ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಕೆಗಳೇ ಸಂಕೋಲೆಯಾದಾಗ…

ಏನಾದ್ರೂ ಕೇಳ್ಬೋದು
Last Updated 15 ಜನವರಿ 2021, 19:31 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ನನಗೆ ಮಂಗಳವಾರ ಮತ್ತು ಸಂಖ್ಯೆ 13ರ ಕುರಿತು ನಕಾರಾತ್ಮಕ ಯೋಚನೆಗಳು ಬರುತ್ತವೆ. ಆ ಸಮಯದಲ್ಲಿ ಯಾವುದೇ ಹೊಸ ವಿಷಯ ತಿಳಿದುಕೊಳ್ಳಲು ಅಥವಾ ಓದಲು ಹಿಂಜರಿಕೆ ಆಗುತ್ತದೆ. ಎಷ್ಟೇ ಪ್ರಯತ್ನಿಸಿದರೂ ಇದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇದೊಂದು ಮಾನಸಿಕ ಸಮಸ್ಯೆಯೇ? ಹೊರಬರುವುದು ಹೇಗೆ?

ಊರು, ಹೆಸರು ತಿಳಿಸಿಲ್ಲ.

ನಮಗೆಲ್ಲರಿಗೂ ಬಾಲ್ಯದ ಅನುಭವಗಳ ಮೂಲಕ ಭಿನ್ನಭಿನ್ನ ನಂಬಿಕೆಗಳು ಬಂದಿರಲು ಸಾಧ್ಯ. ಇದನ್ನು ಮಾನಸಿಕ ಸಮಸ್ಯೆ ಎಂದು ಹೇಳಲಾಗುವುದಿಲ್ಲ. ನಿಮ್ಮ ನಂಬಿಕೆಗಳು ನಿಮಗೆ ಮಾನಸಿಕ ಹಿಂಸೆ ನೀಡುತ್ತಿವೆ. ಅವುಗಳನ್ನು ನಿಧಾನವಾಗಿ ಬದಲಾಯಿಸಬಹುದು. ನಂಬಿಕೆಗಳು ಅಡ್ಡಬಂದಾಗ ಬಲವಂತವಾಗಿ ಹೊರಹಾಕುವ ಪ್ರಯತ್ನ ಮಾಡದೆ ಸುಮ್ಮನೆ ಕುಳಿತು ಅವುಗಳ ಮೂಲ ಎಲ್ಲಿರಬಹುದು ಎಂದು ನಿಮ್ಮ ಮನಸ್ಸನ್ನು ಶೋಧಿಸಿ. ಬಾಲ್ಯದ ಘಟನೆಗಳು ನೆನಪಾದರೆ ಮತ್ತೊಮ್ಮೆ ಅವುಗಳನ್ನು ಅನುಭವಿಸಿ. ಇಂತಹ ನಂಬಿಕೆಗಳಿಗೆ ಕಾರಣರಾದ ಗುರುಹಿರಿಯರ ಉದ್ದೇಶಗಳನ್ನು ಪ್ರಶ್ನಿಸಬೇಡಿ ಅಥವಾ ಅವರನ್ನು ದ್ವೇಷಿಸಬೇಡಿ. ನೀವು ಆಗ ಪ್ರಾಪಂಚಿಕ ಜ್ಞಾನವಿಲ್ಲದ ಮಗುವಾಗಿದ್ದಿರಿ ಮತ್ತು ಈಗ ವಯಸ್ಕರಾದ ನಿಮಗೆ ಅಂತಹ ನಂಬಿಕೆಗಳಿಂದ ಹೊರಬರುವುದು ಸಾಧ್ಯವಿದೆ ಎಂದು ನೆನಪಿಸಿಕೊಳ್ಳಿ. ನಂಬಿಕೆಗಳು ಕಾಡುವಾಗಲೆಲ್ಲಾ ಇವೆಲ್ಲವನ್ನೂ ಜ್ಞಾಪಿಸಿಕೊಳ್ಳುತ್ತಾ ಮಾಡಬೇಕೆಂದಿರುವ ಕೆಲಸವನ್ನು ವಾರ, ಸಂಖ್ಯೆಗಳನ್ನು ನೋಡದೆ ಮುಂದುವರಿಸಿ. ನಿಧಾನವಾಗಿ ನಂಬಿಕೆಗಳ ಪ್ರಭಾವ ಕಡಿಮೆಯಾಗುತ್ತದೆ. ಬಲವಂತವಾಗಿ ಕೀಳಲು ಪ್ರಯತ್ನಿಸಿದಷ್ಟೂ ಅವುಗಳ ಪ್ರಭಾವ ಹೆಚ್ಚುತ್ತವೆ ಎಂದು ಗಮನಿಸಿ.

ನಾನು ಯಾರನ್ನು ಇಷ್ಟ ಪಡುತ್ತೇನೋ ಅವರ ಮೇಲೆ ಸಣ್ಣ ವಿಷಯಕ್ಕೂ ಕೋಪ ಬಂದು ಜಗಳವಾಗುತ್ತದೆ. ಏನು ಮಾಡಬೇಕು?

ಲಕ್ಷ್ಮಿ, ಊರಿನ ಹೆಸರಿಲ್ಲ.

ವೈಯುಕ್ತಿಕ ವಿವರಗಳಿದ್ದಿದ್ದರೆ ಸಹಾಯವಾಗುತ್ತಿತ್ತು. ಇಷ್ಟಪಡುವವರ ಮೇಲೆ ನಿಮಗೆ ಅಧಿಕಾರವಿದೆ ಎಂದುಕೊಳ್ಳುತ್ತಿರಬೇಕಲ್ಲವೇ? ಹಾಗಾಗಿ ಅವರು ನಿಮಗೆ ಬೇಕಾದಂತೆ ಮಾತನಾಡಬೇಕು ಮತ್ತು ವರ್ತಿಸಬೇಕು ಎಂದು ನಿರೀಕ್ಷಿಸುತ್ತೀರಿ. ಅದಾಗದಿದ್ದಾಗ ಕೋಪದಿಂದ ಜಗಳವಾಡುತ್ತೀರಿ. ಪ್ರೀತಿ ಎಂದರೆ ಅಧಿಕಾರವಲ್ಲ, ಇತರರನ್ನು ಅವರಿರುವಂತೆಯೇ ಒಪ್ಪಿಕೊಳ್ಳುವುದೇ ಪ್ರೀತಿ. ಕೋಪ ಬಂದಾಗ ಏನೂ ಮಾತನಾಡದೆ ಅಲ್ಲಿಂದ ದೂರ ಹೋಗಿ ನಿಮ್ಮೊಳಗೆ ನಡೆಯುತ್ತಿರುವ ಮಾನಸಿಕ ಹೋರಾಟವನ್ನು ಗಮನಿಸಿ. ‘ಇಷ್ಪಪಡುವವರಿಂದ ಏನೇನು ನಿರೀಕ್ಷೆ ಇಟ್ಟುಕೊಳ್ಳುತ್ತೇನೆ? ನಿರೀಕ್ಷೆ ಹುಸಿಯಾದಾಗ ನೇರವಾಗಿ ಅದನ್ನು ಹೇಳದೆ ನನ್ನ ಹತಾಶೆಯನ್ನು ಕೋಪವನ್ನಾಗಿ ಬದಲಾಯಿಸುತ್ತೇನೆಯೇ? ನನಗೆ ಬೇಕಾದಂತೆಯೇ ಇತರರು ಇರಲು ಸಾಧ್ಯವೇ? ಭಿನ್ನತೆ, ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳುವುದು ನನಗೇಕೆ ಕಷ್ಟವಾಗುತ್ತಿದೆ?’ ಇವೆಲ್ಲವೂ ಅರ್ಥವಾದಾಗ ನಿಮ್ಮ ಸಂಬಂಧಗಳು ಸಹಜವಾಗುತ್ತವೆ.

23ರ ಯುವಕ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ನಾನು ಪ್ರೀತಿಸುತ್ತಿರುವ ಹುಡುಗಿ ಬೇರೆ ಜಾತಿಯವಳು. ಹಾಗಾಗಿ ಅವರ ಮನೆಯಲ್ಲಿ ಬೇರೆ ಮದುವೆಗೆ ಒಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಕೆಲಸ ಸಿಗುವವರೆಗೆ ನಾನು ಮದುವೆಯಾಗುವಂತಿಲ್ಲ. ನನಗೆ ಅವಳನ್ನು ಬಿಟ್ಟು ಇರಲು ಆಗುವುದಿಲ್ಲ. ಏನು ಮಾಡಲಿ?

ಹೆಸರು, ಊರು ತಿಳಿಸಿಲ್ಲ.

ಜೀವನದ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವ ಸ್ಥಿತಿಯಲ್ಲಿ ನೀವಿಲ್ಲ. ತನ್ನ ಪೋಷಕರನ್ನು ಒಪ್ಪಿಸುವುದು ಅಥವಾ ಅವರ ಒಪ್ಪಿಗೆಯಿಲ್ಲದಿದ್ದರೂ ನಿಮಗಾಗಿ ಕಾಯುವುದು ಹುಡುಗಿಯ ಜವಾಬ್ದಾರಿಯಲ್ಲವೇ? ಅವಳಿಗೆ ಅದು ಸಾಧ್ಯವಾಗದಿದ್ದರೆ ನೀವು ಅಸಹಾಯಕರಾಗುತ್ತೀರಿ. ಇದರಿಂದ ನಿಮಗೆ ನೋವಾಗುವುದು ಸಹಜ. ಆದು ನಿಮ್ಮ ಕೈಮೀರಿದ ಪರಿಸ್ಥಿತಿಗಳಿಂದ ಬರುತ್ತಿರುವುದು ಎನ್ನುವುದನ್ನು ಮರೆಯಬೇಡಿ. ನಿಮಗೆ ಪ್ರೀತಿಯ ಅಗತ್ಯವಿದೆ. ಜೊತೆಗೆ ಬಯಸಿದ ಪ್ರೀತಿ ಸಿಗದಿದ್ದರೂ ಸಮಾಧಾನದಿಂದ ಬದುಕುವ ಶಕ್ತಿಯೂ ನಿಮ್ಮೊಳಗಿದೆ. ಪೋಷಕರನ್ನು ನಿಭಾಯಿಸುವ ಜವಾಬ್ದಾರಿಯನ್ನು ಹುಡುಗಿಗೆ ಒಪ್ಪಿಸಿ, ನೀವು ಓದಿನ ಕಡೆ ಗಮನಹರಿಸಿ.

ನಾನು ಸಮಾಧಾನಕರ ಖಾಸಗಿ ಉದ್ಯೋಗವನ್ನು ಬಿಟ್ಟು 2 ವರ್ಷ ಸರ್ಕಾರಿ ಕೆಲಸಕ್ಕಾಗಿ ಓದಿದೆ. ಕಳೆದ ವರ್ಷದಿಂದ ಯಾವುದೇ ನೇಮಕಾತಿ ಇಲ್ಲ. ಮನೆ ಕಟ್ಟುತ್ತಿರುವುದರಿಂದ ಈಗ ಓದಲೂ ಆಗುತ್ತಿಲ್ಲ. ಪ್ರೀತಿಸಿದ ಹುಡುಗಿ ಬೇರೆಯವರನ್ನು ಮದುವೆಯಾಗುತ್ತಿದ್ದಾಳೆ. ಖಾಸಗೀ ಬ್ಯಾಂಕ್‌ನಲ್ಲಿದ್ದ ಹಣವೂ ಹಿಂದೆ ಬಾರದೆ ಮನೆ ಕೆಲಸ ನಿಂತಿದೆ. ಎಲ್ಲವನ್ನೂ ಕಳೆದುಕೊಂಡು ಜೀವನದಲ್ಲಿ ಸೋತುಬಿಟ್ಟೆ ಅನಿಸುತ್ತಿದೆ. ಭಯ ಮತ್ತು ಬೇಸರದಿಂದ ಮನಸ್ಸಿಗೆ ನೋವಾಗುತ್ತಿದೆ. ಇದರಿಂದ ಬೇಗ ಹೊರಬರುವುದು ಹೇಗೆ?

ಮಂಜುನಾಥ್‌, ಊರಿನ ಹೆಸರಿಲ್ಲ.

ನೀವು ತೀವ್ರವಾದ ಹತಾಶೆಯನ್ನು ಅನುಭವಿಸುತ್ತಿರುವುದರಿಂದ ತಕ್ಷಣದ ಪರಿಹಾರಗಳನ್ನು ನಿರೀಕ್ಷಿಸುವುದು ಸಹಜ. ಸಾಕಷ್ಟು ವರ್ಷಗಳಿಂದ ಸುತ್ತಲಿನ ಎಲ್ಲಾ ಪರಿಸ್ಥಿತಿಗಳೂ ನಿಮಗೆ ಸಹಕಾರಿಯಾಗಿಲ್ಲ. ಆದರೆ ಎಲ್ಲವೂ ನಿಮ್ಮ ತಪ್ಪುಗಳಿಂದಲೇ ಆಗಿರಲು ಸಾಧ್ಯವೇ? ಒಂದೆರೆಡು ತಪ್ಪು ನಿರ್ಧಾರಗಳಿಗಾಗಿ ನಿಮ್ಮ ಬಗೆಗೆ ನೀವೇ ಅಷ್ಟೊಂದು ಕ್ರೂರವಾಗುವ ಅಗತ್ಯವಿದೆಯೇ? ಎಲ್ಲವನ್ನೂ ಕಳೆದುಕೊಂಡ ಹತಾಶೆಯಲ್ಲಿ ನಿಮ್ಮನ್ನೇ ಹಳಿದುಕೊಂಡಾಗ ಅಸಹಾಯಕತೆ ಹೆಚ್ಚಬಹುದಲ್ಲವೇ? ಹಳೆಯ ಅನುಭವದ ಆಧಾರದ ಮೇಲೆ ಒಂದು ಉದ್ಯೋಗವನ್ನು ಹುಡುಕಿಕೊಳ್ಳಿ. ಕನಿಷ್ಠ ಎರಡು ವರ್ಷಗಳ ಯೋಜನೆಯನ್ನು ಹಾಕಿಕೊಂಡು ಹಂತಹಂತವಾಗಿ ಬೆಳೆಯುವ ಪ್ರಯತ್ನ ಮಾಡಿ. ತಾತ್ಕಾಲಿಕ ಸೋಲುಗಳನ್ನು ಒಪ್ಪಿಕೊಂಡು ಪ್ರಯತ್ನವನ್ನು ಮುಂದುವರಿಸಿ. ಕೈಮೀರಿದ ಪರಿಸ್ಥಿತಿಗಳು ನಿಮಗೆ ಬೇಕಾದ ವೇಗದಲ್ಲಿ ಬದಲಾಗುವುದಿಲ್ಲವೆಂದು ನೆನಪಿಸಿಕೊಳ್ಳಿ.

***

ಏನಾದ್ರೂ ಕೇಳ್ಬೋದು

ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಉತ್ತರಿಸಲಿದ್ದಾರೆ. bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT