ಗುರುವಾರ , ಮೇ 26, 2022
26 °C

ಚಳಿಗಾಲದಲ್ಲಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹೇಗೆ?

ಡಾ. ಮಯೂರಿ ಯೆವೊಲೆ Updated:

ಅಕ್ಷರ ಗಾತ್ರ : | |

ಚಳಿಗಾಲವು ಈಗಾಗಲೇ ಕಾಲಿಟ್ಟಿದೆ. ದಿನದ ತಾಪಮಾನ ಕುಗ್ಗುತ್ತಿರುವಂತೆ ಮಕ್ಕಳಿಗೆ ಬೆಚ್ಚಗಿನ ಉಡುಪು ತೊಡಿಸುವುದರಿಂದಷ್ಟೇ ಚಳಿಗಾಲದಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ. ಇನ್ನೊಂದು ಸನ್ನಿವೇಶವೂ ಈಗ ನಮ್ಮಲ್ಲಿ ಭಯ ಮೂಡಿಸಿದೆ. ಅಲ್ಲಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಶಾಲೆಗಳು ಪುನರಾರಂಭಗೊಂಡಿವೆ. ನಮ್ಮ ಚಿಕ್ಕ ಮಕ್ಕಳಿಗೆ ರೋಗನಿರೋಧಕ ಶಕ್ತಿ ನೀಡಲು ಇದುವರೆಗೆ ಯಾವುದೇ ಲಸಿಕೆಗಳನ್ನು ಅಭಿವೃದ್ಧಿಪಡಿಸಿಲ್ಲ. ಇವು ಕೆಲಮಟ್ಟಿಗೆ ಆತಂಕ ಮೂಡಿಸಿವೆ.

ಚಳಿಗಾಲದಲ್ಲಿ ಮೂಗು ಸೋರುವುದು, ಜ್ವರ ಮತ್ತು ಕೆಮ್ಮು ಎಂದಿಗೂ ಮುಗಿಯದ ಚಕ್ರದಂತೆ ಕಾಣುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಬೆಳೆಸುವುದು ಬಹಳ ಮುಖ್ಯವಾಗಿರುತ್ತದೆ. ತಮ್ಮ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಅದರಲ್ಲೂ ವಿಶೇಷವಾಗಿ ಈ ಜ್ವರದ ದಿನಗಳಲ್ಲಿ ಹೇಗೆ ಹೆಚ್ಚಿಸುವುದು ಎನ್ನುವುದು ತಾಯಂದಿರ ಪ್ರಮುಖ ಕಾಳಜಿ ಆಗಿರುತ್ತದೆ.

ಆರೋಗ್ಯಕರ ಆಹಾರ ಪದ್ಧತಿಗಳನ್ನು ಪಾಲಿಸುವುದು, ಸ್ವಲ್ಪಮಟ್ಟಿಗಿನ ವ್ಯಾಯಾಮ ಮಾಡುವುದು ಮತ್ತು ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವಂತಹ ಸರಳ ಕ್ರಮಗಳು ನಿಮ್ಮ ಮಗು ಸೋಂಕಿಗೆ ಒಳಗಾಗದಂತೆ ಮತ್ತು ಸೋಂಕು ಹರಡದಂತೆ ರಕ್ಷಿಸುತ್ತವೆ.

ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತಾಯಂದಿರಿಗೆ ನೆರವಾಗುವ ಕೆಲವು ಸಲಹೆಗಳನ್ನು ಇಲ್ಲಿ ನಾನು ಹಂಚಿಕೊಳ್ಳಲು ಬಯಸುತ್ತೇನೆ.

1) ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿ ಬಳಸಿ
ತರಕಾರಿಗಳು ಆರೋಗ್ಯಕರ ಪ್ರಮಾಣದಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುತ್ತವೆ. ಇವು ಸೋಂಕಿನ ವಿರುದ್ಧ ಹೋರಾಡಲು ಮತ್ತು ಉರಿಯೂತದ ಪ್ರತಿಕ್ರಿಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಣ್ಣುಗಳು ಸಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಮಕ್ಕಳಿಗೆ ತರಕಾರಿಗಳನ್ನು ತಿನ್ನಿಸುವುದು ಸಾಮಾನ್ಯವಾಗಿ ತಾಯಂದಿರರಿಗೆ ಕಷ್ಟದ ಕೆಲಸವಾಗಿರುತ್ತದೆ, ಆದರೆ ದಿನಬಳಕೆಯ ತರಕಾರಿಗಳಾದ ಪಾಲಕ್, ಕೋಸುಗಡ್ಡೆ, ಶುಂಠಿ, ಬೆಳ್ಳುಳ್ಳಿ ಮತ್ತು ಈರುಳ್ಳಿಗಳನ್ನು ವೈವಿಧ್ಯಮಯ ಭಕ್ಷö್ಯಗಳಲ್ಲಿ ಬಳಸುವುದರಿಂದ ಅವುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಚಳಿಗಾಲದಲ್ಲಿ ಸಾಮಾನ್ಯವಾಗಿ ಸಿಗುವ ಹಣ್ಣುಗಳಾದ ಕಿತ್ತಳೆ, ಮೋಸಂಬಿ ಸ್ಟಾçಬೆರಿ, ಕಿವಿ ಹಣ್ಣುಗಳಲ್ಲಿ ವಿಟಮಿನ್ ‘ಸಿ’ ಸಮೃದ್ಧವಾಗಿರುತ್ತದೆ.. ಅವು ಸಾಮಾನ್ಯ ಜ್ವರಕ್ಕೆ ಚಿಕಿತ್ಸೆ ನೀಡಲು ಮತ್ತು ಕೋವಿಡ್-19 ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ನಿರ್ಣಾಯಕವಾಗಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

2) ಹಾಲಿನ ಉತ್ಪನ್ನಗಳು ಮತ್ತು ವಿವಿಧ ಬಗೆಯ ಕಾಳುಗಳು
ಮಕ್ಕಳ ಬೆಳೆಯುವ ವಯಸ್ಸಿನಲ್ಲಿ ಎಲ್ಲಾ ಪೋಷಕಾಂಶಗಳು ಅಗತ್ಯವಾಗಿರುತ್ತವೆ. ವಿಶೇಷವಾಗಿ ಚಳಿಗಾಲದಲ್ಲಿ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಿದರೆ ಉತ್ತಮ.

ಕೋಳಿ ಮತ್ತು ಹಾಲಿನ ಉತ್ಪನ್ನಗಳಾದ ಮೊಟ್ಟೆ, ಚೀಸ್ ಮತ್ತು ತುಪ್ಪವು ಶೀತದಿಂದ ರಕ್ಷಣೆ ಪಡೆಯಲು ಬಹಳ ಮುಖ್ಯವಾಗಿರುತ್ತವೆ. ಇವುಗಳು ದೇಹಕ್ಕೆ ಅಗತ್ಯವಾದ ಉಷ್ಣತೆ ಜೊತೆಗೆ ಆಮಿನೊ ಆಸಿಡ್‌ಗಳನ್ನೂ ಒದಗಿಸುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇವು ತುಂಬ ಅವಶ್ಯಕವಾಗಿರುತ್ತವೆ.

ಚಳಿಗಾಲದಲ್ಲಿ ಬೆಚ್ಚಗಿರುವ ಮತ್ತು ಚೈತನ್ಯವನ್ನು ನೀಡುವ ಅತ್ಯುತ್ತಮ ಆಹಾರಗಳಲ್ಲಿ ಕಡಲೆಬೀಜ, ಬಾದಾಮಿಯಂತಹ ವಿವಿಧ ಬಗೆಯ ಕಾಳುಗಳು ಒಂದಾಗಿವೆ. ಇವು ಚಯಾಪಚಯ ಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತವೆ.

3) ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಬೆಲ್ಲ ಮತ್ತು ಮಸಾಲೆಗಳಂತಹ ಆಹಾರ ಪದಾರ್ಥಗಳು ಭಕ್ಷಗಳಿಗೆ ಪರಿಮಳವನ್ನು ಸೇರಿಸಲು ಮಾತ್ರವಲ್ಲದೆ ಪ್ರತಿಯೊಬ್ಬರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲೂ ಸಹಾಯ ಮಾಡುತ್ತವೆ.

ಬೆಲ್ಲವು ಕೆಮ್ಮು, ಶೀತಕ್ಕೆ ಉತ್ತಮ ಪರಿಹಾರವಾಗಿದೆ. ಸುಲಭವಾಗಿ ದೊರೆಯುವ ಬೆಲ್ಲವನ್ನು ಅನೇಕ ಆಹಾರ ಪದಾರ್ಥಗಳಿಗೆ ಸೇರಿಸಬಹುದು. ಬೆಲ್ಲದಲ್ಲಿ ಕಬ್ಬಿಣಾಂಶವು ಸಮೃದ್ಧವಾಗಿರುವ ಕಾರಣಕ್ಕೆ ಇದು ಸಕ್ಕರೆಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ.

ಮನೆಗಳಲ್ಲಿ ಶತಮಾನಗಳಿಂದ ಮಸಾಲೆ ಪದಾರ್ಥಗಳನ್ನು ಬಳಸಲಾಗುತ್ತಿದೆ. ಹೊಟ್ಟೆ ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಪ್ರಯೋಜನಗಳಿಗೆ ಅವುಗಳು ಹೆಸರುವಾಸಿಯಾಗಿವೆ. ಅರಿಸಿನ, ಲವಂಗ, ದಾಲ್ಚಿನ್ನಿ ಮತ್ತು ಕರಿಮೆಣಸು ಮುಂತಾದ ಮಸಾಲೆಗಳು ಕೆಮ್ಮು ಮತ್ತು ಶೀತಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತವೆ.

4) ಒಂದು ಕುಟುಂಬವಾಗಿ ನೀವು ಹೇಗೆ ಪರಸ್ಪರ ಸಹಾಯ ಮಾಡಬಹುದು?

ಕುಟುಂಬದ ಸದಸ್ಯರೆಲ್ಲ ಜೊತೆಯಾಗಿ ವ್ಯಾಯಾಮ ಮಾಡುವುದು. ವ್ಯಾಯಾಮವು ವಯಸ್ಕರಲ್ಲಿ ಮಾತ್ರವಲ್ಲದೆ ಅಂತಹ ನಿಯಮಿತ ಚಟುವಟಿಕೆಗಳು ಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. 30 ನಿಮಿಷಗಳ ಕಾಲ ಮೋಜಿನ ಕೌಟುಂಬಿಕ ಚಟುವಟಿಕೆಗಳೂ ಕುಟುಂಬದ ಸದಸ್ಯರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಕಡಿಮೆ ಪ್ರಮಾಣದಲ್ಲಿನ ನಿದ್ದೆಯು ನಮ್ಮ ದೇಹದಲ್ಲಿ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುವ ಜೀವಕೋಶಗಳನ್ನು ಕಡಿಮೆ ಮಾಡುವ ಮೂಲಕ ಅನಾರೋಗ್ಯಕ್ಕೆ ಹೆಚ್ಚು ಒಳಗಾಗುವಂತೆ ಮಾಡುತ್ತವೆ.

5) ಅಗತ್ಯ ಲಸಿಕೆ ಪಡೆದುಕೊಳ್ಳಿ ಮತ್ತು ವೈಯಕ್ತಿಕ ಸ್ವಚ್ಛತೆ ಕಾಯ್ದುಕೊಳ್ಳಿ
ನಿಮ್ಮ ವೈದ್ಯರು ಅಥವಾ ಮಕ್ಕಳ ವೈದ್ಯರ ಸಲಹೆಯಂತೆ ವೈಯಕ್ತಿಕವಾಗಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ಸೂಕ್ತವಾದ ವಯಸ್ಸಿಗೆ ನಿಮ್ಮ ಮಕ್ಕಳಿಗೆ ಲಸಿಕೆಯನ್ನು ಹಾಕಿಸಿ. ಋತುಮಾನಕ್ಕೆ ತಕ್ಕಂತೆ ಲಭ್ಯ ಇರುವ ಲಸಿಕೆಗಳನ್ನು ನಿಮ್ಮ ಮಗುವಿಗೆ ಹಾಕಿಸಲು ಮರೆಯಬೇಡಿ.

ಕೋವಿಡ್ ಕಾರಣಕ್ಕೆ ಜಾರಿಗೊಳಿಸಿದ್ದ ಲಾಕ್‌ಡೌನ್‌ನ ನಂತರ ವಾಡಿಕೆಯ ಬದುಕು ಮತ್ತೆ ಪುನರಾರಂಭಗೊAಡಿದೆ. ಸಾಮಾಜಿಕ ಚಟುವಟಿಕೆಗಳು, ಪರಸ್ಪರ ಒಡನಾಟಕ್ಕೆ ಚಾಲನೆ ಸಿಕ್ಕಿದೆ. ಇಂತಹ ಸಂದರ್ಭದಲ್ಲಿ ಜ್ವರ ಪ್ರಕರಣಗಳಲ್ಲಿ ಹೆಚ್ಚಳವಾಗಿರುವುದು ವೈದ್ಯ ಸಮುದಾಯದ ಅನುಭವಕ್ಕೆ ಬಂದಿದೆ. ಕೋವಿಡ್ ವಿರುದ್ಧವೂ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಯಾರೊಬ್ಬರೂ ಮರೆಯಬಾರದು. ಮುಖಗವಸು ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಕೈಗಳ ನೈರ್ಮಲ್ಯ ಕಾಯ್ದುಕೊಳ್ಳುವುದು ಸೇರಿದಂತೆ ಕೆಲವು ಅಗತ್ಯ ಮುನ್ನೆಚ್ಚರಿಕೆಗಳನ್ನು ಪ್ರತಿಯೊಬ್ಬರೂ ಕಲಿಯಬೇಕಾದ ಮತ್ತು ಅನುಸರಿಸಬೇಕಾದ ಅಗತ್ಯ ಇದೆ.

ಪ್ರಮುಖವಾಗಿ ಕೆಲ ಆಹಾರ ಸೇವನೆ ಕೈಬಿಡಬೇಕು

ಚಳಿಗಾಲವು ವೈವಿಧ್ಯಮಯ ಆಹಾರ ಮತ್ತು ಆಚರಣೆಗಳ ಕಾಲವಾಗಿದೆ. ಕೆಲವು ಆಹಾರ ಪದಾರ್ಥಗಳ ಬಳಕೆಯನ್ನು ಸೀಮಿತಗೊಳಿಸಲು ನೆನಪಿಡುವ ಕೆಲವು ಸಂಗತಿಗಳು ಹೀಗಿವೆ.

1. ಕೇಕ್ ಮತ್ತು ಚಾಕ್‌ಲೇಟ್‌ಗಳಲ್ಲಿನ ಸಕ್ಕರೆಯು ದಂತಗಳ ನೈರ್ಮಲ್ಯಕ್ಕೆ ಧಕ್ಕೆ ಒದಗಿಸುತ್ತದೆ. ಹೆಚ್ಚಿನ ಪ್ರಮಾಣದ ಸಕ್ಕರೆಯು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಸೋಂಕಿನ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು

2. ಈ ಸಮಯದಲ್ಲಿ ಐಸ್‌ಕ್ರೀಮ್ ಮತ್ತು ತಂಪು ಪಾನೀಯಗಳಂತಹ ಹೆಚ್ಚಿನ ಶೀತ ಪದಾರ್ಥಗಳ ಸೇವನೆಯು ಶ್ವಾಸಕೋಶಗಳ ಮೇಲ್ಭಾಗದ ಪ್ರದೇಶವು ಸೋಂಕಿಗೆ ಒಳಗಾಗುವುದನ್ನು ಹೆಚ್ಚಿಸುತ್ತವೆ.

3. ಕರಿದ ಆಹಾರ ಪದಾರ್ಥಗಳ ಸೇವನೆಯನ್ನೂ ಕಡಿಮೆ ಮಾಡಬೇಕು

–ಡಾ. ಮಯೂರಿ ಯೆವೊಲೆ, ಅಪೊಲೊ ಹಾಸ್ಪಿಟಲ್ಸ್‌ನ ಮಕ್ಕಳ ತಜ್ಞೆ, ಸಮಾಲೋಚಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು