ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು | ಅಂತರ್ಜಾಲದಲ್ಲಿ ಕಾಯಿಲೆಯ ಹೆಸರು ಹುಡುಕಬೇಡಿ!

Last Updated 9 ಜುಲೈ 2022, 3:01 IST
ಅಕ್ಷರ ಗಾತ್ರ

* ಯುವಕ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ನನಗೆ ವೇದಿಕೆಯ ಮೇಲೆ ನಿಂತು ಮಾತನಾಡಲು ಭಯವಾಗುತ್ತದೆ (ಸ್ಟೇಜ್‌ಫಿಯರ್‌). ಮಾತು ಬಾರದೆ ನಡುಕ ಬರುತ್ತದೆ. ಮಹಿಳೆಯರನ್ನು ಕಂಡರೆ ಭಯ ನಾಚಿಕೆಯಾಗುತ್ತದೆ (ಗೈನೋಫೋಬಿಯಾ). ಈ ಸಮಸ್ಯೆಗಳನ್ನು ಪರಿಹರಿಸಿಕೊಡಿ.

ಹೆಸರು ಊರು ತಿಳಿಸಿಲ್ಲ

ಸಮಸ್ಯೆಗಳನ್ನು ಪರಿಹರಿಸಿಕೊಡಿ ಎಂದು ಕೇಳಿದ್ದೀರಲ್ಲವೇ? ಇವು ಸಮಸ್ಯೆಗಳಲ್ಲ. ಪರಿಹಾರಗಳು ಕೂಡ ನಿಮ್ಮೊಳಗೇ ಇದೆ. ಹುಡುಕಲು ಸಹಾಯ ಮಾಡುತ್ತೇನೆ.

ಮೊದಲನೆಯದು ನಿಮ್ಮ ಅನುಭವಗಳಿಗೆ ಅಂತರ್ಜಾಲದಲ್ಲಿ ಹುಡುಕಾಡಿ ದೊಡ್ಡದೊಡ್ಡ ಕಾಯಿಲೆಯ ಹೆಸರುಗಳನ್ನು ಹುಡುಕುವುದನ್ನು ನಿಲ್ಲಿಸಿ. ನಿಮ್ಮ ಎರಡು ರೀತಿಯ ಅನುಭವಗಳು ಬೇರೆಬೇರೆ ಅನ್ನಿಸಿದರೂ ಅವುಗಳ ಮೂಲ ಒಂದೇ. ಈ ಅನುಭವಗಳು ನಿಮ್ಮ ಕುರಿತಾಗಿ ನಿಮ್ಮೊಳಗೇ ಬೇರೂರಿರುವ ಅನಿಸಿಕೆಗಳನ್ನು ಸೂಚಿಸುತ್ತಿವೆ. ಅವುಗಳೇನಿರಬಹುದು ಎಂದು ತಿಳಿಯಲು ಸುಮ್ಮನೆ ಕುಳಿತು ನಿಮ್ಮ ತಲೆಯಲ್ಲಿ ಮಾತನಾಡುವ ಧ್ವನಿಗಳನ್ನು ಗಮನಿಸಿ. ನಿನಗೆ ಯೋಗ್ಯತೆಯಿಲ್ಲ, ಎಲ್ಲರೆದುರು ಮಾತನಾಡಿ ಅವಮಾನ ಮಾಡಿಸಿಕೊಳ್ಳು ತ್ತೀಯಾ, ಸೋಲುವುದು ಭಾರೀ ಅವಮಾನಕರ, ಎಲ್ಲರೂ ನಿನ್ನನ್ನು ಕೀಳಾಗಿ ನೋಡುತ್ತಾರೆ, ನೀನು ಜೀವನದಲ್ಲಿ ವಿಫಲನಾಗುತ್ತೀಯಾ-ಮುಂತಾಗಿ ಆ ಧ್ವನಿಗಳು ಹೇಳುತ್ತಿರಬಹುದು. ಇವು ಬಾಲ್ಯದಲ್ಲಿ ಮನೆ, ಶಾಲೆಗಳಲ್ಲಿನ ನಿಮ್ಮ ಅನುಭವದಿಂದ ಬಂದಿರುವ ಧ್ವನಿಗಳು. ನಿಮ್ಮದೇ ಧ್ವನಿಗಳಲ್ಲ. ಹಾಗಾಗಿ ಅಂತಹ ಪ್ರಾಮುಖ್ಯವನ್ನು ನೀಡಬೇಡಿ. ನಿಮ್ಮ ಭಯದಿಂದ ಹೊರಬರಲು ಹೀಗೆ ಮಾಡಿ. ಒಬ್ಬರೇ ಕುಳಿತು ವೇದಿಕೆಯಲ್ಲಿ ಅಥವಾ ಮಹಿಳೆಯೊಬ್ಬಳ ಜೊತೆ ಮಾತನಾಡುತ್ತಿರುವಂತೆ ಕಲ್ಪಿಸಿಕೊಳ್ಳಿ. ವಾಸ್ತವಕ್ಕೆ ಹತ್ತಿರವಾದ ಕಲ್ಪನೆಯಿರಲಿ. ಕಲ್ಪನೆಯಲ್ಲಿಯೂ ನಿಮ್ಮ ಎದೆ ಹೊಡೆದುಕೊಂಡು ಕೈಕಾಲು ನಡುಗಬಹುದು. ಆಗ ನಿಧಾನವಾಗಿ ಉಸಿರಾಡುತ್ತಾ ದೇಹವನ್ನು ಸಡಿಲಬಿಡುತ್ತಾ ಹೋಗಿ. ದೇಹ ಶಾಂತವಾದ ಕೂಡಲೆ ಕಲ್ಪನೆಯನ್ನು ಮುಂದುವರಿಸಿ. ದೇಹ ಕೆರಳಿದರೆ ಮತ್ತೆ ಸಮಾಧಾನಪಡಿಸಿ. ಹೀಗೆ ಸಾಕಷ್ಟು ದಿನ ಅಭ್ಯಾಸಮಾಡಿ. ಅಗತ್ಯವಿದ್ದರೆ ನಿಮ್ಮೊಳಗಿನ ಹಿಂಜರಿಕೆ ಕೀಳರಿಮೆಗಳನ್ನು ಪರಿಹರಿಸಿಕೊಳ್ಳಲು ತಜ್ಞ ಮನೋಚಿಕಿತ್ಸಕರನ್ನು ಸಂಪರ್ಕಿಸಿ.

* ನನಗೆ 33ವರ್ಷ. ಕಳೆದ ಒಂದು ವರ್ಷದಿಂದ ಗಮನಿಸಿದ ವಿಚಾರವೆಂದರೆ ಕೆಲವೊಮ್ಮೆ ನಾನು ಯಾರನ್ನಾದರೂ ನೆನಪಿಸಿಕೊಂಡರೆ ತಕ್ಷಣ ಅವರಿಂದ ಫೋನ್‌ ಅಥವಾ ಸಂದೇಶ ಬರುತ್ತದೆ. ಕೆಲವರನ್ನು ಹಲವು ದಿನಗಳ ನಂತರ ನೆನೆಸಿಕೊಂಡರೆ ಅವರು ಕೆಲವೇ ಗಂಟೆಗಳಲ್ಲಿ ಸಿಗುತ್ತಾರೆ. ಇದು ದೈವಲೀಲೆ ಅಥವಾ ‘ಸಿಕ್ಸ್ತ್‌ಸೆನ್ಸ್‌’ ಇರಬಹುದೇ? ಗೊಂದಲವನ್ನು ಪರಿಹರಿಸಿ.

ಮೋಹನ್‌ಕುಮಾರ್‌ ಊರಿನ ಹೆಸರಿಲ್ಲ

ಇಂತಹ ಗೊಂದಲಗಳಿಗೆ ಸದ್ಯಕ್ಕೆ ವಿಜ್ಞಾನದಲ್ಲಿಯೂ ಸ್ಪಷ್ಟ ಉತ್ತರವಿಲ್ಲ. ಇದರಿಂದ ನಿಮಗೆ ಮಾನಸಿಕ ತೊಂದರೆಗಳೇನೂ ಆಗದಿದ್ದರೆ ಇದರ ಕುರಿತು ನೀವೂ ಸಂಶೋಧನೆ ಮಾಡಬಹುದು.

ಇಲ್ಲೊಂದು ವಿಪರ್ಯಾಸವಿದೆ. ನಿಮಗೆ ನೆನಪಾಗಿರುವವರಲ್ಲಿ ಒಬ್ಬಿಬ್ಬರು ಕಾಣಿಸಿಕೊಂಡಿರಬಹುದು. ಇವುಗ ಳನ್ನು ಮಿದುಳು ದಾಖಲಿಸಿರುತ್ತದೆ. ನೆನಪಾಗಿಯೂ ನಿಮಗೆ ಕಾಣಿಸಿಕೊಳ್ಳದ ಅಥವಾ ಫೋನ್‌ ಮಾಡದ ಘಟನೆಗಳು ಸಾಕಷ್ಟು ಇದ್ದರೂ ನಿಮ್ಮ ಮಿದುಳು ಅವುಗಳನ್ನು ದಾಖಲಿಸಿರುವುದಿಲ್ಲ. ಇದರ ಅರ್ಥವೇನೆಂದರೆ ನಾವು ನಂಬಿಕೊಂಡಿರುವುದಕ್ಕೆ ಸಾಕ್ಷ್ಯಾಧಾರಗಳನ್ನು ಮಿದುಳು ಹುಡುಕುತ್ತಿರುತ್ತದೆ. ನಿಮ್ಮ ಅನುಭವಗಳು ದೈವಲೀಲೆ ಅಥವಾ ಸಿಕ್ಸ್ತ್‌ಸೆನ್ಸ್‌ ಎಂದು ನೀವು ಚಿಂತಿಸುತ್ತಿರುವುದರಿಂದ ಅದಕ್ಕೆ ಹೊಂದುವುದನ್ನು ಮಾತ್ರ ನೀವು ಗ್ರಹಿಸಲು ಸಾಧ್ಯವಾಗುತ್ತದೆ. ಇದು ಯಾರೊಬ್ಬರ ತೊಂದರೆಯಲ್ಲ. ಮಿದುಳು ಕಾರ್ಯನಿರ್ವಹಿಸುವ ರೀತಿ. ಇಂತಹ ಘಟನೆಗಳು ಕಾಕತಾಳೀಯವೂ ಆಗಿದ್ದು ಬೇರೆ ಸಾಕಷ್ಟು ಜನರಿಗೂ ಇದೇ ಅನುಭವ ಆಗಿರುವ ಸಾಧ್ಯತೆಗಳಿರಬಹುದಲ್ಲವೇ?

ಮನಸ್ಸಿನ ಎಲ್ಲಾ ವ್ಯವಹಾರಗಳಿಗೆ ಸ್ಪಷ್ಟವಾದ ಕಾರಣಗಳನ್ನು ಹುಡುಕುವುದು ಸಾಧ್ಯವಿಲ್ಲ. ಜೊತೆಗೆ ಅಗತ್ಯವೂ ಇಲ್ಲ ಅಲ್ಲವೇ?

ಏನಾದ್ರೂ ಕೇಳ್ಬೋದು

ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಉತ್ತರಿಸಲಿದ್ದಾರೆ bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT