ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಪ್ರತಿರಕ್ಷಣೆಯ ವೃದ್ಧಿ ಹೇಗೆ?

Last Updated 20 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಈಗಿರುವ ಪಿಡುಗು ನಮ್ಮ ಮನೆಗಳನ್ನು ಶಾಲೆ, ಕಾಲೇಜು, ಪರೀಕ್ಷಾ ಕೇಂದ್ರ, ಪ್ಲೇಹೋಂ, ಯೋಗ ತರಬೇತಿ ಕೇಂದ್ರ, ಚಲನಚಿತ್ರ ಮಂದಿರ, ಹೋಟೆಲ್, ಗೋದಾಮು, ಆಸ್ಪತ್ರೆ, ಪ್ರವಾಸಿಕೇಂದ್ರ, ಕಚೇರಿ, ಬ್ರೌಸಿಂಗ್ ಕೇಂದ್ರಗಳನ್ನಾಗಿ ಬದಲಾಯಿಸಿದೆ. ತಂದೆ-ತಾಯಿ ಅದಕ್ಕೆ ತಕ್ಕಂತೆ ಬಹುವಿಧದ ಪಾತ್ರಗಳನ್ನು ನಿಭಾಯಿಸಬೇಕಾಗಿದೆ. ಶಿಕ್ಷಕ, ತರಬೇತುದಾರ, ಮೇಲ್ವಿಚಾರಕ, ಕೆಲಸದಾಳು, ಅಡುಗೆ ಮಾಡುವವವರು, ದಾದಿ, ಯಜಮಾನ, ಮಾರ್ಗದರ್ಶಕ – ಹೀಗೆ ನಾಲ್ಕು ಗೋಡೆಯ ನಡುವೆ ಇದ್ದುಕೊಂಡು, ಈ ಸವಾಲುಗಳನ್ನು ಎದುರಿಸಲು ಸಾಕಷ್ಟು ಮಾನಸಿಕ ಶಕ್ತಿಯ ಅವಶ್ಯಕತೆಯಿದೆ. ಈ ಬದಲಾವಣೆಗಳಿಂದ ಉಂಟಾಗುವ ಒತ್ತಡವನ್ನು ನಿಭಾಯಿಸುವ ಕಾರ್ಯವಿಧಾನಗಳನ್ನು ರೂಢಿಸಿಕೊಳ್ಳಬೇಕಾಗಿದೆ. ಹೀಗಾಗಿ ನಾವು ಮಾನಸಿಕ ಪ್ರತಿರಕ್ಷಣ ಗುಣವನ್ನು ಬೆಳೆಸಿಕೊಳ್ಳುವುದು ಅಗತ್ಯ.

ಆದ್ಯತೆಗಳಿಗೆ ಅನುಸಾರವಾಗಿ ನಮ್ಮ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದು.

ಸಕಾರಾತ್ಮಕ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ. ಈ ರೀತಿ ಗುಣಾತ್ಮಕ ಮನಸ್ಥಿತಿಯನ್ನು ರೂಢಿಸಿಕೊಳ್ಳುವಾಗ ಯಾವುದೇ ಹಿನ್ನಡೆಯನ್ನು ಕಲಿಕೆಯ ಅವಕಾಶ ಎಂದು ಭಾವಿಸಬೇಕು. ನಿಮ್ಮ ಕೆಲಸದಲ್ಲಿ ನಿಮಗೆ ಆಸಕ್ತಿಯಿರಲಿ. ಕನಸು ಕಾಣಿ. ಆ ಕನಸುಗಳು ಚಿಕ್ಕವೋ, ದೊಡ್ಡವೋ, ಅತ್ಯುತ್ಸಾಹದಿಂದ ಕೂಡಿದೆಯೋ ಎನ್ನುವುದು ಮುಖ್ಯವಲ್ಲ. ಕನಸುಗಳನ್ನು ನನಸು ಮಾಡಿಕೊಳ್ಳಲು ಕಲ್ಲುಮುಳ್ಳುಗಳಿಂದ ಕೂಡಿದ ಕಠಿಣವಾದ ಹಾದಿಯ ಬೆಟ್ಟವೇರಿ.

ವೃತ್ತಿಗೆ ಸಂಬಂಧಿಸಿದ ಅಥವಾ ವೈಯಕ್ತಿಕವಾದ 4-5 ಆದ್ಯತೆಗಳನ್ನು ಗುರುತಿಸಿ ಸಮಸ್ಯೆಯನ್ನು ಆಳವಾಗಿ ವಿಶ್ಲೇಷಿಸುತ್ತಾ ಸಂಭವನೀಯ ಅಡೆ-ತಡೆಗಳನ್ನು ಗುರುತಿಸಿ ಪರಿಹಾರವನ್ನು ರೂಪಿಸಿಕೊಳ್ಳಿ. ಪೂರಕವಾದ ಮಾರ್ಗಗಳನ್ನು ಚಿಂತಿಸಿ, ಬದಲಾವಣೆಯನ್ನು ನಿರೀಕ್ಷಿಸಿ. ಈ ಕಾರ್ಯವಿಧಾನದಲ್ಲಿ ತಪ್ಪುಗಳಾಗಬಹುದು. ಆ ತಪ್ಪುಗಳಿಂದ ಪಾಠ ಕಲಿತು ಸುಧಾರಿಸಿಕೊಳ್ಳಬಹುದು. ಈ ಮಾರ್ಗ ಗುರಿ ಮುಟ್ಟಲು ಸಹಾಯಕಾರಿ.

ಹಿಂದಿನ ಅಥವಾ ಮುಂದಿನ ಜೀವನದ ಬಗ್ಗೆ ಚಿಂತಿಸದೆ ಸಕಾರಾತ್ಮಕ ಮನೋಭಾವ ಹೊಂದಿದ್ದು ನಿಮ್ಮ ಆದ್ಯತೆಗಳ ಬಗ್ಗೆ ನಿಖರವಾದ ವಿಚಾರಗಳಿದ್ದರೆ ಮಾನಸಿಕ ಪ್ರತಿರಕ್ಷಣ ಗುಣವನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ.

ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಗೊಳಿಸಿ
ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಮತ್ತು ನೀವು ಏನು ಮಾಡಬೇಕೆಂದಿರುವಿರಿ ಎನ್ನುವುದನ್ನು ನಿಮ್ಮ ಸ್ನೇಹಿತರ ಅಥವಾ ಕುಟುಂಬದವರ ಹತ್ತಿರ ಹಂಚಿಕೊಳ್ಳಿ. ದೌರ್ಬಲ್ಯದ ಬಗ್ಗೆ ನಾಚಿಕೆ ಪಡುವ ಅವಶ್ಯಕತೆಯಿಲ್ಲ. ನಿಮ್ಮ ಮಕ್ಕಳ ಪ್ರಯೋಗಗಳನ್ನು, ಸಂಕಷ್ಟಗಳನ್ನು ಆಲಿಸಿ ಮತ್ತು ಅವರಿಗಿಷ್ಟವಾದುದನ್ನು ಮಾಡುತ್ತಾ ಅವರ ಜೊತೆ ಮೌಲಿಕ ಕ್ಷಣಗಳನ್ನು ಕಳೆಯಿರಿ. ನಿಮ್ಮ ಮನಸ್ಸು ಮುಕ್ತವಾಗಿದ್ದು ಕಲಿಯುತ್ತಾ, ಕಲಿತಿದ್ದನ್ನು ವಿಶ್ಲೇಷಿಸುತ್ತಾ ಹೋಗಲಿ. ಈ ರೀತಿ ಪರಸ್ಪರ ಬೆರೆಯುವುದರಿಂದ ಅಥವಾ ಒಡನಾಟದಿಂದ ಏನಾದರೊಂದು ಹೊಸದನ್ನು ಕಲಿಯುವ ಸಾಧ್ಯತೆಗಳಿವೆ. ಕೇಳುವುದರಿಂದ, ಓದುವುದರಿಂದ, ಬೇರೊಬ್ಬರ ಜೀವನ ಚರಿತ್ರೆಯಿಂದ ನಿಮಗೆ ಸ್ಫೂರ್ತಿ ಸಿಗಬಹುದು.

ನಿಮ್ಮ ದೇಹ ಮತ್ತು ಮನಸ್ಸನ್ನು ಸವಾಲೆನ್ನಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ
ಹೊಸ ಹವ್ಯಾಸವನ್ನು ಬೆಳೆಸಿಕೊಳ್ಳಿ ಅಥವಾ ಈಗಾಗಲೇ ಇರುವ ಹಳೆಯ ಹವ್ಯಾಸವನ್ನು ಮತ್ತೆ ಆರಂಭಿಸಿ. ನಿಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ನಿಮ್ಮ ಸಂಗಾತಿಯ ಜೊತೆ ಹೊಂದಿಕೊಳ್ಳಲು, ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಡಲು, ಪ್ರತಿದಿನ ತಣ್ಣೀರು ಸ್ನಾನ ಮಾಡಿ, ಧ್ಯಾನ ಮಾಡಿ, ನಡಿಗೆ ಅಭ್ಯಾಸ ಮಾಡಿಕೊಳ್ಳಿ, ಜಾಗ್ ಮಾಡಿ, ವ್ಯಾಯಾಮ ಮಾಡಿ, 20 ನಿಮಿಷಗಳ ಕಾಲ ಯೋಗ ಮಾಡಿ. ನಿಮಗೇನಿಷ್ಟವೋ ಅದನ್ನೇ ಮಾಡಿ. ಚಲನಚಿತ್ರ ವೀಕ್ಷಣೆ, ಸಂಗೀತ ಆಲಿಸುವುದು, ಸ್ನೇಹಿತರ ಮತ್ತು ನೆರೆಹೊರೆಯವರ ಜೊತೆ ಮಾತಾಡುವುದು, ಹಾಡುವುದು, ನೃತ್ಯ ಮಾಡುವುದು, ಒಳಾಂಗಣ ಅಥವಾ ಹೊರಾಂಗಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಿ. ಪದಬಂಧ, ಸೊಡುಕು, ಹೊಸ ಭಾಷೆ ಕಲಿಯಲು ಪ್ರಯತ್ನಿಸಿ. ಹೊಸರುಚಿ ತಯಾರಿಕೆ, ಮನೆ ಶುಚಿ ಮಾಡುವುದು, ಕೈತೋಟ ಬೆಳೆಸುವುದು ಅಥವಾ ಪ್ರೀತಿಯ ಪ್ರಾಣಿಯೊಂದನ್ನು ಸಾಕುವುದರ ಬಗ್ಗೆ ಆಲೋಚಿಸಿ.

ಪ್ರಾಯೋಗಿಕ ವಿಧಾನ, ಬೌದ್ಧಿಕ ವಿಧಾನ
ನಿಮಗೆ ನೀವೇ ಬಲವಾದ ಸ್ಪರ್ಧಿ. ಪ್ರತಿಯೊಂದು ಪಾತ್ರವನ್ನು ಅತ್ಯುತ್ತಮವಾಗಿ ನಿಭಾಯಿಸಿ ಆಗಾಗ ವೃತ್ತಿಪರ ಸಭೆಗಳನ್ನು ನಡೆಸಿ. ಕೆಲಸದ ವೇಳಾಪಟ್ಟಿಯಲ್ಲಿ ಬಿಡುವು ಮಾಡಿಕೊಂಡು, ದೇಹವನ್ನು ಮಸಾಜ್ ಮಾಡಿಕೊಳ್ಳಿ. ನೀಳವಾಗಿ ಉಸಿರೆಳೆದುಕೊಳ್ಳಿ. ಈ ಕ್ರಿಯೆಗಳಿಂದ ನಿಮ್ಮ ಮನಸ್ಸು, ದೇಹ ಹಗುರಾಗುತ್ತವೆ. ನಿಮ್ಮ ಆತ್ಮೀಯರಿಗೆ ಕೃತಜ್ಞತೆ ಹೇಳಿ. ನಿಮ್ಮ ಕೈ ಹಿಡಿದು ನಡೆಸುವ, ನಿಮ್ಮ ಪ್ರತಿ ಹೆಜ್ಜೆಯನ್ನು ಗಮನಿಸುವ, ನಿಮಗೆ ಸಹಾಯ ಮಾಡಲು ಬಯಸುವ ಒಬ್ಬ ಅಗೋಚರ ವ್ಯಕ್ತಿ ನಿಮ್ಮ ಜೊತೆಯಲ್ಲಿದ್ದಾನೆಂದು ಭಾವಿಸಿ. ಅಡೆತಡೆಗಳಿಗೆ ಶರಣಾಗದೆ ಏಕಾಗ್ರತೆಯಿಂದ, ಇಚ್ಛಾಶಕ್ತಿಯಿಂದ ನಿಮ್ಮ ಕೆಲಸದಲ್ಲೇ ಗಮನವನ್ನು ಕೇಂದ್ರೀಕರಿಸಿದರೆ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇಷ್ಟೆಲ್ಲಾ ಪ್ರಯತ್ನಗಳ ನಡುವೆಯೂ ನಾವು ಕೆಲವೊಮ್ಮೆ ಮೂಲೆ ಗುಂಪಾಗುವುದು ಸಹಜ. ಆಶಾವಾದಿಗಳಾಗಿ ನಿಮ್ಮ ಮಾನಸಿಕ ಗೊಂದಲ ಕಡಿಮೆ ಮಾಡಿಕೊಳ್ಳಿ. ನೀವು ಕೆಟ್ಟ ಘಳಿಗೆಗಳನ್ನು ಎದುರಿಸುತ್ತಿರಬಹುದು. ಆದರೆ ನೀವು ಸಕಾರಾತ್ಮಕ ಭಾವನೆ ಹೊಂದಿದ್ದರೆ ಯಾವ ಅಡತಡೆಗಳೂ, ತೊಂದರೆಗಳೂ ಪರಿಣಾಮ ಬೀರುವುದಿಲ್ಲ. ಆಗುವುದೆಲ್ಲಾ ಒಳ್ಳೆಯದಕ್ಕೆ ಎನ್ನುವ ಭಾವನೆ ನಿಮ್ಮಲ್ಲಿರಬೇಕು.

ಲೇಖಕ: ಆಪ್ತ ಸಮಾಲೋಚಕರು ಮತ್ತು ಮೆಂಟಲ್‌ ಕೋಚ್‌
(ಅನುವಾದ: ಸಿ.ಎನ್.ಮುಕ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT