ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಪಕ್ಕೊಂದು ಕಡಿವಾಣ

Last Updated 6 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಕೋಪ ಯಾರಿಗೆ ಬರುವುದಿಲ್ಲ? ಸಾಕ್ಷಾತ್ ಪರಮಾತ್ಮನೇ ಪ್ರಳಯರುದ್ರನಾಗುತ್ತಾನೆ ಎಂದಮೇಲೆ ಹುಲುಮಾನವರ ಪಾಡೇನು? ಕೋಪದ ಪರಿಣಾಮವಂತೂ ಒಂದು ಮಟ್ಟಿನ ನಾಶವೇ ಸರಿ, ಮಿತಿಮೀರಿದಲ್ಲಿ ಸರ್ವನಾಶವೂ ಆದೀತು - ‘ಕೋಪವೆಂಬುದನರ್ಥಸಾಧನ’ ಎಂದು ದಾಸರೂ ಹೇಳಿದ್ದಾರಷ್ಟೇ. ಈ ‘ಅನರ್ಥ’ ಹೇಗಾಗುತ್ತದೆಂಬುದನ್ನು ಭಗವದ್ಗೀತೆಯ ಶ್ಲೋಕವೊಂದು ಬಹುಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ:

ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ

ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಭಿಜಾಯತೇ

ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿವಿಭ್ರಮಃ

ಸ್ಮೃತಿಭ್ರಂಶಾತ್ ಬುದ್ಧಿನಾಶಃ ಬುದ್ಧಿನಾಶಾತ್ ಪ್ರಣಶ್ಯತಿ

ಪ್ರಾಪಂಚಿಕ ವಿಷಯಗಳನ್ನೇ ನೆನೆಯುತ್ತಿದ್ದರೆ (indulgence ಎನ್ನುತ್ತೇವಲ್ಲ, ಅದು), ಆ ವಿಷಯಗಳೊಡನೆ ನಂಟು ಬೆಳೆಯುತ್ತದೆ. ಆ ನಂಟಿನಿಂದ ಬಯಕೆ, ಬಯಕೆಯಿಂದ (ಅದು ಕೈಗೂಡದಿದ್ದರೆ) ಕ್ರೋಧ, ಕ್ರೋಧದಿಂದ ಬುದ್ಧಿ ಮಸುಕಾಗುತ್ತದೆ, ಬುದ್ಧಿ ಮಸುಕಾಗುವುದರಿಂದ ವಿವೇಕ ಕದಡುತ್ತದೆ, ಅದರಿಂದ ಬುದ್ಧಿ ನಾಶವಾಗುತ್ತದೆ, ಬುದ್ಧಿ ನಾಶವಾದ ಮೇಲೆ ಉಳಿಯುವುದೇನಿದೆ? ಸರ್ವನಾಶ.

ಹಾಗಿದ್ದರೆ ಆಶೆಯನ್ನೇ ಬಿಟ್ಟುಬಿಟ್ಟರೆ ಸರ್ವನಾಶವನ್ನು ತಪ್ಪಿಸಬಹುದೇ (ಆಸೆಯೇ ದುಃಖಕ್ಕೆ ಮೂಲಕಾರಣವೆಂದು ಬುದ್ಧನೂ ಹೇಳಿದ್ದಾನಲ್ಲ)? ಆದರೆ ಇದು ಹೇಳಿದಷ್ಟು ಸುಲಭವಲ್ಲ. ಇಡೀ ಪ್ರಪಂಚವೇ ಬದುಕಿನಲ್ಲಿ ಆಸಕ್ತಿಯನ್ನು ಕಳೆದುಕೊಂಡು ಬಿಟ್ಟರೆ ಪ್ರಪಂಚ ನಡೆಯುವುದಾದರೂ ಹೇಗೆ? ಎಂದಮೇಲೆ ಆಶೆಯನ್ನು ಬಿಟ್ಟುಬಿಡುವುದು ಪ್ರಕೃತಿಯ ನಿಯಮಕ್ಕೇ ವಿರುದ್ಧವಾಯಿತಲ್ಲ. ಹಾಗಿದ್ದರೆ ಆಶೆಯೂ, ಅದರಿಂದುಂಟಾಗುವ ವೈಫಲ್ಯವೂ, ಅದರಿಂದುಂಟಾಗುವ ಕೋಪವೂ, ಅದರಿಂದುಂಟಾಗುವ ನಾಶವೂ ಸಹಜವಾದದ್ದೇ ಎನ್ನಬೇಕಷ್ಟೇ. ಆದ್ದರಿಂದ ನಮಗುಳಿವ ದಾರಿ, ಕೋಪದೊಡನೆ ಬದುಕುವುದನ್ನು ಕಲಿಯುವುದಷ್ಟೇ.

ಕೋಪವೂ ಉಳಿದ ಭಾವನೆಗಳಂತೆಯೇ ಶಕ್ತಿಯ ಒಂದು ರೂಪ; ಒಂದೇ ಶಕ್ತಿ, ವಿವಿಧ ಸಂದರ್ಭಗಳಿಗನುಗುಣವಾಗಿ ಸಂತೋಷ, ಆನಂದ, ಆಶೆ, ದುಃಖ, ಭಯ, ಕ್ರೋಧ - ಹೀಗೆ ಹಲವು ರೂಪಗಳಲ್ಲಿ ವ್ಯಕ್ತಗೊಳ್ಳುತ್ತವೆ. ನೀವು ಗಮನಿಸಿರಬಹುದು. ಭಾವೋದ್ವೇಗಕ್ಕೊಳಗಾದಾಗ ಎದೆಬಡಿತ ಹೆಚ್ಚಾಗುತ್ತದೆ, ಮೈ ಬಿಸಿಯೇರುತ್ತದೆ, ಭಾವನೆಯನ್ನು ಕಾರ್ಯರೂಪಕ್ಕಿಳಿಸಲು ಅಂಗಾಂಗಗಳು ತುಡಿಯುತ್ತವೆ. ಇವೆಲ್ಲಾ ಭಾವನೆಯೆಂಬ ಶಕ್ತಿಯ ಕೆಲಸವೇ. ನೆಮ್ಮದಿ, ಆನಂದ, ಬೇಸರ, ವಿಷಾದ ಇವು ಮೃದುಭಾವನೆಗಳು. ಮನಸ್ಸಿನ ಮಟ್ಟದಲ್ಲೇ ಇರುವಂಥವು. ಇವು ದೇಹದ ಮಟ್ಟಕ್ಕೆ ಬಂದು ಕಾರ್ಯರೂಪಕ್ಕಿಳಿಯುವ ಮೊದಲು ಚಿಂತಿಸಲು ಬೇಕಾದಷ್ಟು ಅವಕಾಶವಿರುತ್ತದೆ. ಉದ್ವೇಗ, ಸಂತೋಷ, ಆತಂಕ, ದುಃಖ - ಇವು ಸ್ವಲ್ಪ ತೀವ್ರಭಾವನೆಗಳು - ಬಹುಬೇಗ ಮುಂದಿನ ಸ್ತರಕ್ಕೆ ಜಿಗಿಯಲೆಳಸುತ್ತವೆ. ಮುಂದಿನ ಹಂತದಲ್ಲಿ ಉನ್ಮಾದ, ಭಯ, ಕೋಪ ಇವು ಇನ್ನೂ ತೀವ್ರ. ಇವುಗಳಿಗೆ ದೇಹ, ದೇಹದ ಕಾರ್ಯಾಂಗಗಳು ತೀವ್ರವಾಗಿ ಸ್ಪಂದಿಸತೊಡಗುತ್ತವೆ. ಇವುಗಳನ್ನು ನಿಯಂತ್ರಿಸಲು ಹೆಣಗಬೇಕಾಗುತ್ತದೆ. ಮುಂದಿನ, ಅತ್ಯುತ್ಕಟ ಹಂತದಲ್ಲಿ ಭಯವೂ ಅಡಗಿ, ಕೋಪೋನ್ಮಾದಗಳು ತೀವ್ರಗೊಳ್ಳುತ್ತವೆ. ನಿಯಂತ್ರಿಸಲು ಇದು ನಿಜಕ್ಕೂ ಸವಾಲಾಗಿಬಿಡುತ್ತದೆ.

ಚಿಂತನಶಕ್ತಿ ಕಡಿಮೆಯಿರುವ ಪ್ರಾಣಿಗಳಲ್ಲಿ ಭಾವೋ ದ್ವೇಗದ ಕ್ರಿಯೆ ಪ್ರತಿಕ್ರಿಯೆಗಳು ಸರಳ. ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಭಯವೆನ್ನುವುದು ಎರಡು ರೀತಿಯ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ - ಆಕ್ರಮಣ ಮಾಡು ಅಥವಾ ಓಡು - ಇದನ್ನು fight or flight instinct ಎನ್ನುತ್ತಾರೆ. ಬಹುಮಟ್ಟಿಗೆ ವಿವೇಕವಿನ್ನೂ ಬೆಳೆದಿರದ ಸಣ್ಣ ಮಕ್ಕಳಲ್ಲೂ ಈ ಸ್ವಭಾವವನ್ನು ಕಾಣುತ್ತೇವೆ. ಆದರೆ ಮನುಷ್ಯ ಬೆಳೆಯುತ್ತಾ ಭಾವನೆಗಳ ಮೇಲೆ ನಿಯಂತ್ರಣವನ್ನು ಸಾಧಿಸುತ್ತಾನೆ; ಸಮಸ್ಯೆಗಳನ್ನು ಬೌದ್ಧಿಕವಾಗಿ ಪರಿಗಣಿಸುತ್ತಾನೆ, ಚಿಂತಿಸುತ್ತಾನೆ, ಹೇಗೆ ಪ್ರತಿಕ್ರಿಯಿಸಬೇಕೆಂದು ಚಿಂತಿಸಿ ಪ್ರತಿಕ್ರಿಯಿಸುತ್ತಾನೆ. ಸಮಸ್ಯೆ ನಿಭಾಯಿಸಲು ಕೇವಲ ಕೈಕಾಲುಗಳನ್ನಲ್ಲದೇ ತನ್ನಲ್ಲಿರುವ ಎಲ್ಲ ಸೌಲಭ್ಯಗಳನ್ನೂ ಬಳಸಿಕೊಳ್ಳುತ್ತಾನೆ, ಹಾಗೆಯೇ ಅನುಭವದ ಮೇಲೆ ಅಂತಹ ಹಲವು ಸೌಲಭ್ಯಗಳನ್ನು ಬೆಳೆಸಿಕೊಳ್ಳುತ್ತಾನೆ. ಆದರೂ ಈ ಪ್ರಬುದ್ಧತೆಯ ಮಟ್ಟವನ್ನೂ ಮೀರಿದ ಸನ್ನಿವೇಶಗಳು ಏರ್ಪಟ್ಟರೆ ಮನುಷ್ಯನ ವಿವೇಕ ಹಾರಿಹೋಗಿ ಆತನ ಮೂಲಭೂತ ಪ್ರತಿಕ್ರಿಯೆಯಾದ fight or flight ಮುನ್ನೆಲೆಗೆ ಬರುವ ಸಾಧ್ಯತೆಯಿದೆ. ನಿಜಕ್ಕೂ ಎಚ್ಚರವಿರಬೇಕಾದ್ದು ಇಂತಹ ಸಂದರ್ಭಗಳ ಬಗೆಗೆ.

ಕೋಪವು ವ್ಯಕ್ತಿಯ ಸ್ವಭಾವ ಮತ್ತು ಸಂದರ್ಭಗಳ ಉತ್ಪನ್ನವಾದುದರಿಂದ ಅದನ್ನು ನಿಯಂತ್ರಿಸಲು ಇಂಥದ್ದೇ ದಾರಿಯೆಂಬುದಿಲ್ಲ. ಕೋಪ ಬಂದಾಗ ಹತ್ತೆಣಿಸುವುದರಿಂದ ಹಿಡಿದು, ಮೂಗಿನ ತುದಿಯನ್ನು ಕೇಂದ್ರೀಕರಿಸಿ ಧ್ಯಾನ ಮಾಡುವವರೆಗೂ ಪ್ರಾಚೀನ ಕಾಲದಿಂದ ಹಲವು ವಿಧಾನಗಳನ್ನು ಅನುಸರಿಸುತ್ತಾ ಬಂದಿದ್ದಾರೆ. ನೀರುಕುಡಿಯುವುದು, ತಂಗಾಳಿಯಲ್ಲಿ ಅಡ್ಡಾಡಿ ಬರುವುದು ಅಥವಾ ಫ್ಯಾನಿನ ಕೆಳಗೆ ಕೂರುವುದು ಇವೂ ಸಹಾಯಕವಾಗಬಲ್ಲುದು. ಅದೇನೇ ಇರಲಿ, ಇವೆಲ್ಲ ತಾತ್ಕಾಲಿಕವಾಗಿ ಕೋಪದ ಭೌತಿಕಪರಿಣಾಮವನ್ನು ತಗ್ಗಿಸಬಲ್ಲವೇ ಹೊರತು ಕೋಪವನ್ನೇ ನಿಭಾಯಿಸಲಾರವು. ಆದರೂ ಆ ಕ್ಷಣಕ್ಕೆ ಕೋಪವು ತಹಬಂದಿಗೆ ಬಂದರೆ, ಸ್ವಲ್ಪ ತಣ್ಣಗೆ ಯೋಚಿಸಲಾದರೂ ಅವಕಾಶವಾಗುವುದಲ್ಲ, ಅಷ್ಟುಮಟ್ಟಿಗೆ ಈ ಕ್ರಮಗಳೆಲ್ಲವೂ ಪರಿಣಾಮಕಾರಿಯೇ. ಯೋಗ, ಪ್ರಾಣಾಯಾಮ, ಧ್ಯಾನ ಮೊದಲಾದುವು ದೀರ್ಘಕಾಲದಲ್ಲಿ ದೇಹದ ಮತ್ತು ಮನಸ್ಸಿನ ದೃಢತೆಯನ್ನು ಹೆಚ್ಚಿಸುವುದರ ಮೂಲಕ ಕೋಪವನ್ನು ನಿಭಾಯಿಸಲು ಕೆಲಮಟ್ಟಿಗೆ ಸಹಾಯಮಾಡಬಲ್ಲುವು. ಕೋಪವೆಂಬುದು ಪಾಶವೀಶಕ್ತಿಯಷ್ಟೇ? ಸದಭಿರುಚಿಯ ಸಂಗೀತ, ಸಾಹಿತ್ಯ, ಸತ್ಸಂಗಗಳು, ಒಂದಷ್ಟು ಅಧ್ಯಾತ್ಮ ಇವು ಖಂಡಿತ ಮನಸ್ಸನ್ನು ಹದಗೊಳಿಸಿ ಮನಸ್ಸನ್ನು ಮೃಗತ್ವದಿಂದ ಮಾನವತೆಯ ಎತ್ತರಕ್ಕೊಯ್ಯಬಲ್ಲುವು, ಕೋಪದ ನಿಯಂತ್ರಣಕ್ಕೆ ಸಹಾಯ ಮಾಡಬಲ್ಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT