ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇಮ – ಕುಶಲ| ಜೀವನದಲ್ಲಿ ಶಿಸ್ತು: ಏಕೆ? ಹೇಗೆ?

Published 24 ಜೂನ್ 2024, 23:10 IST
Last Updated 24 ಜೂನ್ 2024, 23:10 IST
ಅಕ್ಷರ ಗಾತ್ರ

ಶಿಸ್ತನ್ನು ರೂಢಿಸಿಕೊಂಡು ಬದುಕುವುದು ಎಂದರೆ ಯಾವುದೋ ಕಟ್ಟುಪಾಡುಗಳಿಗೆ ಒಳಗಾಗಿ ಕಷ್ಟಪಡುವುದು ಎಂದು ಅನಿಸುವುದೇ? ಶಿಸ್ತಾಗಿರುವುದೆಂದರೆ ಯಾಂತ್ರಿಕವಾಗಿರುವುದು, ಸೃಜನಶೀಲವಲ್ಲದ್ದು, ಶಿಕ್ಷೆಗೆ / ಪರಿಣಾಮಗಳಿಗೆ ಹೆದರಿ ಆಚೀಚೆ ನೋಡದೆ ಒಂದೇ ದಿಕ್ಕಿಗೆ ಸುಮ್ಮನೆ ಓಡುವುದು; ಬೇಸರ ತರಿಸುವ ಕೆಲಸಗಳನ್ನು ಬೇರೆ ವಿಧಿಯಿಲ್ಲದೆ ಮಾಡಿಕೊಂಡು ಹೋಗುವುದು ಎಂದೆನಿಸುವುದೇ?  ಶಿಸ್ತು ಎಂದರೆ ಕರ್ತವ್ಯ, ಜವಾಬ್ದಾರಿ; ಶಿಸ್ತಾಗಿರುವುದು ನಮಗೆ ಬೇಡದ್ದು ಆದರೂ ನಾವು ಶಿಸ್ತಿನಲ್ಲಿರಲೇಬೇಕು, ಇಲ್ಲದಿದ್ದರೆ ತೊಂದರೆಗಳಿಗೆ ಒಳಗಾಗಬಹುದು; ಶಿಸ್ತು ಭಯದಿಂದ ಪ್ರೇರಿತವಾದದ್ದು ಎನಿಸುತ್ತಿದೆಯೇ? ಶಿಸ್ತು ಏಕೆ ಬೇಕು – ಎನ್ನುವುದನ್ನು ನಮಗಾಗಿ ನಾವು ಕಂಡುಕೊಂಡಿಲ್ಲದೆ ಅದು ಹೊರಗಿನಿಂದ ಆರೋಪಿಸಲ್ಪಟ್ಟಿದ್ದರೆ ಹೀಗೆಲ್ಲಾ ಅನಿಸುವುದು ಸಹಜ. ಸ್ವಯಂಪ್ರೇರಿತರಾಗಿ ಶಿಸ್ತಿನ ಜೀವನ ನಡೆಸಿದಾಗ ‘ಶಿಸ್ತು’ ಎಂದರೆ ‘ಶಿಕ್ಷೆ’ ಎನಿಸುವುದಿಲ್ಲ; ಬದಲಾಗಿ ಯಶಸ್ಸಿಗೆ, ನೆಮ್ಮದಿಗೆ, ಗುರಿ ತಲುಪಲು ಇರುವ ಮೆಟ್ಟಿಲು, ಒಂದು ಪರಿಣಾಮಕಾರಿಯಾದ ವಿಧಾನ ಎನಿಸುತ್ತದೆ.

ಶಿಸ್ತಿನ ಜೊತೆಗೆ ನಮಗಿರುವ ಸಂಬಂಧವನ್ನು ಮತ್ತೊಮ್ಮೆ ವಿಮರ್ಶಿಸಲು ಕೆಳಕಂಡ ಕೆಲವು ಅಂಶಗಳೂ ಪೂರಕವಾಗುತ್ತವೆ:

1. ಶಿಸ್ತು ಎಂದರೆ ಅದೊಂದು ನಿಯಮಿತ ಅಭ್ಯಾಸ, ಮಾಡಬೇಕಾದ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸುವ ಬದ್ಧತೆ; ನಿಯಮಗಳನ್ನು ಒಪ್ಪಿಕೊಳ್ಳುವ, ಅನುಸರಿಸುವ ಮನಃಸ್ಥಿತಿ ಅದಕ್ಕೆ ಮುಖ್ಯ. ಪ್ರತಿದಿನವೂ ಮಾಡಿದ್ದನ್ನೇ ಮಾಡಬೇಕಾಗಿ ಬಂದರೂ ಬೇಸರಿಸಿಕೊಳ್ಳದೆ, ಅದನ್ನೇಕೆ ಮಾಡಬೇಕು, ಆ ಕೆಲಸದ ಪ್ರಾಮುಖ್ಯವೇನು ಎಂದರಿತು ತೊಡಗಿಕೊಳ್ಳಲು ಪ್ರೌಢತೆ ಬೇಕು. ಒಂದೇ ದಿನದಲ್ಲಿ ಯಾವ ಮಹತ್ಕಾರ್ಯವೂ ಸಿದ್ಧಿಸುವುದಿಲ್ಲ; ಪ್ರತಿದಿನವೂ ಸ್ವಲ್ಪವಾದರೂ ಗುರಿಯ ಕಡೆಗೆ ನಮ್ಮ ಪ್ರಯತ್ನವಿರಲೇಬೇಕು.

2. ಒಂದಿಡೀ ದಿನವನ್ನು ಏನೂ ಮಾಡದೇ ಸುಲಭವಾಗಿ ಕಳೆದುಬಿಡಬಹುದು ಆದರೆ ಕೇವಲ ಮೂವತ್ತು ನಿಮಿಷ ಒಂದು ಗುರಿಯ ಕಡೆಗೆ ಗಮನವಿಟ್ಟು ಕೆಲಸ ಮಾಡಬೇಕಾದರೆ ಅದಕ್ಕೆ ಮಾನಸಿಕ ಶಕ್ತಿ ಬೇಕು. ‘ಇವತ್ತು ಹೇಗಿದ್ದರೂ ದಿನ ಹಾಳಾಗಿಹೋಯಿತು, ಈಗ ರಾತ್ರಿ ಮಲಗಿಬಿಡುವೆ, ನಾಳೆಯಿಂದ ಓದುವೆ, ಬರೆಯುವೆ’ ಎನ್ನುವ ಬದಲು ‘ಇಂದು ದಿನಪೂರ್ತಿ ಏನೂ ಮಾಡಲಾಗಲಿಲ್ಲ, ಈಗ ರಾತ್ರಿಯಾದರೂ ಚಿಂತೆಯಿಲ್ಲ ಹೆಚ್ಚಲ್ಲದಿದ್ದರೂ ಅರ್ಧಗಂಟೆ ನಾಲ್ಕು ಪುಟವಾದರೂ ಓದುತ್ತೇನೆ, ನಾನು ಅಂದುಕೊಂಡಂತೆ ಹತ್ತು ಪುಟಗಳಲ್ಲದಿದ್ದರೂ ಒಂದು ಪುಟವನ್ನಾದರೂ ಬರೆದೇ ಮಲಗುತ್ತೇನೆ’ ಎನ್ನುವ ನಿರ್ಧಾರ ಶಿಸ್ತಿನ ಬದುಕಿಗೆ ಸಹಾಯಕ.

3. ನಮ್ಮ ಜೀವನದಲ್ಲಿ ನಮಗೆ ಯಾವುದು ಮುಖ್ಯ? ಯಾಕೆ? ಎನ್ನುವ ಸ್ಪಷ್ಟತೆ ಇದ್ದರೆ ಶಿಸ್ತಿನ ಜೀವನ ತಾನೇ ರೂಪಿತವಾಗುತ್ತದೆ. ಉದಾಹರಣೆಗೆ ‘ನನ್ನ ಜೀವನದಲ್ಲಿ ನನಗೆ ಉದ್ಯೋಗ ತುಂಬಾ ಮುಖ್ಯವಾದದ್ದು. ಏಕೆಂದರೆ ಅದು ನನಗೆ ಸಮಾಜದೊಟ್ಟಿಗೆ ನಂಟನ್ನು ಕಂಡುಕೊಳ್ಳುವುದಕ್ಕೆ ಮತ್ತು ಧನ್ಯತಾಭಾವಕ್ಕೆ ಕಾರಣವಾಗಿದೆ’ ಎಂದುಕೊಂಡಾಗ ಕೆಲಸ ಮಾಡುವ ಹುಮ್ಮಸ್ಸು ಶಿಸ್ತನ್ನು ರೂಢಿಸಿಕೊಳ್ಳಲು ಪ್ರೇರಕವಾಗುತ್ತದೆ.

4. ಒಮ್ಮೊಮ್ಮೆ ನಮಗೆ ಜೀವನದಲ್ಲಿ ಯಾವುದೂ ಅರ್ಥಪೂರ್ಣವೆನಿಸುವುದಿಲ್ಲ. ‘ಏನಾದರೂ ಏಕೆ ಮಾಡಬೇಕು?’ ಎನ್ನುವ ನಿರುತ್ಸಾಹ ಕಾಡುತ್ತದೆ. ಅರ್ಥಹೀನತೆಯೇ ಶಿಸ್ತಿನ ಬದುಕನ್ನು ನಡೆಸಲು ಇರುವ ದೊಡ್ಡ ಶತ್ರು. ಈ ಅರ್ಥಹೀನತೆಯ ಹಿಂದೆ ಯಾವುದೋ ನೋವಿರುತ್ತದೆ. ‘ಏನು ಮಾಡಿ ಏನನ್ನೇ ಪಡೆದರೂ ಏನುಪಯೋಗ?’ ಎಂಬ ಶೂನ್ಯತೆ, ನಿರಾಸೆಯ ಭಾವವಿದ್ದಾಗ ಸುಮ್ಮನೆ ಹೊರಪ್ರಪಂಚದ ಒತ್ತಡಗಳಿಗೆ ಮಣಿಯುತ್ತಾ ಏನನ್ನಾದರೂ ಮಾಡುವ ಪ್ರಯತ್ನವಿರುತ್ತದೆ. ಆದರೆ ಒಳಗಿನ ಶೂನ್ಯತೆ ಕೆಲಸ ಕಾರ್ಯಗಳನ್ನು ಶ್ರದ್ಧೆಯಿಂದ, ಸಮಯಕ್ಕೆ ಸರಿಯಾಗಿ ಮಾಡುವುದಕ್ಕೆ ಅವಕಾಶ ಕೊಡುವುದಿಲ್ಲ. ‘ಯಾವ ದುಃಖ ನಮ್ಮ ಬದುಕಿನ ಅರ್ಥಪೂರ್ಣತೆಯನ್ನು ಕಸಿದುಕೊಂಡಿದೆ’ ಎಂದು ಅವಲೋಕಿಸಿ ಸ್ಪಂದಿಸಿದರೆ ಅಶಿಸ್ತಿನ ಬದುಕಿಗೆ ಒಂದು ಪರಿಹಾರ ಕಂಡುಕೊಳ್ಳಬಹುದು.

5. ನಾವು ಮಾಡಬೇಕೆಂದಿರುವ ಕೆಲಸ ಸಂಕೀರ್ಣವಾಗಿರಬಹುದು; ಅದರೊಳಗೇ ಒಂದು ಗೋಜಲು, ಗೊಂದಲವಿರಬಹುದು, ಅಂತಹ ಕೆಲಸದಲ್ಲಿ ಬರಬಹುದಾದ ಸವಾಲುಗಳಿಗೆ ಹೆದರಿ ಅದರಿಂದ ತಪ್ಪಿಸಿಕೊಳ್ಳುವ ಮಾರ್ಗವಾಗಿ ಸಾಮಾಜಿಕ ಜಾಲತಾಣದಲ್ಲೋ, ಹಾಳು ಹರಟೆಯಲ್ಲೋ ಕಾಲ ಕಳೆಯುತ್ತಾ ಕೆಲಸವನ್ನು ಮುಂದೂಡುತ್ತಾ ಇರುವುದು ಅಶಿಸ್ತಿಗೆ ಮೂಲ.

6. ಜೀವನವನ್ನು ಆದಷ್ಟು ಸರಳವಾಗಿರಿಸಿಕೊಳ್ಳುವುದು ಶಿಸ್ತಿನ ಬದುಕಿಗೆ ಅಡಿಪಾಯ. ಸಮಯವನ್ನು ನುಂಗಿ ಹಾಕುವ ಅಭ್ಯಾಸಗಳು, ತೋರಿಕೆಗಾಗಿ ಮಾಡುವ ಅನವಶ್ಯಕ ಕೆಲಸಗಳು, ಯಾರನ್ನೋ ಮೆಚ್ಚಿಸಲು ಮಾಡುವ ಪ್ರಯತ್ನಗಳು ಬದುಕಿನ ಅಸ್ತವ್ಯಸ್ತತೆಗೆ ಕಾರಣ. ಮನೆಯಲ್ಲಿ ಅತಿಯಾಗಿ ವಸ್ತುಗಳನ್ನು ತುಂಬಿಕೊಂಡಿದ್ದರೆ ಹೇಗೆ ಬೇಕಾದ ವಸ್ತು ಬೇಕಾದ ಸಮಯದಲ್ಲಿ ಸಿಗದೆ ಎಲ್ಲಾ ಅಲ್ಲೋಲಕಲ್ಲೋಲವಾದಂತೆ ಅನಿಸುತ್ತದೆಯೋ ಹಾಗೆಯೇ ಅತಿಯಾದ ನಿರೀಕ್ಷೆಗಳು, ಆಸೆಗಳು, ಆಲೋಚನೆಗಳು ನಮ್ಮ ಗಮನವನ್ನು ಹತ್ತು ದಿಕ್ಕುಗಳಿಗೆ ಏಕಕಾಲಕ್ಕೆ ಸೆಳೆಯುತ್ತದೆ. ಅದರಿಂದ ಉಂಟಾದ ಬಳಲಿಕೆ ನಮ್ಮನ್ನು ಶಿಸ್ತಾಗಿರುವುದಕ್ಕೆ ಬಿಡುವುದಿಲ್ಲ.

7. ಒಮ್ಮೊಮ್ಮೆ ನಾವು ಸಂಕಲ್ಪಿಸಿದ ಕೆಲಸ ಎಷ್ಟು ಪ್ರಯತ್ನಪಟ್ಟರೂ ಆಗುತ್ತಲೇ ಇಲ್ಲ ಎನಿಸುತ್ತದೆ. ‘ಶಿಸ್ತಿನಿಂದ ಕೆಲಸ ಮಾಡಬೇಕು, ಆಗ ಎಲ್ಲ ಕೆಲಸವೂ ಸಾಧ್ಯ’ ಎಂದುಕೊಂಡು ಪ್ರಯೋಜನವೇ ಇಲ್ಲದ ಪ್ರಯತ್ನವನ್ನು ಮುಂದುವರಿಸುತ್ತಲೇ ಇರಬೇಕಿಲ್ಲ. ಶಿಸ್ತಿನಿಂದ ಕೆಲಸ ಮಾಡುವುದೆಷ್ಟು ಮುಖ್ಯವೋ ಅಷ್ಟೇ ಮುಖ್ಯ ನಮ್ಮ ಕೆಲಸಗಳನ್ನು, ಉದ್ದೇಶಗಳನ್ನು ಒಂದು ವಿಶಾಲ ಭಿತ್ತಿಯಲ್ಲಿ ಅನೇಕ ದೃಷ್ಟಿಕೋನಗಳಿಂದ ಪರೀಕ್ಷಿಸುವುದು. ಸೂಕ್ತವಲ್ಲದ ಹಾದಿಯಲ್ಲಿ ಶಿಸ್ತಿನಿಂದ ಕೆಲಸ ಮಾಡಿದರೂ ವ್ಯರ್ಥವಲ್ಲವೇ?

8. ನಾವು ಇಂದು ಮಾಡುವ ಅತಿ ಸಣ್ಣ ಆಲೋಚನೆ, ಚಿಂತನೆಗಳೂ; ನಮ್ಮನ್ನು ಹಾದುಹೋಗುವ ಎಲ್ಲ ಭಾವನೆಗಳು, ಅನುಭೂತಿಗಳೂ; ನಮ್ಮ ಎಲ್ಲ ಕೆಲಸಗಳು, ಧೋರಣೆಗಳೂ ನಮ್ಮ ಭವಿಷ್ಯವನ್ನು ಇಂದಿನಿಂದಲೇ ನಿರ್ಧರಿಸುತ್ತಿರುತ್ತದೆ ಎನ್ನುವ ವಿವೇಕವೇ ಶಿಸ್ತನ್ನು ಅಭ್ಯಾಸಮಾಡಿಕೊಳ್ಳಬೇಕು ಎಂದು ನಮ್ಮನ್ನು ಎಚ್ಚರಿಸುತ್ತಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT