ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ರಾಷ್ಟ್ರೀಯ ವೈದ್ಯರ ದಿನ: ವೈದ್ಯ ಎಂಬ ಸಮೂಹಪ್ರಜ್ಞೆ

Last Updated 30 ಜೂನ್ 2021, 21:44 IST
ಅಕ್ಷರ ಗಾತ್ರ

ವೈದ್ಯರನ್ನು ಗೌರವಿಸಲು, ಅವರ ಸಾಧನೆಗಳನ್ನು ಸ್ಮರಿಸಲು, ವೈದ್ಯರ ಸೇವೆಯನ್ನು ನೆನಪಿಸಿಕೊಳ್ಳುವ ಸಂದರ್ಭವೇ ವೈದ್ಯ ದಿನ. ಇದು ಇಂದಿನ ಆಚರಣೆ ಮಾತ್ರವಲ್ಲ. ಭಾರತದಲ್ಲಿ ವೈದ್ಯಶಾಸ್ತ್ರವನ್ನು ವಿಭಾಗಿಸಿ, ಶಸ್ತ್ರಚಿಕಿತ್ಸೆಗೆ ವಿಶೇಷ ಪ್ರಾಧಾನ್ಯವನ್ನು ತಂದುಕೊಟ್ಟಂತಹ, ಆಯುರ್ವೇದದ ಎಂಟೂ ವಿಭಾಗಗಳಿಗೂ ಕಾಯ ಹಾಗೂ ಶಸ್ತ್ರಚಿಕಿತ್ಸೆಯ ಅಗತ್ಯವನ್ನು ಲೋಕಕ್ಕೆ ಪರಿಚಯಿಸಿದ ಆಯುರ್ವೇದದ ವೇದವ್ಯಾಸರೇ ಆದು ಧನ್ವಂತರಿ ಜಯಂತಿಯನ್ನು ಆಚರಿಸುವ ಸಂಪ್ರದಾಯ ಹಿಂದಿನಿಂದಲೂ ಇತ್ತು, ಇಂದಿಗೂ ಮುಂದುವರೆದಿದೆ. ಆದರೆ ಅದು ಕೇವಲ ಆಯುರ್ವೇದ ವೈದ್ಯ ಗುಂಪಿಗೇ ಸೀಮಿತವಾಗಿರುವುದು ವಿಪರ್ಯಾಸ.

ವೈದ್ಯನಾದವನು ವ್ಯವಸಾಯಿಯಾಗಿರಬೇಕೆಂದು ಹೇಳುತ್ತದೆ ವೈದ್ಯಶಾಸ್ತ್ರ. ಎಂದರೆ ಕೃಷಿಕನಲ್ಲ, ವೈದ್ಯವೃತ್ತಿಯನ್ನು ಸತತವಾಗಿ ಅಭ್ಯಾಸ ಮಾಡಿ, ಎಂತಹ ಪರಿಸ್ಥಿತಿಯಲ್ಲಿಯೂ ರೋಗಿಯ ಸ್ವಾಸ್ಥ್ಯವನ್ನು ಕಾಪಾಡುವ ಸಾಮರ್ಥ್ಯ ಹೊಂದಿರಬೇಕು ಎಂದು. ಅದರಲ್ಲೂ ದೇಶ, ಕಾಲ, ವಾಯು, ಜಲಗಳು ಅತ್ಯಂತ ದೂಷಿತವಾದಾಗ ಪ್ರಕೃತಿಯು ಸದಾಚಾರ, ಅನಾಚಾರದಲ್ಲಿರುವ ಎಲ್ಲಾ ಜನರನ್ನೂ ಏಕಕಾಲದಲ್ಲಿ ಬಾಧಿಸುತ್ತದೆ. ಇದೇ ಜನಪದೋಧ್ವಂಸ; ಇಡೀ ಜನಪದವೇ ಧ್ವಂಸವಾಗುತ್ತದೆ. ದೇಶಕಾಲಗಳ ವೈಪರೀತ್ಯವನ್ನು ಗಮನಿಸಿ ವೈದ್ಯನಾದವನು ಜನಪದೋಧ್ವಂಸಕ್ಕೆ ಮೊದಲು ಜಾಗ್ರತನಾಗಿ ಔಷಧಗಳನ್ನು ಸಂಗ್ರಹಿಸಿಕೊಳ್ಳಬೇಕು. ಇಂತಹ ಕಾಲದಲ್ಲಿ ಜನಪದವು ಭೀತಿಗೊಳಗಾಗದಂತೆ ಸಾಂತ್ವನ, ಧೈರ್ಯ ಹೇಳುವುದೂ ವೈದ್ಯನ ಕರ್ತವ್ಯ. ಇದನ್ನು ಪಾಲಿಸುವುದು, ರಾಜ ಹಾಗೂ ಜನಪದದ ಕರ್ತವ್ಯ. ಇದು ಆದಿವೈದ್ಯನ ಚಿಂತನೆ.

‘ವೈದ್ಯ ಸಮೂಹೋ ನಿಸ್ಸಂಶಯಕರಾಣಾಂ’ ಎಂಬುದು ಪ್ರಸಿದ್ಧ ಲೋಕೋಕ್ತಿ. ಎಂದರೆ ವೈದ್ಯ ಸಮೂಹವು ರೋಗಗಳ ಸಂಶಯಗಳ ಪರಿಹಾರವನ್ನು ತಿಳಿಸುತ್ತದೆ ಎಂದು. ಆದರೆ ಇಂದು ರೋಗ ಅಥವಾ ರೋಗಿಗಳಿಗೆ ಸಂಬಂಧಪಟ್ಟಂತಹ ಸಂಶಯಗಳಿಗೆ ವೈದ್ಯೇತರರ ಸಲಹೆಯನ್ನೇ ಪಡೆದುಕೊಂಡು, ರೋಗಿಗೆ ಚಿಕಿತ್ಸೆ ಕೊಡಬೇಕಾಗಿರುವುದು ಅನೇಕ ತೊಂದರೆಗಳಿಗೆ ಕಾರಣವಾಗಿ ಜನಪದೋಧ್ವಂಸ ಹೆಚ್ಚಾಗಲು ಕಾರಣವಾಗುತ್ತಿದೆ. ರೋಗಿಯನ್ನೇ ನೋಡದ ವೈದ್ಯೇತರರ ಸಲಹೆಗಳು ಇಂದು ಪ್ರಾಧಾನ್ಯ ಪಡೆದಿವೆ. ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳ ಜೊತೆ ವ್ಯವಹರಿಸಿ ಚಿಕಿತ್ಸೆಯ ಒಳಿತು–ಕೆಡಕು, ಬೇಕು–ಬೇಡಗಳನ್ನು ಗಮನಿಸದೆ ಪ್ರಯೋಗಾಲಯದ ಪ್ರಯೋಗಗಳನ್ನು ರೋಗಿಯ ಮೇಲೆ ಪ್ರಯೋಗಿಸುವವರು ವೈದ್ಯರಾದ್ದರಿಂದ ಜನರ ಸಿಟ್ಟು ವೈದ್ಯರ ಮೇಲೆ ಹೆಚ್ಚಾಗುತ್ತಿದೆ.

ವೈದ್ಯರ ಇನ್ನೊಂದು ಮುಖ್ಯ ಲಕ್ಷಣ ಉಪಕರಣವಂತವಾಗಿರಬೇಕು ಎಂದು. ಆದರೆ ಇಂದು ಯಾವುದೇ ಔಷಧ ಅಥವಾ ಉಪಕರಣಗಳನ್ನು ವೈದ್ಯರು ಹೊಂದಲು ಅವಕಾಶವೇ ಇಲ್ಲ. ಇದರ ಜವಾಬ್ದಾರಿ ವೈದ್ಯೇತರರದ್ದು. ಅವರಿಗೆ ಅನುಗುಣವಾಗಿ ಪ್ರವರ್ತಿಸಬೇಕಾದದ್ದು ವೈದ್ಯರ ಅನಿವಾರ್ಯತೆ. ಆದರೆ ದೂರು ಮಾತ್ರ ವೈದ್ಯನಿಗೆ. ಜನರ ಆಕ್ರೋಶ ವೈದ್ಯರ ಮೇಲೆ. ರಾಜನಿಗೆ ಸಲಹೆ ನೀಡುವವರ ಗುಂಪಿನಲ್ಲಿ ಒಬ್ಬ ವೈದ್ಯನಿದ್ದರೆ ಐದು ಮಂದಿ ವೈದ್ಯೇತರರೇ. ಹಾಗಾಗಿ ವೈದ್ಯರ ಮಾತಿಗೆ ಬೆಲೆ ಎಲ್ಲಿ?

ವೈದ್ಯನಿಗಿರಬೇಕಾದ ಮತ್ತೊಂದು ಗುಣ ಪ್ರತ್ಯುತ್ಪನ್ನಮತಿತ್ವ. ರೋಗಿಯ ಪರಿಸ್ಥಿತಿಯನ್ನುರಿತು ಈ ಸಂದರ್ಭದಲ್ಲಿ, ಈ ರೋಗಿಗೆ ಯಾವ ರೀತಿಯ ಚಿಕಿತ್ಸೆ ಸೂಕ್ತ ಎಂದು ನಿರ್ಧಾರ ಮಾಡುವ ಬುದ್ಧಿವಂತಿಕೆ. ಇದನ್ನೇ ವೈದ್ಯರ ಕೈಗುಣ, ಅಥವಾ ವೈದ್ಯರ ಚಾಣಾಕ್ಷತೆ ಎಂದು ಹೇಳುವುದು. ಚಾಣಾಕ್ಷತೆಗೆ ಮಾನದಂಡ ಇಲ್ಲ, ಸಾಕ್ಷಿ ಸಾಧ್ಯವಿಲ್ಲ, ರೋಗಿ ಫ್ರೂಫ್ ಕೇಳಿದಾಗ ಚಾಣಾಕ್ಷತೆಗೆ ಬೆಲೆಯಿಲ್ಲ.

ರೋಗಿಗಿರಬೇಕಾದ ಮುಖ್ಯವಾದ ಗುಣವೇ ಭಿಷಗ್ವಶ್ಯನಾಗಿರಬೇಕು. ಎಂದರೆ ವೈದ್ಯರ ಸಲಹೆಗಳನ್ನು ಮರೆಯದಂತೆ ಪಾಲಿಸಬೇಕು. ವೈದ್ಯರು ಹೇಳುವ ಆಹಾರ, ಆಚಾರ, ವಿಹಾರಗಳ ವಿಧಿ–ನಿಷೇಧಗಳನ್ನು ಚಾಚೂ ತಪ್ಪದೆ ಪಾಲಿಸುವಂತಹವನು ಎಂತಹ ವ್ಯಾಧಿಯನ್ನಾದರೂ ಗೆಲ್ಲಬಲ್ಲಂತಹ ರೋಗಿ. ರೋಗಿಯಾದವನು ತನ್ನದೇ ಆದಂತಹ ನಿರ್ಧಾರಗಳನ್ನು ವಿವೇಚನೆ ಇಲ್ಲದೆ ತೆಗೆದುಕೊಳ್ಳುವುದು ಅಪಾಯಕಾರಿ ಪ್ರವೃತ್ತಿ. ಅನಾವಶ್ಯಕ ಭೀತಿಯನ್ನು ಬಿಟ್ಟು ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುವ ಮನೋಬಲ ರೋಗಿಗಿದ್ದರೆ ಎಲ್ಲಾ ವ್ಯಾಧಿಗಳು ವಿಶೇಷವಾಗಿ ಜನಪದೋಧ್ವಂಸ ವ್ಯಾಧಿಗಳನ್ನು ಸಮರ್ಥವಾಗಿ ಎದುರಿಸಬಹುದು. ಮನೋಬಲವನ್ನು ಕಳೆದುಕೊಂಡ ರೋಗಿಗಳ ಅಲ್ಪವ್ಯಾಧಿಯಾದರೂ ಬೃಹತ್ತಾಗಿ ತೋರಿ ಚಿಕಿತ್ಸಾ ವ್ಯತ್ಯಯಗಳಾಗುವ ಸಂಭವ ಹೆಚ್ಚು. ಇಂದು ಆಗುತ್ತಿರುವುದೂ ಅದೇ. ಅತಿಯಾದ ವೈದ್ಯಕೀಯ ಜ್ಞಾನದಿಂದ ತನಗೇನಾಗುತ್ತಿದೆ ಎನ್ನುವ ವಿವೇಚನೆ ಮಾಡಲು ಸಾಧ್ಯವಾಗದೇ ಅತಿಯಾದ ಭೀತಿ, ಸಲಹೆಗಳ ವೈಭವೀಕರಣ, ಪ್ರತಿಯೊಬ್ಬರೂ ವೈದ್ಯಕೀಯ ಪರಿಣತರೇ ಆಗಿ, ಅವರವರದೇ ಆದ ವ್ಯಾಖ್ಯಾನಗಳಿಂದ ಅತಿಯಾದ ಅಥವಾ ವಿಕೃತವಾದ ಆಚಾರ, ಆಹಾರ, ಔಷಧಗಳ ಪರಿಣಾಮ ಜನಪದವನ್ನು ಆತಂಕಕ್ಕೆ ದೂಡಿದೆ. ಸಾಮಾಜಿಕ ಜಾಲತಾಣಗಳ ವಿವೇಚನೆ ಇಲ್ಲದ ಅವಲಂಬನೆ ಹಲವು ಸಂಕಷ್ಟಗಳಿಗೆ ಕಾರಣವಾಗಿದೆ.

ಸಾಂಕ್ರಾಮಿಕ, ಜನಪದೋಧ್ವಂಸಕರವಾದ ವ್ಯಾಧಿಯು ಹಬ್ಬುತ್ತಿರುವಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ರಾಜರೂ ವ್ಯವಸ್ಥೆಯೂ ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT