ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸವರುಷಕೆ, ಹರುಷಕೆ ಹತ್ತು ಅಂಶಗಳು

ಡಾ. ಸಮೀನಾ ಹಾರೂನ್‌
Published 13 ಏಪ್ರಿಲ್ 2024, 7:03 IST
Last Updated 13 ಏಪ್ರಿಲ್ 2024, 7:03 IST
ಅಕ್ಷರ ಗಾತ್ರ

‘ಮಹಿಳೆಯ ಆರೋಗ್ಯ’ ಆಕೆಯ ಬಾಹ್ಯ ದೇಹಕ್ಕಷ್ಟೇ ಸೀಮಿತವಾಗಿರದೆ, ಮಾಸಿಕವಾಗಿ, ಶಾರೀರಿಕವಾಗಿ ಘನತೆಯಿಂದ ಬದುಕುವಂತಾಗಬೇಕು. ’ಸಮಗ್ರ‘ ಮಹಿಳಾ ಆರೋಗ್ಯ ಪರಿಕಲ್ಪನೆಗೆ ಈ ಹತ್ತು ಸೂತ್ರಗಳು ಚೇತೋಹಾರಿಯಾಗಿವೆ.  

ಮೌಲ್ಯಗಳ ಅಳವಡಿಕೆ: ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಉತ್ತಮ ಮೌಲ್ಯಗಳು ಎಲ್ಲರಿಗೂ ಗೌರವ ತಂದುಕೊಡುತ್ತವೆ. ಜೊತೆಗೆ ಅವು ವ್ಯಕ್ತಿಯ ಸ್ವಾಭಿಮಾನ ಮತ್ತು ಘನತೆಯನ್ನು ಹೆಚ್ಚಿಸುತ್ತವೆ. 

ಮಹಿಳೆಯ ಆರೋಗ್ಯದ ಕಾಳಜಿ ವಹಿಸುವಾಗ, ಆಕೆಯ ಖಾಸಗಿತನದ ಅಗತ್ಯವನ್ನು ಪರಿಗಣಿಸುವುದು ಅಗತ್ಯ. ಪೂರ್ವಗ್ರಹವಿಲ್ಲದ, ಖಾಸಗಿತನ ಉಲ್ಲಂಘನೆಯ ಭಯವಿಲ್ಲದೆ, ಸೂಕ್ಷ್ಮ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸಬಹುದಾದ ವ್ಯವಸ್ಥೆ ರೂಪುಗೊಳ್ಳಬೇಕಾಗಿದೆ.

ಕುಟುಂಬ ಜೀವನ ಮತ್ತು ತಾಯ್ತನ: ಕುಟುಂಬ ಮತ್ತು ತಾಯ್ತನ ಮಹಿಳೆಯ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಉಂಟುಮಾಡುತ್ತದೆ. ಕುಟುಂಬದ ಜೊತೆಗಿನ ಭಾವನಾತ್ಮಕ ಸಂಬಂಧ ಹಾಗೂ ಬೆಂಬಲವು ಮಹಿಳೆಯ ಮಾನಸಿಕ ಮತ್ತು ಭಾವನಾತ್ಮಕ ಸ್ಥಿರತೆಗೆ ಕಾರಣವಾಗುತ್ತದೆ. ಕೌಟುಂಬಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಕ್ರಿಯಾಶೀಲ ಜೀವನ ಶೈಲಿ ರೂಪುಗೊಂಡು ಮಹಿಳೆಯ ದೈಹಿಕ ಆರೋಗ್ಯ ಸುಧಾರಣೆಯಾಗುತ್ತದೆ.

ತಾಯ್ತನದ ಸಾರ್ಥಕತೆಗೂ ಮಹಿಳೆಯ ಮಾನಸಿಕ ಆರೋಗ್ಯಕ್ಕೂ ನೇರ ಸಂಬಂಧವಿದೆ. ಇದು ಮಹಿಳೆಯ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಲ್ಲದು. ಗರ್ಭಾವಸ್ಥೆಯಲ್ಲಿ, ಮಗುವಿಗೆ ಹಾಲುಣಿಸುವ ಸಮಯದಲ್ಲಿ ಹಾರ್ಮೋನುಗಳಲ್ಲಿ ಆಗುವ ಬದಲಾವಣೆಗಳು ಮಹಿಳೆಯ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ.

ಪೋಷಕಾಂಶಗಳ ಮಹತ್ವ: ರಕ್ತಹೀನತೆ ತಡೆಯುವುದೂ ಸೇರಿದಂತೆ ಮಹಿಳೆಯ ಒಟ್ಟಾರೆ ಆರೋಗ್ಯ ಕಾಪಾಡುವಲ್ಲಿ ಸರಿಯಾದ ಪೋಷಕಾಂಶಗಳ ಸೇವನೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಸಮತೋಲಿತ ಆಹಾರ ಸೇವನೆ ಹಾರ್ಮೋನುಗಳ ಸಮತೋಲನ ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತವೆ.

ಮಾನಸಿಕ ಆರೋಗ್ಯ: ಮಹಿಳೆ ಮಾನಸಿಕ ಆರೋಗ್ಯವನ್ನು ಸುಸ್ಥಿರವಾಗಿ ಕಾಪಾಡಿಕೊಳ್ಳುವುದು ಬಹು ಮುಖ್ಯ. ಒತ್ತಡ, ಆತಂಕ, ಖಿನ್ನತೆ ಮುಂತಾಗಿ ಮಾನಸಿಕವಾಗಿ ಬರಬಹುದಾದಂಥ ಸಮಸ್ಯೆಗಳ ನಿವಾರಣೆಗೆ ತಜ್ಞರ ಸಲಹೆ ಪಡೆಯಲು ಹಿಂಜರಿಯಬಾರದು. ಮಹಿಳೆ ಪೂರ್ಣ ಪ್ರಮಾಣದಲ್ಲಿ ಆರೋಗ್ಯವಾಗಿರಬೇಕಾದರೆ ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡುವ ವಾತಾವರಣ ಇರಬೇಕು.

ನಿಯಮಿತ ವ್ಯಾಯಾಮ: ನಿಯಮಿತ ವ್ಯಾಯಾಮವು ದೈಹಿಕ ಸಾಮರ್ಥ್ಯ ಹೆಚ್ಚಿಸುವುದಷ್ಟೇ ಅಲ್ಲ, ಮಾನಸಿಕ ಆರೋಗ್ಯಕ್ಕೂ ಸಹಕಾರಿಯಾಗಿದೆ. ವ್ಯಾಯಾಮದಿಂದ ಹೃದ್ರೋಗ, ಮಧುಮೇಹ, ಕೆಲವು ಬಗೆಯ ಕ್ಯಾನ್ಸರ್‌ಗಳನ್ನೂ ದೂರವಿಡಲು ಸಾಧ್ಯ.

ಲೈಂಗಿಕ ಆರೋಗ್ಯ ಶಿಕ್ಷಣ: ಸ್ಥಳೀಯ ರೀತಿ–ರಿವಾಜು, ಸಂಪ್ರದಾಯಗಳಿಗೆ ಅನುಗುಣವಾಗಿ, ಮಹಿಳೆಯರಿಗೆ ಸಮಗ್ರ ಲೈಂಗಿಕ ಆರೋಗ್ಯ ಕುರಿತು ಶಿಕ್ಷಣ ಒದಗಿಸುವುದು ಅಗತ್ಯ. ಮದುವೆ ಮತ್ತು ಕುಟುಂಬ ಜೀವನಕ್ಕೆ ಸೂಕ್ತವಾದ ವಯಸ್ಸು ಮತ್ತಿತರ ವಿಚಾರಗಳನ್ನೂ ಈ ಶಿಕ್ಷಣ ಒಳಗೊಂಡಿರಬೇಕು.

ದೇಹರಚನೆ ವ್ಯತ್ಯಾಸ: ಪುರುಷರಿಗೆ ಹೋಲಿಸಿದರೆ ಮಹಿಳೆಯರ ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗಿರುತ್ತದೆ ಮತ್ತು ಸ್ನಾಯುಗಳ ದ್ರವ್ಯರಾಶಿ ಕಡಿಮೆ ಇರುತ್ತದೆ. 18.5ರಿಂದ 25ರ ನಡುವಿನ ಬಿಎಂಐ (ಬಾಡಿ ಮಾಸ್‌ ಇಂಡೆಕ್ಸ್‌) ಹೊಂದಿರುವ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಗಳು ಅಷ್ಟಾಗಿ ಕಾಣಿಸುವುದಿಲ್ಲ. ಆದರೆ, ಇದರ ಪ್ರಮಾಣ 30ಕ್ಕೂ ಹೆಚ್ಚಿದ್ದರೆ ಅಧಿಕ ರಕ್ತದೊತ್ತಡ, ಅನಿಯಮಿತ ಮುಟ್ಟಿನ ಚಕ್ರಗಳಂತಹ ಸಮಸ್ಯೆ ಎದುರಾಗಬಹುದು. 18.5ಕ್ಕಿಂತ ಕಡಿಮೆ ಬಿಎಂಐ ಹೊಂದಿರುವುದು ಸಹ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.

ಸಂತಾನೋತ್ಪತ್ತಿ: ಸಂತಾನೋತ್ಪತ್ತಿ ವ್ಯವಸ್ಥೆ ಮಹಿಳೆಯರಲ್ಲಿ ಒಂದು ಸಂಕೀರ್ಣ ಪ್ರಕ್ರಿಯೆ. ಬಾಲಕಿಯು ಪ್ರೌಢಾವಸ್ಥೆಗೆ ಬರುವುದರಿಂದ ಆರಂಭಿಸಿ, ಋತುಚಕ್ರ ಕೊನೆಗೊಳ್ಳುವವರೆಗೆ ಅನೇಕ ಬದಲಾವಣೆಗಳಾಗುತ್ತವೆ. ಈ ಪ್ರಯಾಣದುದ್ದಕ್ಕೂ ಅವಳ ದೇಹವು ಹಲವು ಬಾರಿ ಹಾರ್ಮೋನುಗಳ ಏರಿಳಿತಕ್ಕೆ ಒಳಗಾಗುತ್ತದೆ. ಅದು ಅವಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಸಂತಾನೋತ್ಪತ್ತಿಯ ಇಡೀ ಪ್ರಕ್ರಿಯೆಯ ಬಗ್ಗೆ ಮಹಿಳೆ ತಿಳಿವಳಿಕೆ ಹೊಂದುವುದು ಅಗತ್ಯ. ಇಂಥ ಜ್ಞಾನ ಇದ್ದಾಗ ಆರೋಗ್ಯಕರ ಲೈಂಗಿಕ ಜೀವನ ನಡೆಸುವುದು ಸಾಧ್ಯವಾಗುವುದು. ಗರ್ಭಾವಸ್ಥೆಯ ಸಮಸ್ಯೆಗಳು, ಋತುಚಕ್ರದ ಏರಿಳಿತಗಳ ಸಂದರ್ಭದಲ್ಲಿ ಮಹಿಳೆ ಧೈರ್ಯಗೆಡುವುದಿಲ್ಲ.

ಸ್ತನಗಳ ಆರೋಗ್ಯ: ವಯಸ್ಸು, ಆನುವಂಶಿಕತೆ ಮತ್ತು ಜೀವನಶೈಲಿಯ ಕಾರಣದಿಂದ ಮಹಿಳೆ ಸ್ತನಕ್ಯಾನ್ಸರ್‌ಗೆ ಒಳಗಾಗುವ ಅಪಾಯಗಳಿರುತ್ತವೆ. ಅದನ್ನು ತಡೆಯಲು ನಿಯಮಿತವಾಗಿ ಸ್ತನಗಳ ಪರೀಕ್ಷೆ ಮತ್ತು ವೈದ್ಯರ ಮೂಲಕ ತಪಾಸಣೆ, ಮ್ಯಾಮೊಗ್ರಾಮ್‌ ಮಾಡಿಸುವುದು ಅತ್ಯಗತ್ಯ. ಸ್ತನಗಳಲ್ಲಿ ನಿರಂತರ ನೋವು ಅಥವಾ ಸೋಂಕು ಕಾಣಿಸಿದರೆ ಕುಡಲೇ ವೈದ್ಯರನ್ನು ಸಂಪರ್ಕಿಸಬೇಕು. ಸ್ತನ್ಯಪಾನವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಹಾರ್ಮೋನು, ಋತುಬಂಧದ ತಿಳಿವಳಿಕೆ: ಋತುಬಂಧವು ಮಹಿಳೆಯಲ್ಲಿ ಮುಟ್ಟಿನ ನಿಲುಗಡೆಗೆ ಕಾರಣವಾಗುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಗರ್ಭಾವಸ್ಥೆ, ಹಾಲುಣಿಸುವಿಕೆ, ಹಾರ್ಮೋನುಗಳ ಏರಿಳಿತಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತವೆ. ಇದರ ತಡೆಗೆ ಹೆಚ್ಚಿನ ಪೌಷ್ಟಿಕಾಂಶದ ಆಹಾರ ಸೇವಿಸಬೇಕು.

ಒಂದು ಇಡೀ ಕುಟುಂಬದ ಸುಖ– ದುಃಖ ಆ ಕುಟುಂಬದ ಮಹಿಳೆಯ ಆರೋಗ್ಯವನ್ನು ಅವಲಂಬಿಸಿದೆ. ಇದನ್ನು ಅರಿತು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು.  

ಲೇಖಕಿ: ಸ್ತ್ರೀರೋಗತಜ್ಞೆ, ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜು ಆಸ್ಪತ್ರೆ

ಡಾ. ಸಮೀನಾ ಹಾರೂನ್‌

ಡಾ. ಸಮೀನಾ ಹಾರೂನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT