ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಮ್ಟಿ ನೆಸ್ಟ್‌ ಸಿಂಡ್ರೋಮ್‌: ‘ಗೂಡು’ ಖಾಲಿಯಾದಾಗ..

Last Updated 22 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಭಾರತಿಯವರಿಗೆ ಮೊನ್ನೆ ಮೊನ್ನೆವರೆಗೂಕೈ ತುಂಬಾ ಕೆಲಸ. ಮಗನಿಗೆ ಡಬ್ಬಿ ಕಟ್ಟಬೇಕು, ಅವನನ್ನು ಟ್ಯೂಶನ್‌ಗೆ ಬಿಡಬೇಕು, ಅವನು ಮನೆಗೆ ಮರಳುವ ಹೊತ್ತಿಗೆ ಏನಾದರೂ ಸಂಜೆ ಉಪಾಹಾರಕ್ಕೆ ಸಿದ್ಧ ಮಾಡಬೇಕು. ಮಗಳಿಗೂ ಅಷ್ಟೇ. ಆಕೆ ಆಫೀಸಿಗೆ ಹೋಗುವಷ್ಟರಲ್ಲಿ ತಿಂಡಿ ಸಿದ್ಧಪಡಿಸಿ ಡಬ್ಬಿ ಕೊಡಬೇಕು. ಹೀಗೆ ದಿನವಿಡೀ ಬ್ಯುಸಿ ಇರುತ್ತಿದ್ದರು. ಆದರೆ ಈಗ ಏನೂ ಕೆಲಸವಿಲ್ಲ. ಮಗಳು ಬೇರೆ ಕೆಲಸ ಸಿಕ್ಕು ದೆಹಲಿಗೆ ಹೋದಳು. ಮಗ ಎಂಜಿನಿಯರಿಂಗ್ ಓದಲು ಚೆನ್ನೈಗೆ ಹೋದ. ಭಾರತಿಯವರಿಗೆ ಮಕ್ಕಳಿಬ್ಬರ ಭವಿಷ್ಯ ಸೆಟಲ್‌ ಆಯ್ತು ಎನ್ನುವ ಸಂತಸ ಒಂದೆಡೆಯಾದರೆ, ಮನೆಯಲ್ಲವೂ ಖಾಲಿ ಖಾಲಿ ಎನ್ನುವ ಭಾವ ಇನ್ನೊಂದೆಡೆ!

ಮನೆಯಂತೆ ಮನಸ್ಸೂ ಖಾಲಿ. ಯಾವುದಕ್ಕೂ ಉತ್ಸಾಹ, ಹುಮ್ಮಸ್ಸಿಲ್ಲ. ಮಕ್ಕಳು ಇರುವ ತನಕ ಬಿಡುವಿಲ್ಲದೇ ದುಡಿದಿದ್ದ ಜೀವಕ್ಕೀಗ ಬಿಡುವು ಸಿಕ್ಕರೂ ಏನೂ ಮಾಡಲು ಮನಸ್ಸಿಲ್ಲದ ಸ್ಥಿತಿ. ಮರಿ ಹಕ್ಕಿಗಳು ಗೂಡು ಬಿಟ್ಟು ಹೊರ ಹಾರಲು ಆರಂಭಿಸಿದ್ದಾಗ ತಾಯಿ ಹಕ್ಕಿಗೆ ಸಂತೋಷವೇ, ಆದರೆ ಖಾಲಿ ಗೂಡು ನೋಡಿದಾಗ ಮನ ಮುದುಡುತ್ತದೆ. ಹಾಗೆ, ಮಕ್ಕಳು ಸ್ವತಂತ್ರರಾಗಲಿ, ತಮ್ಮ ಕಾಲ ಮೇಲೆ ತಾವು ನಿಲ್ಲಲಿ ಎಂದು ಬಯಸುವ ಪೋಷಕರಿಗೂ, ಖಾಲಿ ಮನೆ ನೋಡಿದಾಗ ಮನಸ್ಸು ಮುದುಡುತ್ತದೆ. ಮನಸ್ಸಿನಲ್ಲಿ ಉಂಟಾಗುವ ‘ಶೂನ್ಯಭಾವ’ವನ್ನು ಎದುರಿಸುವುದು ಬಲು ಕಷ್ಟ. ಹೀಗೆ ಖಾಲಿತನದ ತೊಳಲಾಟವನ್ನು ‘ಎಮ್ಟಿ ನೆಸ್ಟ್‌ ಸಿಂಡ್ರೋಮ್‌’ ಎನ್ನುತ್ತಾರೆ. ಈ ಮಾನಸಿಕ ಕ್ಷೋಭೆಯಿಂದ ಏನೇನು ಸಮಸ್ಯೆಗಳು ಆಗುತ್ತವೆ? ಇದರ ಲಕ್ಷಣಗಳೇನು? ನಿಭಾಯಿಸುವ ಬಗೆ ಹೇಗೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ;

ಶೂನ್ಯ ಭಾವವೇ ಲಕ್ಷಣ

ಮಕ್ಕಳು ಮನೆಬಿಟ್ಟು ತಮ್ಮ ತಮ್ಮ ಕೆಲಸಗಳತ್ತ ಹೊರಟ ಮೇಲೆ ಪೋಷಕರಿಗೆ ಜೀವನವೇ ಶೂನ್ಯ ಎನ್ನಿಸುತ್ತದೆ. ಒಂದು ಕಡೆ ಭಯ, ಮತ್ತೊಂದು ಕಡೆ ದುಃಖ, ಇನ್ನೊಂದೆಡೆ ಚಿಂತೆ... ಹೀಗೆ ಮನಸ್ಸಿನಲ್ಲಿ ಏನೇನೋ ತಳಮಳ. ಇವೆಲ್ಲದರ ಜೊತೆಗೆ, ‘ಮುಂದೇನು?’ ಎಂಬ ಪ್ರಶ್ನೆ ಕಾಡುತ್ತಾ, ಭವಿಷ್ಯದ ಬಗ್ಗೆ ಭಯ ಮೂಡುತ್ತದೆ.ಇವೆಲ್ಲ ಎಮ್ಟಿ ನೆಸ್ಟ್‌ ಸಿಂಡ್ರೋಮ್‌ನ ಆರಂಭಿಕ ಲಕ್ಷಣಗಳು.

ಈ ಸಿಂಡ್ರೋಮ್‌ ಸಾಮಾನ್ಯವಾಗಿ 40 ರಿಂದ 50ರ ಆಸುಪಾಸಿನಲ್ಲಿ ಕಾಣಿಸುತ್ತದೆ. ಇದು ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಿದ್ರಾಹೀನತೆ, ವಿಷಾದ, ಏಕಾಂಗಿತನ, ದುಃಖ, ಮನಃಸ್ಥಿತಿಯಲ್ಲಿ ಏರುಪೇರು, ಗೊಂದಲ ಮೂಡುವುದು ಇವೆಲ್ಲವೂ ಸಿಂಡ್ರೋಮ್‌ನ ಕ್ಷಣಗಳೇ. ಈ ತೊಳಲಾಟ ಎಷ್ಟು ದಿನ ಮುಂದುವರಿಯುತ್ತದೆ ಎಂದು ಹೇಳಲಾಗುವುದಿಲ್ಲ. ಇದೆಲ್ಲ ಅವರವರ ಮನೋಭಾವಕ್ಕೆ ತಕ್ಕಂತೆ ಬದಲಾಗುತ್ತದೆ. ಕೆಲವರಿಗೆ ತಿಂಗಳಿನಲ್ಲೇ ಸರಿಯಾಗಬಹುದು, ಇನ್ನೂ ಕೆಲವರಿಗೆ ವರ್ಷಾನುಗಟ್ಟಲೆ ಮುಂದುವರೆಯಬಹುದು. ಆದರೆ ಈ ಸಮಸ್ಯೆಗಳು ಹಲವು ಕೌಟುಂಬಿಕ ಸಂಘರ್ಷಗಳಿಗೂ ಮೂಲವಾಗಬಹುದು.

ಎದುರಿಸುವ ಬಗೆ ಹೇಗೆ?

ಬಾಲ್ಯದಿಂದಲೂಮಕ್ಕಳನ್ನು ಪ್ರೀತಿಯಿಂದಲೇ ಬೆಳೆಸಿ. ಆದರೆ, ಅತಿಯಾದ ವ್ಯಾಮೋಹ ಬೆಳೆಸಿಕೊಳ್ಳಬೇಡಿ. ಅವರನ್ನು ಸ್ವತಂತ್ರವಾಗಿ ಬೆಳೆಯಲು ಬಿಡಿ. ಅವರ ಬೆಳವಣಿಗೆಯನ್ನು ನೋಡಿ ಸಂತಸಪಡಿ. ಆದರೆ, ಅವರಿಂದ ತುಂಬಾ ನಿರೀಕ್ಷೆಗಳನ್ನಿಟ್ಟುಕೊಳ್ಳಬೇಡಿ.

ಮಕ್ಕಳು ಮನೆಯಿಂದ ಹೊರಗೆ ಹೋಗುವ ಮೊದಲೇ ಮಾನಸಿಕರಾಗಿ ಸಿದ್ಧರಾಗಿ. ಅವರು ನಮ್ಮಿಂದ ದೂರ ಇರುತ್ತಾರೆ. ಇದೇ ಸತ್ಯ ಎಂದು ಒಪ್ಪಿಕೊಳ್ಳಿ.

ಸರಿ ಹೋಗುವಂತಹ ಸಮಸ್ಯೆಗಳಿಗೆ ಮಾತ್ರ ಪರಿಹಾರ ಹುಡುಕಲು ಪ್ರಯತ್ನಿಸಿ. ಪರಿಹಾರವಾಗದೆ ಇರುವಂತಹದ್ದನ್ನು ಹಾಗೆಯೇ ಎದುರಿಸಲು ಸಿದ್ಧರಾಗಿ.

ನಿಮ್ಮ ಸಂಗಾತಿಯ ಮೇಲೆ ಪುನಃ ಒಲವು ಮೂಡಿಸಿಕೊಳ್ಳಿ.

ಒಂಟಿ ಪೋಷಕರಿಗೆ(ಸಿಂಗಲ್ ಪೇರೆಂಟ್‌)

ಒಂಟಿ ಪೋಷಕರು ಅಥವಾ ಸಿಂಗಲ್ ಪೇರೆಂಟ್ ಆಗಿದ್ದಾಗ ಈ ಸಮಸ್ಯೆ ಎದುರಿಸುವುದು ಇನ್ನೂ ಕ್ಲಿಷ್ಟಕರವಾಗಿರುತ್ತದೆ. ಒಂಟಿ ಪೋಷಕರಲ್ಲಿ, ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಇಂಥ ಮಾನಸಿಕ ವ್ಯಾಧಿಗಳಿಂದ ಮತ್ತಷ್ಟು ಕುಗ್ಗಿ ಹೋಗುತ್ತಾರೆ. ಈ ಸಮಸ್ಯೆ ಎದುರಿಸಲು, ಪರಿಸ್ಥಿತಿ ನಿಭಾಯಿಸುವುದನ್ನು ಅಭ್ಯಾಸ ಮಾಡಿಕೊಳ್ಳಲು ಪ್ರಯತ್ನಿಸಬೇಕು.

ಪರಿಸ್ಥಿತಿ ನಿಭಾಯಿಸುವುದು ಹೇಗೆ?

ಒಂಟಿ ಅಥವಾ ಜಂಟಿ, ಯಾರೇ ಆಗಲಿ ಬದಲಾಗುತ್ತಿರುವ ‘ಪರಿಸ್ಥಿತಿ’ಯನ್ನು ಒಪ್ಪಿಕೊಳ್ಳಬೇಕು.

ಮನೆಯಿಂದ ಹೊರಡಲು ತಯಾರಾದ ಮಕ್ಕಳ ಮೇಲೆ ಅತಿಯಾಗಿ ವ್ಯಾಮೋಹ ಇರಿಸಿಕೊಳ್ಳಬೇಡಿ.

ನೀವು ಹಾಗೂ ನಿಮ್ಮ ಪ್ರೀತಿ ಇನ್ನೂ ಬೇಕು ಎನ್ನುವಂತೆ ಮಕ್ಕಳನ್ನು ಬೆಳೆಸಿ.

ಹೊಸದೊಂದು ಹವ್ಯಾಸ ರೂಢಿಸಿಕೊಳ್ಳಿ. ನಿಮ್ಮನ್ನು ನೀವು ಮರೆಯುವಷ್ಟು ಹವ್ಯಾಸದಲ್ಲಿ ತೊಡಗಿಕೊಳ್ಳಿ.

ಈವರೆಗೂ ನಿಮ್ಮ ಜೀವನವನ್ನು ನಿಮ್ಮ ಮಕ್ಕಳಿಗಾಗಿ ಮೀಸಲಿಟ್ಟಿದ್ದಿರಿ. ಇನ್ನು ಮುಂದಿನ ಜೀವನವಿರುವುದು ನಿಮಗಾಗಿ. ಅದನ್ನು ಉಪಯೋಗಿಸಿಕೊಳ್ಳಿ.

ಇಲ್ಲಿಯವರೆಗೆ ಮನೆ ಮಂದಿಯ ಬೇಕು ಬೇಡಗಳನ್ನು ಪೂರೈಸುತ್ತಾ, ನಿಮ್ಮ ಆಸೆಗಳನ್ನು ಮರೆತಿದ್ದೀರಿ. ಅವುಗಳನ್ನು ಈಡೇರಿಸಿಕೊಳ್ಳಲು ಇದು ಸುಸಮಯ.

ನಿಮ್ಮದೇ ಆದ ಜೀವನವನ್ನು ರೂಢಿಸಿಕೊಳ್ಳಿ. ಆರೋಗ್ಯದ ಬಗ್ಗೆ ಗಮನ ಕೊಡಿ.

ಇಲ್ಲಿಯವರೆಗೂ ಮರೆತಿದ್ದ ಚಿಕ್ಕಂದಿನ ಆಸೆಗಳಿಗೆ ನೀರೆರೆಯುವ ಕೆಲಸ ಮಾಡಿ.

ನಿಮ್ಮದೇ ಆದ ಒಂದು ಸ್ನೇಹಿತರ ಬಳಗವನ್ನು ಸೃಷ್ಟಿಸಿಕೊಳ್ಳಿ.

ನಿಮ್ಮ ಆಸುಪಾಸಿನಲ್ಲಿಸಾಮಾಜಿಕ ಸೇವೆ ಕೈಗೊಳ್ಳುವ ಸಾಕಷ್ಟು ಸಂಘ–ಸಂಸ್ಥೆಗಳಿರುತ್ತವೆ. ಅವುಗಳಲ್ಲಿ ನಿಮ್ಮ ಮನಸ್ಸಿಗೆ ಹೊಂದುವಂತಹ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡು ಸೇವಾಕಾರ್ಯದಲ್ಲಿ ತೊಡಗಿಕೊಳ್ಳಿ.

ಒಟ್ಟಾರೆ ಜೀವನದಲ್ಲಿ ಇದೊಂದು ಬದಲಾವಣೆಯ ಪರ್ವ ಕಾಲ (ಟ್ರಾನ್ಸಿಶನ್ ಪಿರಿಯಡ್). ಇದನ್ನು ಒಪ್ಪಿಕೊಂಡು ನಿಭಾಯಿಸುವುದನ್ನು ಅಭ್ಯಾಸ ಮಾಡಿ.

ಏಕಾಂಗಿತನ ಹೋಗಲಾಡಿಸಿದ ‘ಸೇವೆ’

ಒಂಟಿತನ ಕಾಡುತ್ತಿದ್ದ ಕಲ್ಪನಾ ಸಂತೋಷ್, ಅದನ್ನು ನಿವಾರಿಸಿಕೊಳ್ಳಲು ಬೆಂಗಳೂರಿನ ಆಶಾ ಇನ್ಫಿನೈಟ್‌ ಎಂಬ ಸಂಸ್ಥೆಯಲ್ಲಿ ಸ್ವಯಂ ಸೇವಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ; ‘ನನ್ನ ಮಗಳಿಗೆ ಮದುವೆಯಾಯಿತು. ಮಗ ವಿದೇಶಕ್ಕೆ ಹೋದ. ಮನೆಯಲ್ಲಿ ಯಾರೂ ಇಲ್ಲ. ಆ ನಂತರ ನನಗೆ ಬಹಳ ಬೇಸರವೆನಿಸುತ್ತಿತ್ತು. ಒಂಥರಾ ಏಕಾಂಗಿತನ. ಏನಾದರೂ ಮಾಡಬೇಕೆಂದು ಮನಸ್ಸು ತುಡಿಯುತ್ತಿತ್ತು. ಆದರೆ ಹೇಗೆ ಎಂದು ಗೊತ್ತಿರಲಿಲ್ಲ. ಆಶಾ ಸಂಸ್ಥೆಯ ಪರಿಚಯವಾದ ನಂತರ ನಿಜಕ್ಕೂ ಸಮಾಧಾನವಾಯಿತು. ಅಲ್ಲಿ ನಾನು ಮಕ್ಕಳಿಗೆ ಪಾಠ ಹೇಳಿ ಕೊಡುತ್ತೇನೆ. ಈ ಮೂಲಕ ಮಕ್ಕಳೊಂದಿಗೆ ಒಂದು ರೀತಿಯ ಅನುಬಂಧ ಏರ್ಪಟ್ಟಿದೆ. ಈಗಂತೂ ನನಗೆ ಬಿಡುವೇ ಇಲ್ಲ. ಹಾಗೆಯೇ ಒತ್ತಡವೂ ಇಲ್ಲ’.

ಅಸ್ತಿತ್ವ ರೂಪಿಸಿಕೊಳ್ಳಿ

ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಮದುವೆಯಾದ ಮೇಲೆ ಗಂಡ ಮತ್ತು ಮಕ್ಕಳೇ ಸರ್ವವೂ ಆಗಿಬಿಡುತ್ತಾರೆ. ಅವರ ಸೇವೆಯಲ್ಲೇ ತಮ್ಮನ್ನು ತಾವು ಮರೆತುಬಿಡುತ್ತಾರೆ. ಮಕ್ಕಳು ಬೆಳೆದು ದೊಡ್ಡವರಾಗಿ ಸ್ವತಂತ್ರರಾಗಿ ಜೀವನ ರೂಪಿಸಿಕೊಳ್ಳಲು ಮನೆಯಿಂದ ಹೊರಗೆ ಹೊರಟ ಮೇಲೆ, ‘ನಾನು ಇವರಿಗೆ ನನ್ನ ಜೀವನವನ್ನೇ ತೇಯ್ದುಬಿಟ್ಟೆ. ಇವರಿಗೆ ನನ್ನ ಬಗ್ಗೆ ಗಮನವೇ ಇಲ್ಲವಲ್ಲಾ‘ ಎಂದು ಎನ್ನಿಸುತ್ತದೆ. ಆದ್ದರಿಂದ ಮೊದಲಿನಿಂದಲೂ ತಾಯಂದಿರು ಮಕ್ಕಳ ಜೀವನ ರೂಪಿಸುತ್ತಾ, ತಮ್ಮದೇ ಆದ ಅಸ್ತಿತ್ವವನ್ನು ಕಾಯ್ದಿರಿಸಿಕೊಳ್ಳಬೇಕು. ಆಗ ಮಕ್ಕಳು ನಮ್ಮಿಂದ ದೂರವಾದರೂ, ತಮಗಾಗೇ ಇರುವ ಬದುಕನ್ನು ನಡೆಸಲು ಅನುಕೂಲವಾಗುತ್ತದೆ. ಆಗ ಇಂಥ ‘ಶೂನ್ಯ ಭಾವ‘ ಅಷ್ಟಾಗಿ ಬಾಧಿಸದು.

- ಉಷಾ ಮದನ್, ಆಪ್ತ ಸಮಾಲೋಚಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT