ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಬಲಕ್ಕೆ ಅಂಜುವ ಅರ್ಬುದ....

ವಿಶ್ವ ಕ್ಯಾನ್ಸರ್ ದಿನ
Last Updated 3 ಫೆಬ್ರುವರಿ 2023, 19:45 IST
ಅಕ್ಷರ ಗಾತ್ರ

ಮೊ ನ್ನೆಯಷ್ಟೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಸದಾ ಕ್ರಿಯಾಶೀಲಳಾಗಿರುವ ಗೆಳತಿಯೊಬ್ಬಳು ಸಿಕ್ಕಳು. ಮಾತಾಡುತ್ತಾ, ‘ಬಲಸ್ತನದಲ್ಲಿ ಒಂದು ಗಂಟಾಗಿದೆ. ಬಹುಶಃ ಮಾಂಗಲ್ಯ ಸರ ಒತ್ತಿ ಹಾಗಾಗಿರಬೇಕು. ನೋವೇನಿಲ್ಲ‘ ಎಂದು ಹೇಳಿದಳು. ನಾನು, ಅವಳ ಮಾತನ್ನು ಹಗುರವಾಗಿ ತೆಗೆದುಕೊಳ್ಳದೇ, ‘ಮೊದಲು ಎಫ್.ಎನ್.ಎ.ಸಿ ಪರೀಕ್ಷೆ ಮಾಡಿಸು (ಸೂಜಿಯಿಂದ ಚಿಕ್ಕತುಣುಕನ್ನ ತೆಗೆದು ಪರೀಕ್ಷಿಸುವುದು) ಎಂದು ಸೂಚಿಸಿದೆ. ಆ ಪರೀಕ್ಷೆ ಮಾಡಿಸಿದಾಗ, ಅದು ಕ್ಯಾನ್ಸರ್‌ಕಾರಕ ಗಡ್ಡೆ ಎಂದು ದೃಢಪಟ್ಟಿತು !

ತರಕಾರಿ ಮಾರುವ ಮಹಿಳೆಯೊಬ್ಬರು, ಶ್ವಾಸಕೋಶದಲ್ಲಿ ನೀರು ತುಂಬಿದ ಕಾರಣಕ್ಕಾಗಿ ಚಿಕಿತ್ಸೆಪಡೆಯಲು ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದರು. ಆದರೆ, ಶ್ವಾಸಕೋಶಕ್ಕೆ ನೀರು ತುಂಬುವ ಮೊದಲೇ ಅವರಿಗೆ ಸ್ತನದ ಕ್ಯಾನ್ಸರ್‌ ಆಗಿ ಶ್ವಾಸಕೋಶ, ಮಿದುಳಿಗೆಲ್ಲ ಹರಡಿಬಿಟ್ಟಿತ್ತು. ಇದು ಆಕೆಗೆ ಗೊತ್ತೇ ಆಗಿರಲಿಲ್ಲ..!

ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ಹೆಚ್ಚು ತಿಂದಿದ್ದೇನೆ. ಹಾಗಾಗಿ ಎರಡು ವರ್ಷಗಳಿಂದ ಆಗದ ಮುಟ್ಟು ಉಷ್ಣ ಹೆಚ್ಚಾಗಿ ಈಗ ಆಗುತ್ತಿದೆ ಎಂದು 55ರ ಹೊಸ್ತಿಲಲ್ಲಿ ಇರುವ ಪರಿಚಯಸ್ಥ ಮಹಿಳೆಯೊಬ್ಬರು ಹೇಳಿಕೊಂಡರು. ಸ್ಪೆಕ್ಯೂಲಂ ಎನ್ನುವ ಸರಳ ಉಪಕರಣದಿಂದ ಪರೀಕ್ಷಿಸಿದಾಗ ಅವರಿಗೆ ಗರ್ಭಕೊರಳಿನ ಕ್ಯಾನ್ಸರ್ ಇರುವುದು ಪತ್ತೆ ಆಯಿತು. ಈ ಮೂರು ಪ್ರಕರಣಗಳಲ್ಲಿ ಇಬ್ಬರಿಗಾದರೂ ಸರಿಯಾದ ಸಮಯಕ್ಕೆ ರೋಗ ಪತ್ತೆಯಾಗಿದ್ದರಿಂದ ಅವರು ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗುವುದು ಖಚಿತ ಎನ್ನುವುದೇ ಸದ್ಯದ ಸಮಾಧಾನ.

ಕ್ಯಾನ್ಸರ್‌ ಏನು ಮಾಡುತ್ತದೆ?

ಆಧುನಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿ ಮುಂದುವರಿದ್ದರೂ ಲಿಂಗ, ವಯಸ್ಸಿನ ಭೇದವಿಲ್ಲದೇ ಬಾಧಿಸಬಹುದಾದ ಕಾಯಿಲೆಯೆಂದರೆ ಅದು ಕ್ಯಾನ್ಸರ್‌. ಅಸಹಜ ಹಾಗೂ ಅನಿಯಂತ್ರಿತ, ಜೀವಕೋಶಗಳ ವಿಭಜನೆಯೇ ಕ್ಯಾನ್ಸರ್‌. ಅದು ದೇಹದಾದ್ಯಂತ ವೇಗವಾಗಿ ಆಚೀಚೆ ಪಸರಿಸುತ್ತಾ, ಅಕ್ರಮಣಕಾರಿಯಾಗಿ ಪೋಷಕಾಂಶಗಳನ್ನೆಲ್ಲಾ ಹೀರಿ, ಸಹಜ ಜೀವಕೋಶಗಳ ಕಾರ್ಯಚಟುವಟಿಗಳಿಗೆ ತೊಂದರೆ ಮಾಡುತ್ತದೆ. ಕಾಯಿಲೆ ಉಲ್ಬಣವಾದಾಗ ಮೂಲ ಅಂಗಗಳಿಂದ ಕಳಚಲ್ಪಟ್ಟು (ಮೆಟಾಸ್ಟಾಸಿಸ್) ರಕ್ತದ ಮೂಲಕ, ದುಗ್ದದರಸದ (ಲಿಂಫ್) ಮೂಲಕ ಬೇರೆಡೆಗೆ ದಾಳಿ ಮಾಡಿ ಮೂಳೆ, ಮಿದುಳು, ಶ್ವಾಸಕೋಶ, ಲಿಂಫ್‌ನೋಡ್ ಇತ್ಯಾದಿಗಳಲ್ಲಿನ ಸಹಜಕೋಶಗಳನ್ನು ನಾಶಮಾಡುತ್ತಾ ಮಾರಾಣಾಂತಿಕವಾಗುತ್ತದೆ.

ಮಹಿಳೆಯರಲ್ಲಿ ಯಾವ ಕ್ಯಾನ್ಸರ್‌ ಹೆಚ್ಚು?

ವಿಶ್ವದಾದ್ಯಂತ ಮಹಿಳೆಯರಲ್ಲಿ ಮಧುಮೇಹ, ಹೃದ್ರೋಗ, ಏರು ರಕ್ತದೊತ್ತಡದಂತೆ ಕ್ಯಾನ್ಸರ್‌ ಕೂಡ ಹೆಚ್ಚುತ್ತಿದೆ. ಸಂತಾನೋತ್ಪತ್ತಿ ಅಂಗಗಳಿಗೆ ಸಂಬಂಧಪಟ್ಟ ಕ್ಯಾನ್ಸರ್‌ಗಳಾದ ಗರ್ಭಾಶಯ, ಅಂಡಾಶಯ ಹಾಗೂ ಗರ್ಭಕೊರಳಿನ ಕ್ಯಾನ್ಸರ್ ಮತ್ತು ಸ್ತನದ ಕ್ಯಾನ್ಸರ್ ಅಲ್ಲದೇ ಕೊಲೋರೆಕ್ಟಲ್, ಶ್ವಾಸಕೋಶದ ಕ್ಯಾನ್ಸರ್, ಥೈರಾಯಿಡ್ ಕ್ಯಾನ್ಸರ್‌ಗಳು ಹೆಚ್ಚುತ್ತಿವೆ. ಕ್ಯಾನ್ಸರ್‌ ಚಿಕಿತ್ಸಾ ತಜ್ಞರು ಹಾಗೂ ಆಸ್ಪತ್ರೆಗಳು ಸಾಕಷ್ಟಿವೆ. ಚಿಕಿತ್ಸಾ ವಿಧಾನದಲ್ಲಿ ಸುಧಾರಣೆಯಾಗುತ್ತಿದ್ದರೂ ಅದು ಎಲ್ಲರಿಗೂ ಎಲ್ಲ ಕಡೆಗಳಲ್ಲಿಯೂ ಲಭ್ಯವಾಗುತ್ತಿಲ್ಲ.

ಅತಿ ಕಾಳಜಿ ಮತ್ತು ನಿರ್ಲಕ್ಷ್ಯ ಎರಡೂ ಸಲ್ಲ

ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಸ್ತನದಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡರೂ ಕ್ಯಾನ್ಸರ್‌ ಇರಬಹುದಾ ಎಂದು ಆತಂಕಕ್ಕೆ ಒಳಗಾಗಿ ಪರೀಕ್ಷೆ ಮಾಡಿಸುವವರೂ ಇದ್ದಾರೆ. ಮುಟ್ಟು ನಿಲ್ಲುವ ಸಮಯದಲ್ಲಿ ಬಿಳಿ ಮುಟ್ಟು ಜಾಸ್ತಿಯಾಗಿ, ತಿಂಗಳ ಮುಟ್ಟಿನ ಸ್ರಾವ ಅಧಿಕವಾದಾಗ ಭಯದಿಂದ ಗರ್ಭಕೋಶವನ್ನೇ ತೆಗೆಸುವವರೂ ಇದ್ದಾರೆ. ಹಾಗೆಯೇ ಗಡ್ಡೆ ಕೈಗೆ ತಾಗುತ್ತಿದ್ದಾಗಲೂ ‘ಗಡ್ಡೆಯಲ್ಲಿ ನೋವಿಲ್ಲವಲ್ಲ, ಇದು ಏನು ಮಾಡೀತು’ ಎಂದು ಉದಾಸೀನ ತೋರುವವರು ಇದ್ದಾರೆ. ಇವರೆಡೂ ‌ತಪ್ಪು ನಿರ್ಧಾರಗಳೇ.

ಶೇ 80ರಷ್ಟು ಪ್ರಕರಣಗಳಲ್ಲಿ ಕಾಯಿಲೆ ಉಲ್ಬಣಗೊಂಡಾಗ ರೋಗಿಗಳು ವೈದ್ಯರ ಬಳಿ ಹೋಗುತ್ತಾರೆ. ಶೇ 70ರಷ್ಟು ಮಂದಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗದೇ ಸಾವನ್ನಪ್ಪುತ್ತಾರೆ. ಶೇ 50ರಷ್ಟು ಪ್ರಕರಣಗಳಲ್ಲಿ ತಪ್ಪು ಜೀವನಶೈಲಿಯಿಂದಾಗಿ ಕ್ಯಾನ್ಸರ್‌ ಬಂದಿರುತ್ತದೆ.

ಲೇಖಕರು ಸ್ತ್ರೀರೋಗತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT