ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಕೋವಿಡ್‌–19: ಜಾಸ್ತಿಯಾದ ಪಿಸಿಒಎಸ್‌ ಸಮಸ್ಯೆ

Last Updated 1 ಸೆಪ್ಟೆಂಬರ್ 2020, 6:23 IST
ಅಕ್ಷರ ಗಾತ್ರ

ಕೋವಿಡ್‌–19ನಿಂದಾಗಿ ಜೀವನಶೈಲಿಯೇ ಬದಲಾಗಿದೆ. ಇದರಿಂದಾಗಿ ಮಹಿಳೆಯರೂ ಸಹ ಆರೋಗ್ಯ ಹಾಗೂ ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ಐದು ತಿಂಗಳಲ್ಲಿ ಮಹಿಳೆಯರಲ್ಲಿ ಕಂಡು ಬಂದ ಪ್ರಮುಖ ಸಮಸ್ಯೆಯೆಂದರೆ ಪಾಲಿಸಿಸ್ಟಿಕ್ ಒವೇರಿಯನ್‌ ಸಿಂಡ್ರೋಮ್‌ ಅಥವಾ ಪಿಸಿಒಎಸ್‌. ಈ ಮೊದಲೂ ಈ ತೊಂದರೆ ಸಾಕಷ್ಟು ಪ್ರಮಾಣದಲ್ಲೇ ಇತ್ತು. ಆದರೆ ಲಾಕ್‌ಡೌನ್‌ ಹಾಗೂ ನಂತರದ ದಿನಗಳಲ್ಲಿ ಈ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

ಇದಕ್ಕೆ ಸಾಕಷ್ಟು ಕಾರಣಗಳನ್ನು ಪಟ್ಟಿ ಮಾಡಬಹುದು. ‘ಮನೆಯೊಳಗೇ ಹೆಚ್ಚು ಸಮಯ ಕಳೆಯುವುದು, ವ್ಯಾಯಾಮದ ಕೊರತೆ, ಆನ್‌ಲೈನ್ ಮೂಲಕ ಜಂಕ್‌ಫುಡ್‌ ಆರ್ಡರ್‌ ಮಾಡಿಕೊಂಡು ತಿನ್ನುವುದು, ಟಿವಿಯನ್ನು ಹೆಚ್ಚು ಸಮಯ ವೀಕ್ಷಿಸುವುದು, ಟಿವಿ ನೋಡುತ್ತ ಕರಿದ ತಿನಿಸುಗಳನ್ನು ಹೆಚ್ಚು ತಿನ್ನುವುದು, ಅನಿಯಮಿತ ನಿದ್ರೆ– ಇವೇ ಮೊದಲಾದ ಕಾರಣಗಳಿಂದ ಬಹಳಷ್ಟು ಮಹಿಳೆಯರಲ್ಲಿ ಬೊಜ್ಜು ಜಾಸ್ತಿಯಾಗಿದೆ’ ಎನ್ನುತ್ತಾರೆ ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯ ಲ್ಯಾಪ್ರೊಸ್ಕೋಪಿಕ್‌ ಸರ್ಜನ್‌ ಮತ್ತು ಫರ್ಟಿಲಿಟಿ ತಜ್ಞೆ ಡಾ.ವಿದ್ಯಾ ವಿ. ಭಟ್‌. ಈ ಬೊಜ್ಜಿನ ಜೊತೆಗೆ ಋತುಸ್ರಾವದಲ್ಲಿ ಏರುಪೇರು ಅಥವಾ ಅಧಿಕ ಸ್ರಾವದಂತಹ ತೊಂದರೆಗಳ ಬಗ್ಗೆ ಲಾಕ್‌ಡೌನ್‌ ಸಮಯದಲ್ಲಿ ನಿರ್ಲಕ್ಷ್ಯವೋ ಅಥವಾ ಕೊರೊನಾ ಸೋಂಕು ತೀವ್ರವಾಗಿರುವುದರಿಂದ ವೈದ್ಯರ ಬಳಿ ಹೋಗಲು ಹೆದರಿಕೆಯೋ ಒಟ್ಟಿನಲ್ಲಿ ಇವೆಲ್ಲವೂ ಸೇರಿ ಪಿಸಿಒಎಸ್‌ ಸಮಸ್ಯೆ ಜಾಸ್ತಿಯಾಗಿದೆ ಎನ್ನುತ್ತಾರೆ ಅವರು.

ಸಂತಾನಹೀನತೆಗೆ ಕಾರಣ

ಪಿಸಿಒಎಸ್‌ ಎನ್ನುವುದು ಎಂಡ್ರೊಕ್ರೈನ್‌ ಗ್ರಂಥಿಯ ಸಾಮಾನ್ಯ ಸಮಸ್ಯೆ. ಇದು ನಮ್ಮ ದೇಶದಲ್ಲಿ ಶೇ 9–36ರಷ್ಟಿದ ಎಂದು ಹಲವು ಅಧ್ಯಯನಗಳು ಹೇಳಿವೆ. ಮಹಿಳೆಯರಲ್ಲಿ ಅಂಡಾಶಯಕ್ಕೆ ಸಂಬಂಧಿಸಿದಂತೆ ಶೇ 85ರಷ್ಟು ತೊಂದರೆಗಳಿಗೆ ಪಿಸಿಒಎಸ್ ಕಾರಣ. ಇದು ಸಂತಾನಹೀನತೆ ಅಥವಾ ಫಲವತ್ತತೆ ಸಮಸ್ಯೆಗೆ ಪ್ರಮುಖ ಕಾರಣ. ಅಚ್ಚರಿಯ ಸಂಗತಿಯೆಂದರೆ ಬಹುತೇಕ ಮಹಿಳೆಯರಿಗೆ ತಾವು ಪಿಸಿಒಎಸ್‌ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ತಿಳಿವಳಿಕೆ ಇರುವುದಿಲ್ಲ. ಭಾರತದಲ್ಲಂತೂ ಕಳೆದ ಕೆಲವು ವರ್ಷಗಳಿಂದ ಈ ತೊಂದರೆ ಶೇ 30ರಷ್ಟು ಜಾಸ್ತಿಯಾಗಿದ್ದು, ಕೋವಿಡ್‌–19 ಪಿಡುಗಿನ ಸಂದರ್ಭದಲ್ಲಿ ಜೀವನಶೈಲಿಯಲ್ಲಾಗಿರುವ ಬದಲಾವಣೆಯಿಂದಾಗಿ ಇನ್ನಷ್ಟು ಹೆಚ್ಚಾಗಿದೆ.

‘ಈ ಲಾಕ್‌ಡೌನ್‌ ಎನ್ನುವುದು ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಜಾಸ್ತಿ ಮಾಡಿದೆ. ಕೋವಿಡ್‌–19ನಿಂದಾಗಿ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸುವುದಕ್ಕೆ ತೊಂದರೆಯಾಗಿದೆ. ಅದರಲ್ಲೂ ಸಂತಾನಹೀನತೆಗೆ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು ನಿಯಮಿತವಾಗಿ ವೈದ್ಯರ ಬಳಿ ತೆರಳಲು ಸಾಧ್ಯವಾಗುತ್ತಿಲ್ಲ’ ಎನ್ನುವ ಡಾ.ವಿದ್ಯಾ, ‘ಪಿಸಿಒಎಸ್‌ ಎನ್ನುವುದು ರಕ್ತದಲ್ಲಿನ ಇನ್ಸುಲಿನ್‌ ಪ್ರಮಾಣ ಹೆಚ್ಚಾಗಲು ಕಾರಣ. ಹೀಗಾಗಿ ಮಧುಮೇಹಿಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಹಾಗೆಯೇ ಆಲಸ್ಯ, ಯಾವಾಗಲೂ ಕುಳಿತುಕೊಂಡೋ, ಮಲಗಿಕೊಂಡೋ ಇರುವುದು ಕೂಡ ಈ ಹಿಂದೆ ಪಿಸಿಒಎಸ್‌ ಇದ್ದ ರೋಗಿಗಳಲ್ಲಿ ಇದು ಮರುಕಳಿಸಲು ಅಥವಾ ರೋಗ ಲಕ್ಷಣ ಅಧಿಕವಾಗಲು ಕಾರಣ’ ಎನ್ನುತ್ತಾರೆ.

ಮಧುಮೇಹಕ್ಕೆ ದಾರಿ

ಸ್ಯಾಚುರೇಟೆಡ್‌ ಕೊಬ್ಬು ಜಾಸ್ತಿ ಇರುವ ತಿನಿಸು ಸೇವನೆ, ತೂಕದಲ್ಲಿ ಹೆಚ್ಚಳ, ಉರಿಯೂತ, ರಾಸಾಯನಿಕಗಳು ಹಾಗೂ ಹಾರ್ಮೋನ್‌ ಏರುಪೇರು ಕೂಡ ಪಿಸಿಒಎಸ್‌ಗೆ ಕಾರಣಗಳು. ಇದರಿಂದ ಬೊಜ್ಜು, ಸಂತಾನಹೀನತೆ, ಟೈಪ್‌–2 ಮಧುಮೇಹ, ಹೃದ್ರೋಗಗಳು ಹಾಗೂ ಮಾನಸಿಕ ಸಮಸ್ಯೆಗಳಂತಹ ಆರೋಗ್ಯ ತೊಂದರೆಗಳಿಗೆ ಕಾರಣವಾಗುತ್ತದೆ. ಹಾಗೆಯೇ ಪಿಸಿಒಎಸ್‌ನಿಂದ ಅನಿಯಮಿತ ಮುಟ್ಟು, ಮುಖ ಮತ್ತು ಮೈ ಮೇಲೆ ಬಿರುಸಾದ, ಅತಿಯಾದ ಕೂದಲಿನ ಬೆಳವಣಿಗೆ, ತಲೆಗೂದಲು ಉದುರುವುದು, ತ್ವಚೆಯ ಬಣ್ಣ ಬದಲಾವಣೆ ಮತ್ತು ಸ್ಲೀಪ್‌ ಅಪ್ನಿಯಾದಂತಹ ನಿದ್ರೆ ಸಮಸ್ಯೆ ಕಂಡು ಬರಬಹುದು.

‘ಪಿಸಿಒಎಸ್‌ ಸಮಸ್ಯೆ ನಿಯಂತ್ರಣಕ್ಕೆ ತರಲು ಜೀವನಶೈಲಿಯ ನಿರ್ವಹಣೆ ಅತ್ಯಂತ ಮುಖ್ಯ’ ಎನ್ನುವ ಡಾ.ವಿದ್ಯಾ, ‘ಡಯೆಟ್‌ ಆಹಾರ, ದೈಹಿಕ ವ್ಯಾಯಾಮ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣ, ಹೈಪರ್‌ಟೆನ್ಶನ್‌ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದನ್ನು ಮರೆಯಬಾರದು’ ಎನ್ನುತ್ತಾರೆ. ಚಿಕಿತ್ಸೆಯಲ್ಲಿ ಗರ್ಭನಿರೋಧಕ ಮಾತ್ರೆಗಳು ಹಾಗೂ ಲ್ಯಾಪ್ರೊಸ್ಕೋಪಿ ಕೂಡ ಸೇರಿವೆ.

ಮಕ್ಕಳಿರುವ ಮಹಿಳೆಯರಿಗೆ ಕೂಡ ಪಿಸಿಒಎಸ್‌ ಬರಬಹುದು. ಹಾಗೆಯೇ ಪಿಸಿಒಎಸ್‌ ಇರುವಂತಹ ಯುವತಿಯರು ಕೂಡ ಮಕ್ಕಳನ್ನು ಪಡೆಯಬಹುದು. ಇದಕ್ಕೆ ವಯಸ್ಸಿನ ಭೇದವೂ ಇಲ್ಲ. ಜೊತೆಗೆ ದಪ್ಪ ಇಲ್ಲದವರೂ ಕೂಡ ಪಿಸಿಒಎಸ್‌ನಿಂದ ಬಳಲಬಹುದು.

ಈ ಸಂದರ್ಭದಲ್ಲಿ ಆನ್‌ಲೈನ್‌ ಮೂಲಕ ವೈದ್ಯರನ್ನು ಸಂಪರ್ಕಿಸಿದರೂ ಸಮಾಧಾನ ಸಿಗಬಹುದೇ ಹೊರತು ಚಿಕಿತ್ಸೆಗೆ ಹೆಚ್ಚು ಸಹಾಯಕಾರಿಯಲ್ಲ. ‘ಪಿಸಿಒಎಸ್‌ ಅನ್ನು ಸ್ಕ್ಯಾನಿಂಗ್‌ ಮೂಲಕ ತಪಾಸಣೆ ಮಾಡಬೇಕಾಗುತ್ತದೆ. ಸಮಸ್ಯೆಯ ಪ್ರಮಾಣ ಎಷ್ಟಿದೆ ಎಂದು ನೋಡಿಕೊಂಡು ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಬೇಕಾಗುತ್ತದೆ. ಹೀಗಾಗಿ ವೈದ್ಯರನ್ನು ಖುದ್ದಾಗಿ ಭೇಟಿಯಾಗಿ ಸಮಸ್ಯೆಯ ನಿವಾರಣೆ ಮಾಡಿಕೊಳ್ಳಬೇಕಾಗುತ್ತದೆ’ ಎನ್ನುತ್ತಾರೆ ಡಾ.ವಿದ್ಯಾ.

ಒತ್ತಡ ಕಾರಣ

‘ಲಾಕ್‌ಡೌನ್‌ ಎನ್ನುವುದು ಬಹತೇಕ ಮಹಿಳೆಯರಲ್ಲಿ ಒತ್ತಡವನ್ನು ಹೆಚ್ಚಿಸಿದೆ. ಬಹಳಷ್ಟು ಯುವತಿಯರಲ್ಲಿ ಕೂದಲು ಉದುರುವುದು, ಮುಖದ ಮೇಲೆ ಮೊಡವೆ, ಮುಟ್ಟಿನಲ್ಲಿ ಏರುಪೇರು, ತೂಕದಲ್ಲಿ ಹೆಚ್ಚಳದಂತಹ ಸಮಸ್ಯೆಗಳು ಜಾಸ್ತಿಯಾಗಿವೆ’ ಎನ್ನುವ ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ಕನ್ಸಲ್ಟೆಂಟ್‌ ಡಾ.ಶಶಿಕಲಾ ಕ್ಷೀರಸಾಗರ, ‘ಸಂತಾನೋತ್ಪತ್ತಿ ಹಾರ್ಮೋನ್‌ಗಳಲ್ಲಿನ ಏರುಪೇರು ಇದಕ್ಕೆ ಕಾರಣ. ಅಂಡಾಣು ಬಿಡುಗಡೆಯಾಗದಿರುವುದು ಪ್ರಮುಖ ತೊಂದರೆ’ ಎನ್ನುತ್ತಾರೆ.

ನಿತ್ಯದ ಕೆಲಸದಲ್ಲಿ, ನಿದ್ರೆ, ವ್ಯಾಯಾಮ ಹಾಗೂ ಆಹಾರ ಪದ್ಧತಿಯಲ್ಲಿ ಹೆಚ್ಚು ಕಡಿಮೆಯಾಗಿರುವುದು ದೇಹದ ತೂಕ ಹೆಚ್ಚಾಗಲು ಕಾರಣ. ಹೀಗಾಗಿ ಮಕ್ಕಳನ್ನು ಪಡೆಯುವಂತಹ 20– 35 ವರ್ಷ ವಯಸ್ಸಿನ ಬಹಳಷ್ಟು ಯುವತಿಯರು ಪಿಸಿಒಎಸ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ಅವರ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT