ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧ ಗುಣಗಳ ಆಗರ ಬೇವು

Last Updated 5 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಬೇವು ಅಥವಾ ಕಹಿ ಬೇವು ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳಿಗಲ್ಲದೇ ಚರ್ಮರೋಗಕ್ಕೂ ಒಳ್ಳೆಯದು ಎಂಬುದು ಭಾರತೀಯರಿಗೆ ಸಹಸ್ರಾರು ವರ್ಷಗಳ ಹಿಂದೆಯೇ ತಿಳಿದಿತ್ತು. ಅದಕ್ಕೆಂದೇ ಚಿಕ್ಕ ಪುಟ್ಟ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಕಹಿಬೇವಿನ ಲೇಪ ಹಾಕಲಾಗುತ್ತಿತ್ತು. ಕಹಿಬೇವಿನ ಎಣ್ಣೆಯ ಬಳಕೆಯೂ ವ್ಯಾಪಕವಾಗಿ ಬಳಕೆಯಲ್ಲಿತ್ತು. ಆಧುನಿಕ ಜಗತ್ತೂ ಕಹಿಬೇವಿನ ಔಷಧೀಯ ಗುಣಗಳನ್ನು ಮೆಚ್ಚಿಕೊಂಡಿದೆ. ಕಹಿಬೇವು ಹೊಂದಿರುವ ವಿವಿಧ ಸೋಪ್‌ಗಳು, ಕ್ರೀಂಗಳು, ಶ್ಯಾಂಪೂಗಳು ಜನಪ್ರಿಯಗೊಂಡಿವೆ.

ಆ್ಯಂಟಿ ಏಜಿಂಗ್
ಬೇವಿನ ಎಣ್ಣೆಯಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿರುವುದರಿಂದ ಇದನ್ನು ಚರ್ಮದ ಆರೈಕೆಯಲ್ಲಿ ಪ್ರಧಾನವಾಗಿ ಬಳಸಲಾಗುತ್ತದೆ. ಬೇವಿನಲ್ಲಿ ಅತ್ಯಧಿಕ ಪ್ರಮಾಣದ ಆಂಟಿ ಆಕ್ಸಿಡೆಂಟ್‌ಗಳಿದ್ದು ಇವು ವಾತಾವರಣದಿಂದ ಚರ್ಮಕ್ಕೆ ಉಂಟಾಗುವ ಹಾನಿಯನ್ನು ತಡೆಯುತ್ತವೆ. ಬೇವಿನಲ್ಲಿರುವ ಕಾರ್ಟಿನಾಯ್ಡ್‌ಗಳು ಚರ್ಮ ವಯಸ್ಸಾಗುವಂತೆ ಮಾಡುವ ರ‍್ಯಾಡಿಕಲ್‌ಗಳ ವಿರುದ್ಧ ಸೆಣೆಸಲು ಸಹಾಯ ಮಾಡುತ್ತವೆ.

ಬೇವಿನ ಎಣ್ಣೆಯಲ್ಲಿ ಫ್ಯಾಟಿ ಆಸಿಡ್ ಹಾಗೂ ವಿಟಮಿನ್ ಇ ಅಂಶ ಹೆಚ್ಚಿದ್ದು ಇದನ್ನು ಚರ್ಮ ಸುಲಭವಾಗಿ ಹೀರಿಕೊಳ್ಳುತ್ತದೆಯಲ್ಲದೆ ಜಿಡ್ಡು ಜಿಡ್ಡಾಗಿಯೂ ಕಾಣುವುದಿಲ್ಲ. ಇವು ಚರ್ಮವನ್ನು ಪುನಶ್ಚೇತನಗೊಳಿಸುತ್ತವೆ ಹಾಗೂ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಮರುಸ್ಥಾಪಿಸುತ್ತವೆ. ಇದನ್ನು ನಿಯಮಿತವಾಗಿ ಬಳಸಿದರೆ ಚರ್ಮದ ಮೇಲಿನ ಸುಕ್ಕುಗಳು ನಿವಾರಣೆಯಾಗುವುದರ ಜತೆಗೆ ಚರ್ಮ ವಯಸ್ಸಾದಂತೆ ಗೋಚರಿಸದು. ಶುಷ್ಕ ಹಾಗೂ ಹಾನಿಗೀಡಾದ ಚರ್ಮವನ್ನು ದುರಸ್ತಿಮಾಡಿ ತಾರುಣ್ಯಪೂರ್ಣವನ್ನಾಗಿಸುವ ಶಕ್ತಿಯೂ ಇದಕ್ಕಿದೆ.

ಮೊಡವೆಗೆ ದಿವ್ಯೌಷಧ
ಮೊಡವೆ ಪೀಡಿತ ಚರ್ಮಕ್ಕೆ ಬೇವಿನ ಎಣ್ಣೆ ಅತ್ಯುತ್ತಮ ಔಷಧ. ಇದು ಚರ್ಮದ ಕೆರೆತ ಹಾಗೂ ಉರಿ ಎರಡನ್ನೂ ಕಡಿಮೆ ಮಾಡುತ್ತದೆ. ಮೊಡವೆ ಕಡಿಮೆ ಮಾಡುವುದರ ಜತೆಗೆ ಚರ್ಮ ಮೇಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ಮತ್ತೆ ಮೊಡವೆ ಏಳದಂತೆ ತಡೆಯುತ್ತದೆ. ಬೇವಿನ ಎಣ್ಣೆಯಲ್ಲಿರುವ ಆಸ್ಪಿರಿನ್ ಹೋಲುವ ಅಂಶ ಮೊಡವೆಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ. ಇದು ಮೊಡವೆಯ ಕೆಂಪು ಹಾಗೂ ಉರಿಯನ್ನು ಕಡಿಮೆ ಮಾಡುತ್ತದೆ. ಬೇವಿನ ಎಣ್ಣೆಯಲ್ಲಿರುವ ಫ್ಯಾಟಿ ಆಸಿಡ್ ಮೊಡವೆ ಕಲೆಯನ್ನು ನಿವಾರಿಸುತ್ತದೆ. ಬೇವಿನ ಎಲೆಯ ಪೇಸ್ಟ್ ಮುಖಕ್ಕೆ ಉತ್ತಮ ಮಾಸ್ಕ್ ಆಗಿದ್ದು, ಚರ್ಮದ ರಂಧ್ರಗಳಿಂದ ಕಲ್ಮಷ ತಗೆದು ರಂಧ್ರಗಳನ್ನು ಬಿಗಿಗೊಳಿಸುತ್ತದೆ.

ಶುಷ್ಕ ಚರ್ಮ ಹಾಗೂ ಎಜಿಮಾಕ್ಕೆ ಆರಾಮದಾಯಕ
ಚರ್ಮ ರೋಗವಾದ ಎಜಿಮಾದಲ್ಲಿ ಚರ್ಮ ಕೆರೆತ, ಕೆಂಪು ಹಾಗೂ ಉರಿ ಕಾಣಿಸಿಕೊಳ್ಳುವುದು ಸಾಮಾನ್ಯ. ಇದರಿಂದ ಇನ್ನಿತರ ಚರ್ಮ ಸೋಂಕು ಉಂಟಾಗುವ ಸಾಧ್ಯತೆಯೂ ಇರುತ್ತದೆ. ಬೇವಿನ ಎಣ್ಣೆ ಈ ಕಿರಿಕಿರಿಗಳನ್ನು ಕಡಿಮೆ ಮಾಡುತ್ತದೆ. ಆದರೆ ಎಜಿಮಾವನ್ನು ಗುಣಪಡಿಸದು.

ಬೇವಿನ ಎಣ್ಣೆಯಲ್ಲಿರುವ ಫ್ಯಾಟಿ ಆಸಿಡ್‌ಗಳು ಹಾಗೂ ವಿಟಮಿನ್ ಇ ಅಂಶ ಚರ್ಮದ ಹೊರ ಪದರವನ್ನು ತ್ವರಿತವಾಗಿ ಪ್ರವೇಶಿಸಿ ಚರ್ಮ ಶುಷ್ಕಗೊಳ್ಳುವುದನ್ನು ತಡೆಯುತ್ತದೆ. ಇದರಲ್ಲಿರುವ ಆಂಟಿಸೆಪ್ಟಿಕ್ ಗುಣಗಳು ಚರ್ಮಕ್ಕೆ ಇನ್ನಿತರ ಸೋಂಕು ಉಂಟಾಗದಂತೆ ತಡೆಯುತ್ತವೆ.

ಉಗುರು ಫಂಗಸ್, ರಿಂಗ್‌ವರ್ಮ್ ಹಾಗೂ ನಂಜು ಕೆರೆತಕ್ಕೆ ಔಷಧ
ಚರ್ಮವನ್ನು ಸಾಮಾನ್ಯವಾಗಿ ಬಾಧಿಸುವ ಫಂಗಸ್ ಸೋಂಕುಗಳಾದ ಉಗುರು ಫಂಗಸ್, ರಿಂಗ್‌ವರ್ಮ ಹಾಗೂ ನಂಜು ಕೆರೆತಕ್ಕೆ ಬೇವಿನ ಎಲೆ ರಸ ಅತ್ಯಂತ ಶಕ್ತಿಶಾಲಿ ಔಷಧವಾಗಿದೆ. ಬೇವಿನ ಎಲೆಯಲ್ಲಿರುವ ಗೆಡ್ಯುನಿನ್ ಹಾಗೂ ನಿಂಬಿಡಾಲ್ ಅಂಶಗಳು ಫಂಗಸ್ ಅನ್ನು ನಾಶ ಮಾಡುತ್ತವೆ. ಪ್ರಯೋಗಾಲಯದಲ್ಲಿ ನಡೆಸಿರುವ ಸಂಶೋಧನೆಗಳು ಬೇವಿನ ಎಲೆಯು 14 ಜಾತಿಯ ಫಂಗಸ್‌ಗೆ ಮಾರಕ ಎಂಬುದನ್ನು ಪತ್ತೆ ಮಾಡಿವೆ.

ಪಿಗ್ಮೆಂಟೇಶನ್ ನಿವಾರಕ
ಮುಖದಲ್ಲಿ ಉಂಟಾಗುವ ಪಿಗ್ಮೆಂಟೇಶನ್ ಅಥವಾ ಕಪ್ಪು ಕಲೆಗಳನ್ನು ಬೇವಿನ ಬೀಜದ ಎಣ್ಣೆ ನಿವಾರಿಸುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮಕ್ಕೆ ಶ್ವೇತವರ್ಣ ಹಾಗೂ ತಾಜಾತನ ಬರುತ್ತದೆ. ಚರ್ಮಕ್ಕೆ ಬಣ್ಣ ನೀಡುವ ಮೆಲಾನಿನ್ ಹೆಚ್ಚು ಉತ್ಪಾದನೆಯಾದಾಗ ಪಿಗ್ಮೆಂಟೇಶನ್ ಉಂಟಾಗುತ್ತದೆ. ಬೇವು ಮೆಲಾನಿನ್ ಅಂಶದ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಬೇವಿನ ಎಣ್ಣೆ ಮೆಲಾನಿನ್ ಹೆಚ್ಚು ಉತ್ಪಾದನೆಯಾಗುವುದಕ್ಕೆ ತಡೆ ಒಡ್ಡುವುದರಿಂದ ಕ್ರಮೇಣ ಪಿಗ್ಮೆಂಟೇಶನ್ ಕೂಡ ಕಡಿಮೆಯಾಗುತ್ತದೆ.

ಕ್ಯಾನ್ಸರ್ ನಿರೋಧಕ
ಬೇವು ಕ್ಯಾನ್ಸರ್‌ಕಾರಕ ಕೋಶಗಳನ್ನು ನಾಶ ಮಾಡುತ್ತದೆ. ನಮ್ಮೆಲ್ಲರ ದೇಹದಲ್ಲೂ ಕ್ಯಾನ್ಸರ್ ಕೋಶಗಳಿರುತ್ತವೆ. ಆದರೆ ಅವು ಅವ್ಯವಸ್ಥಿತವಾಗಿರುತ್ತವೆ. ಕೆಲವು ಬಾರಿ ದೇಹದಲ್ಲಿ ಉಂಟಾಗುವ ಕೆಲ ಪರಿಸ್ಥಿತಿಗಳಿಂದ ಇವು ವ್ಯವಸ್ಥಿತಗೊಳ್ಳುತ್ತವೆ. ಆಗ ಕ್ಯಾನ್ಸರ್ ಉಂಟಾಗುತ್ತದೆ. ಪ್ರತಿದಿನ ಬೇವಿನ ಎಲೆ ತಿನ್ನುತ್ತಿದ್ದರೆ ಅದು ದೇಹದಲ್ಲಿನ ಕ್ಯಾನ್ಸರ್‌ಕಾರಕ ಕೋಶಗಳ ಸಂಖ್ಯೆಯನ್ನು ಮಿತಿಯಲ್ಲಿರಿಸುತ್ತದೆ. ಹಾಗಾಗಿ ಕ್ಯಾನ್ಸರ್ ಬರುವ ಸಂಭಾವ್ಯತೆಯನ್ನು ಕಡಿಮೆ ಮಾಡುತ್ತದೆ.

ಬ್ಯಾಕ್ಟೀರಿಯಾ ವಿರೋಧಿ
ಈ ಜಗತ್ತು, ನಮ್ಮ ದೇಹ ಎಲ್ಲವೂ ಬ್ಯಾಕ್ಟೀರಿಯಾ ಮಯವೇ. ಇವುಗಳಲ್ಲಿ ಬಹುತೇಕ ಬ್ಯಾಕ್ಟೀರಿಯಾಗಳು ಆರೋಗ್ಯಸ್ನೇಹಿಗಳೇ. ಆದರೆ ಕೆಲವು ತೊಂದರೆ ಉಂಟು ಮಾಡುವಂಥವು. ಕಹಿ ಬೇವನ್ನು ಸೇವಿಸಿ ಹಾಗೂ ಮೈಗೆ ಹಚ್ಚಿದರೆ ಬ್ಯಾಕೀರಿಯಾ ಸೋಂಕುಗಳಿಗೆ ಈಡಾಗುವುದು ಕಡಿಮೆಯಾಗುತ್ತದೆ. ಬೇವಿನ ಎಲೆಯ ಪೇಸ್ಟ್ ಮಾಡಿಕೊಂಡು ಮೈಗೆ ಹಚ್ಚಿಕೊಂಡು ಅದು ಒಣಗಿದ ಮೇಲೆ ಸ್ನಾನ ಮಾಡಿದರೆ ಚರ್ಮ ಸ್ವಚ್ಛಗೊಳ್ಳುತ್ತದೆ ಅಥವಾ ಸ್ನಾನದ ನೀರಿನಲ್ಲಿ ಹಿಂದಿನ ದಿನ ರಾತ್ರಿಯೇ ಬೇವಿನ ಎಲೆ ಹಾಕಿಟ್ಟುಕೊಂಡು ಆ ನೀರಿನಲ್ಲಿ ಸ್ನಾನ ಮಾಡಿದರೂ ಚರ್ಮ ಆರೋಗ್ಯಪೂರ್ಣವಾಗುತ್ತದೆ.

* ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ.

* ಫಂಗಸ್ ಬೆಳವಣಿಗೆಯನ್ನು ತಡೆಯುತ್ತದೆ.

* ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ಮೊಟಕುಗೊಳಿಸುತ್ತದೆ.

* ನೋವನ್ನು ನಿವಾರಿಸುತ್ತದೆ.

* ಉರಿಯೂತ ಹಾಗೂ ಬಾವನ್ನು ಕಡಿಮೆ ಮಾಡುತ್ತದೆ.

* ಸೂಕ್ಷ್ಮ ಜೀವಿಗಳು (ಮೈಕ್ರೋ ಆರ್ಗ್ಯಾನಿಸಮ್ಸ್) ಬೆಳೆಯದಂತೆ ತಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT