ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30ರ ಹರೆಯದಲ್ಲಿ ಎರಡನೇ ಮಗು ಸಾಧ್ಯವೇ?

Last Updated 4 ಜೂನ್ 2022, 0:30 IST
ಅಕ್ಷರ ಗಾತ್ರ

1. ನನಗೆ ಮದುವೆಯಾಗಿ 8 ವರ್ಷ ಆಯಿತು. 7 ವರ್ಷದ ಒಬ್ಬ ಮಗ ಇದ್ದಾನೆ. 2ನೇ ಮಗುವಿಗೆ ಪ್ರಯತ್ನಿಸುತ್ತಿದ್ದೀವಿ. ಈ ಸಮಯದಲ್ಲಿ ಒಮ್ಮೆ ಗರ್ಭಪಾತ ಆಯಿತು. ಇದಾದ ನಂತರ ಪಿ.ಸಿ.ಒ.ಡಿ ಸಮಸ್ಯೆ ಕಾಣಿಸಿಕೊಂಡಿದೆ. ಈಗ ಒಂದು ವರ್ಷದಿಂದ ಎರಡನೇ ಮಗುವಿಗೆ ಪ್ರಯತ್ನಿಸುತ್ತಿದ್ದೇವೆ. ಆಗ್ತಾ ಇಲ್ಲ. ನನಗೆ ಈಗ 30 ವರ್ಷ. ನನ್ನ ತೂಕ 56 ಕೆ.ಜಿ. ಡಾಕ್ಟರ್ ನನಗೆ ಮೈಕ್ರೊ ಮಾತ್ರೆ ಮತ್ತು ಫೋಲ್‌ಕ್ಯೂರ್ 5 ಎಂ.ಜಿ ಮಾತ್ರೆ ಕೊಟ್ಟಿದ್ದಾರೆ. 2 ತಿಂಗಳಿಂದ ತೆಗೆದುಕೊಳ್ಳುತ್ತಿದ್ದೇನೆ. ಎರಡು ತಿಂಗಳಿನಿಂದ ವಾಕಿಂಗ್, ಡಯಟ್ ಎಲ್ಲಾ ಮಾಡ್ತಾ ಇದ್ದೀನಿ, ಆದರೆ ಗರ್ಭಧರಿಸುತ್ತಿಲ್ಲ. ದಯವಿಟ್ಟು ಸಲಹೆ ನೀಡಿ.

ಹೆಸರು, ಊರು ತಿಳಿಸಿಲ್ಲ

ನಿಮಗೀಗಾಗಲೇ 30 ವರ್ಷವಾಗಿರುವುದರಿಂದ ಎರಡನೇ ಮಗು ಪಡೆಯುವುದಕ್ಕೆ ನಿಮ್ಮ ಪ್ರಯತ್ನವನ್ನು ಮುಂದುವರೆಸಿ. ಫೋಲಿಕ್ ಆಸಿಡ್ ಮಾತ್ರೆಯನ್ನು ಮುಂದುವರೆಸಿ. ತಜ್ಞವೈದ್ಯರ ಸಲಹೆಯ ಮೇರೆಗೆ ಮುಟ್ಟಾಗಿ ಎರಡನೇ ದಿನದಿಂದ 5 ದಿನಗಳ ಕಾಲ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗಲು ಪ್ರಚೋದಿಸುವ ಮಾತ್ರೆಗಳನ್ನು ತೆಗೆದುಕೊಂಡು ಋತುಫಲಪ್ರದ ದಿನಗಳಲ್ಲಿ ಲೈಂಗಿಕ ಸಂಪರ್ಕ ಮಾಡಿ. ಖಂಡಿತ 6 ತಿಂಗಳೊಳಗೆ ಗರ್ಭಧಾರಣೆಯಾಗುತ್ತದೆ. ಹಾಗೂ ಆಗದಿದ್ದಲ್ಲಿ ಟ್ಯೂಬ್ ಟೆಸ್ಟಿಂಗ್ ಮಾಡಿಸಿಕೊಳ್ಳಿ. ತಜ್ಞವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಮುಂದುವರೆಸಿ.

2. ನನಗೆ 33 ವರ್ಷ, ನನಗೆ ನಾಲ್ಕೂವರೆ ವರ್ಷದ ಮಗನಿದ್ದಾನೆ. ಈಗ ಇನ್ನೊಂದು ಮಗುವಿಗೆ ಪ್ರಯತ್ನಿಸುತ್ತಿದ್ದೇವೆ. ಆದರೆ ನನಗೆ 24 ದಿನಕ್ಕೆ ಪಿರಿಯಡ್ ಬಂದು ಬಿಡುತ್ತದೆ. ಹೀಗೆ ಆದ್ರೆ ಏನಾದ್ರೂ ತೊಂದರೆ ಇದೆಯಾ?

ಹೆಸರು, ಊರು ತಿಳಿಸಿಲ್ಲ.

ನಿಮಗೆ 24 ದಿನಕ್ಕೆ ಮುಟ್ಟಾಗುತ್ತಿದ್ದರೆ ಅದೇನು ತೊಂದರೆಯಿಲ್ಲ. ಮುಟ್ಟಾಗಲು 14 ದಿನ ಮೊದಲು ಅಂದರೆ ಸುಮಾರು 10ನೇ ದಿನ ನಿಮಗೆ ಅಂಡಾಶಯದಿಂದ ಅಂಡೋತ್ಪತ್ತಿಯಾಗುತ್ತದೆ. ನೀವು ಮುಟ್ಟಾಗಿ 8 ನೇ ದಿನದಿಂದ 16 ದಿನಗಳವೆರೆಗೆ ನಿಮ್ಮ ಪತಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಿ. ಫೋಲಿಕ್ ಆಸಿಡ್ 5 ಮಿ.ಗ್ರಾಂ ಮಾತ್ರೆಗಳನ್ನು ನಿರಂತರವಾಗಿ ಸೇವಿಸುತ್ತಿರಿ. ಖಂಡಿತವಾಗಿಯೂ ಇನ್ನೊಂದು ಮಗುವಾಗುತ್ತದೆ. ಧೈರ್ಯವಾಗಿರಿ.

3. ಮುಟ್ಟಾಗಿ 15 ದಿನವಾದರೂ ನನ್ನ ಮಗಳಿಗೆ ಸ್ವಲ್ಪ ಕೆಂಪು ಮಿಶ್ರಿತ ಬಿಳಿಸ್ರಾವವಾಗುತ್ತಿದೆ. ಇದೇನು ಕಾಯಿಲೆಯ ಲಕ್ಷಣವೇ, ಇದಕ್ಕೆ ಚಿಕಿತ್ಸೆ ಇದೆಯೇ?

30 ದಿನಗಳಿಗೊಮ್ಮೆ ಮಾಸಿಕ ಋತುಚಕ್ರ ಆಗುವವರಲ್ಲಿ ಕೆಲವರಲ್ಲಿ ಅಂಡಾಶಯದಿಂದ ಅಂಡೋತ್ಪತ್ತಿಯಾಗುವ ಸಂದರ್ಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕೆಂಪುಮಿಶ್ರಿತ ಬಿಳಿಮುಟ್ಟು ಕಾಣಿಸಿಕೊಳ್ಳಬಹುದು. ಇದು ಸಹಜವಾದ ಸ್ರಾವ. ಯಾವುದೇ ಕಾಯಿಲೆಯ ಲಕ್ಷಣ ಎನಿಸಿಕೊಳ್ಳುವುದಿಲ್ಲ. ಆದ್ದರಿಂದ ಇದಕ್ಕೇನು ವಿಶೇಷ ಚಿಕಿತ್ಸೆ ಬೇಡ. ಅತಿಯಾಗಿ ಬಿಳಿಮುಟ್ಟಾಗಿ ಅದು ವಾಸನೆಯಿಂದ ಕೂಡಿದ್ದು ಜನನಾಂಗ ಭಾಗದಲ್ಲಿ ಕಡಿತವಾಗುತ್ತಿದ್ದರೆ ಮಾತ್ರ ವೈದ್ಯರನ್ನು ಸಂಪರ್ಕಿಸಿ. ಇಲ್ಲದಿದ್ದಲ್ಲಿ ಏನೂ ಭಯಪಡುವ ಅಗತ್ಯವಿಲ್ಲ.

4. ನನಗೆ ಈಗ 27 ವರ್ಷ. 7 ವರ್ಷದ ಮಗಳಿದ್ದಾಳೆ. ನಾನು ಒಂದೇ ಮಗು ಸಾಕು ಅಂತ 6 ವರ್ಷದಿಂದ ಸತತವಾಗಿ ಮಾಲಾ ಡಿ ಮಾತ್ರೆ, ನಂತರ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದೆ. 2 ಸಲ ಗರ್ಭಪಾತ ಕೂಡ ಆಗಿದೆ. ಆದರೆ ಈಗ 8 ತಿಂಗಳಿಂದ ಬಿಟ್ಟಿದ್ದೀನಿ. ಈಗ ನಮಗೆ ಮಗು ಬೇಕು. ಮತ್ತೆ ಏನಾದರೂ ತೊಂದರೆ ಆಗುತ್ತಾ ಮೇಡಂ. ತಿಂಗಳ ಮುಟ್ಟು ಕೂಡ ಸರಿಯಾಗಿ ಆಗ್ತಾ ಇಲ್ಲ.

ಹೆಸರು, ಊರು ತಿಳಿಸಿಲ್ಲ.

ನಿಮಗೆ ಇನ್ನೊಂದು ಮಗುವಾಗಲೂ ಏನೂ ತೊಂದರೆಯಿಲ್ಲ. ನಿಮಗೆ ಮುಟ್ಟು ಸರಿಯಾಗದೇ ಇರುವುದಕ್ಕೆ ನೀವು ತೆಗೆದುಕೊಂಡ ಡಿಪೊ ಇಂಜೆಕ್ಷನ್ ಕಾರಣವಾಗಿರಬಹುದು. ಆ ಇಂಜೆಕ್ಷನ್ ತೆಗೆದುಕೊಂಡ ಹೆಚ್ಚಿನವರಿಗೆ ತಿಂಗಳ ಮುಟ್ಟು ಸರಿಯಾಗಿ ಆಗುವುದಿಲ್ಲ. ಇದಕ್ಕೆ ಕಾರಣ ಗರ್ಭಕೋಶದ ಒಳಪದರ (ಎಂಡೊಮೆಟ್ರಿಯಮ್) ಸರಿಯಾಗಿ ಬೆಳೆಯದೇ ತಿಂಗಳಮುಟ್ಟು ಸರಿಯಾಗಿ ಬರುವುದಿಲ್ಲ. ಮಾಲಾ-ಡಿ ತೆಗೆದುಕೊಂಡವರಲ್ಲಿ ತಿಂಗಳು ಸರಿಯಾಗಿ ಮುಟ್ಟಾಗು ತ್ತದೆ. ನೀವು ಎಲ್ಲಾ ತರಹದ ಸಂತಾನ ನಿಯಂತ್ರಣ ಕ್ರಮಗಳನ್ನು ತಕ್ಷಣವೇ ನಿಲ್ಲಿಸಿ. ಫೋಲಿಕ್ ಆಸಿಡ್ 5 ಮಿ.ಗ್ರಾಂ ಮಾತ್ರೆಗಳನ್ನು ನಿತ್ಯ ತಪ್ಪದೇ ಸೇವಿಸುತ್ತಿರಿ. ಋತುಫಲಪ್ರದ ದಿನಗಳಲ್ಲಿ (ಋತುಚಕ್ರದ 8 ರಿಂದ 18 ದಿನದೊಳಗೆ) ಪತಿ ಯೊಡನೆ ಲೈಂಗಿಕ ಸಮಾಗಮ ಮಾಡಿದಾಗ ಆದಷ್ಟು ಬೇಗನೆ ನಿಮಗೆ ಮಗುವಾಗುತ್ತದೆ. ಆದಷ್ಟು ಬೇಗನೆ ಮಗುವನ್ನು ಪಡೆಯಿರಿ. ಆಗದಿದ್ದಲ್ಲಿ ವೈದ್ಯರ ಸಲಹೆ ಹಾಗೂ ಚಿಕಿತ್ಸೆ ಪಡೆಯಿರಿ.

5. ನನ್ನ ವಯಸ್ಸು 33. ಮದುವೆ ಆಗಿ ಮೂರುವರೆ ವರ್ಷ ಆಗಿದೆ. ಆಟ ಆಡುವಾಗ ನನ್ನ ಒಂದು ವೃಷಣಕ್ಕೆ ಚೆಂಡು ಬಿದ್ದು ಪೆಟ್ಟಾಗಿದೆ. ಡಾಕ್ಟರ್ ಬಳಿ ವೀರ್ಯಾಣು ಟೆಸ್ಟ್ ಮಾಡಿಸಿದಾಗ 27.4 ಮಿಲಿಯನ್/ಎಂ.ಎಲ್ ಇದೆ ಎಂದು ತಿಳಿದುಬಂತು. ಅದಕ್ಕೆ ಡಾಕ್ಟರ್ ಔಷದಿ ಕೊಟ್ಟಿದ್ದಾರೆ. ಹೀಗಿದ್ದಾಗ ನನಗೆ ಮಕ್ಕಳು ಆಗೋದಿಲ್ಲವೇ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಪ್ರತಿ ಪುರುಷರಲ್ಲೂ ಎರಡು ವೃಷಣಗಳಿರುತ್ತವೆ. ಇವುಗಳಲ್ಲಿ ಹರೆಯಕ್ಕೆ ಕಾಲಿಡುತ್ತಿದ್ದ ಹಾಗೆ ಹಾರ್ಮೋನುಗಳ ಪ್ರಭಾವದಿಂದ ಸತತವಾಗಿ ವೀರ್ಯಾಣು ಉತ್ಪಾದನೆ ಆರಂಭವಾಗುತ್ತದೆ. ಇದು ವಯಸ್ಸಾಗುವವರೆಗೂ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಈ ಪ್ರಕ್ರಿಯೆಗೆ ದೇಹದ ಶಾಖಕ್ಕಿಂತಲೂ ಅಂದಾಜು 1 ರಿಂದ 2 ಸೆಂಟಿಗ್ರೇಡ್ ಡಿಗ್ರಿಯಷ್ಟು ಕಡಿಮೆ ಇರಬೇಕಾಗಿರುವುದರಿಂದ ನೈಸರ್ಗಿಕವಾಗಿಯೇ ವೃಷಣಗಳನ್ನು ಶರೀರದ ಹೊರಗಿಟ್ಟಿರುವುದು ಹಾಗೂ ಈ ಪ್ರಕ್ರಿಯೆಗೆ ಸಹಾಯವಾಗುವುದು ಪ್ರಕೃತಿ ಧರ್ಮ. ಇದೇ ನಿಮಗೆ ಮುಳುವಾಗಿ ಆಟವಾಡುವಾಗ ಒಂದು ವೃಷಣಕ್ಕೆ ಪೆಟ್ಟಾಗಿರುವುದು ವಿಷಾದನೀಯ. ವೀರ್ಯಾಣುಗಳು ವೃಷಣದಲ್ಲಿ ಒಂದು ಗಂಟೆಗೆ ಅಂದಾಜು ಸುಮಾರು ಒಂದು ಕೋಟಿಯಷ್ಟು ಇದ್ದರೂ ಹೆಣ್ಣಿನ ಅಂಡಾಣುವಿನ ಜೊತೆ ಸಮಾಗಮವಾಗಲು, ಗರ್ಭಧಾರಣೆಗೆ ಬೇಕಾದದ್ದು ಒಂದೇ ಒಂದು ವೀರ್ಯಾಣು. 30 ದಶಲಕ್ಷಕ್ಕೂ (1 ಎಂ.ಎಲ್ ನಲ್ಲಿ) ಕಡಿಮೆ ವೀರ್ಯಾಣುಗಳಿದ್ದರೆ ಮಕ್ಕಳಾಗುವ ಸಂಭವನೀಯತೆ ಕಡಿಮೆ. ನಿಮಗೆ 27 ದಶಲಕ್ಷ/ಎಂ.ಎಲ್ ಇರುವುದರಿಂದ ಆತಂಕ ಬೇಡ. ಮಕ್ಕಳಾಗುವ ಸಾಧ್ಯತೆಗಳಿವೆ ಮತ್ತು ತಜ್ಞವೈದ್ಯರ ಔಷಧಿಯನ್ನು ಮುಂದುವರೆಸಿ. ಈಗಂತೂ ಬಂಜೆತನ ಚಿಕಿತ್ಸಾ ಕ್ರಮಗಳಲ್ಲೂ ಬಹಳಷ್ಟು ಸುಧಾರಣೆಯಾಗಿದೆ. ಚಿಂತಿಸುವ ಅಗತ್ಯವಿಲ್ಲ. ನಿಮಗೆ ಮಗುವಾಗುತ್ತದೆ.

6. ನನಗೆ ಇತ್ತೀಚೆಗಷ್ಟೇ ಮದುವೆಯಾಗಿದೆ. ಶೂನ್ಯಮಾಸವೆಂದ ಕಾರಣ ನಾವಿಬ್ಬರೂ ಒಟ್ಟಿಗಿರಲಿಲ್ಲ. ನಮಗೆ ಒಟ್ಟಿಗೆ ಇರಲು ಹೆಚ್ಚಿನ ಸಮಯವೂ ಸಿಗಲಿಲ್ಲ. ಹೆಚ್ಚು ದಿನಗಳನ್ನು ನಾವು ಪ್ರಯಾಣದಲ್ಲೇ ಕಳೆದೆವು ಹಾಗೂ ನಿದ್ರೆಯಿಲ್ಲದೆ ಕಳೆದೆವು. ನನಗೆ ಲೈಂಗಿಕ ಆಸಕ್ತಿಯೂ ಕಡಿಮೆಯಾಗುತ್ತಿದೆ ಮತ್ತು ಹಸ್ತಮೈಥುನದಲ್ಲೂ ಆಸಕ್ತಿಯಿಲ್ಲ. ಆದ್ದರಿಂದ ನನ್ನ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಲು ಸಲಹೆಗಳನ್ನು ಕೊಡುವಿರಾ ಮೇಡಂ.

ಹೆಸರು, ಊರು ತಿಳಿಸಿಲ್ಲ.

ನಿಮಗೆ ಇತ್ತೀಚೆಗಷ್ಟೇ ಮದುವೆಯಾಗಿರುವುದರಿಂದ ನಿಮ್ಮಲ್ಲಿ ಯಾವುದೇ ರೀತಿಯ ಒತ್ತಡವಿದ್ದಾಗ ಅದು ಮುಖ್ಯವಾಗಿ ಮಾನಸಿಕ ಒತ್ತಡವಿದ್ದರೆ ಅದು ಲೈಂಗಿಕ ಕ್ರಿಯೆಗೆ ತೊಡಕಾಗಬಹುದು. ನಿಮಗಿರುವ ಈ ಸಮಸ್ಯೆ ತಾತ್ಕಾಲಿಕವಾಗಿದ್ದೇ ಅಥವಾ ಆರಂಭದಿಂದಲೇ ಇದೆಯೋ ಎನ್ನುವುದರ ಬಗ್ಗೆ ತಜ್ಞರಿಂದ ಸೂಕ್ತ ತಪಾಸಣೆ ಹಾಗೂ ಸಮಾಲೋಚನೆ ಅಗತ್ಯವಾಗಿರುತ್ತದೆ.

ಕೆಲವೊಮ್ಮೆ ಸಕ್ಕರೆ ಖಾಯಿಲೆ ಇದ್ದು ನಿಯಂತ್ರಣದಲ್ಲಿ ಇಲ್ಲದಿದ್ದರೆ ಲೈಂಗಿಕ ಸಾಮರ್ಥ್ಯ ಕಡಿಮೆಯಾಗಬಹುದು. ಥೈರಾಯಿಡ್ ಹಾರ್ಮೋನು ಸ್ರಾವ ಕಡಿಮೆಯಾದಾಗಲೂ ಲೈಂಗಿಕ ಸಾಮರ್ಥ್ಯ ಕಡಿಮೆಯಾಗಬಹುದು. ಅತಿಯಾಗಿ ಧೂಮಪಾನ, ಮದ್ಯಪಾನ ಮಾಡುವವರಲ್ಲಿ, ಗುಟ್ಕಾ-ಪಾನ್ ಸೇವಿಸುವವರಲ್ಲಿ, ಟೆಸ್ಟೋಸ್ಟಿರಾನ್ ಹಾಗೂ ಪ್ರೊಲಾಕ್ಟಿನ್ ಹಾರ್ಮೋನು ಏರುಪೇರಾದಾಗಲೂ ಲೈಂಗಿಕ ಸಾಮರ್ಥ್ಯ ಕಡಿಮೆಯಾಗಬಹುದು. ಇನ್ನು ಮಾನಸಿಕವಾಗಿ ಲೈಂಗಿಕ ಕಲೆಯಬಗ್ಗೆ ಅರಿವಿಲ್ಲದೇ ಇರುವುದರಿಂದಲೂ, ಸಂಗಾತಿಯೊಂದಿಗೆ ಸರಿಯಾಗಿ ಸ್ಪಂದಿಸದೇ ಇರುವುದರಿಂದಲೂ, ಖಿನ್ನತೆ, ಆತಂಕದಿಂದ ಬಳಲುವವರಿಂದಲೂ, ಲೈಂಗಿಕ ಕ್ರಿಯೆಯ ಬಗ್ಗೆ ತಪ್ಪಿತಸ್ತ ಭಾವನೆ ಇದ್ದರೂ, ನಿಮ್ಮ ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದಾಗಲೂ ಲೈಂಗಿಕ ಸಾಮರ್ಥ್ಯ ಕಡಿಮೆಯಾಗಬಹುದು.

ನೀವು ಈ ಬಗ್ಗೆ ವಿವರವಾಗಿ ವೈದ್ಯರೊಂದಿಗೆ ಚರ್ಚಿಸಬೇಕು. ಅವಶ್ಯವಿದ್ದರೆ ಸೂಕ್ತ ಪರೀಕ್ಷೆಗಳಿಗೊಳಗಾಗಬೇಕು. ಅದಕ್ಕೂ ಮೊದಲು ನೀವು ಪತಿ-ಪತ್ನಿಯರಿಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಂಡು ಸ್ಪಂದಿಸುವುದು ಬಹಳ ಮುಖ್ಯ. ಪೌಷ್ಟಿಕ ಆಹಾರ ಸೇವಿಸುವುದು, ಒಟ್ಟಿಗೆ ತಿಂಡಿ ತಿನ್ನುವುದು, ಒಟ್ಟಿಗೆ ಹೊರಗಡೆ ಸಿನಿಮಾ, ವಾಕಿಂಗ್, ಇತ್ಯಾದಿ ಓಡಾಡುವುದು, ಪರಸ್ಪರ ದಿನಚರಿಗಳಲ್ಲಿ ಸಹಾಯ ಮಾಡುವುದು, ಪರಸ್ಪರ ಸ್ಪರ್ಶಿಸುವುದು, ಇವುಗಳಿಂದ ಪರಸ್ಪರ ಭಾವಪ್ರಾಪ್ತಿ ಸಂತೋಷ ಉಂಟಾಗುತ್ತದೆ. ದೈಹಿಕ ತೊಂದರೆಗಳಿದ್ದರೆ ವೈದ್ಯರು ತಪಾಸಣೆಗೊಳಪಡಿಸಿ ಸೂಕ್ತ ಚಿಕಿತ್ಸೆ ಕೊಡುತ್ತಾರೆ. ಕಳೆದೆರಡು ದಶಕಗಳಿಂದ ಸಿಲ್‌ಡೆನಫಿಲ್ ಸಿಟ್ರೇಟ್ (ವಯಾಗ್ರ) ಔಷಧ ಬಳಕೆಯಲ್ಲಿದೆ. ಆದರೂ ಇದರಲ್ಲಿ ಕೆಲವು ದುಷ್ಪರಿಣಾಮಗಳಿರುವುದರಿಂದ ವೈದ್ಯರ ಮೇಲ್ವಿಚಾರಣೆಯಲ್ಲೇ ಇದನ್ನು ಸೇವಿಸುವುದು ಉತ್ತಮ. ಆದ್ದರಿಂದ ನೀವು ತಜ್ಞವೈದ್ಯರನ್ನು ಭೇಟಿಯಾಗಲೇಬೇಕು.

7. ನಾನು ಮಕ್ಕಳಾಗುವ ವಿಚಾರಕ್ಕೆ ಸಂಬಂಧಿಸಿದಂತೆ ತಪಾಸಣೆ, ಚಿಕಿತ್ಸೆಗಾಗಿ ಡಾಕ್ಟರ್ ಹತ್ತಿರ ಹೋದಾಗ ಅವರು ನನಗೆ ಪ್ಲಾಸೆಂಟ್‌ರೆಕ್ಸ್ ಇಂಜೆಕ್ಷನ್ ಕೊಟ್ಟಿದ್ದಾರೆ. ಅದು ತಗೊಂಡ ನಂತರ ನನಗೆ 4 ವರ್ಷದಿಂದ ಆರಾಮವಿಲ್ಲ. ಎಲ್ಲಿ ತೋರಿಸಿದರೂ ನರ ವೀಕ್ನೆಸ್ ಎನ್ನುತ್ತಾರೆ. ಮುಂದೆ ಏನು ಮಾಡಬೇಕು ತಿಳಿದಿಲ್ಲ.

ಹೆಸರು, ಊರು ತಿಳಿಸಿಲ್ಲ.

ನೀವು ಬಂಜೆತನ ತಜ್ಞರ ಹತ್ತಿರ ಸೂಕ್ತ ತಪಾಸಣೆ ಮಾಡಿಸಿಕೊಂಡು ಅವರ ಸಲಹೆ ಸೂಚನೆಗಳ ಮೇರೆಗೆ ಚಿಕಿತ್ಸೆ ಪಡೆದುಕೊಳ್ಳಿ. ನೀವು ತೆಗೆದುಕೊಳ್ಳುತ್ತಿರುವ ಇಂಜೆಕ್ಷನ್‌ಗೂ ನರವೀಕ್ನೆಸ್‌ಗೂ ಯಾವ ಸಂಬಂಧವೂ ಇಲ್ಲ. ನಿಮ್ಮ ಪತಿಯೂ ಕೂಡ ತಪಾಸಣೆಗೆ ಒಳಪಡಲಿ. ಆದಷ್ಟು ಬೇಗ ನಿಮಗೆ ಮಗುವಾಗಲಿ ಎಂದು ಹಾರೈಸುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT