ಶುಕ್ರವಾರ, ಜನವರಿ 24, 2020
21 °C

ಹೇಳುವುದು ಕೇಳುವುದು..

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

16 ವರ್ಷದ ತಮ್ಮ ಪಿಯು ಓದುತ್ತಿದ್ದಾನೆ. ಅವನಿಗೆ ತುಂಬಾ ಕೋಪ. ಚೆನ್ನಾಗಿ ಓದುತ್ತಿಲ್ಲ. ಅಪ್ಪ– ಅಮ್ಮನ ಮಾತು ಕೇಳುತ್ತಿಲ್ಲ. ಅಕ್ಕನಾಗಿ ನಾನು ಹೇಳಿದರೂ ಕೋಪದಿಂದ ನನ್ನ ಜೊತೆ ಮಾತಾಡಲ್ಲ. ಬೇರೆಯವರ ಮಾತು ಕೇಳುತ್ತಾನೆ. ಇದರಿಂದ ಅಪ್ಪ– ಅಮ್ಮನಿಗೆ ಬೇಜಾರು. ಈಗ್ಲೇ ಹೀಗಾದ್ರೆ ಮುಂದೆ ಹೇಗೆ? ಅವನಿಗೆ ಹೇಗೆ ಹೇಳಬೇಕು ತಿಳಿಸಿ.
–ಹೆಸರು, ಊರು ಇಲ್ಲ

ಉತ್ತರ: ಮನೆಯಲ್ಲಿ ಎಲ್ಲರೂ ತಮ್ಮನಿಗೆ ಹೇಳುವವರೇ ಇರುವಾಗ ಅವನ ಅಂತರಂಗದ ಮಾತುಗಳನ್ನು ಕೇಳುವವರಾರು? ಈಗಲೂ ಕೂಡ ನೀವು ಹೊಸ ರೀತಿಯಲ್ಲಿ ಹೇಳುವ ಬಗೆಗೆ ಮಾತ್ರ ಯೋಚಿಸುತ್ತಿದ್ದೀರಲ್ಲವೇ? ಹೊರಗಡೆಯವರ ಮಾತುಗಳಲ್ಲಿ ಅವನಿಗೆ ಸ್ನೇಹ, ಪ್ರೀತಿ ಕಾಣುತ್ತಿದೆ. ಮನೆಯವರ ಮಾತುಗಳಲ್ಲಿ ನಯವಾದ ಟೀಕೆ, ಸರಿ–ತಪ್ಪುಗಳ ನಿರ್ಧಾರ, ಬುದ್ಧಿವಾದ, ಉಪದೇಶಗಳೇ ಕೇಳಿಸುತ್ತಿವೆ. ಅವನ ಕೋಪದ ಅರ್ಥ ಗೊತ್ತೇ? ‘ದೊಡ್ಡವನಾಗಿ ಸ್ವಂತವಾಗಿ ಯೋಚಿಸಬಲ್ಲ ನನ್ನ ಸ್ವಾತಂತ್ರ್ಯಕ್ಕೆ ಪ್ರತಿಕ್ಷಣವೂ ನೀವು ಅಡ್ಡಬರುತ್ತಿದ್ದೀರಿ’ ಎನ್ನುವುದು. ನೀವು ಪದೇಪದೇ ಹೇಳುವ ಎಲ್ಲಾ ಬುದ್ಧಿಮಾತುಗಳ ಅರಿವು ಅವನಿಗಿದೆ. ಅವನಿಗೆ ಬೇಕಾಗಿರುವುದು ನಿಮ್ಮೆಲ್ಲರ ಸ್ನೇಹ, ಪ್ರೀತಿ ಮಾತ್ರ. ಮನೆಯವರೆಲ್ಲಾ ಅವನಿಗೆ ‘ಹೇಳುವುದನ್ನು’ ನಿಲ್ಲಿಸಿ. ಅವನನ್ನು ಮಾತನಾಡಲು ಉತ್ತೇಜಿಸಿ. ಅವನ ಅಂತರಂಗದ ಧ್ವನಿಯನ್ನು ಸಹನೆಯಿಂದ ಕೇಳಿ ಅರ್ಥಮಾಡಿಕೊಳ್ಳಿ. ಭಿನ್ನಾಭಿಪ್ರಾಯಗಳಿದ್ದಲ್ಲಿ ಚರ್ಚೆಮಾಡಿ.

ಉತ್ತರವನ್ನು ತಮ್ಮನೂ ಸೇರಿ ಮನೆಯವರೆಲ್ಲಾ ಓದಿ ಪ್ರೀತಿಯ ವಾತಾವರಣದಲ್ಲಿ ಚರ್ಚೆ ಮಾಡಿ. ಸಂಬಂಧಗಳಿಗೆ ಹೊಸ ರೂಪ ಬರುತ್ತದೆ.

**
ನನಗೆ ಭಯ. ಮನೆಯಲ್ಲಿ ಯಾರಾದರೂ ಜೊತೆಗಿದ್ದರೂ ಹೊರಗಡೆಯಿಂದ ಚಿಲಕ ಹಾಕಿದರೆ ಅಥವಾ ಹೊರಗಡೆ ಯಾರೂ ಕಾಣದಿದ್ದರೆ ಎದೆಬಡಿತ ಹೆಚ್ಚಿ ಬೆವರು ಬಂದು ಸತ್ತೇ ಹೋಗುತ್ತೇನೆ ಅನ್ನಿಸುತ್ತದೆ. ಇದಕ್ಕೆ ಯಾವ ರೀತಿಯ ಚಿಕಿತ್ಸೆಯಿದೆ ತಿಳಿಸಿ.
–ಹೆಸರಿಲ್ಲ, ಚಳ್ಳಕೆರೆ

ಉತ್ತರ: ನಿಮ್ಮ ವೈಯುಕ್ತಿಕ ವಿವರಗಳನ್ನು ನೀಡಿದ್ದರೆ ಸಹಾಯವಾಗುತ್ತಿತ್ತು. ಹೊರಗಿನ ವಾತಾವರಣದ ಎಲ್ಲಾ ಸೂಚನೆಗಳನ್ನು ನೀವು ಅಪಾಯವೆಂದು ಗ್ರಹಿಸುತ್ತಿದ್ದೀರಿ. ಭಯಪಡಬೇಕಾಗಿಲ್ಲ ಎನ್ನುವುದು ಬುದ್ಧಿಗೆ ಹೊಳೆದರೂ ಮನಸ್ಸು ಸ್ವೀಕರಿಸುತ್ತಿಲ್ಲ. ಯಾವಾಗಲೂ ಭಯದಿಂದ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸಿ ಹೆಚ್ಚಿನ ಆತಂಕವನ್ನು ಆಹ್ವಾನಿಸಿಕೊಳ್ಳುತ್ತಿದ್ದೀರಿ. ಹಂತಹಂತವಾಗಿ ನಿಮ್ಮ ಅನುಭವಗಳ ಸ್ವರೂಪವನ್ನು ಬದಲಾಯಿಸಲು ನಿಮಗೆ ತಜ್ಞ ಮನೋಚಿಕಿತ್ಸಕರ ಸಹಾಯದ ಅಗತ್ಯವಿದೆ. ಎಲ್ಲರಂತೆ ಸಂತೋಷವಾಗಿ ಬದುಕಲು ನಿಮಗೆ ಖಂಡಿತಾ ಸಾಧ್ಯ.

**
ಪದವೀಧರ. ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಸರ್ಕಾರಿ ಕೆಲಸ ಪಡೆದುಕೊಳ್ಳಲೇಬೇಕೆಂದು ಓದುತ್ತಿದ್ದೇನೆ. ಆದರೆ ಮನಸ್ಸು ಎಲ್ಲೆಲ್ಲೋ ಹರಿಯುತ್ತದೆ. ಮನೆಯಲ್ಲಿ ದುಡ್ಡು ಕೇಳಲು ಸಂಕೋಚವಾಗುತ್ತದೆ. ಜೀವನದಲ್ಲಿ ಮುಂದೆ ಬರಬೇಕು. ಮಾರ್ಗದರ್ಶನ ಮಾಡಿ.
–ಹೆಸರು, ಊರು ಇಲ್ಲ

ಉತ್ತರ: ಸರ್ಕಾರಿ ಕೆಲಸವನ್ನು ಪಡೆಯುವ ನಿಮ್ಮ ಉದ್ದೇಶ ಸರಿಯಾಗಿದ್ದರೂ ಅದಕ್ಕೆ ಸಮಯದ ಅಗತ್ಯವಿದೆ. ಅಲ್ಲಿಯವರೆಗೆ ನಿಮ್ಮ ಜೀವನ ನಿಂತ ನೀರಾಗಬಾರದು. ನಿಮಗೆ ಅಗತ್ಯವಿರುವಷ್ಟು ಹಣ ಗಳಿಸುವ ಮಾರ್ಗಗಳನ್ನು ಹುಡುಕಿ. ಜೊತೆಗೆ ಸರ್ಕಾರಿ ಉದ್ಯೋಗ ನಿಮ್ಮ ಕೈಗೆ ಎಟಕದಿದ್ದಾಗ ನಿಮಗಿರುವ ಇತರ ಸಾಧ್ಯತೆಗಳ ಬಗೆಗೂ ಯೋಚಿಸಿ. ಒಂದೇ ಬುಟ್ಟಿಯಲ್ಲಿ ಎಲ್ಲಾ ಮೊಟ್ಟೆಗಳನ್ನಿಟ್ಟಾಗ ಬುಟ್ಟಿ ಕೈಜಾರಿದರೆ..? ಎನ್ನುವ ಆತಂಕ ಕಾಡುತ್ತಲೇ ಇರುತ್ತದೆ. ಈ ಆತಂಕವೇ ನಿಮ್ಮ ಏಕಾಗ್ರತೆಗೆ ಅಡ್ಡಬರುತ್ತಿದೆ. ಜೊತೆಗೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಸಾಮರ್ಥ್ಯದ ಬಗೆಗೆ ನಿಮಗೇ ಅನುಮಾನಗಳಿರುವಂತಿದೆ. ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ದಾರಿ ಹುಡುಕಿ. ಸೋಲಿನ ಭಯ ನಮ್ಮ ಪ್ರಯತ್ನಗಳಲ್ಲಿ ಅಡ್ಡಬರುವುದು ಮನುಷ್ಯ ಸಹಜ ಎಂದು ಮರೆಯಬೇಡಿ.

**
ಬಿ.ಕಾಂ. ಪದವೀಧರೆ. ನಾವು ಮೂರು ಜನ ಮಕ್ಕಳು. 2ನೇ ಅಣ್ಣ ನನ್ನ ಬಾಲ್ಯಸ್ನೇಹಿತೆಯನ್ನು ಇಷ್ಟಪಡುತ್ತಿದ್ದು ಮನೆಯವರೂ ಒಪ್ಪಿದ್ದಾರೆ. ಅವಳ ಚಾರಿತ್ರ್ಯದ ಬಗೆಗೆ ನನಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಅದನ್ನು ಹೇಳಿದರೆ ಅಣ್ಣ ನನಗೆ ಬೈಯುತ್ತಾನೆ, ಹೊಡೆಯುತ್ತಾನೆ. ಮನೆಯಲ್ಲಿ ಇಬ್ಬರ ಮದುವೆಯಾಗದೆ ಅವನು ಹೀಗೆಲ್ಲ ಮಾಡಿದ್ದಕ್ಕೆ ಬೇಸರವಾಗಿ ಎಲ್ಲರ ಜೊತೆ ಜಗಳವಾಡಿ ಅಮ್ಮನಿಗೂ ಬೇಸರವುಂಟು ಮಾಡುತ್ತಿದ್ದೇನೆ. ನಾನು ಎಲ್ಲರಂತೆ ನಗುನಗುತ್ತಾ ಇರುವುದು ಹೇಗೆ ಅಂತ ಸಲಹೆ ನೀಡಿ.
–ಹೆಸರು, ಊರು ಇಲ್ಲ

ಉತ್ತರ: ಅಣ್ಣ ನಿಮ್ಮ ಬಾಲ್ಯಸ್ನೇಹಿತೆಯನ್ನು ಮದುವೆಯಾಗುತ್ತಾನೆ ಮತ್ತು ನಿಮಗಿಂತ ಮೊದಲೇ ಮದುವೆಯಾಗಬಹುದು ಎನ್ನುವುದೇ ನಿಮಗೆ ದೊಡ್ಡ ಆತಂಕವಾಗಿರುವಂತೆ ಕಾಣಿಸುತ್ತದೆ. ಅಣ್ಣನಾಗಿದ್ದರೂ ಅವನ ಜೀವನದ ನಿರ್ಧಾರಗಳಲ್ಲಿ ನೀವು ಮೂಗು ತೂರಿಸುವುದು ಹೇಗೆ ಸಾಧ್ಯ? ಸಂಬಂಧಗಳು ಎಷ್ಟೇ ಆತ್ಮೀಯವಾಗಿದ್ದರೂ ಅದಕ್ಕೆ ಗಡಿರೇಖೆಗಳಿರುತ್ತವೆ. ಅದನ್ನು ಬಲವಂತವಾಗಿ ದಾಟಿದರೆ ಸಂಬಂಧಗಳು ಹಾಳಾಗುತ್ತವೆ. ಅಣ್ಣನನ್ನು ಸಧ್ಯಕ್ಕೆ ಬಿಡಿ, ನಿಮ್ಮ ಬಗೆಗೆ ನಿಮ್ಮೊಳಗೇ ಇರುವ ಅಸಮಾಧಾನ, ಹಿಂಜರಿಕೆ ಬೇರೆಯವರ ಮೇಲಿನ ಕೋಪವಾಗಿ ಹೊರಬರುತ್ತಿದೆಯೇ ಎನ್ನುವುದರ ಬಗೆಗೆ ಯೋಚಿಸಿ. ನಾನು ಹೇಗೆ ಬದುಕಬೇಕೆಂದಿದ್ದೇನೆ? ನನ್ನ ಆಸಕ್ತಿಗಳೇನು? ಸಂತೋಷವೆಲ್ಲಿದೆ? ಅವುಗಳನ್ನು ಪಡೆದುಕೊಳ್ಳುವುದು ಹೇಗೆ? ಎಂದು ಯೋಚಿಸಿ ಕಾರ್ಯಪ್ರವೃತ್ತರಾಗಿ. ಹಿಂದೆ ಮನೆಯವರ ಜೊತೆ ವರ್ತಿಸಿದ ರೀತಿಯ ಬಗೆಗೆ ಪಾಪಪ್ರಜ್ಞೆಯಿದ್ದರೆ ಪ್ರಾಮಾಣಿಕವಾಗಿ ಕ್ಷಮೆ ಕೇಳಿ ಅದು ಪುನರಾವರ್ತನೆಯಾಗದಂತೆ ಎಚ್ಚರವಹಿಸಿ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ಪ್ರತಿಕ್ರಿಯಿಸಿ (+)