ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಸ್ಪಂದನ: ಗರ್ಭಧಾರಣೆ ಯೋಜಿತವಾಗಿರಲಿ

ಡಾ. ವೀಣಾ ಎಸ್. ಭಟ್
Published : 12 ಜುಲೈ 2024, 19:30 IST
Last Updated : 12 ಜುಲೈ 2024, 19:30 IST
ಫಾಲೋ ಮಾಡಿ
Comments
ಪ್ರ

25ನೇ ವರ್ಷಕ್ಕೆ ಮದುವೆಯಾಗಿ, ಆರು ತಿಂಗಳ ಒಳಗೆ ಗರ್ಭಧಾರಣೆಯಾಯಿತು. ವೃತ್ತಿಯ ಕಾರಣಕ್ಕೆ ಗರ್ಭಪಾತ ಆಗಲು ಮಾತ್ರೆಗಳನ್ನು ತೆಗೆದುಕೊಂಡಿದ್ದೆ. ಸರಿಯಾಗಿ ಗರ್ಭಪಾತವಾಗಿಲ್ಲವೆಂದು ಆಸ್ಪತ್ರೆಯಲ್ಲಿ ಡಿ ಅಂಡ್ ಸಿ ಮಾಡಿದ್ದರು. ನಂತರ ಒಂದು ವರ್ಷ ಓಸಿ ಪಿಲ್ಸ್ ತೆಗೆದುಕೊಳ್ಳುತ್ತಿದ್ದೆ. ಈಗ ಮೂರು ವರ್ಷಗಳಿಂದ ಮಗು ಬೇಕೆಂದು ಪ್ರಯತ್ನಿಸುತ್ತಿದ್ದೇವೆ. ವೈದ್ಯರು ಚಿಕಿತ್ಸೆ ಕೊಡುತ್ತಿದ್ದಾರೆ, ಆದರೂ ಮಕ್ಕಳಾಗುತ್ತಿಲ್ಲ. ನನಗೆ ಭಯವಾಗುತ್ತಿದೆ ನಾನೂ ಐವಿಎಫ್ ಗೆ ಮೊರೆ ಹೋಗಬೇಕಾ?

ನೀವು ಮೊದಲ ಗರ್ಭಧಾರಣೆಯಲ್ಲೇ ಗರ್ಭಪಾತ ಮಾಡಿಸಿದ್ದು ಸರಿಯಲ್ಲ. ಯಾಕೆಂದರೆ ಮದುವೆಯಾದ ಒಂದೆರಡು ವರ್ಷದೊಳಗೆ ಅಂದರೆ ನಿಮಗೆ 27 ವರ್ಷವಾಗುವುದರೊಳಗೆ ನೀವು ಮಗು ಪಡೆದಿದ್ದರೆ ಒಳ್ಳೆಯದಿತ್ತು. 28 ವರ್ಷಗಳ ನಂತರ ಫಲವಂತಿಕೆ ಕಡಿಮೆಯಾಗುತ್ತಾ ಹೋಗುತ್ತದೆ. ನೀವು ವಿದ್ಯಾವಂತರು, ತಿಳಿದವರು ಹಾಗೆಯೇ ಮದುವೆಗೆ ಮೊದಲೇ ಅಥವಾ ಮದುವೆಯಾದ ತಕ್ಷಣವೇ ಸಂತಾನ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳಬಹುದಿತ್ತಲ್ಲವೆ? ವೈದ್ಯರನ್ನು ಸಂಪರ್ಕಿಸಿ ಸೂಕ್ತ ಮಾರ್ಗದರ್ಶನ ಪಡೆಯಬಹುದಿತ್ತು. ಮಗುವಾಗುವ ಪ್ರಕ್ರಿಯೆ ಅತ್ಯಂತ ಸಂಕೀರ್ಣ. ಮಕ್ಕಳಾಗದಿದ್ದಾಗಲೇ ಆ ಪ್ರಕ್ರಿಯೆಯ ಸಂಕೀರ್ಣತೆ ಹಾಗೂ ಪ್ರಾಮುಖ್ಯತೆಯ ಅರಿವಾಗುತ್ತದೆ. ಮದುವೆಯಾದ ಹೊಸತರಲ್ಲಿ ಬಹಳಷ್ಟು ದಂಪತಿಗಳು ಯೋಜಿತ ಗರ್ಭಧಾರಣೆ ಮಾಡಿಕೊಳ್ಳದೇ ಗರ್ಭಪಾತಕ್ಕೆ ಮುಂದಾಗುತ್ತಾರೆ. ಕೆಲವೊಮ್ಮೆ ವೈದ್ಯರ ಸಲಹೆಯನ್ನು ಧಿಕ್ಕರಿಸಿ ಸ್ವಯಂ ಗರ್ಭಪಾತ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಎಷ್ಟೋ ಬಾರಿ ಮಾತ್ರೆಗಳಿಂದ ಗರ್ಭಪಾತ ಸರಿಯಾಗಿ ಆಗದೆ ವೈದ್ಯರು ಆಸ್ಪತ್ರೆಯಲ್ಲಿ ಡಿ ಅಂಡ್ ಸಿ ಮಾಡಬೇಕಾಗಿ ಬರಬಹುದು. ಎಂಥ ಅತ್ಯಾಧುನಿಕ ಆಸ್ಪತ್ರೆಯಲ್ಲೇ, ಗರ್ಭಪಾತವಾಗಿದ್ದರೂ, ತಜ್ಞವೈದ್ಯರೇ ಚಿಕಿತ್ಸೆ ಕೊಟ್ಟರೂ ಮೊದಲ ಗರ್ಭಪಾತದ ನಂತರ ಗರ್ಭಕೋಶ, ಗರ್ಭನಾಳ ಸೋಂಕಾಗಿ ನಂತರ ಗರ್ಭನಾಳಕ್ಕೆ ತಡೆ ಉಂಟಾಗಬಹುದು. (ಟ್ಯೂಬಲ್ ಬ್ಲಾಕ್) ಹಾಗಾಗಿ ಮೊದಲನೇ ಗರ್ಭಪಾತಕ್ಕೆ ವೈದ್ಯರು ಅನುಮೋದಿಸುವುದಿಲ್ಲ.

ಮದುವೆಯಾಗುವ ಮೊದಲೇ ದಂಪತಿಗೆ ಮಕ್ಕಳಾಗುವ ಪ್ರಕ್ರಿಯೆಯ ಬಗ್ಗೆ, ಯೋಜಿತ ಗರ್ಭಧಾರಣೆಯ ಬಗ್ಗೆ ತೆಗೆದುಕೊಳ್ಳುವ ಮುಂಜಾಗ್ರತೆಗಳ ಬಗ್ಗೆ ತಿಳಿದಿರಬೇಕು. ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಗಂಡ ಹೆಂಡತಿಯ ಲೈಂಗಿಕ ಸಂಪರ್ಕವಾಗುವ ಮೊದಲೇ ಅನುಸರಿಸಬೇಕು. ನೀವೀಗ ಆಗಿ ಹೋಗಿರುವ ಘಟನೆಯ ಬಗ್ಗೆ ಚಿಂತಿಸದೇ ಚಿಕಿತ್ಸೆಯನ್ನ ಮುಂದುವರಿಸಿರಿ. ನಿಮ್ಮ ಗರ್ಭನಾಳ ಹಾಗೂ ಗರ್ಭಕೋಶ ಸರಿ ಇದೆ ಎಂದು ಪರೀಕ್ಷಿಸಲು ಎಚ್‌.ಎಸ್.ಜಿ ಎಂಬ ಎಕ್ಸರೆ ಪರೀಕ್ಷೆ ಮಾಡಿಸಿ. ಅದರ ವರದಿಯಲ್ಲಿ ಗರ್ಭನಾಳ ಸರಿ ಇದೆ ಎಂದು ಬಂದರೆ ಚಿಂತಿಸಬೇಡಿ. ನೀವು ಪ್ರತಿ ತಿಂಗಳು ಮುಟ್ಟಾಗುತ್ತಿದ್ದಲ್ಲಿ ನಿಮಗೆ ಅಂಡೋತ್ಪತ್ತಿ ಸರಿಯಾಗಿ ಆಗುತ್ತಿದೆ ಎಂದೇ ಅರ್ಥ. ನೀವು 5 ಮಿ.ಗ್ರಾಂ ಫೋಲಿಕ್ ಆಸಿಡ್ ಮಾತ್ರೆಯನ್ನ ದಿನವೂ ತಪ್ಪದೇ ಸೇವಿಸುತ್ತಿರಿ.

ಋತು ಫಲಪ್ರದ ದಿನಗಳಲ್ಲಿ ಅಂದರೆ ಮುಟ್ಟಾಗಿ 8 ರಿಂದ 18 ದಿನದೊಳಗೆ ಲೈಂಗಿಕ ಸಂಪರ್ಕ ಪ್ರತಿ ಋತುಚಕ್ರದಲ್ಲೂ ಮಾಡಿದಾಗ ಗರ್ಭಧಾರಣೆ ಬೇಗನೆ ಆಗುವ ಸಂಭವ ಇದೆ. ತಜ್ಞವೈದ್ಯರನ್ನು ಸಂಪರ್ಕಿಸಿ, ಅವರ ಮೇಲ್ವಿಚಾರಣೆಯಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಪ್ರಯತ್ನ ಮುಂದುವರಿಸಿ.

ಎಲ್ಲ ಪ್ರಯತ್ನಗಳೂ ಫಲಕಾರಿ ಆಗದಿದ್ದಾಗ ಮಾತ್ರ ಐವಿಎಫ್ (ಪ್ರನಾಳಶಿಶು) ಬಗ್ಗೆ ವೈದ್ಯರೇ ತಿಳಿಸುತ್ತಾರೆ. ನೀವು ಗರ್ಭಧಾರಣೆಯ ಬಗ್ಗೆ ಧನಾತ್ಮಕವಾಗಿದ್ದರೆ ಅದು ನಿಮ್ಮ ಫಲವಂತಿಕೆಯನ್ನು ಹೆಚ್ಚಿಸುತ್ತದೆ. ನಿಮಗೆ ಬೇಗನೆ ಮಗುವಾಗಲು ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT