ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕ್ಕಳಿಕೆ ಉಂಟಾಗಲು ಕಾರಣಗಳೇನು? ಚಿಕಿತ್ಸೆ ಹೇಗೆ?

Last Updated 22 ಆಗಸ್ಟ್ 2022, 21:15 IST
ಅಕ್ಷರ ಗಾತ್ರ

ಬಿಕ್ಕಳಿಕೆಯು ನಮಗೆ ಸಾಕಷ್ಟು ಉಪದ್ರವ ಕೊಡದೇ ಇರಬಹುದು. ಆದರೆ ಕೆಲವೊಮ್ಮೆ ದೀರ್ಘಾವಧಿಯವರೆಗೆ ಕಾಡುತ್ತಾ ತೊಂದರೆ ಕೊಡುವ ಸಂದರ್ಭಗಳೂ ಬರಬಹುದು.

ಬಿಕ್ಕಳಿಕೆ – ಎಂದರೆ, ಬಿಕ್ಕಿ ಬಿಕ್ಕಿ ಅಳುವಾಗ ಉಸಿರನ್ನು ಹಿಡಿಯುವುದು ಎಂದು ಲ್ಯಾಟಿನ್‍ ಭಾಷೆಯಲ್ಲಿ ಅರ್ಥ ಕೊಡುತ್ತದೆ. ಬಿಕ್ಕಳಿಕೆಯು (ಹಿಕಪ್ಸ್) ವಪೆಯ ಸ್ನಾಯುಗಳು ಒಮ್ಮೆಗೆ ಸಂಕುಚಿತಗೊಳ್ಳುವುದರಿಂದ ಉಂಟಾಗುವ ಪ್ರಕ್ರಿಯೆ. ಅದೇ ಸಮಯದಲ್ಲಿ ಧ್ವನಿನಾಳದ ಮುಚ್ಚಳವೂ (ಎಪಿಗ್ಲಾಟಿಸ್) ಮುಚ್ಚಿಹೋಗುವುದರಿಂದ ‘ಹಿಕ್’ ಎಂಬ ಶಬ್ದ ಉಂಟಾಗುವುದೇ ಬಿಕ್ಕಳಿಕೆ.

ಇದಕ್ಕೂ ಮೊದಲು ವಪೆ ಎಂದರೇನು; ಅದು ಉಸಿರಾಟ ಪ್ರಕ್ರಿಯೆಯಲ್ಲಿ ಹೇಗೆ ಪಾಲ್ಗೊಳ್ಳುತ್ತದೆ – ಎಂಬುದನ್ನು ಅರಿತರೆ ಬಿಕ್ಕಳಿಕೆಯು ಹೇಗಾಗುತ್ತದೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಶರೀರದ ಎದೆಯ ಗೂಡು (ಉರಪ್ರದೇಶ) ಮತ್ತು ಹೊಟ್ಟೆಯ ಭಾಗ (ಉದರಕುಳಿ) – ಇವನ್ನು ಪ್ರತ್ಯೇಕಿಸುವ ಸ್ನಾಯು ತಡಿಕೆಯೇ ವಪೆ (ಡಯಾಫ್ರಾಮ್). ಸಹಜ ಉಸಿರಾಟದಲ್ಲಿ ನಾವು ಸೇವಿಸುವ ಗಾಳಿ ಮೂಗಿನಿಂದ ಮುಂದಕ್ಕೆ ಸಾಗಿ ಗಂಟಲು ಮತ್ತು ಮುಖ್ಯ ಶ್ವಾಸನಾಳದ ಮಾರ್ಗವಾಗಿ ಅದರ ಶಾಖೆಗಳಲ್ಲಿ ಹಾಗೂ ಕವಾಟಗಳಲ್ಲಿ ಹರಿದಾಡಿ ಶ್ವಾಸಕೋಶದ ಗಾಳಿಗೂಡಿಗೆ ಹೋಗುತ್ತದೆ.

ಗಂಟಲಿನಿಂದ ವಾಯುನಾಳ ಹಾಗೂ ಅನ್ನನಾಳ ಆರಂಭವಾಗಿರುತ್ತದೆ. ಇದೊಂದು ಅತಿ ಸೂಕ್ಷ್ಮ ಪ್ರದೇಶ. ಅನ್ನನಾಳದ ಒಳಗೆ ಹೋಗಬೇಕಾದ ಆಹಾರ–ಪಾನೀಯಗಳು ಶ್ವಾಸನಾಳವನ್ನು ಪ್ರವೇಶಿಸುವ ಸಾಧ್ಯತೆಯನ್ನು ಅಥವಾ ಅವಘಡವನ್ನು ತಡೆಗಟ್ಟುವಂತೆ ಧ್ವನಿನಾಳವನ್ನು ಮುಚ್ಚುವ ಅಂಗವೇ ಎಪಿಗ್ಲಾಟಿಸ್. ಇದು ನಾವು ಆಹಾರ ಸೇವಿಸುವಾಗ ಮುಚ್ಚಿರುತ್ತದೆ; ಕೆಲವೊಮ್ಮೆ ತೆರೆದಿರುತ್ತದೆ. (ಆಹಾರವನ್ನು ಸೇವಿಸುವಾಗ ಕೆಲವೊಮ್ಮೆ ಹೀಗೆ ಮುಚ್ಚದಿದ್ದರೆ ಆಹಾರಪದಾರ್ಥವು ಶ್ವಾಸನಾಳವನ್ನು ಪ್ರವೇಶಿಸುವುದನ್ನೇ ತೆರಗಿ ಹೋಗುವುದು/ನೆತ್ತಿಗೇರುವುದು ಎನ್ನುತ್ತೇವೆ. ಈ ಸಂದರ್ಭದಲ್ಲಿ ಅತಿಯಾದ ಕೆಮ್ಮು ಉಂಟಾಗಬಹುದು.)

ಸಹಜ ಉಸಿರಾಟ ಕ್ರಿಯೆಯಂತೂ ನಿರಂತರವಾಗಿ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಅದು ಹೇಗೆಂದರೆ, ವಪೆಯ ಸ್ನಾಯುಗಳು ಸಂಕುಚಿಸಿದಾಗ ವಪೆಯು ಚಪ್ಪಟೆ ಆಕಾರವಾಗುತ್ತದೆ. ಇದರಿಂದ ಎದೆಯಗೂಡು ವಿಸ್ತಾರವಾಗುತ್ತದೆ. ಆಗ ಪಕ್ಕೆಲುಬುಗಳ ಸ್ನಾಯುಗಳೂ ಸಂಕುಚನಗೊಂಡು, ಎಲುಬಿನ ಅಂಚುಗಳು ಮೇಲಕ್ಕೆ ಹೊರಮುಖವಾಗಿ ಎತ್ತುತ್ತವೆ. ಆ ಮೂಲಕ ಎದೆಯ ಗೂಡು ಇನ್ನಷ್ಟು ವಿಶಾಲವಾಗುತ್ತದೆ. ಆಗ ಎದೆಯ ಗೂಡಿನಲ್ಲಿ ಸ್ಥಳಾವಕಾಶ ಹೆಚ್ಚಿ ಪುಪ್ಪುಸಗಳು (ಶ್ವಾಸಕೋಶ) ಹಿಗ್ಗಿ ವಿಸ್ತಾರವಾಗುತ್ತವೆ. ನಿರ್ವಾತವನ್ನು ತುಂಬಲು ಹೊರಗಿನ ಗಾಳಿ ಮೂಗಿನ ಮೂಲಕ ನುಗ್ಗುವುದೇ ಉಚ್ಛ್ವಾಸ. ವಪೆ ಮತ್ತು ಅದರ ಸ್ನಾಯುಗಳು ಸಡಿಲವಾಗಿ ಎದೆಯ ಗೂಡಿನ ವಿಸ್ತಾರ ಕಡಿಮೆಮಾಡಿ ಪುಪ್ಪಸವು ಗಾಳಿಯನ್ನು ಹೊರಸಾಗಿಸುವುದೇ ನಿಃಶ್ವಾಸ. ಉಚ್ಛ್ವಾಸದಲ್ಲಿ ಒಳ ಬರುವ ಗಾಳಿಯಿಂದ ರಕ್ತಕ್ಕೆ ಆಮ್ಲಜನಕ ದೊರೆತರೆ, ನಿಃಶ್ವಾಸದಲ್ಲಿ ರಕ್ತದಿಂದ ಇಂಗಾಲದ ಡೈ ಆಕ್ಸೈಡ್ ಮತ್ತು ಅಶುದ್ಧ ವಸ್ತುಗಳು ಹೊರಹಾಕಲ್ಪಡುತ್ತವೆ. ಯಾವುದೇ ಕಾರಣದಿಂದ ವಪೆಯ ಸ್ನಾಯುಗಳು ಪ್ರಚೋದಿಸಲ್ಪಟ್ಟು, ಸಂಕುಚಿತಗೊಂಡು ಅನ್ನನಾಳದ ಸ್ನಾಯುಗಳು ಸಡಿಲವಾಗಿ ಧ್ವನಿಪೆಟ್ಟಿಗೆಯ ಮುಚ್ಚಳ ಮುಚ್ಚಲ್ಪಡುತ್ತದೆ. ಆಗ ಗಾಳಿ ಬಾಯಿಯಿಂದ ಹೊರಹೋಗುತ್ತದೆ. ಇದೇ ‘ಹಿಕ್’ ಶಬ್ದ ಉಂಟುಮಾಡುವ ಬಿಕ್ಕಳಿಕೆ. ಇದು ಒಂದೆರಡು ಬಾರಿ ಬಂದು ನಿಂತುಹೋಗಬಹುದು. ಅಪರೂಪಕ್ಕೆ ಆತಂಕ–ಸುಸ್ತಿಗೆ ಕಾರಣವಾಗಬಹುದು. ಇದು ದೀರ್ಘಾವಧಿ ಕಾಡುವುದು ಪುರುಷರಲ್ಲಿ ಹೆಚ್ಚು. ಇದರಿಂದ ಕೆಲವೊಮ್ಮೆ ಭುಜ, ಹೊಟ್ಟೆ, ಗಂಟಲು – ಇಡೀ ಶರೀರ ಅಲ್ಲಾಡಿದ ಹಾಗೆ ಆಗಬಹುದು. ಕೆಲವೊಮ್ಮೆ ನೋವಿನ ಅನುಭವವೂ ಆಗಬಹುದು. ಉಸಿರಾಟದಲ್ಲೂ ಸ್ವಲ್ಪ ಏರುಪೇರಾಗಬಹುದು.

ಬಿಕ್ಕಳಿಕೆ ಉಂಟಾಗಲು ಕಾರಣಗಳೇನು?
ಅವಸರದಿಂದ, ಗಬಗಬನೆ ಆಹಾರ ಸೇವಿಸುವುದರಿಂದ, ಕ್ಯಾಂಡಿ–ಚ್ಯೂಯಿಂಗಮ್‌ಗಳನ್ನು ಸೇವಿಸುವಾಗ, ಹೆಚ್ಚು ಗಾಳಿಯನ್ನು ಒಳಗೆ ತೆಗೆದುಕೊಳ್ಳುವುದರಿಂದ, ಕಾರ್ಬೋನೇಟೆಡ್ ಪಾನೀಯಗಳನ್ನು ಸೇವಿಸುವುದರಿಂದ, ಅತಿಯಾದ ಹುಳಿ–ಖಾರ– ಜಂಕ್‍ ಆಹಾರ ಪದಾರ್ಥಗಳ ಸೇವನೆಯಿಂದ, ತಕ್ಷಣ ಆಗುವ ತಾಪಮಾನದ ಬದಲಾವಣೆಯಿಂದ, ಓಪಿಯೇಟ್ ಇನ್ನಿತರ ಔಷಧಗಳ ಸೇವನೆಯಿಂದ, ದೀರ್ಘಾವಧಿವರೆಗೆ ಗಹಗಹಿಸಿ ನಗುವುದರಿಂದ, ಡಯಾಪ್ರಮೇಟಿಕ್ ಹರ್ನಿಯ ಇದ್ದಾಗ, ಹೊಟ್ಟೆಯ ಶಸ್ತ್ರಚಿಕಿತ್ಸೆ ಆದಾಗ, ಮಿದುಳಿನ ಸೋಂಕು, ಮಿದುಳಿನಲ್ಲಿ ಗಡ್ಡೆ, ಅಪಾಯಕಾರಿ ಹೊಗೆಸೇವನೆ, ಕಿಡ್ನಿಸಮಸ್ಯೆ ಇದ್ದಾಗ – ಹೀಗೆ ಹಲವು ಕಾರಣಗಳಿಂದ ಬಿಕ್ಕಳಿಕೆ ಉಂಟಾಗಬಹುದು. ಮಾನಸಿಕ ಒತ್ತಡದಿಂದಲೂ, ಅತಿ ಅಪರೂಪಕ್ಕೆ ಗಂಭೀರ ವೈದ್ಯಕೀಯ ಸಮಸ್ಯೆಗಳಲ್ಲಿಯೂ ಬಿಕ್ಕಳಿಕೆ ಉಂಟಾಗಬಹುದು.

ಚಿಕಿತ್ಸೆ ಹೇಗೆ? :
ಹೆಚ್ಚಿನ ಸಂದರ್ಭಗಳಲ್ಲಿ ಬಿಕ್ಕಳಿಕೆ ಕಾಯಿಲೆಯಾಗಿ ಕಾಡದೇ ಇದ್ದರೂ, ಕೆಲವೊಮ್ಮೆ ಚಿಕಿತ್ಸೆ ಅವಶ್ಯಕವಾಗಬಹುದು. ಬಿಕ್ಕಳಿಕೆಯನ್ನು ತಡೆಯಲು ಕೆಲವು ಮನೆಮದ್ದುಗಳು ಬಳಕೆಯಲ್ಲಿವೆ. ನಿಂಬೆಹಣ್ಣನ್ನು ಕಡಿದು ತಿನ್ನುವುದು, ತಣ್ಣೀರು/ಉಗುರುಬೆಚ್ಚಗಿನ ನೀರನ್ನು ನಿಧಾನವಾಗಿ ಕುಡಿಯುವುದು, ನಾಲಿಗೆಯನ್ನು ಗಟ್ಟಿಯಾಗಿ ಎಳೆಯುವುದು, ನೀರಿನಿಂದ ಗಾರ್ಗಲ್ ಮಾಡುವುದು, ಎರಡು ಚಿಟಿಕೆ ಓಮದ ಕಾಳು ಮತ್ತು ಅರ್ಧ ಚಮಚ ಸಕ್ಕರೆಯನ್ನು ಬಾಯಲ್ಲಿ ಹಾಕಿಕೊಂಡು ನಿಧಾನವಾಗಿ ಅಗೆಯುವುದು, ಶುಂಠಿಚೂರನ್ನು ನಿಧಾನವಾಗಿ ಅಗಿಯುವುದು, ಗ್ಲಾಸಿನಲ್ಲಿರುವ ನೀರನ್ನು ವಿರುದ್ಧ ದಿಕ್ಕಿನಿಂದ ನಿಧಾನವಾಗಿ ಬಗ್ಗಿ ಕುಡಿಯುವುದು, ಚಮಚ ನೆಲ್ಲಿಕಾಯಿಪುಡಿಯನ್ನು ಒಂದು ಚಮಚ ಜೇನುತುಪ್ಪದೊಡನೆ ಸೇವಿಸುವುದು – ಇಂಥವು ಬಳಕೆಯಲ್ಲಿವೆ.

ಕೆಲವು ಸೆಕೆಂಡುಗಳ ಕಾಲ ಉಸಿರುಗಟ್ಟಿ ಹಿಡಿಯುವುದು, ಜೊತೆಗೆ ಎರಡು ಕಿವಿಗಳನ್ನ ಬೆರಳಿಂದ ಮುಚ್ಚಿಕೊಳ್ಳುವುದು – ಹೀಗೆ ಮಾಡುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ. ಪದೇ ಪದೇ ಬಿಕ್ಕಳಿಕೆ ಬರುವವರು ನಿಯಮಿತವಾಗಿ ನಾಡಿಶೋಧನ ಹಾಗೂ ಭ್ರಮರಿ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿದರೆ ಪರಿಹಾರ ಸಿಗುತ್ತದೆ. ಇಂತಹ ಲಘು ಉಪಚಾರಗಳಿಗೆ ಬಿಕ್ಕಳಿಕೆ ಶಮನವಾಗದಿದ್ದರೆ ವೈದ್ಯರ ಸಲಹೆಯಂತೆ ಔಷಧಗಳನ್ನು ತೆಗೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT