ಬಹುತೇಕ ಜನರಿಗೆ ಹೃದಯದ ಸಮಸ್ಯೆ ಎಂದಾಗ ಆಗುವಷ್ಟು ಆತಂಕ ಬೇರೆ ಅಂಗಗಳ ನೋವು ಮೂಡಿಸುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಹೃದ್ರೋಗಗಳ ವ್ಯಾಪ್ತಿ ಮತ್ತು ಸಮಾಜದಲ್ಲಿ ಅದರ ಕುರಿತಾಗಿ ಹರಡಿರುವ ಮಾಹಿತಿ ಹಾಗೂ ಮಿಥ್ಯೆಗಳು. ಅನಾರೋಗ್ಯದ ಪ್ರತಿಯೊಂದು ಚಿಹ್ನೆಗೂ ಹಲವು ಕಾರಣಗಳು ಇರುತ್ತವೆ. ಉದಾಹರಣೆಗೆ, ಹೃದಯದ ಬೇನೆಯ ವೇಳೆ ದವಡೆಯಲ್ಲೂ ನೋವು ಬರಬಹುದು ಎನ್ನುವುದು ಸತ್ಯ. ಆದರೆ ಅದು ಕೇವಲ ಹೃದಯ ಸಮಸ್ಯೆಯನ್ನು ಮಾತ್ರ ಸೂಚಿಸುತ್ತದೆ ಎಂದಲ್ಲ. ಅದಕ್ಕೆ ಕಾರಣ ಹುಳುಕುಹಲ್ಲುಗಳು, ವಸಡಿನ ಊತ, ದವಡೆಯ ಕೀಲಿನ ಸಮಸ್ಯೆಗಳು ಕೂಡ ಇರಬಹುದು. ಅಂತಹ ವೇಳೆಯಲ್ಲಿ ಇತರ ರೋಗಲಕ್ಷಣಗಳನ್ನು ಗಮನಿಸಿ, ಆದ್ಯತೆಗೆ ಅನುಸಾರವಾಗಿ ಅವುಗಳಿಗೆ ಪ್ರಾಮುಖ್ಯ ನೀಡುವುದು ವೈದ್ಯಕೀಯ ತರಬೇತಿಯ ಮಹತ್ವದ ಭಾಗ. ರೋಗಲಕ್ಷಣಗಳ ಬಗ್ಗೆ ಜನಸಾಮಾನ್ಯರಿಗೆ ಜಾಗೃತಿ ಇರಬೇಕು. ಆದರೆ ಅದನ್ನು ಆಧರಿಸಿ ಯಾರೂ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು.

ಹೃದ್ರೋಗಗಳ ಪ್ರಮುಖ ಮುನ್ಸೂಚನೆ ಎದೆನೋವು. ಎದೆಯಲ್ಲಿ ಹೃದಯದ ಜೊತೆಗೆ ಶ್ವಾಸಕೋಶಗಳು, ಶ್ವಾಸನಾಳಗಳು, ರಕ್ತನಾಳಗಳು, ನರಗಳು, ಎದೆಗೂಡಿನ ಮಾಂಸಖಂಡಗಳು, ಎಲುಬುಗಳು, ಸ್ತನದ ಭಾಗ, ಚರ್ಮ ಎಲ್ಲವೂ ಇರುತ್ತವೆ. ಇವುಗಳ ಪೈಕಿ ಯಾವುದಕ್ಕೆ ಸಮಸ್ಯೆಯಾದರೂ ಎದೆನೋವು ಕಾಣಬಹುದು. ಹೀಗಾಗಿ ಎಲ್ಲ ಎದೆನೋವುಗಳೂ ಹೃದ್ರೋಗಗಳಲ್ಲ. ಹೃದ್ರೋಗದಿಂದ ಸಂಭವಿಸುವ ಎದೆಯ ಸಮಸ್ಯೆ ನೋವಿಗಿಂತ ಹೆಚ್ಚಾಗಿ ಭಾರದ ಅನುಭವ ಅಥವಾ ಎದೆಯನ್ನು ಯಾರೋ ಒತ್ತಿದಂತೆ ಭಾಸವಾಗುತ್ತದೆ. ‘ಎದೆಯ ಮೇಲೆ ಆನೆ ನಿಂತಂತಾಯಿತು’ ಎಂದು ಕೆಲವರು ಇದನ್ನು ಬಣ್ಣಿಸುತ್ತಾರೆ. ಇಂತಹ ಭಾರದ ಭಾವನೆ ಕೆಲವು ನಿಮಿಷಗಳ ವಿಶ್ರಾಮದ ನಂತರವೂ ಹಾಗೆಯೇ ಉಳಿದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಕೆಲ ನಿಮಿಷಗಳಲ್ಲಿ ಸಂಕಟ ತಾನೇ ತಾನಾಗಿ ತಗ್ಗಿದರೆ ವೈದ್ಯರನ್ನು ಕಂಡು ವಿವರವಾಗಿ ತಪಾಸಣೆ ಮಾಡಿಸಬೇಕು. ಕಾರಣ ಯಾವುದೇ ಇದ್ದರೂ ಎದೆನೋವನ್ನು ನಿರ್ಲಕ್ಷಿಸಬಾರದು. ಈ ಪಟ್ಟಿಗೆ ಎದೆಯುರಿ, ಎಡಭುಜದ ನೋವು, ಎಡದವಡೆ ನೋವು, ಕತ್ತಿನ ಎಡಭಾಗದ ನೋವು, ಎಡಬದಿಯ ಬೆನ್ನಿನನೋವು– ಈ ಎಲ್ಲವೂ ಸೇರುತ್ತವೆ.

ತಲೆಸುತ್ತುವಿಕೆ, ಇಲ್ಲವೇ ಪ್ರಜ್ಞೆ ತಪ್ಪುವುದು ಹೃದ್ರೋಗದ ಮತ್ತೊಂದು ಮುನ್ಸೂಚನೆ. ಯಾವುದಾದರೂ ಕಾರಣಕ್ಕೆ ಹೃದಯ ದುರ್ಬಲವಾದಾಗ, ರಕ್ತವನ್ನು ಒತ್ತುವ ಅದರ ಸಾಮರ್ಥ್ಯ ನಶಿಸುತ್ತದೆ. ಆಗ ರಕ್ತದ ಒತ್ತಡ ಇಳಿದು, ಮಿದುಳಿಗೆ ತಲುಪುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ತಲೆಸುತ್ತು ಬರುತ್ತದೆ. ಹೀಗೆ ಮಿದುಳಿಗೆ ತಲುಪಬೇಕಾದ ರಕ್ತದ ಪ್ರಮಾಣ ತೀವ್ರವಾಗಿ ಇಳಿಮುಖವಾದಾಗ ಪ್ರಜ್ಞೆ ತಪ್ಪಬಹುದು. ಮಿದುಳಿನ ಕೆಲವು ಸಮಸ್ಯೆಗಳಲ್ಲೂ ಈ ಲಕ್ಷಣ ಕಾಣಬಹುದು.

ಸುಸ್ತು ಮತ್ತು ಆಯಾಸ ಎನುವುದು ಬಹಳ ಮಂದಿಯಲ್ಲಿ ಕಾಣುವ ಸಮಸ್ಯೆ. ಈ ಮುನ್ನ ಯಾವ ಕೆಲಸವನ್ನು ಸರಾಗವಾಗಿ ಮಾಡಲಾಗುತ್ತಿತ್ತೋ, ಅದನ್ನು ಮಾಡುವಾಗ ಸುಸ್ತು ಕಂಡು ಬರುವುದು ಹೃದಯ ಅಥವಾ ಶ್ವಾಸಕೋಶಗಳ ಸಮಸ್ಯೆಯ ಮುಖ್ಯ ಮುನ್ಸೂಚನೆ. ಉದಾಹರಣೆಗೆ, ಈ ಮುನ್ನ ನಾಲ್ಕು ಮಹಡಿಗಳ ಮೆಟ್ಟಿಲನ್ನು ಸರಾಗವಾಗಿ ಹತ್ತುತ್ತಿದ್ದ ವ್ಯಕ್ತಿಗೆ ಈಗ ಎರಡು ಮಹಡಿ ಹತ್ತುವಷ್ಟರಲ್ಲೇ ಏದುಸಿರು ಬಂದು ಆಯಾಸದ ಅನುಭವ ಆಗುವುದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.

ಕಾರಣವಿಲ್ಲದೆ ಅತಿಯಾಗಿ ಬೆವರುವುದು ಹೃದ್ರೋಗದ ಮತ್ತೊಂದು ಮುನ್ಸೂಚನೆ. ಹೃದಯ ದುರ್ಬಲವಾದಾಗ ಅದು ನರವ್ಯೂಹವನ್ನು ಪ್ರಚೋದಿಸುತ್ತದೆ. ಅಂತಹ ವೇಳೆ ಹೀಗೆ ಅತಿಯಾದ ಬೆವರುವಿಕೆ ಆಗುತ್ತದೆ. ಅಕಾರಣವಾಗಿ ಆಗುವ ಇಂತಹ ಬೆವರುವಿಕೆ ಕೆಲವೊಮ್ಮೆ ಹಾರ್ಮೋನುಗಳ ಏರುಪೇರಿನಿಂದಲೂ ಆಗಬಹುದಾದರೂ, ವಿನಾ ಕಾರಣ ಆಗುವ ಬೆವರುವಿಕೆಯನ್ನು ತಪಾಸಣೆ ಮಾಡುವುದು
ಸರಿಯಾದ ದಾರಿ.

ಪಾದಗಳ ಊತ ಹೃದಯಸಮಸ್ಯೆಯ ಮತ್ತೊಂದು ಮುನ್ಸೂಚನೆ. ಒಂದೇ ಸಮನೆ ‘ಪಂಪ್’ ಮಾದರಿಯಲ್ಲಿ ಕೆಲಸ ಮಾಡುವ ಹೃದಯ ಒಂದು ವೇಳೆ ದುರ್ಬಲವಾದರೆ ಪಂಪ್ನ ಸಾಮರ್ಥ್ಯ ಕ್ಷೀಣಿಸುತ್ತದೆ. ಆಗ ರಕ್ತನಾಳಗಳಲ್ಲಿ ರಕ್ತ ಹಾಗೆಯೇ ಉಳಿದುಬಿಡುತ್ತದೆ. ನಿಂತಿರುವ ವೇಳೆ ಕಾಲುಗಳಲ್ಲಿ ಜಮಾವಣೆಯಾದ ರಕ್ತವು ಪಾದಗಳನ್ನು ಊದಿಸುತ್ತದೆ. ಅಂತೆಯೇ, ಮಲಗಿರುವ ವ್ಯಕ್ತಿಯಲ್ಲಿ ಇಂತಹ ಊತ ಬೆನ್ನಿನಲ್ಲಿ ಕಾಣಬಹುದು. ಮೂತ್ರಪಿಂಡಗಳ, ರಕ್ತನಾಳಗಳ ಸಮಸ್ಯೆಯಲ್ಲೂ ಪಾದಗಳ ಊತ ಕಾಣುತ್ತದೆ. ಹೀಗಾಗಿ, ಪಾದಗಳ ಊತ ಕಂಡಾಗ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ನಾವು ಹೆಚ್ಚು ಶ್ರಮದ ಕೆಲಸ ಮಾಡಿದಾಗ, ಗಾಬರಿಯಾದಾಗ ಹೃದಯದ ಬಡಿತದ ಅನುಭವ ಆಗುವುದು ಸಹಜ. ಆದರೆ ಇಂತಹ ಸಂದರ್ಭಗಳಿಲ್ಲದೆ ಸುಮ್ಮನೆ ಕುಳಿತಿರುವ, ವಿಶ್ರಾಂತಿ ಪಡೆಯುತ್ತಿರುವ ವ್ಯಕ್ತಿಯಲ್ಲಿ ಏಕಾಏಕಿ ಹೃದಯದ ಬಡಿತದ ಅನುಭವವಾಗುವುದು ಅಸಹಜ. ಕೆಲವರಲ್ಲಿ ಈ ಬಡಿತದ ಜೊತೆಗೆ ತಲೆಸುತ್ತು, ಗಾಬರಿ, ಪ್ರಜ್ಞೆತಪ್ಪುವಿಕೆ ಕೂಡ ಆಗಬಹುದು. ಇದು ಹೃದಯಸಮಸ್ಯೆಯ ಬಹು ಮುಖ್ಯ ಮುನ್ಸೂಚನೆ. ಸಾಧ್ಯವಾದಷ್ಟು ಬೇಗ ಇದಕ್ಕೆ ಚಿಕಿತ್ಸೆ ಪಡೆಯಬೇಕು.

ಆರೋಗ್ಯದ ಲಯ ತಪ್ಪಿದ ಶರೀರ ಅನೇಕ ಸೂಚನೆಗಳನ್ನು ನೀಡುತ್ತದೆ. ಇಂತಹ ಮುನ್ಸೂಚನೆಗಳನ್ನು ಅರಿಯುವುದು ಆರೋಗ್ಯದ ದೃಷ್ಟಿಯಿಂದ ಶ್ರೇಯಸ್ಕರ. ಹೃದಯಸಂಬಂಧಿ ಎನ್ನಲಾಗುವ ಹಲವಾರು ರೋಗಲಕ್ಷಣಗಳು ಕೆಲವೊಮ್ಮೆ ಬೇರೆ ಅಂಗಗಳ ಕಾಯಿಲೆಯಿಂದಲೂ ಬರಬಹುದಾದರೂ, ಇಂತಹ ಮುನ್ಸೂಚನೆಗಳು ಕಂಡಾಗ ತಪಾಸಣೆ ಮಾಡಿಸಿ, ಕಾರಣವನ್ನು ಪತ್ತೆ ಮಾಡಿ, ಅದಕ್ಕೆ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಪ್ರತಿಯೊಂದು ಸಮಸ್ಯೆಗೂ ಸೀದಾ ಹೃದ್ರೋಗತಜ್ಞರನ್ನೇ ಕಾಣಬೇಕೆಂದಿಲ್ಲ, ಪರಿಚಯದ ಕುಟುಂಬ ವೈದ್ಯರೂ ಈ ನಿಟ್ಟಿನಲ್ಲಿ ನೆರವಾಗುತ್ತಾರೆ. ಆದರೆ ಯಾವ ಕಾರಣಕ್ಕೂ ಈ ಮುನ್ಸೂಚನೆಗಳನ್ನು ಅವಗಣಿಸಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.