ಮಂಗಳವಾರ, ಡಿಸೆಂಬರ್ 7, 2021
19 °C

ಆಲೋಚನೆಗಳು ನಿಯಂತ್ರಣದಲ್ಲಿರಲಿ

ರಘು ವಿ. Updated:

ಅಕ್ಷರ ಗಾತ್ರ : | |

Prajavani

ಜಗತ್ತು ಆಲೋಚನೆಗಳ ಮೊತ್ತ. ಇಡೀ ಸೃಷ್ಟಿಯಾದದ್ದೇ ಸಂಕಲ್ಪದಿಂದ ಎಂಬ ನಂಬಿಕೆಯಿದೆ. ಸಂಕಲ್ಪವೆಂದರೆ ಗಟ್ಟಿಯಾದ ಆಲೋಚನೆಯೇ ಅಲ್ಲದೆ ಬೇರೇನೂ ಅಲ್ಲ. ನಮ್ಮ ಜೀವನವೂ ಕೂಡ ಆಲೋಚನೆಗಳಿಂದ ನೇಯ್ದದ್ದು, ಆಲೋಚನೆಗಳ ವ್ಯಕ್ತರೂಪವೇ ಬದುಕು. ಪ್ರತಿ ಕ್ಷಣವೂ ಮನಸ್ಸಿನಲ್ಲಿ ಆಲೋಚನೆಯ ಅಲೆ ಇದ್ದೇ ಇರುತ್ತದೆ. ಅಧ್ಯಾತ್ಮದ ಪ್ರಕಾರ ಈ ಆಲೋಚನೆಗಳ ತರಂಗವನ್ನು ನಿಲ್ಲಿಸುವ ಪ್ರಯತ್ನವೇ ಸಾಧನೆ. ಅದು ನಿಂತಾಗಲೇ ಸಮಾಧಿ. ಆಲೋಚನೆಗಳು ವ್ಯಕ್ತಿಯನ್ನು ನಿರ್ಮಾಣ ಮಾಡಲೂಬಹುದು, ನಿರ್ನಾಮ ಮಾಡಲೂಬಹುದು. ಆದುದರಿಂದಲೇ ಆಲೋಚನೆಗಳ ಬಗ್ಗೆ ಎಚ್ಚರವಹಿಸಬೇಕು. ಹೀಗೆಂದ ಮಾತ್ರಕ್ಕೆ ಮನಸ್ಸಿನ ಆಲೋಚನಾಪ್ರವಾಹ ಕಂಡು ಕಂಗಾಲಾಗುವುದು ಬೇಡ. ಮನಸ್ಸಿನ ಸ್ವಭಾವವೇ ಆಲೋಚನೆಯಾದ್ದರಿಂದ ಅದರ ಒಳ್ಳೆಯ ಆಲೋಚನೆಗಳನ್ನು ಪ್ರೋತ್ಸಾಹಿಸಿ ಆರೋಗ್ಯಕಾರಿಯಲ್ಲದ ಆಲೋಚನೆಗಳನ್ನು ಕಡೆಗಣಿಸುವುದು ಉತ್ತಮ ಉಪಾಯ. ಇದು ಒಂದೆರಡು ದಿನದ ಅಭ್ಯಾಸದಿಂದ ಲಭಿಸುವಂತಹುದಲ್ಲ.

‘ಏಸು ಸಲ ತಪವಗೈದೇಸು ಬನ್ನವನಾಂತು’. ಇದನ್ನು ಸಾಧಿಸಬೇಕು. ಹೀಗೆ ಗಳಿಸಿದ ಮನಸ್ಸು ಒನಕೆಯಾಗುತ್ತದೆ, ಆಯುಧವಾಗುತ್ತದೆ, ವಿವೇಕವಾಗುತ್ತದೆ, ಸಾಣೆ ಹಿಡಿದ ವಜ್ರವಾಗುತ್ತದೆ. ಮನಸ್ಸಿನಲ್ಲಿ ಹುಟ್ಟುವ ಭಾವಗಳನ್ನು ವಿವೇಕದ ಒನಕೆಯಿಂದ ಕುಟ್ಟಿ ಆಲೋಚನೆಯೆಂಬ ಬತ್ತವನ್ನು ಅಕ್ಕಿಯಾಗಿಸಿ ಅನುಭವದ ಮೂಸೆಯಲ್ಲಿ ಬೇಯಿಸಿ ಬದುಕಿಗೆ ಅನ್ನವಾಗಿಸಿಕೊಳ್ಳಬೇಕು. ಇಲ್ಲವಾದರೆ ಆಲೋಚನೆಗಳು ವಿಷವಾಗಿ ನಮ್ಮನ್ನು ಬಲಿತೆಗೆದುಕೊಳ್ಳುತ್ತವೆ. ಕಗ್ಗವು ಇದನ್ನು ‘ಚಿತ್ತದನುಭವ ಭಾವ ಸಂಭಾವನೆಗಳೆಲ್ಲ ಬತ್ತ’ ಎನ್ನುತ್ತದೆ. ‘ವಿಚಾರಯುಕ್ತಿಗಳು ಕುಟ್ಟೆ ತತ್ತ್ವತಂಡುಲ’ – ಹೀಗೆ ಮಾಡಿದಾಗ ‘ವಿವೇಚಿತತತ್ತ್ವ’ ದೊರೆತು ಅದು ನಮಗೆ ‘ನಿತ್ಯಭೋಜನ’ವಾಗುತ್ತದೆ.

ಆಲೋಚನೆಗಳು ಕಾಲದ ಬೇರಿನಲ್ಲಿ ಮೊಳೆಯುತ್ತವೆ ಎಂಬುದು ಮುಖ್ಯವಾದ ಅಂಶ. ಭೂತ, ಭವಿಷ್ಯ ಮತ್ತು ವರ್ತಮಾನದ ಕಾಲದೊಳಕ್ಕೆ ಇಳಿದ ಆಲೋಚನೆಗಳ ಬೇರು ಅಲ್ಲಿಂದ ಭಾವದ ಉಸಿರನ್ನು ಹೆಕ್ಕಿ ತರುತ್ತವೆ. ಬಹುತೇಕ ನಮ್ಮ ಆಲೋಚನೆಗಳು ಭೂತ ಅಥವಾ ಭವಿಷ್ಯಕ್ಕೆ ಸಂಬಂಧಿಸಿದವು. ಇವೇ ಆತಂಕಕ್ಕೂ ಕಾರಣವಾಗುವವು. ಆಗಿಹೋಗಿದ್ದರ ಬಗ್ಗೆ ಚಿಂತಿಸಿ ಫಲವಿಲ್ಲದಿದ್ದರೂ ಮನಸ್ಸು ಅದರ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. ಅಥವಾ ಮುಂದೇನು, ಮತ್ತೇನು ಎಂಬ ಚಿಂತೆಗೆ ಒಳಗಾಗಿರುತ್ತದೆ. ಇವೆರಡರ ನಡುವೆ ವರ್ತಮಾನ ಕಳೆದುಹೋಗುತ್ತದೆ. ಹಳೆಯ ಅನುಭವಗಳಿಂದ ಪಾಠ ಕಲಿಯುವುದು, ಭವಿಷ್ಯದ ಬಗ್ಗೆ ಆಲೋಚಿಸುವುದು ತಪ್ಪಲ್ಲ. ಆದರೆ ಅದರ ಬಗ್ಗೆ ಚಿಂತಿಸುವುದು ಸರಿಯಲ್ಲ.

ಖಲೀಲ್‌ ಗಿಬ್ರಾನ್‌ ಹೇಳುತ್ತಾನೆ: ‘ನಮ್ಮ ಆತಂಕ ಉದ್ಭವಿಸುವುದು ಭವಿಷ್ಯದ ಆಲೋಚನೆಯಿಂದಲ್ಲ, ಆದರೆ ಅದನ್ನು ನಿಯಂತ್ರಿಸಬೇಕೆಂಬ ಬಯಕೆಯಲ್ಲಿ’ (Our anxiety does not come from thinking about the future, but from wanting to control it). ಇಲ್ಲಿ ಮತ್ತೊಂದು ಸೂಕ್ಷ್ಮವೂ ಇದೆ. ನಮ್ಮ ಮಾತುಗಳಿಗೆಲ್ಲ ಕಾರಣ ಈ ಆತಂಕ, ಉದ್ವೇಗ ಎಂಬುದೇ. ಉದ್ವೇಗಕ್ಕೆ ಮತ್ತೆ ಕಾರಣ ಆಲೋಚನೆ. ಮಹಾತ್ಮರಿಗೆ ಮಾತಿನ ಅಗತ್ಯವೇ ಕಂಡುಬರುವುದಿಲ್ಲ. ಅವರಲ್ಲಿ ಆಲೋಚನಾತರಂಗವೇ ಇಲ್ಲ, ಈ ಜಗತ್ತಿನ ಆಲೋಚನೆಗಳಿಗೆ ಅವರು ಪ್ರತಿಕ್ರಿಯೆ ನೀಡಬೇಕಾಗಿಲ್ಲ ಎಂಬ ಅರಿವು ಮೂಡಿದ ಮೇಲೆ ಅಲ್ಲಿ ಮಾತು ಅನವಶ್ಯಕ ಗದ್ದಲವೆನಿಸಿಕೊಳ್ಳುತ್ತದೆ. ಹೀಗಾಗಿ ಮಹಾತ್ಮರು ಮುನಿಗಳಾಗುತ್ತಾರೆ, ಮೌನಿಗಳಾಗುತ್ತಾರೆ, ರಮಣರಾಗುತ್ತಾರೆ, ರಾಮಕೃಷ್ಣರಾಗುತ್ತಾರೆ. ಮೌನದ ಸಹನೆ ಕಟ್ಟೆಯೊಡೆದು ಮಾತಾಗುತ್ತದೆ. ಖಲೀಲ್‌ ಗಿಬ್ರಾನ್ ಇದನ್ನು ಎಷ್ಟೊಂದು ಸೊಗಸಾಗಿ ಹೇಳಿದ್ದಾನೆ ನೋಡಿ:‌

‘ಆಲೋಚನೆಗಳೊಂದಿಗಿನ ನಿನ್ನ ಶಾಂತಿ ಕೊನೆಗೊಂಡಾಗ ನೀನು ಮಾತನಾಡುತ್ತಿ; ಮತ್ತು ನಿನ್ನ ಹೃದಯದ ಏಕಾಂತದಲ್ಲಿ ನೀನು ಇರಲಾರದಾದಾಗ ನಿನ್ನ ತುಟಿಗಳ ಮೂಲಕ ಬದುಕಲಾರಂಭಿಸುತ್ತೀ, ಶಬ್ದಗಳು ಗಮನಬದಲಿಕೆ ಮತ್ತು ಕಾಲಕ್ಷೇಪವಾಗಿರುತ್ತವೆ. ನಿನ್ನ ಮಾತುಗಳು ಆಲೋಚನೆಗಳ ಅರ್ಧಕೊಲೆಯೇ, ಏಕೆಂದರೆ ಆಲೋಚನೆ ಎಂಬುದು ಆಕಾಶದ ಹಕ್ಕಿ, ಅದನ್ನು ಮಾತಿನ ಪಂಜರದಲ್ಲಿರಿಸಿದಾಗ ಅದು ರೆಕ್ಕೆ ಬಿಚ್ಚಬಹುದೇ ಹೊರತು ಹಾರಲಾರದು.’

ಇವೆಲ್ಲ ಬಹಳ ರಮ್ಯವಾದ ಆಲೋಚನೆಗಳು. ಆದರೆ ಪ್ರಾಯೋಗಿಕವೆಷ್ಟು ಎಂಬ ಸಂದೇಹ ಬಾರದಿರದು. ನಿಜ, ಆದರೆ ಈ ಆದರ್ಶಗಳು, ಎತ್ತರದ ಗಮನಿಕೆಗಳು ನಮ್ಮ ಮನದ ಮುಂದಿರದಿದ್ದರೆ ಮತ್ತೆ ಮತ್ತೆ ‘ನಾವು ಅಲ್ಪರು, ನಮ್ಮಿಂದೇನಾದೀತು’ ಎಂಬ ದೀನಭಾವದ ಆಲೋಚನೆಗಳು ತುಂಬಿಕೊಳ್ಳುತ್ತವೆ. ದೈನ್ಯತೆಗೂ ಸರಳತೆಗೂ ಬಹಳ ವ್ಯತ್ಯಾಸವಿದೆ. ಸರಳತೆ ಸಜ್ಜನಿಕೆಯ ಬಿಂಬವಾದರೂ ಅದು ದೈನ್ಯತೆಯಾಗಬಾರದು. ದೀನ ಆಲೋಚನೆಗಳು ನಮ್ಮನ್ನು ದುರ್ಬಲರನ್ನಾಗಿಸುತ್ತದೆ. ಆಲೋಚನೆಗಳ ನಿಯಂತ್ರಣದಲ್ಲಾಗಲೀ ಅವುಗಳ ಉದಾತ್ತೀಕರಣದಲ್ಲಾಗಲೀ ನಾವು ಸೋಲಬಹುದು ಆದರೆ ಅದರಿಂದ ಚಿಂತಿತರಾಗಬಾರದು. ಸ್ವಾಮಿ ವಿವೇಕಾನಂದರೆನ್ನುತ್ತಾರೆ: ‘ದೌರ್ಬಲ್ಯದ ಕುರತಾಗಿ ಆಲೋಚಿಸುವುದರಿಂದ ಪ್ರಯೋಜನವಿಲ್ಲ. ಶಕ್ತಿ ನೀಡಿ. ಶಕ್ತಿ ದೊರೆಯುವುದು ಸದಾ ದುರ್ಬಲತೆಯ ಬಗ್ಗೆ ಚಿಂತಿಸುವುದರಿಂದ ಅಲ್ಲ. ದುರ್ಬಲತೆಗೆ ಔಷಧಿ ಅದರ ಕುರಿತ ಚಿಂತೆಯಲ್ಲ, ಶಕ್ತಿಯ ಬಗ್ಗೆ ಆಲೋಚಿಸಿ, ಜನರಿಗೆ ಅವರೊಳಗದಾಗಲೇ ಇರುವ ಶಕ್ತಿಯ ಮನವರಿಕೆ ಮಾಡಿಕೊಡಿ’.

ಪ್ರಸ್ತುತ ಜಗತ್ತಿನ ವಿದ್ಯಮಾನಗಳನ್ನು ಗಮನಿಸುವಾಗ, ಈ ಮಾತುಗಳ ಮಹತ್ವದ ಅರಿವಾಗುತ್ತದೆ. ಎತ್ತ ನೋಡಿದರೂ ನಕಾರಾತ್ಮಕ ವಿಚಾರಗಳೇ ಹರಿದು ಬರುತ್ತಿದೆ ಎಂಬಂತಿರುವಾಗ ಮನಸ್ಸಿನಲ್ಲಿ ಆಲೋಚನೆಗಳೂ ಅಂತೆಯೇ ಹರಿಯತ್ತವೆ. ಕೊರೊನಾ, ಅಲ್ಲೆಲ್ಲೋ ಕೊಲೆ, ಸುಲಿಗೆ, ಅತ್ಯಾಚಾರ, ಪ್ರಪಂಚದ ಇನ್ನೊಂದು ಭಾಗದಲ್ಲಿ ವಿಪ್ಲವ, ಜನರ ಆಕ್ರಂದನ ಇವೆಲ್ಲ ಮನ ಕಲಕುವಂತಹವು, ನಿರಾಶೆಗೆ ದೂಡುವಂತಹವು. ಆದರೆ ಇವುಗಳೆಲ್ಲದರ ಹಿಂದೆಯೂ ಮನಸ್ಸುಗಳಿವೆ, ಆಲೋಚನೆಗಳಿವೆ! ಹಾಗಾದರೆ ಜಗತ್ತಿನ ಶುದ್ಧೀಕರಣ ನಮ್ಮ ಒಳಗಿನಿಂದಲೇ ಆರಂಭವಾಗಲಿ. ನಮ್ಮೊಳಗಿರುವ ದುಷ್ಟ, ದುರ್ಬಲ ಆಲೋಚನೆಗಳನ್ನು ಬದಿಗೊತ್ತಿ ಅವುಗಳ ಜಾಗದಲ್ಲಿ ಪ್ರೀತಿ, ವಿಶ್ವಾಸದಿಂದ ಕೂಡಿದ ಶಕ್ತ ಆಲೋಚನೆಗಳನ್ನು ಬಿತ್ತಿ ಬೆಳೆಯೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು