ಶನಿವಾರ, ಸೆಪ್ಟೆಂಬರ್ 25, 2021
23 °C

ಸಂಪ್ರೀತಿಯ ಸಾಂಗತ್ಯಕ್ಕೆ ಲೈಂಗಿಕ ಸುಖವೂ ಅನ್ಯೋನ್ಯತೆಯೂ

ಡಾ. ಬ್ರಹ್ಮಾನಂದ ನಾಯಕ Updated:

ಅಕ್ಷರ ಗಾತ್ರ : | |

Prajavani

ಲೈಂಗಿಕತೆ ಕುರಿತು ಮಾತನಾಡುವುದೇ ನಿಷೇಧ ಎಂಬ ಭಾವನೆ ನಮ್ಮಲ್ಲಿದೆ. ಅದರ ಬಗ್ಗೆ ಕೊಂಚ ಮಾತನಾಡಿದರೂ ಸಾಕು, ಏನೋ ತಪ್ಪು ಮಾಡಿದ್ದೇವೆ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಪುರುಷರಂತೂ ಕಾಮದ ಕುರಿತ ವಿವರಗಳನ್ನು ಅಶ್ಲೀಲ ಸಾಹಿತ್ಯ, ವಿಡಿಯೊದಿಂದ ಅಥವಾ ನೈಜತೆಗಿಂತ ವೈಭವೀಕರಿಸಿ ಮಾತನಾಡುವ ಸ್ನೇಹಿತರಿಂದ ಪಡೆಯುವುದು ಸಾಮಾನ್ಯ. ಕೆಲವು ಹುಡುಗಿಯರಿಗಂತೂ ಲೈಂಗಿಕ ಶಿಕ್ಷಣವೆಂಬುದು ಮದುವೆಯಾಗುವವರೆಗೂ ಇರುವುದೇ ಇಲ್ಲ. ಆದರೆ ದಂಪತಿಯಲ್ಲಿ ಹೊಂದಾಣಿಕೆ ಬೇಕಾದರೆ ಲೈಂಗಿಕತೆ ಹಾಗೂ ಅನ್ಯೋನ್ಯತೆ ಎಂಬುದು ತುಂಬಾ ಮುಖ್ಯ.

ತೀರಾ ಹಿಂದೆ ಹಸಿವೆ, ಬಾಯಾರಿಕೆಯಂತೆ ಕಾಮವನ್ನೂ ಪರಿಗಣಿಸುತ್ತಿದ್ದರು. ಅದು ಮನುಷ್ಯನ ಮೂಲಭೂತ ಅವಶ್ಯಕತೆ ಎಂಬುದಂತೂ ನಿಜ. ಆದರೆ ಲೈಂಗಿಕತೆ ಎನ್ನುವುದು ಕೇವಲ ಮನರಂಜನೆಗಿರುವ ಚಟುವಟಿಕೆಯಲ್ಲ; ಹೀಗಾಗಿ ಸಹಜವಾಗಿಯೇ ಭಯ, ಆತಂಕ, ಒತ್ತಡ ಕೆಲವು ಸಮಸ್ಯೆಗಳಿಗೆ ಕಾರಣವಾಗಬಹುದು.

ದಂಪತಿ ಎದುರಿಸುವ ಕೆಲವು ಲೈಂಗಿಕ ಸಮಸ್ಯೆಗಳು

‘ಸುಹಾಗ್‌ ರಾತ್‌’ ಸಿಂಡ್ರೋಮ್‌: ಹೊಸದಾಗಿ ಮದುವೆಯಾದ ಭಾರತೀಯರಲ್ಲಿ ಇದೊಂದು ಮಾಮೂಲು ಸಮಸ್ಯೆ. ಅಂದರೆ ದಂಪತಿ ಈ ಸಂದರ್ಭದಲ್ಲಿ ನಿದ್ರೆ ಮಾಡುವುದೇ ಹೆಚ್ಚಂತೆ. ಕಾರಣ ಗೊತ್ತಿರುವಂಥದ್ದೇ. ಭಾರತದಲ್ಲಿ ವಿವಾಹವೆಂದರೆ 3–4 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವಂತಹ ಕಾರ್ಯಕ್ರಮ. ಎಲ್ಲವೂ ಮುಗಿಯುವ ಹೊತ್ತಿಗೆ ವಧು– ವರರಿಗೆ ಆಯಾಸದಿಂದ ನಿದ್ರೆ ಮಾಡಿದರೆ ಸಾಕಾಗಿರುತ್ತದೆ. ಹಿರಿಯರು ನಿಶ್ಚಯಿಸಿದ ಮದುವೆಯಾದರಂತೂ ಆತಂಕ, ಹಿಂಜರಿಕೆ ಸಹಜ. ಹೀಗಾಗಿ ಮೊದಲ ರಾತ್ರಿ ಲೈಂಗಿಕ ಕ್ರಿಯೆ ನಡೆಸದೇ ಇರುವ ದಂಪತಿ ಸಂಖ್ಯೆಯೂ ಜಾಸ್ತಿ. ಹಾಗೆಯೇ ದಂಪತಿಯ ಮಧ್ಯೆ ಪರಸ್ಪರ ಸಂವಹನ ನಡೆಯುವುದೂ ಕಡಿಮೆಯೇ. ಹೀಗಾಗಿ ಮೊದಲ ರಾತ್ರಿಯ ಬಗ್ಗೆ ಆತಂಕ, ಭಯವಿದ್ದರೆ ಅದು ಸಹಜವೇ! ನಿಮ್ಮ ಸ್ನೇಹಿತನೇನಾದರೂ ತನ್ನ ಮೊದಲ ರಾತ್ರಿಯ ಬಗ್ಗೆ ಅತಿರಂಜಿತವಾಗಿ ಹೇಳಿದರೆ ಅವನು ಸುಳ್ಳು ಹೇಳುತ್ತಿದ್ದಾನೆ ಎಂದುಕೊಳ್ಳಿ.

ಲೈಂಗಿಕತೆಯ ಕುರಿತು ಅರಿವಿನ ಕೊರತೆ: ಹೆಚ್ಚಿನವರಿಗೆ ಲೈಂಗಿಕ ಶಿಕ್ಷಣದ ಕೊರತೆಯಿರುತ್ತದೆ. ಪುರುಷರು ಸ್ವಲ್ಪ ಅರಿವು ಬೆಳೆಸಿಕೊಂಡಿದ್ದರೂ, ಕೆಲವು ಸಾಂಪ್ರದಾಯಿಕ ಹಿನ್ನೆಲೆಯುಳ್ಳ ಹುಡುಗಿಯರಿಗೆ ಈ ಬಗ್ಗೆ ತಿಳಿವಳಿಕೆ ಇಲ್ಲದಿರಬಹುದು. ಅಂತಹ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆದರೆ ಖುಷಿಗಿಂತ ಆಘಾತವೇ ಜಾಸ್ತಿ. ಹೀಗಾಗಿ ಇದೊಂದು ಆಘಾತಕಾರಿ ಘಟನೆಯಾಗಿ ಕಾಡಬಹುದು. ದೈಹಿಕವಾಗಿ ನೋವಾದರಂತೂ ಕೇಳುವುದೇ ಬೇಡ.

ಇಂತಹ ಸಂದರ್ಭದಲ್ಲಿ ಸಂಗಾತಿಗಳು ಪರಸ್ಪರ ಮಾತುಕತೆಯಾಡುವುದು ಮುಖ್ಯ. ಲೈಂಗಿಕತೆ ಬಗ್ಗೆ ಚರ್ಚಿಸಿದ ನಂತರ ಮುಂದುವರಿಯಬಹುದು. ಅಗತ್ಯವಿದ್ದರೆ ಲೈಂಗಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಬಹುದು.

ಆತಂಕ: ನಮ್ಮ ಸಮಾಜದಲ್ಲಿ ಪುರುಷರನ್ನು ‘ಮ್ಯಾಕೊ’ ಎಂದೇ ಬಿಂಬಿಸಲಾಗುತ್ತಿದ್ದು, ಲೈಂಗಿಕ ಸಾಮರ್ಥ್ಯದ ಕುರಿತ ಭಯ ಮತ್ತು ಅಭದ್ರತೆಯು ಒತ್ತಡ ಹಾಗೂ ಆತಂಕವನ್ನು ಸೃಷ್ಟಿಸುತ್ತದೆ. ಹಲವರು ಅಶ್ಲೀಲ ವಿಡಿಯೊ ವೀಕ್ಷಣೆಯಿಂದ ತಮ್ಮ ಅಂಗಾಂಗಗಳ ಗಾತ್ರದ ಬಗ್ಗೆಯೂ ಕೀಳರಿಮೆ ಬೆಳೆಸಿಕೊಂಡಿರುತ್ತಾರೆ. ಆದರೆ ವಿಡಿಯೊದಲ್ಲಿರುವುದೆಲ್ಲ ಭ್ರಮೆ ಅಷ್ಟೆ. ಹೀಗಾಗಿ ಇಂತಹ ಕೀಳರಿಮೆ ಬಿಟ್ಟುಬಿಡಿ.

ಇವಲ್ಲದೇ ಶೀಘ್ರ ಸ್ಖಲನವಾಗುವುದು ಕೂಡ ಆತಂಕದ ಲಕ್ಷಣಗಳು. ಆರಂಭದಲ್ಲಿ ಇದು ಸಾಮಾನ್ಯ ಎಂದು ಪರಿಗಣಿಸಿದರೂ ಪದೇ ಪದೇ ಈ ಸಮಸ್ಯೆ ಎದುರಾದರೆ ತಜ್ಞರನ್ನು ಭೇಟಿ ಮಾಡಬಹುದು.

ಮಹಿಳೆಯರಲ್ಲಿ ನೋವು: ಲೈಂಗಿಕ ಕ್ರಿಯೆಯಲ್ಲಿ ಮಹಿಳೆಯರಿಗೆ ತೀವ್ರತರದ ನೋವು (ಡಿಸ್ಪರ‍್ಯುನಿಯ) ಕಾಡಬಹುದು. ಭಯ, ಆತಂಕದಿಂದ ಜನನಾಂಗ ಒಣಗಿದ್ದರೆ ಈ ಸಮಸ್ಯೆ ಉಂಟಾಗಬಹುದು. ಉದ್ರೇಕದ ಕೊರತೆಯಿದ್ದರೂ ಹೀಗಾಗಬಹುದು. ಆದರೆ ಈಗೆಲ್ಲ ಇದಕ್ಕೆ ಲುಬ್ರಿಕಂಟ್‌ ಜೆಲ್ಲಿ ಔಷಧದ ಅಂಗಡಿಯಲ್ಲಿ ಲಭ್ಯ. ಇದು ಬಿಟ್ಟು ಕಿಬ್ಬೊಟ್ಟೆ ಸೋಂಕು, ಬಿಗಿಯಾದ ಜನನಾಂಗದ ಪೊರೆ ನೋವಾಗಲು ಇತರ ಕಾರಣಗಳು. ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು ಇದಕ್ಕೆ ಪರಿಹಾರ ನೀಡಬಲ್ಲರು.

ಮಾನಸಿಕ ಕಾರಣಗಳಿಂದ ಜನನಾಂಗದ ಸ್ನಾಯುಗಳು ಬಿಗಿಯಾಗಿದ್ದರೂ ಸಮಸ್ಯೆ ಉದ್ಭವಿಸಬಹುದು. ಮನೆಯವರೇ ನಿಶ್ಚಯಿಸಿದ ಮದುವೆಯಲ್ಲಿ ಗಂಡ ಬಹುತೇಕ ಅಪರಿಚಿತನಾಗಿರುವುದರಿಂದ ಹಿಂಜರಿಕೆಯಿಂದ ಈ ತೊಂದರೆ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಸಂಗಾತಿಗೆ ಹೆಚ್ಚು ಸಹನೆ ಬೇಕು. ಆದರೂ ಸರಿ ಹೋಗದಿದ್ದರೆ ಆಪ್ತ ಸಮಾಲೋಚಕರ ಸಲಹೆ ಪಡೆಯಬಹುದು.

ಅನ್ಯೋನ್ಯತೆ

ಹೆಚ್ಚಿನವರು ಲೈಂಗಿಕತೆಗೆ ಪರ್ಯಾಯವಾಗಿ ಅನ್ಯೋನ್ಯತೆ ಎಂಬ ಪದವನ್ನು ಬಳಸಬಹುದು. ಆದರೆ ಲೈಂಗಿಕತೆಗಿಂತ ಹೆಚ್ಚಿನ ಅರ್ಥ ಇದಕ್ಕಿದೆ. ಭಾವನಾತ್ಮಕ ಅನ್ಯೋನ್ಯತೆಯು ದಂಪತಿಯ ಮಧ್ಯೆ ಬಾಂಧವ್ಯವನ್ನು ವೃದ್ಧಿಸುತ್ತದೆ.

ಅನ್ಯೋನ್ಯತೆ ಎನ್ನುವುದು ಆತ್ಮೀಯತೆಯನ್ನು ಹೆಚ್ಚಿಸುವಂತಿರಬೇಕು. ನಿತ್ಯದ ಕೆಲಸ ಹಂಚಿಕೊಂಡು ಇದನ್ನು ಸಾಧಿಸಬಹುದು. ಸಂಗಾತಿಯ ಆತಂಕ ಕಡಿಮೆ ಮಾಡುವ ಮೂಲಕ ಅನ್ಯೋನ್ಯತೆ ಹೆಚ್ಚಿಸಬಹುದು.

ಇದು ಇಬ್ಬರ ನಡುವಿನ ಬಾಂಧವ್ಯದಲ್ಲಿ ಸಹಜವಾಗಿರಬೇಕು. ಎಲ್ಲದರ ಬಗ್ಗೆ ಮುಕ್ತವಾಗಿ ಮಾತನಾಡಿ, ಇದನ್ನು ಹೆಚ್ಚಿಸಿಕೊಳ್ಳಬೇಕು.

ಅನ್ಯೋನ್ಯತೆ ಬೆಳೆಸಿಕೊಳ್ಳಲು ಕೊಂಚ ಸಮಯ ಬೇಕು. ಪ್ರತಿ ವಾರವೂ ನಿಗದಿತ ದಿನ, ನಿಗದಿತ ಸಂಜೆ ಸಂಗಾತಿಯೊಂದಿಗೆ ಇದಕ್ಕೆಂದೇ ಮೀಸಲಿಡಬಹುದು. ಮಕ್ಕಳು, ಸ್ನೇಹಿತರು, ಕೆಲಸ ಎಲ್ಲದಕ್ಕೂ ವಿರಾಮ ಕೊಟ್ಟು ಸಂಗಾತಿಯ ಜೊತೆ ಕಾಲ ಕಳೆದು, ಪರಸ್ಪರ ಮಾತನಾಡುತ್ತ ಸಾಂಗತ್ಯವನ್ನು ಹಂಚಿಕೊಳ್ಳಬಹುದು. ಒಟ್ಟಿಗೆ ನಡಿಗೆ, ಪಾರ್ಕ್‌ನಲ್ಲಿ ಬೆಂಚ್‌ ಮೇಲೆ ಕುಳಿತುಕೊಂಡು ಸಂಜೆಯ ಆಹ್ಲಾದಕತೆಯಲ್ಲಿ ಈ ಅನ್ಯೋನ್ಯತೆ ಸವಿಯಬಹುದು.

ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯ

ಭಾರತದಲ್ಲಿ ಮಕ್ಕಳ ಮೇಲೆ ಅದರಲ್ಲೂ ಪುಟ್ಟ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಜಾಸ್ತಿ. ಬಾಲಕಿಯರು ಭಯ ಪಟ್ಟು ಇದನ್ನು ಹೇಳಿಕೊಳ್ಳದೇ ಮಾನಸಿಕ ವೇದನೆ ಅನುಭವಿಸುತ್ತಿರುತ್ತಾರೆ. ತಮ್ಮ ಸುತ್ತು ಒಂದು ರೀತಿಯ ಗೋಡೆ ನಿರ್ಮಿಸಿಕೊಂಡಿರುತ್ತಾರೆ. ಯೌವನಕ್ಕೆ ಬಂದ ಮೇಲೆ ಲೈಂಗಿಕ ಕ್ರಿಯೆ ಎಂದರೆ ಇಂಥವರು ಹಿಂಜರಿಯಬಹುದು. ಆಗ ಸಂಗಾತಿಯು ಭಯ ಹೋಗಲಾಡಿಸುವ ಕೆಲಸ ಮಾಡಬೇಕಾಗುತ್ತದೆ.

ಸಂಗಾತಿಯ ಜೊತೆ ಪ್ರೀತಿ– ಪ್ರೇಮ, ಭಾವನಾತ್ಮಕ ಅನ್ಯೋನ್ಯತೆ ಸಾಧಿಸಿದರೆ ಲೈಂಗಿಕ ಬದುಕೂ ಕೂಡ ಸಂತಸವಾಗಿರುತ್ತದೆ.

ಮದುವೆಗಿಂತ ಮುನ್ನ ನೈತಿಕವಾದ ಲೈಂಗಿಕ ಶಿಕ್ಷಣ ಪಡೆಯಬೇಕಾಗುತ್ತದೆ. ಇದಕ್ಕೆ ಪೋಷಕರು ಸರಿಯಾದ ತಿಳಿವಳಿಕೆ ನೀಡಬೇಕು.

ನಿಮಗೇನು ಬೇಕು ಎಂಬುದರ ಬಗ್ಗೆ ಸಂಗಾತಿಯ ಜೊತೆ ಮುಕ್ತವಾಗಿ ಚರ್ಚಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು