಳು ವೀರ್ಯದೊಂದಿಗೆ ಸಂಯೋಗಗೊಂಡು ಭ್ರೂಣವಾಗಿ ರೂಪುಗೊಂಡು ಗರ್ಭದಲ್ಲಿ ನೆಲೆ ನಿಲ್ಲುತ್ತದೆ. ಆದರೆ ಫಲವಂತಿಕೆ ಕಡಿಮೆ ಇರುವವರಲ್ಲಿ ಈ ಎಲ್ಲ ಪ್ರಕ್ರಿಯೆಗಳಲ್ಲಿ ಏರುಪೇರು ಉಂಟಾಗಬಹುದು.

ಹೆಣ್ಣುಮಕ್ಕಳಲ್ಲಿ ಮೂರನೇ ಒಂದು ಭಾಗದಷ್ಟು ಫಲವಂತಿಕೆ ಕಡಿಮೆ ಇರುವ ಪ್ರಕರಣಗಳು ಕಂಡುಬರುತ್ತಿವೆ. ಇದಕ್ಕೆ ನಿಖರವಾದ ಕಾರಣಗಳನ್ನು ನಿರ್ಧರಿಸುವುದು ತುಸು ಕಷ್ಟ.

ಗುರುತಿಸುವುದು ಹೇಗೆ?

ಸಾಮಾನ್ಯವಾಗಿ ಮಹಿಳೆಯರಿಗೆ 28 ದಿನಗಳಿಗೊಮ್ಮೆ ಅಂಡಾಶಯದಿಂದ ಅಂಡಾಣುಗಳು ಉತ್ಪತ್ತಿಗೊಂಡು ಹೊರಗೆ ಬರುತ್ತವೆ. ಅದಕ್ಕೆ ಮಾಸಿಕ ಋತುಸ್ರಾವ ಎನ್ನಲಾಗುತ್ತದೆ. ಕೆಲವರಿಗೆ 24 ದಿನಗಳಿಗೊಮ್ಮೆ, ಇನ್ನು ಕೆಲವರಿಗೆ 30 ದಿನಗಳಿಗೆ ಹೀಗೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಇದನ್ನೇ ಋತುಚಕ್ರದ ಎನ್ನಲಾಗುತ್ತದೆ. ಆದರೆ ಈ ಋತುಚಕ್ರ 35 ದಿನಗಳಿಗಿಂತ ಹೆಚ್ಚಿದ್ದರೆ ಅಥವಾ 21 ದಿನಗಳಿಗಿಂತ ಕಡಿಮೆ ಇದ್ದರೆ ಇದನ್ನು ಅನಿಯಮಿತ ಋತುಸ್ರಾವ ಎಂದು ಕರೆಯಬಹುದು. ಕೆಲವೊಮ್ಮೆ ನಿಯಮಿತವಾಗಿ 24 ದಿನಗಳಿಗೊಮ್ಮೆ ಋತು ಚಕ್ರವಿದ್ದು, ಕೆಲವು ಕಾರಣಗಳಿಂದ ಎರಡು ಅಥವಾ ಮೂರು ತಿಂಗಳು ಕಾಲ ಋತುಚಕ್ರ ಬದಲಾದರೆ ಆತಂಕ ಪಡುವ ಅಗತ್ಯವಿರುವುದಿಲ್ಲ. ವಾತಾವರಣ, ಹಾರ್ಮೋನಿನ ಏರುಪೇರುಗಳಿಂದಲೂ ಹೀಗಾಗುತ್ತದೆ.

ಕಾರಣ ಹೀಗಿರಬಹುದು

ಮುಖ್ಯವಾಗಿ ಜೀವನಶೈಲಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿಳಂಬವಾದ ಮಗುವಿನ ಜನನ, ಆರೋಗ್ಯ ಸೌಲಭ್ಯಗಳ ಕೊರತೆ, ವಾತಾವರಣವೂ ತಕ್ಕ ಮಟ್ಟಿಗೆ ಪರಿಣಾಮ ಬೀರಬಲ್ಲದು. ವ್ಯಾಯಾಮರಹಿತ ಜೀವನಶೈಲಿ, ಅತಿಯಾದ ಆಹಾರ ಸೇವನೆ, ಸ್ಥೂಲಕಾಯ ಹಾಗೂ ಹಾರ್ಮೋನ್‌ಗಳಲ್ಲಿ ಏರುಪೇರು ಸಂತಾನೋತ್ಪತ್ತಿಯ ಮೇಲೆ ಪ‍ರಿಣಾಮ ಬೀರುತ್ತದೆ.

ಇಂಡಿಯನ್‌ ಸೊಸೈಟಿ ಆಫ್‌ ಅಸಿಸ್ಟೆಡ್‌ ರಿಪ್ರೊಡಕ್ಷನ್‌ ( ISAR) ನೀಡಿರುವ ಮಾಹಿತಿಯ ಪ್ರಕಾರ ಭಾರತೀಯ ದಂಪತಿಗಳ ಪೈಕೆ ಶೇ 10ರಿಂದ 15ರಂದು ಮಂದಿ ಇಂಥ ಫಲವಂತಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಅತಿಯಾದ ಮದ್ಯಪಾನ, ಧೂಮಪಾನ, ಮಾಲಿನ್ಯ, ಕೀಟನಾಶಕಗಳ ಬಳಕೆ ಹಾಗೂ ಲೋಹಗಳಿಂದ ಮಲಿನಗೊಂಡ ನೀರು, ಗಾಳಿ ಹಾಗೂ ಆಹಾರ ಸೇವನೆ ಇವೆಲ್ಲವೂ ಸಂತಾನೋತ್ಪತ್ತಿಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುವುದಲ್ಲದೇ, ಫಲವತ್ತತೆಯನ್ನು ನಾಶಪಡಿಸುತ್ತಿದೆ.

ಏನಿದು ಬಂಜೆತನ?

ಬಂಜೆತನವೆಂಬುದಕ್ಕೆ ಸ್ತ್ರೀ, ಪುರುಷ ಎಂಬ ಭೇದ–ಭಾವ ಇರುವುದಿಲ್ಲ. ಫಲವಂತಿಕೆ ಕಡಿಮೆ ಇರುವ ಸಮಸ್ಯೆಯನ್ನು ಇಬ್ಬರೂ ಹೊಂದಿರಬಹುದು. ಸತತವಾಗಿ ಲೈಂಗಿಕ ಸಂಪರ್ಕ ಏರ್ಪಟ್ಟರೂ, ಒಂದು ವರ್ಷದವರೆಗೆ ಗರ್ಭಧರಿಸಲು ಅಸಮರ್ಥರಾದರೆ ಅದನ್ನು ಬಂಜೆತನ ಎಂದು ಕರೆಯಲಾಗುತ್ತದೆ. ಬಂಜೆತನ ಪ್ರಕರಣಗಳಲ್ಲಿ ಹೆಣ್ಣುಮಕ್ಕಳ ಪಾತ್ರ ಮೂರನೇ ಒಂದು ಭಾಗದಷ್ಟಿರುತ್ತದೆ. ಹಾಗಾಗಿ ಯಾವುದನ್ನೂ ನಿರ್ಲಕ್ಷ್ಯಿಸುವಂತಿಲ್ಲ.

ಹಾರ್ಮೋನುಗಳ ಏರುಪೇರು

ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಹಾರ್ಮೋನುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅದರಲ್ಲಿ ಏರುಪೇರು ಉಂಟಾದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅನಿಯಮಿತ ಋತುಚಕ್ರ ಹಾಗೂ ಅಂಡಾಣು ಬಿಡುಗಡೆಯಲ್ಲಿ ಅಡಚಣೆಯಾಗಬಹುದು. ಇದಕ್ಕೆ ಕಾರಣಗಳು ಹೀಗಿವೆ.

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS): ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಒಕ್ಕೂಟದ ಪ್ರಕಾರ (FOGSI) ಇಪ್ಪತ್ತರ ಹರೆಯದಲ್ಲಿರುವ ಶೇ 20ರಷ್ಟು ಮಂದಿ ಮಹಿಳೆಯರು ಪಿಸಿಒಎಸ್‌ನಿಂದ ಬಳಲುತ್ತಿದ್ದಾರೆ.

ಥೈರಾಯ್ಡ್‌ ಸಮಸ್ಯೆ: ಹೈಪೋಥೈರಾಯ್ಡಿಸಮ್ ಮತ್ತು ಹೈಪರ್ ಥೈರಾಯ್ಡಿಸಮ್‌ನಿಂದಾಗಿ ಸಕಾಲದಲ್ಲಿ ಅಂಡಾಣುಗಳು ಬಿಡುಗಡೆಯಾಗಲು ತೊಂದರೆ ಉಂಟು ಮಾಡುತ್ತವೆ. ಇವು ಫಲವಂತಿಕೆಯ ಮೇಲೆ ನೇರ ಪರಿಣಾಮ ಬೀರುತ್ತವೆ.

ದೀರ್ಘಕಾಲದ ಒತ್ತಡ: ಮನೆ ಹಾಗೂ ಉದ್ಯೋಗವನ್ನು ಏಕಕಾಲಕ್ಕೆ ನಿರ್ವಹಿಸುತ್ತಿರುವ ಮಹಿಳೆಯರಲ್ಲಿ ಒತ್ತಡಗಳಿರುವುದು ಸಹಜ. ದೀರ್ಘಕಾಲದ ಒತ್ತಡದಿಂದ ಹಾಮೋನಿನಲ್ಲಿ ಏರಿಳಿತ ಕಂಡುಬರುತ್ತದೆ.

ಅಂಡಾಶಯದಲ್ಲಿಯೇ ಸಮಸ್ಯೆ (POI): ಹಾರ್ಮೋನ್‌ಗಳ ವ್ಯತ್ಯಯದಿಂದಾಗಿ ಅಂಡಾಶಯದಲ್ಲಿಯೇ ಸಮಸ್ಯೆ ಉಂಟಾಗಿ ಅಂಡಾಣುಗಳು ಬಿಡುಗಡೆಯಾಗದೇ ‘ಅರ್ಲಿ ಮೆನೋಪಾಸ್‌‘ ಹಂತವನ್ನು ತಲುಪಬಹುದು. ಈ ಸಮಸ್ಯೆ ಇರುವವರಲ್ಲಿ ಗರ್ಭ ಧರಿಸುವುದು ಕನಸಿನ ಮಾತಾಗಬಹುದು. ಫಾಲೋಪಿಯನ್‌ ಟ್ಯೂಬ್‌ಗಳಲ್ಲಿ ನಿರ್ಬಂಧ ಇರುವುದರಿಂದ ಅಂಡಾಣುಗಳು ಸರಿಯಾಗಿ ಫಲಿತಗೊಳ್ಳಲು ಅವಕಾಶ ಸಿಗದೇ ಹೋಗಬಹುದು.

ಗರ್ಭಾಶಯದಲ್ಲಿ ಉಂಟಾಗುವ ಫೈಬ್ರಾಯ್ಡ್‌ಗಳಿಂದಲೂ ಬಂಜೆತನ ಬರಬಹುದು. ಪದೇ ಪದೇ ಗರ್ಭಪಾತಗಳು ಫಲವಂತಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.

ಪಾಲಿಪ್ಸ್‌ನಂಥ ಕ್ಯಾನ್ಸರೇತರ ಗಡ್ಡೆಗಳು ಗರ್ಭಧಾರಣೆಯನ್ನು ತಡೆಯುತ್ತವೆ. ಗರ್ಭಕ್ಕೆ ಆದ ಸೋಂಕು, ಗಾಯಗಳು, ಶಸ್ತ್ರಚಿಕಿತ್ಸೆಗಳಿಂದ ಗರ್ಭಕ್ಕೆ ಪೆಟ್ಟಾಗಿದ್ದರೆ ಗರ್ಭ ಧರಿಸುವುದು ವಿಳಂಬವಾಗಬಹುದು.

ಕುಂದಿದ ರೋಗನಿರೋಧಕ ಶಕ್ತಿ

ಈಚೆಗೆ ರೋಗನಿರೋಧಕ ಶಕ್ತಿ ಕುಂದುವ ಸಮಸ್ಯೆ ಕಾಣುತ್ತಿದ್ದೇವೆ. ಈ ಕುಂದನ್ನು ನೀಗಿಸಿಕೊಳ್ಳಲು ಸೇವಿಸುತ್ತಿರುವ ಔಷಧಿಗಳ ಅಡ್ಡಪರಿಣಾಮವೂ ಫಲವತ್ತತೆಯನ್ನು ದುರ್ಬಲಗೊಳಿಸುತ್ತದೆ. ಅಲ್ಲದೇ ಪುರುಷರು ಹಾಗೂ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಅಂಗಾಂಶಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತಿದೆ.

ಲೇಖಕಿ: ಹಿರಿಯ ಸ್ತ್ರೀರೋಗತಜ್ಞೆ. ಮಿಲನ್‌ ಫರ್ಟಿಲಿಟಿ ಸೆಂಟರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT