ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Yoga And Health | ಯೋಗ ಲೋಕಕ್ಷೇಮದ ಆರೋಗ್ಯಸೂತ್ರ

Published 19 ಜೂನ್ 2023, 23:35 IST
Last Updated 19 ಜೂನ್ 2023, 23:35 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ‘ಯೋಗ’ವನ್ನು ದರ್ಶನ ಎಂದು ಆದರಿಸಲಾಗಿದೆ. ದರ್ಶನ ಎಂದರೆ ಕಾಣ್ಕೆ; ಆಳವಾದ ನೋಟ, ಅಂತರಂಗದ ಬೆಳಕು – ಹೀಗೆಲ್ಲ ಅರ್ಥ ಮಾಡಬಹುದು. ಜೀವನಕ್ಕೆ ಒದಗುವ ಅರಿವಿನ ಬೆಳಕನ್ನು ನಮ್ಮಲ್ಲಿ ‘ದರ್ಶನ’ ಎಂದು ಕರೆಯಲಾಗಿದೆ.

ನಮ್ಮ ಜೀವನ ಚೆನ್ನಾಗಿರಲು ಏನು ಬೇಕು? ಅನ್ನ, ಬಟ್ಟೆ, ನೀರು – ಹೀಗೆಲ್ಲ ಮೂಲಭೂತ ಅಗತ್ಯಗಳನ್ನು ಒಕ್ಕಣಿಸಬಹುದು. ಆದರೆ ಈ ಮೂಲಭೂತ ವಸ್ತುಗಳಿದ್ದರೂ ಅವನ್ನು ಬಳಸಿಕೊಳ್ಳಲು, ಅವುಗಳಿಂದ ಪ್ರಯೋಜನವನ್ನು ಪಡೆಯಲು ನಮಗೆ ಆವಶ್ಯಕವಾಗಿ ಬೇಕಾಗಿರುವುದು ಆರೋಗ್ಯ. ಹೀಗೆ ನಮಗೆ ಬೇಕಾದ ಆರೋಗ್ಯವನ್ನು ಸಂಪಾದಿಸಲು, ಸಂಪಾದಿಸಿದ್ದನ್ನು ಉಳಿಸಿಕೊಳ್ಳಲು ಬೇಕಾದ ಅರಿವನ್ನು ನೀಡುವ ದರ್ಶನವೇ ‘ಯೋಗದರ್ಶನ.’

ಯೋಗದರ್ಶನ ಪ್ರತಿಪಾದಿಸುವ ಆರೋಗ್ಯದ ಕಲ್ಪನೆ ಕೂಡ ವಿಶಿಷ್ಟವಾಗಿದೆ. ಆರೋಗ್ಯ ಎಂದರೆ ಕೇವಲ ದೈಹಿಕವಾದ ಆರೋಗ್ಯವಷ್ಟೆ ಅಲ್ಲ, ಮಾನಸಿಕ ಮತ್ತು ಬೌದ್ಧಿಕ ಆರೋಗ್ಯವೂ ಇದರಲ್ಲಿ ಅಡಕಗೊಂಡಿದೆ. ಯೋಗದ ಎಂಟು ಅಂಗಗಳಲ್ಲಿ ಈ ವ್ಯಾಪ್ತಿ ಎದ್ದುಕಾಣುತ್ತದೆ. ಯೋಗದರ್ಶನದ ಮೂಲಪುರುಷನ್ನಾಗಿ ಮಹರ್ಷಿ ಪತಂಜಲಿಯನ್ನು ಹೇಳುವುದುಂಟು; ಆದರೆ ಪಾತಂಜಲ ಯೋಗಸೂತ್ರಗಳಿಗೂ ಮೊದಲೇ ವೇದ–ಉಪನಿಷತ್ತುಗಳಲ್ಲಿಯೇ ಯೋಗದ ವಿವರಗಳನ್ನು ಕಾಣಲಾದೀತು. ಹೀಗಿದ್ದರೂ ಅಧ್ಯಯನದ ದೃಷ್ಟಿಯಿಂದ ಪತಂಜಲಿಗಳ ‘ಯೋಗಸೂತ್ರ‘ಗಳನ್ನು ಈ ಶಾಸ್ತ್ರದ ಆಕರದಂತೆ ಪರಿಗಣಿಸಲಾಗುತ್ತದೆ. ಆದರೆ ಭಾರತೀಯ ದರ್ಶನದ ಬೇರೆ ಬೇರೆ ಶಾಖೆಗಳ ಪರಿಚಯವಿಲ್ಲದಿದ್ದರೆ ಈ ದರ್ಶನ ಸಮಗ್ರವಾಗಿ ನಮಗೆ ಒದಗದು. ಯೋಗಸೂತ್ರಗಳನ್ನು ಸಮಾಧಿ, ಸಾಧನ, ವಿಭೂತಿ ಮತ್ತು ಕೈವಲ್ಯ ಎಂಬ ನಾಲ್ಕು ಪಾದಗಳಲ್ಲಿ ವಿಭಾಗಿಸುವುದುಂಟು. ಈ ವಿಭಾಗಗಳನ್ನು ನೋಡಿದಾಗ ಈ ಶಾಸ್ತ್ರವು ಕೇವಲ ದೈಹಿಕ ಆರೋಗ್ಯವನ್ನು ಮಾತ್ರವೇ ಪ್ರತಿಪಾದಿಸುವ ವ್ಯಾಯಾಮದ ಗ್ರಂಥವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಇಂದು ಯೋಗ ಎಂದರೆ ಯೋಗಾಸನಗಳು ಮಾತ್ರವೇ ಎಂಬ ವ್ಯಾಖ್ಯಾನ ಹೊರಟಂತಿದೆ; ಇದರ ಜೊತೆಗೆ ಸ್ವಲ್ಪಮಟ್ಟಿಗೆ ಪ್ರಾಣಾಯಾಮವನ್ನೂ ಕೆಲವರು ಸೇರಿಸುತ್ತಾರೆ; ಆದರೆ ಇದಷ್ಟೇ ಯೋಗದರ್ಶನವಲ್ಲ. ನಮ್ಮ ಜೀವನದಲ್ಲಿ ಶಾಶ್ವತವೂ ಸುಖಕರವೂ ಅದ ನೆಮ್ಮದಿಯ ಸ್ಥಿತಿಯನ್ನು ಹೊಂದುವುದು ಯೋಗದ ಗುರಿ; ಅದಕ್ಕೆ ಬೇಕಾದ ದೇಹ–ಮನಸ್ಸು–ಬುದ್ಧಿಗಳನ್ನು ಹೊಂದಿಸಲು, ಸಿದ್ಧಿಗೊಳಿಸಲು ಒದಗುವ ದೈಹಿಕ–ಮಾನಸಿಕ ಉಪಾಯಗಳೆಲ್ಲವೂ ಯೋಗವೇ.

ನಮ್ಮ ದೇಶದ ಬಹುಪಾಲು ದಾರ್ಶನಿಕರು ಯೋಗದ ಯಾವುದಾದರೊಂದು ಅಂಗವನ್ನಾದರೂ ಸಾಧನೆಯ ಭಾಗವಾಗಿ ಸ್ವೀಕರಿಸಿದ್ದಾರೆ ಎಂಬುದು ಗಮನಾರ್ಹ. ಉದಾಹರಣೆಗೆ, ಬುದ್ಧ ಭಗವಂತನು ಆರ್ಯಸತ್ಯಗಳ ಭಾಗವಾಗಿಯೇ ಎಂಟು ಯೋಗಗಳನ್ನೂ ಉಪದೇಶಿಸಿದ; ಸಮ್ಯಕ್‌ ದೃಷ್ಟಿ, ಸಮ್ಯಕ್‌ ಸಂಕಲ್ಪ, ಸಮ್ಯಕ್‌ ವಾಕ್‌, ಸಮ್ಯಕ್‌ ಕರ್ಮ, ಸಮ್ಯಕ್‌ ಆಜೀವ, ಸಮ್ಯಕ್‌ ವ್ಯಾಯಾಮ, ಸಮ್ಯಕ್‌ ಸ್ಮೃತಿ ಮತ್ತು ಸಮ್ಯಕ್‌ ಸಮಾಧಿ – ಇವೇ ಆ ಅಂಗಗಳು. ನಮ್ಮ ಅಂತರಂಗ–ಬಹಿರಂಗದ ಶುದ್ಧಿಗಾಗಿ ಬೇಕಾದ ಸಾಧನೆಗಳೆಲ್ಲವೂ ಇದರಲ್ಲಿ ಸೇರಿದೆ ಎಂಬುದು ಸ್ಪಷ್ಟ. ಪತಂಜಲಿಯು ’ಯೋಗಃ ಚಿತ್ತವೃತ್ತಿನಿರೋಧಃ’ ಎಂದೇ ಯೋಗದ ಲಕ್ಷಣವನ್ನು ಹೇಳಿರುವುದನ್ನು ಮರೆಯುವಂತಿಲ್ಲ. ಚಿತ್ತವೆಂದರೆ ಮನಸ್ಸು, ಬುದ್ಧಿ, ಅಹಂಕಾರ. ಹೀಗಾಗಿ, ಆತ್ಮಸಾಕ್ಷಾತ್ಕಾರಕ್ಕಾಗಿ ನಮ್ಮ ದೈಹಿಕ–ಮಾನಸಿಕವಾದ ಏಳು–ಬೀಳುಗಳನ್ನು ಸಂಯಮದಲ್ಲಿರಿಸಿಕೊಳ್ಳಬೇಕೆಂಬುದೇ ಯೋಗದರ್ಶನದ ಕಾಣ್ಕೆ.

ಅಹಿಂಸೆ, ಸತ್ಯ, ಕಳ್ಳತನ ಮಾಡದಿರುವುದು, ಯಾವುದನ್ನೂ ಸುಮ್ಮನೆ ಪಡೆಯದಿರುವುದು, ಶುದ್ಧವಾಗಿರುವುದು, ಸಂತೋಷ, ತಪಸ್ಸು, ಸ್ವಾಧ್ಯಾಯ, ಆಸ್ತಿಕತೆ – ಇವುಗಳು ಯೋಗದ ಅಂಗಗಳನ್ನಾಗಿಯೇ ಹೇಳಲಾಗಿದೆ. ಯೋಗದ ವೈಶಾಲ್ಯ ಎಷ್ಟೆಂದು ಇದರಿಂದ ಗೊತ್ತಾಗುತ್ತದೆ. ನಮಗೆ, ಅದು ದೈಹಿಕ ಆರೋಗ್ಯವಾಗಲೀ, ಮಾನಸಿಕ ಆರೋಗ್ಯವಾಗಲೀ, ಬೌದ್ಧಿಕ ಆರೋಗ್ಯವಾಗಲೀ, ಬೇಕಾಗಿರುವುದು ಕೇವಲ ನಮ್ಮ ಸ್ವಾರ್ಥಸಾಧನೆಗೆ ಮಾತ್ರವಲ್ಲ, ಇಡಿಯ ಸಮಾಜದ ಆರೋಗ್ಯವನ್ನು ಕಾಪಾಡುವ ಹೊಣೆಗಾರಿಕೆಯೂ ಅದರಲ್ಲಿ ಸೇರಿದೆ ಎಂಬುದು ಮನನೀಯ.

ಭಗವದ್ಗೀತೆಯಲ್ಲಿಯ ’ಕರ್ಮಸು ಕೌಶಲಮ್‌‘ ಎಂಬ ಮಾತನ್ನು ಮತ್ತೆ ಮತ್ತೆ ನಾವು ಮನನ ಮಾಡಬೇಕಿದೆ; ನಾವು ಮಾಡುವ ಕೆಲಸಗಳಲ್ಲಿ ಇರಬೇಕಾದ ಜಾಣ್ಮೆ ಎಂದು ಇದರ ಸರಳಾರ್ಥ. ಇಲ್ಲಿಯ ಜಾಣತನ ಎನ್ನುವುದು ಆತ್ಮಘಾತಕವೂ ಲೋಕವಂಚಕವೂ ಆದ ಬುದ್ಧಿಯ ಕಸರತ್ತು ಅಲ್ಲ; ಇದು ನಮ್ಮನ್ನು ನಾವು ಲೋಕದ ಸಂತೋಷದಲ್ಲಿ ಶ್ರುತಿಗೊಳಿಸಿಕೊಳ್ಳುವ ಪ್ರಜ್ಞೆಯೇ ಈ ಕುಶಲತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT