ಶುಕ್ರವಾರ, ಮಾರ್ಚ್ 31, 2023
22 °C

Kidney Day | ಕಿಡ್ನಿ ಆರೋಗ್ಯವಾಗಿರಬೇಕೇ? ಅನಗತ್ಯ ಮಾತ್ರೆಗೆ ಕಡಿವಾಣ ಹಾಕಿ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಮುಷ್ಠಿಯ ಗಾತ್ರದಷ್ಟಿದ್ದರೂ ದೇಹವನ್ನು ಆರೋಗ್ಯಕರವಾಗಿರಿಸುವ ಅಂಗವೆಂದರೆ ಕಿಡ್ನಿ. ಪಕ್ಕೆಲುಬಿನ ಕೆಳಭಾಗದಲ್ಲಿರುವ ಈ ಎರಡು ಕಿಡ್ನಿಗಳು ದೇಹದಿಂದ ಉತ್ಪತ್ತಿಯಾಗುವ ತ್ಯಾಜ್ಯ ಉತ್ಪನ್ನಗಳನ್ನು ಫಿಲ್ಟರ್‌ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದು ರಕ್ತದ PH, ಎಲೆಕ್ಟ್ರೋಲೈಟ್ ಸಮತೋಲನ, ಮೂಳೆ ಮತ್ತು ಖನಿಜಗಳ ಕಾರ್ಯವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಜೊತೆಗೆ ಇದು ನಮ್ಮ ದೇಹದ ರಕ್ತದೊತ್ತಡವನ್ನು ಕಾಪಾಡಿಕೊಳ್ಳುವಲ್ಲಿಯೂ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇಷ್ಟೆಲ್ಲಾ ಕೆಲಸ ಮಾಡುವ ಕಿಡ್ನಿಯ ಆರೋಗ್ಯ ಕಾಪಾಡುವುದು ಅತ್ಯಂತ ಪ್ರಮುಖ. ಆರೋಗ್ಯಕರ ಕಿಡ್ನಿ ಹೋಂದುವ ಬಗ್ಗೆ ಫೋರ್ಟಿಸ್‌ ಆಸ್ಪತ್ರೆ ಫ್ರಾಲಜಿಸ್ಟ್ ಮತ್ತು ಕಸಿ ವೈದ್ಯರಾದ ಡಾ. ಹರ್ಷ ಕುಮಾರ್ ಎಚ್.ಎನ್ ಸಲಹೆ ನೀಡಿದ್ದಾರೆ.

***

1. ಫಿಟ್ ಆಗಿರಿ: ಮನುಷ್ಯ ಆರೋಗ್ಯವಾಗಿರಲು ಪ್ರತಿನಿತ್ಯ ಕನಿಷ್ಠ 30 ನಿಮಿಷಗಳ ಕಾಲ ಯಾವುದಾದರೊಂದು  ದೈಹಿಕ ವ್ಯಾಯಮ ಮಾಡುವುದು ಅತ್ಯಂತ ಅವಶ್ಯಕ. ಇದು ನಿಮ್ಮ ಕಿಡ್ನಿಯನ್ನು ಆರೋಗ್ಯಕ್ಕೂ ಉಪಯುಕ್ತ. ಪ್ರತಿನಿತ್ಯ ಬೇರಾವುದೋ ಕೆಲಸಗಳಿಗೆ ಸಮಯ ನೀಡುವ ಜೊತೆಗೆ ವೇಗವಾಗಿ ನಡೆಯುವುದು, ಸೈಕಲಿಂಗ್‌, ಈಜು, ಯೋಗ, ನೃತ್ಯ ಇಂತಹ ದೈಹಿಕ ಚಟುವಟಿಕೆಗೂ ಸಮಯ ನೀಡಿ.

2. ರಕ್ತದೊತ್ತಡದ ಮೇಲೆ ಗಮನವಿರಲಿ: ಅಧಿಕ ರಕ್ತದೊತ್ತಡವು ಮೂತ್ರಪಿಂಡದ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಆರೋಗ್ಯಕರ ಮೂತ್ರಪಿಂಡ ಕಾಪಾಡಿಕೊಳ್ಳಲು ನಿಯಮಿತವಾಗಿ ಬಿಪಿ ಮೇಲೆ ನಿಯಂತ್ರಣ ಹೊಂದಿರಿ. ಈಗಾಗಲೇ ನಿಮಗೆ ಬಿಪಿ ಸಮಸ್ಯೆ ಇದ್ದರೆ, ವೈದ್ಯರ ಸಲಹೆಯಂತೆ ಆಂಟಿ ಹೈಪರ್ಟೆನ್ಸಿವ್ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಿ. ಜೊತೆಗೆ ಊಟದ ಮೇಲೆ ನಿಯಂತ್ರಣವಿರಲಿ.

3. ಡಯಾಬಿಟಿಸ್‌ ಬಾರದಂತೆ ಕಾಪಾಡಿಕೊಳ್ಳಿ: ವಿಶ್ವದಲ್ಲೇ ಡಯಾಬಿಟಿಸ್‌ ಅತ್ಯಂತ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಇದು ವಯಸ್ಕರಲ್ಲೂ ಸಾಮಾನ್ಯವಾಗಿದೆ. ಅಧ್ಯಯನಗಳ ಪ್ರಕಾರ ಸುಮಾರು ಶೇ. 30ರಷ್ಟು ಅನಿಯಂತ್ರಿತ ಮಧುಮೇಹಿಗಳು ಮೂತ್ರಪಿಂಡದ ಸಮಸ್ಯೆ ಅಥವಾ ಮೂತ್ರಪಿಂಡದ ವೈಫಲ್ಯವನ್ನು ಹೊಂದುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಆರೋಗ್ಯಕರ ಕಿಡ್ನಿ ಹೊಂದಲು ಬಯಸುವವರು ಸಕ್ಕರೆ ಕಾಯಿಲೆ ಬಾರದಂತೆ ನೋಡಿಕೊಳ್ಳೀ. ಡಯಾಬಿಟಿಸ್‌ ಇರುವ ಬಹುತೇಕರಿಗೆ ಕಿಡ್ನಿ ಸಮಸ್ಯೆ ಸಾಮಾನ್ಯವಾಗಿದೆ ಎನ್ನಲಾಗುತ್ತಿದೆ.

4. ಬಿಎಂಐ ಪರೀಕ್ಷಿಸಿಕೊಳ್ಳಿ: ಮತ್ತೊಂದು ಮುಖ್ಯವಾದ ಅಂಶವೆಂದರೆ, ನಿಮ್ಮ ದೇಹದ ತೂಕ ನಿಯಂತ್ರಣದಲ್ಲಿದೆಯೇ ಎಂದು ಗಮನಿಸುತ್ತಿರಿ. ನಿಮ್ಮ ಎತ್ತರಕ್ಕೆ ಅನುಗುಣವಾಗಿ ನಿಮ್ಮ ತೂಕದ ಬಿಎಂಐ ಪರೀಕ್ಷಿಸಿಕೊಳ್ಳಿ. ಒಂದು ವೇಳೆ ನಿಮ್ಮ ತೂಕ ಹೆಚ್ಚಿದ್ದರೆ ಖಂಡಿತ ಅದು ನಿಮ್ಮ ಕಿಡ್ನಿಯ ಮೇಲೆ ಪ್ರಭಾವ ಬೀರಲಿದೆ. ನಿಮ್ಮ ತೂಕವನ್ನು ಕಾಪಾಡಿಕೊಳ್ಳಲು ಸಾಧ್ಯವಾದಷ್ಟು ತಾಜಾ ಹಣ್ಣು ಮತ್ತು ತರಕಾರಿ ಸೇವಿಸಿ, ಪ್ರೋಟಿನ್‌ ಆಹಾರವನ್ನೇ ತೆಗೆದುಕೊಳ್ಳಿ. ಅದರಲ್ಲೂ ನಿಮ್ಮ ಕಿಡ್ನಿಯ ಆರೋಗ್ಯಕ್ಕೆ ಪ್ರಮುಖವಾಗಿ ಹೂಕೋಸು, ಬೆರಿಹಣ್ಣುಗಳು, ಮೀನು ಮತ್ತು ಧಾನ್ಯಗಳಂತಹ ಸೋಡಿಯಂ ಕಡಿಮೆ ಇರುವ ತಾಜಾ ಪದಾರ್ಥಗಳನ್ನಷ್ಟೇ ತೆಗೆದುಕೊಳ್ಳಿ. 5. ಸಾಕಷ್ಟು ನೀರು ಕುಡಿಯಿರಿ:  ಮೂತ್ರಪಿಂಡದ ಆರೋಗ್ಯಕ್ಕೆ ಪ್ರಮುಖ ಅಸ್ತ್ರವೆಂದರೆ ಹೆಚ್ಚು ನೀರು ಕುಡಿಯುವುದು. ಹೌದು, ಹೆಚ್ಚು ನೀರು ಕುಡಿದಷ್ಟು, ಕಿಡ್ನಿಯಲ್ಲಿ ಕಲ್ಲಾಗುವುದನ್ನು ತಪ್ಪಿಸಬಹುದು, ಜೊತಗೆ, ಕಲುಶಿತ ಆಹಾರ ಕಿಡ್ನಿಯಲ್ಲಿ ಶೇಖರಣೆಗೊಳ್ಳದಂತೆಯೇ ಕಾಪಾಡಲಿದೆ. ಪ್ರತಿಯೊಬ್ಬರು ಕನಿಷ್ಠ ೨ ರಿಂದ ೩ ಲೀಟರ್‌ ನೀರನ್ನು ಕಡ್ಡಾಯವಾಗಿ ಸೇವಿಸಬೇಕು. ಮಕ್ಕಳಿಗೆ ಚಿಕ್ಕಂದಿನಿಂದಲೇ ನೀರು ಕುಡಿಯುವ ಪ್ರಾಮುಖ್ಯತೆ ಬಗ್ಗೆ ತಿಳಿ ಹೇಳಿ. ಇನ್ನು, ಧೂಮಪಾನ ಹಾಗೂ ಮಧ್ಯಪಾನ ಸೇವನೆ ಕೂಡ ಕಿಡ್ನಿ ಮೇಲೆ ಪರಿಣಾಮ ಬೀರಲಿದೆ.

7. ಪದೇ ಪದೇ ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಿ: ಸಾಕಷ್ಟು ಜನರು ಸಣ್ಣ ಸಮಸ್ಯೆಗೂ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಇದು ಆ ಕ್ಷಣಕ್ಕೆ ಮಾತ್ರ ರಿಲೀಫ್‌ ನೀಡಬಹುದು. ಆದರೆ, ಇದು ಮೂತ್ರಪಿಂಡವನ್ನು ಹಾನಿಗೊಳಿಸಬಹುದು ಅಥವಾ ಮೂತ್ರಪಿಂಡದ ವೈಫಲ್ಯಕ್ಕೂ ಕಾರಣವಾಗಬಹುದು. ಇನ್ನೂ ಕೆಲವರು, ಹರ್ಬಲ್‌ ಔಷಧಿಗಳಿಗೆ ಮಾರುಹೋಗುತ್ತಾರೆ. ಈ ಅಭ್ಯಾಸ ಕೂಡ ಕಿಡ್ನಿಗೆ ಅಪಾಯ ತಂದೊಡ್ಡಬಹುದು. ಹೀಗಾಗಿ ಪದೇ ಪದೇ ಮಾತ್ರೆ ತೆಗೆದುಕೊಳ್ಳುವುದು ಅಥವಾ ಹರ್ಬಲ್‌  ಔಷಧ ತೆಗೆದುಕೊಳ್ಳುವುದನ್ನು ಆದಷ್ಟು ಕಡಿಮೆ ಮಾಡಿ.

8. ಮೂತ್ರಪಿಂಡದ ಪರೀಕ್ಷೆ ಮಾಡಿಸುತ್ತಿರಿ: ಕೆಲವರಿಗೆ ಮೂತ್ರಪಿಂಡದ ಸಮಸ್ಯೆ ಇದ್ದರೂ ಅದನ್ನು ನಿರ್ಲಕ್ಷಿಸುತ್ತಾರೆ. ಈ ತಪ್ಪನ್ನು ಮಾಡದಿರಿ. ೫೦ ವರ್ಷ ದಾಟಿದ ಬಳಿಕ ಪ್ರತಿಯೊಬ್ಬರು ಮೂತ್ರಪಿಂಡ ಅಥವಾ ಮೂತ್ರದ ಪರೀಕ್ಷೆ ಮಾಡಿಸುವುದು ಸೂಕ್ತ. ಈ ಪರೀಕ್ಷೆಯಿಂದ ಮೂತ್ರಪಿಂಡದ ಕಲ್ಲುಗಳು, ಹೃದಯರಕ್ತನಾಳದ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಾಯಿಲೆ ಇರುದಾದರೆ ತಿಳಿದು ಬರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು