ಮೋಹನ್‌ನಿಗೆ ಮೂವತ್ತೆರಡರ ಹರೆಯ. ಒಮ್ಮೆ ಎಡೆಬಿಡದೆ ಏಕಾಏಕಿ ವಿಪರೀತದ ಕೆಮ್ಮು ಸತಾಯಿಸಲು ತೊಡಗಿತು. ಅಷ್ಟರಲ್ಲಿ ಹೊಸದೊಂದು ಸಮಸ್ಯೆ ಹುಟ್ಟಿಕೊಂಡಿತು. ಕೊನೆಗೂ ಕೆಮ್ಮು ಪರಿಹಾರ. ಆದರೆ ಅದರೊಂದಿಗೆ ಶುರುವಾದದ್ದು ತಳ ಹೊಟ್ಟೆಯ ಗೆಜ್ಜೆ(ತೊಡೆಸಂದಿ)ಯಲ್ಲಿ ನೋವು ಕಾಣಿಸತೊಡಗಿತು. ಅದು ವಿಪರೀತವೆನಿಸಿದಾಗ ಪರೀಕ್ಷೆಗಳಿಗೆ ಒಳಗಾದ ಮೋಹನನಿಗೆ ‘ಹರ್ನಿಯಾ’ ಸಮಸ್ಯೆಯ ಅರಿವಾಯಿತು.
‘ವೃದ್ಧಿ’ ಎಂಬ ಹೆಸರಡಿ ಆಯುರ್ವೇದೀಯರು ಗುರುತಿಸುವ ರೋಗವಿದು. ತೊಡೆಸಂದಿಯ ಎರಡೂ ಕಡೆ ಇರುವ ಸ್ನಾಯುಗಳು ಅತೀವ ಕೆಮ್ಮಿನ ದೆಸೆಯಿಂದ ಸಡಿಲಗೊಂಡವು. ಆಗ ಅಲ್ಲಿ ಕಿರುಕರುಳಿನ ಸುರುಳಿಯೊಂದು ಕ್ರಮೇಣ ಜಾರಲಾರಂಭ. ಅದು ಕೆಳಗಿಳಿದು ವೃಷಣಕೋಶ(ಫಲಕೋಶ)ದ ಒಳಗೆ ಸರಿಯುತ್ತದೆ. ಓಡಾಡಿದಾಗ ಅದು ಕೆಳಗೆ ಜಾರುವ ಸನ್ನಿವೇಶ ಉಂಟಾಗುತ್ತದೆ. ಹೆಚ್ಚು ನೋವು ಮತ್ತೆ ಮತ್ತೆ ಕಾಣಿಸಿಕೊಳ್ಳತೊಡಗುತ್ತದೆ. ಕುಳಿತ ಮತ್ತು ಮಲಗಿದ ಭಂಗಿಯಲ್ಲಿ ಅಂಶತಃ ನೋವು ಕಡಿಮೆಯಾಗುತ್ತದೆ. ಕ್ರಮೇಣ ಕರುಳಿನ ಇಳಿಕೆ ಭಾಗವು ಮತ್ತೆ ಯಥಾ ಸ್ಥಾನದೆಡೆಗೆ ಮರಳುವುದು. ಇದನ್ನು ‘ಇಂಗ್ವೈನಲ್’ ಅಥವಾ ‘ಅಂತ್ರ ವೃದ್ಧಿ’ ಎಂದು ಆಯುರ್ವೇದದಲ್ಲಿ ಕರೆಯಲಾಗಿದೆ.
ಅತಿ ಉಲ್ಬಣಿಸಿದ ಕೆಮ್ಮು ಮೋಹನನಿಗೆ ಉಂಟಾದ ಹರ್ನಿಯಾ ಕಾಯಿಲೆಯ ಮೂಲ ಕಾರಣವಾಗಿತ್ತು; ಇನ್ನೊಂದು ಕಾರಣ ಅವನ ಧಡೂತಿ ದೇಹ. ಹೆಚ್ಚು ಹೊತ್ತು ನಿಂತುಕೊಂಡೇ ಕೆಲಸ ಮಾಡುವವರು, ಭಾರವನ್ನು ಎತ್ತುವವರು – ಇಂಥವರಿಗೆ ಈ ಬಗೆಯ ಹರ್ನಿಯಾದ ಉಪಟಳ ಸಹಜ.
ಹೊಕ್ಕುಳು ದೈವಕೃತ ಛಿದ್ರ. ಅದು ಅಮ್ಮನ ದೇಹಕ್ಕೆ ನವಮಾಸ ಗರ್ಭಸ್ಥಶಿಶು ಪೋಷಕ ಹೆಬ್ಬಾಗಿಲು. ಪ್ರಸವಾನಂತರ ಮಗುವಿಗೆ ಬಾಯಿಯ ಮೂಲಕ ಪೋಷಣೆ. ಮೂಗಿನ ಮೂಲಕ ಉಸಿರಾಟ. ಈ ಛಿದ್ರ ಭದ್ರವಾಗಿ ಮುಚ್ಚಿಕೊಳ್ಳುತ್ತದೆ. ಕಾರಣಾಂತರದಿಂದ ಕೆಲವೊಮ್ಮೆ ಪಸೆಯಂತೆ ಸ್ರಾವ, ಗಾಯ, ಕೆರೆತಗಳು ಕಾಣಿಸೀತು. ಈ ರಂಧ್ರದ ಮೂಲಕ ಕರುಳುಭಾಗ ಕ್ರಮೇಣ ಹೊರಬರಲು ಯತ್ನಿಸೀತು. ಇದು ಹೊಕ್ಕುಳ ಹರ್ನಿಯಾ. ಹುಟ್ಟಿನಿಂದ ಮತ್ತು ನಾಭಿ ನಾಡಿ(ಹೊಕ್ಕುಳ ಬಳ್ಳಿ)ಯ ಅಸಮರ್ಪಕ ನಿರ್ವಹಣೆಯಿಂದ ಹೀಗಾಗುತ್ತದೆ ಎನ್ನುವ ಹೇಳಿಕೆಗಳಿವೆ. ವಂಶಪಾರಂಪರ್ಯದ ಹಣೆಪಟ್ಟಿ ಸಹ ಇದಕ್ಕಿದೆ. ಒಟ್ಟಿನಲ್ಲಿ ಹೊಟ್ಟೆಯ ಭಾಗದ ಮಾಂಸಪೇಶೀಗಳ ಮೇಲೆ ಒತ್ತಡ ಬೀಳುವಂತಹ ಕೆಲಸ ಕಾರ್ಯಗಳಿಂದ ದೂರವಿರುವವರಿಗೆ ಕ್ರಮೇಣ ಈ ಸಮಸ್ಯೆಯ ಪರಿಹಾರ ಸಾಧ್ಯ. ಯೋಗ, ಪ್ರಾಣಾಯಾಮದ ನೆರವು ಎಲ್ಲ ಬಗೆಯ ಹರ್ನಿಯಾ ತಡೆಯ ಮೂಲಮಂತ್ರ.
ಉದರಾಶ್ರಿತ ಯಂತ್ರಾಗಾರವೆಂಬ ಪೆಟ್ಟಿಗೆಯ ಮೇಲ್ತಳದ ಮುಚ್ಚಳ ವಪೆ. ಇದು ತಿಳು ಪದರದ ರಚನೆ. ಮೇಲಿನ ತಿದಿಗಳಂತಹ ಎದೆಗೂಡೊಳಗಣ ಶ್ವಾಸಕೋಶ ಮತ್ತು ಉದರದ ಪೆಟ್ಟಿಗೆ ಬೇರ್ಪಡಿಕೆಯ ಈ ಪದರಕ್ಕೆ ಕಾರಣಾಂತರಗಳಿಂದ ಧಕ್ಕೆಯಾದೀತು. ಕರುಳು ಭಾಗವೋ, ಇತರ ಅಂಗಗಳೋ ಒತ್ತಡ ಹಾಕೀತು. ಅಂತಹ ಪರೆರೂಪದ ವಪೆಯ ಮೇಲ್ಮುಖದ ದೂಡುವಿಕೆ ‘ಹಯಟಸ್ ಹರ್ನಿಯಾ’ದ ಸ್ವರೂಪ. ಉದರವೆಂಬ ಯಂತ್ರಾಗಾರದ ಶಸ್ತ್ರಚಿಕಿತ್ಸೆ ನಡೆಯಿತೇ? ಅನಂತರ ಹೊಲಿಗೆಯುಂದ ಮುಚ್ಚಲಾಗಿದೆಯೆ? ಆ ಮುಚ್ಚಿದ ಗಾಯದ ಒಳಗೆ ತೂರುವ ಕಿರುಕರುಳಿನ ಭಾಗದ ಸಮಸ್ಯೆ ಇದೆ. ಉಂಡ ಅನ್ನ ಪಚನವಾಗಲು ಅಹರ್ನಿಶಿ ದಡಬಡಾಯಿಸುತ್ತಾ ಚಲನೆ ಮಾಡುವ ಕಿರುಕರುಳಿನ ಭಾಗ ತೂರುವ ಯತ್ನ ಮಾಡಬಹುದು. ಇದು ಒಣಗಾಯದೊಳಗೆ ಇರುವ ಒಳಭಿತ್ತಿ ತೂರುವ ಹರ್ನಿಯಾ (ಇನ್ಸಿಷನ್).
ಆಯುರ್ವೇದ ಸಂಹಿತೆಗಳು ‘ವೃದ್ಧಿ’ ಎಂದು ಹರ್ನಿಯಾ ಪ್ರಕಾರಗಳನ್ನು ವಿವರಿಸುತ್ತವೆ. ‘ಮೂತ್ರಜವೃದ್ಧಿ’ ಎಂಬ ಪ್ರಕಾರವಿದೆ. ಹಾದಿ ತಪ್ಪಿದ ಮೂತ್ರಾಂಶದ ಜಿನುಗುವಿಕೆ ಕ್ರಮೇಣ ವೃಷಣಬೀಜದೆಡೆ ಸಂಗ್ರಹವಾಗುತ್ತದೆ. ಶೈಶವದಲ್ಲಿ ವೃಷಣಬೀಜಗಳು ಕೆಳಭಾಗಕ್ಕೆ ಜಾರದ ಸ್ಥಿತಿಯಲ್ಲಿ ಇರುತ್ತವೆ. ಆಗ ಆ ಶಿಶುವಿನ ಬೀಜದ ಕೋಶದಲ್ಲಿ ವಾಯುವಿನಂತಹ ಅಥವಾ ದ್ರವಭಾಗದ ತಾತ್ಕಾಲಿಕ ಸಂಗ್ರಹವಿರುತ್ತದೆ. ಮಗುವಿನ ಸಹಜ ಆರೋಗ್ಯ ಸುಧಾರಿಸುತ್ತಲೇ ಶೈಶವದ ಈ ಬಗೆಯ ವೃದ್ಧಿರೋಗ ಉಪಶಮನವಾಗುತ್ತದೆ.
ಆಧುನಿಕ ವೈದ್ಯಶಾಸ್ತ್ರದಲ್ಲಿ ಬಹುತೇಕ ಹರ್ನಿಯಾ ಚಿಕಿತ್ಸೆ ಎಂದರೆ ಶಸ್ತ್ರಚಿಕಿತ್ಸೆ ಮಾತ್ರ. ಜಾರಿರುವ ಅಂಗವನ್ನು ಈ ಕ್ರಿಯೆಯ ಮರುಸ್ಥಾಪಿಸುವರು. ಅನಂತರ ಮತ್ತೆ ಜಾರದಂತೆ ಮೆಷ್ (ಬಲೆ) ಅನ್ನು ಇರಿಸುವರು. ಆದರೆ ದಢೂತಿ ಕಾಯದವರಿಗೆ ಮತ್ತು ಡೊಳ್ಳು ಹೊಟ್ಟೆಯವರಿಗೆ ಮೆಷ್‌ಪದರ ಜಾರುವ ಸಂಭವ ಇರುತ್ತದೆ. ಪದರ ಜಾರಿದಾಗ ಮತ್ತೆ ಶಸ್ತರಚಿಕಿತ್ಸೆ. ಹೀಗಾಗಿ ಸಮಸ್ಯೆಗಳ ಸರಮಾಲೆ ಸೃಷ್ಟಿಸುವ ಹರ್ನಿಯಾದಿಂದ ದೂರ ಉಳಿಯಲು ನಮ್ಮ ಜೀವನಶೈಲಿಯಲ್ಲಿ ವ್ಯತ್ಯಾಸಗಳನ್ನು ಮಾಡಿಕೊಳ್ಳಬೇಕು.
ಮಲ, ಮೂತ್ರ ಮತ್ತು ಅಪಾನವಾಯುವನ್ನು ಯಾವುದೇ ಕಾರಣಕ್ಕೂ ನಿರ್ಬಂಧಿಸಬಾರದು. ಹಾಗೆಯೇ ಬಾರದ ವೇಗವನ್ನು ತಿಣುಕಾಡುತ್ತಾ ಬರಿಸಿಕೊಳ್ಳಬಾರದು. ಇವೆರಡೂ ಹರ್ನಿಯಾ ಮಾತ್ರವಲ್ಲ, ಅನೇಕ ಕಾಯಿಲೆಗಳ ಹೆದ್ದಾರಿ. ಸದಾ ನಿಂತು ಕೆಲಸ ಮಾಡುವವರು, ಹೆಚ್ಚೆಚ್ಚು ಭಾರವನ್ನು ಎತ್ತುವವವರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಕೊಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.