ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಬಿಸ್‌ತುರ್ತು ಚಿಕಿತ್ಸೆಯಿಂದ ನಿಯಂತ್ರಣ

Last Updated 27 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸೈಪ್ರಸ್, ಇಂಗ್ಲೆಂಡ್‌ನಂತಹ ಕೆಲವು ರಾಷ್ಟ್ರಗಳು ಭಯಾನಕ ಎನ್ನಿಸಿಕೊಂಡಿರುವ ರೇಬಿಸ್‌ ಅಥವಾ ಜಲಭಯ ರೋಗದಿಂದ ಮುಕ್ತವಾಗಿವೆ. ಆದರೆ ಅಮೆರಿಕದಂತಹ ಮುಂದುವರೆದ ರಾಷ್ಟ್ರದಲ್ಲೂ ಈ ರೋಗದ ಹಾವಳಿ ಇಂದಿಗೂ ತಪ್ಪಿಲ್ಲ. ಈ ಕಾಯಿಲೆ ಹೆಚ್ಚಾಗಿ ಕಂಡುಬರುವ ದೇಶಗಳೆಂದರೆ ಆಗ್ನೇಯ ಏಷ್ಯಾ ನಡುಗಡ್ಡೆಗಳು. ಭಾರತದಲ್ಲಂತೂ ಇದೊಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ದೇಶದ ಎಲ್ಲ ಪ್ರದೇಶಗಳಲ್ಲೂ ವರ್ಷದುದ್ದಕ್ಕೂ ಈ ರೋಗದ ಹಾವಳಿ ಕಂಡುಬರುತ್ತಿದ್ದು, ಪ್ರತಿವರ್ಷ ಮೂರು ಲಕ್ಷಕ್ಕೂ ಹೆಚ್ಚು ಜನರು ಪ್ರಾಣಿಗಳಿಂದ ಕಚ್ಚಿಸಿಕೊಂಡು ಚುಚ್ಚುಮದ್ದಿನ ಉಪಚಾರ ಪಡೆಯುತ್ತಾರೆ ಮತ್ತು ಮೂರು ಸಾವಿರಕ್ಕೂ ಹೆಚ್ಚು ಜನ ಮರಣ ಹೊಂದುತ್ತಾರೆ.

ನಿಶ್ಚಿತವಾದ ಚಿಕಿತ್ಸೆಯಿಲ್ಲದ ರೇಬಿಸ್‌ (ಸೆ.28 ವಿಶ್ವ ರೇಬಿಸ್‌ ದಿನ) ಅಥವಾ ಜಲಭಯ ರೋಗಕ್ಕೆ ಪ್ರತಿಬಂಧಕೋಪಾಯವೇ ಔಷಧ ಎನ್ನಬಹುದು. ಹುಚ್ಚುನಾಯಿಗಳನ್ನು ನಿಯಂತ್ರಿಸುವುದರ ಮೂಲಕ ಈ ಕಾಯಿಲೆಗೆ ಕಡಿವಾಣ ಹಾಕಬಹುದು.

ಸೋಂಕಿನ ಮೂಲ ಮತ್ತು ಪ್ರಸಾರ

ಸಸ್ತನಿ ವರ್ಗಕ್ಕೆ ಸೇರಿದ ಎಲ್ಲಾ ಪ್ರಾಣಿಗಳು ನಿಗೂಢ ವಾಹಕಗಳಾಗಿರುತ್ತವೆ. ಆದರೆ ಮಾನವ ಮತ್ತು ಪ್ರಾಣಿಗಳಲ್ಲಿ ಕಾಣುವ ಕಾಯಿಲೆಗೆ ಮಾಂಸಾಹಾರಿ ಪ್ರಾಣಿಗಳು ಕಾರಣವಾಗಿವೆ. ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕಿಂತ ಹಲವು ದಿನಗಳ ಮುಂಚಿತವಾಗಿಯೇ ಜೊಲ್ಲಿನಲ್ಲಿ ಈ ವೈರಸ್‌ಗಳು ಕಾಣಿಸಿಕೊಳ್ಳುತ್ತವೆ ಮತ್ತು ರೋಗಪೀಡಿತ ಪ್ರಾಣಿಯ ಸಾವು ಸಂಭವಿಸುವವರೆಗೂ ಜೊಲ್ಲಿನಲ್ಲಿರುತ್ತವೆ. ಈ ರೋಗ ಸರ್ವೇಸಾಮಾನ್ಯವಾಗಿ ಪ್ರಾಣಿಗಳು ಕಚ್ಚುವುದರಿಂದ ಬರುತ್ತದೆ. ಅಪರೂಪವಾಗಿ ಗೀರು ಗಾಯಗಳ ಅಥವಾ ಉಜ್ಜು ಗಾಯಗಳ ಮೇಲೆ ವೈರಸ್‌ಗಳಿರುವ ಜೊಲ್ಲು ಬೀಳುವುದರಿಂದಲೂ, ಚಿಕ್ಕ ಪುಟ್ಟ ಗಾಯಗಳನ್ನು ರೋಗಪೀಡಿತ ಪ್ರಾಣಿಗಳು ನೆಕ್ಕುವುದರಿಂದಲೂ, ತುಂಬಾ ಅಪರೂಪವಾಗಿ ಶ್ಲೇಷ್ಮ ತ್ವಚೆಯನ್ನು ವೈರಸ್‌ಗಳು ಬೇಧಿಸಿಕೊಂಡು ಹೋದಾಗಲೂ ಈ ಕಾಯಿಲೆ ಬರುತ್ತದೆ. ಮನುಷ್ಯರಿಗೆ ಬರುವ ಈ ರೇಬಿಸ್‌ ಕಾಯಿಲೆಗೆ ನಾಯಿ ಕಡಿತ ಪ್ರಮುಖ ಕಾರಣ. ಬೆಕ್ಕು, ಮಂಗ, ನರಿ, ತೋಳಗಳು ಕಚ್ಚುವುದರಿಂದಲೂ ಈ ರೋಗ ಬರಬಹುದು.

ವಿಷಾಣುಗಳ ಪ್ರಯೋಗಾಲಯದಲ್ಲಿ, ಪಶುವೈದ್ಯ ಶಾಲೆಯಲ್ಲಿ ಕೆಲಸ ಮಾಡುವವರಿಗೆ, ನಾಯಿ ಮತ್ತು ಬೆಕ್ಕುಗಳೊಡನೆ ಆಟವಾಡುವವರಿಗೆ ಇದರ ಸೋಂಕಾಗುವುದು ಹೆಚ್ಚು. ಒಮ್ಮೆ ವ್ಯಕ್ತಿಗೆ ಈ ರೋಗ ತಗಲಿದರೆ ಈ ವ್ಯಕ್ತಿಯಲ್ಲಿಯೇ ವೈರಸ್‌ಗಳು ತಮ್ಮ ಅಂತ್ಯವನ್ನು ಕಂಡುಕೊಳ್ಳುತ್ತವೆ. ಅಂದರೆ ವ್ಯಕ್ತಿ ಸತ್ತ ನಂತರ ಅವನಿಂದ ಬೇರೆಯವರಿಗೆ ಈ ರೋಗ ಹರಡುವುದಿಲ್ಲ.

ಈ ರೋಗದ ಅವಧಿ ಸಾಮಾನ್ಯವಾಗಿ 1–3 ತಿಂಗಳಿದ್ದು, ಕೆಲವೊಮ್ಮೆ 10 ದಿನಗಳಷ್ಟು ಕಡಿಮೆಯಾಗಿಯೂ, ವರ್ಷದಷ್ಟು ದೀರ್ಘವೂ ಆಗಬಹುದು. ಈ ರೋಗದ ಅವಧಿಯಲ್ಲಾಗುವಷ್ಟು ವೈಪರೀತ್ಯ ಬೇರಾವ ಸಾಂಕ್ರಾಮಿಕ ರೋಗದಲ್ಲೂ ಕಾಣುವುದಿಲ್ಲ.

ಈ ಕಾಲಾವಧಿಯ ಮೇಲೆ ಪ್ರಭಾವ ಬೀರುವ ಅಂಶಗಳೆಂದರೆ-

* ಶರೀರದ ಮೇಲೆ ಕಚ್ಚಿದ ಭಾಗ

* ಗಾಯದ ತೀವ್ರತೆ

* ಶರೀರವನ್ನು ಸೇರುವ ರೋಗಾಣುಗಳ ಸಂಖ್ಯೆ

* ಕಚ್ಚಿದ ಪ್ರಾಣಿಗಳ ಜಾತಿ

* ಕಚ್ಚುವಾಗ ದೇಹಕ್ಕೆ ಬಟ್ಟೆಗಳಿಂದ ದೊರೆತ ರಕ್ಷಣೆ

* ಗಾಯವಾದ ತಕ್ಷಣವೇ ನೀಡಿದ ಔಷಧೋಪಚಾರ

ಸಾಮಾನ್ಯವಾಗಿ ಮುಖ, ಕುತ್ತಿಗೆ, ಕೈ ಮೇಲೆ ಕಚ್ಚಿದಾಗ ಕಾಲಿಗೆ ಕಚ್ಚಿದಾಗ ಆಗುವುದಕ್ಕಿಂತಲೂ ಕಡಿಮೆ ಅವಧಿಯಲ್ಲಿ ರೋಗ ಕಂಡುಬರುವುದು. ವನ್ಯ ಪ್ರಾಣಿಗಳ ಕಡಿತ ಸಾಕುಪ್ರಾಣಿಗಳ ಕಡಿತಕ್ಕಿಂತ ಮಾರಕವಾಗಿರುತ್ತದೆ.

ರೋಗ ವಿಕಾಸ

ಪ್ರಾಣಿ ಕಚ್ಚಿದ ಸ್ಥಳದಲ್ಲಿ ಬಿಟ್ಟ ವೈರಸ್‌ಗಳು ಅಲ್ಲಿಯೇ ನೆಲೆ ನಿಲ್ಲುತ್ತವೆ. ಕಾಯಿಲೆ ಬೆಳವಣಿಗೆಯಾಗುವ ಅವಧಿಯಲ್ಲಿ ಸ್ಥಳೀಯ ಮಾಂಸಖಂಡಗಳಲ್ಲಿ ವೃದ್ಧಿಗೊಳ್ಳುತ್ತವೆ. ನಂತರ ದಾಳಿಯಿಡಲು ಸಜ್ಜಾಗುತ್ತವೆ. ಜ್ಞಾನವಾಹಿ ನರಗಳ ಮುಖಾಂತರ ಚಲಿಸಿ ಕೇಂದ್ರ ನರಮಂಡಲಕ್ಕೆ ಮುತ್ತಿಗೆ ಹಾಕುತ್ತವೆ. ಲಾಲಾರಸ ಗ್ರಂಥಿಗಳು, ಕರುಳು, ಮೇದೋಜೀರಕ ಗ್ರಂಥಿ, ಮೂತ್ರಪಿಂಡದ ನಳಿಕೆಗಳಿಗೆ ಮತ್ತು ಅಡ್ರಿನಲ್ ಗ್ರಂಥಿಯ ಮಧ್ಯ ಭಾಗಗಳಿಗೆ ಈ ವೈರಸ್‌ಗಳು ಹರಡುತ್ತವೆ. ವೈರಸ್ ರಕ್ತದಲ್ಲಿ ಕಂಡುಬರಬಹುದು. ನೆಗ್ರಿ ಕಾಯಗಳು ಇದ್ದಲ್ಲಿ ಅವು ಜಲಭಯ ರೋಗವನ್ನು ಖಚಿತಪಡಿಸುತ್ತವೆ. ಇವು ಬೇರಾವ ರೋಗದಲ್ಲೂ ಅವು ಕಾಣುವುದಿಲ್ಲ.

ರೋಗದ ಲಕ್ಷಣಗಳು

ಶೇ 80ರಷ್ಟು ಜನ ರೋಗಿಗಳಲ್ಲಿ ಆರಂಭದಲ್ಲಿ ಹುಚ್ಚು ಪ್ರಾಣಿ ಕಚ್ಚಿದ ಸ್ಥಳದಲ್ಲಿ ಜುಮುಗುಡುವಿಕೆ, ಅಸಹಜ ಇಂದ್ರಿಯ ಜ್ಞಾನ ಮತ್ತು ಮಂದವಾದ ಅಥವಾ ಇರಿತದ ನೋವು ಕಂಡುಬರುತ್ತದೆ. ನಾಯಿ ಕಚ್ಚಿದ ನೆನಪಾದರೆ ಕೆಲವೊಂದು ಮಾನಸಿಕ ಬದಲಾವಣೆಗಳು ಆಗುತ್ತವೆ. ರೋಗಿ ಸಣ್ಣ ಪುಟ್ಟ ವಿಷಯಗಳಿಗೂ ಸಿಟ್ಟಿಗೇಳುವನು. ಹಸಿವಾಗದೆ ಇರುವುದು, ನಿದ್ರೆ ಹತ್ತದಿರುವುದು. ಬಾಯಿರುಚಿ ಇಲ್ಲದಾಗುವುದು, ನುಂಗಲು ತೊಂದರೆಯಾಗುವುದು ಮತ್ತು ಧ್ವನಿಯಲ್ಲಿ ಬದಲಾವಣೆಯಾಗುವುದು.

ಕ್ರಮೇಣ ಕಾರಣವಿಲ್ಲದೆ ಭಯ ಮತ್ತು ಕೋಪೋದ್ರೇಕಗಳು ಬರುತ್ತವೆ. ಹುಚ್ಚರಂತೆ ವರ್ತಿಸುವರು. ಕೈಕಾಲುಗಳು ನಡುಗುತ್ತವೆ. ನೀರಡಿಕೆಯಾಗಿ ಗಂಟಲಾರುತ್ತದೆ. ಆದರೆ ನೀರು ಕುಡಿಯಲು ಹೋದರೆ ಗಂಟಲಿನ ಸ್ನಾಯುಗಳಲ್ಲಿ ಸೆಳೆತ ಉಂಟಾಗಿ ನೋವಾಗುತ್ತದೆ. ಅಂತೆಯೇ ಇದಕ್ಕೆ ಜಲಭಯ ಅಥವಾ ನೀರಸೆಳಕು ಎನ್ನುತ್ತಾರೆ.

ಕಾಯಿಲೆಯ ಪರಿಣಾಮ ಹೆಚ್ಚಾದಂತೆ ಬೇರೆಯವರನ್ನು ಕಂಡರೆ ಕಚ್ಚುವ ಚಪಲ ಹೆಚ್ಚುತ್ತದೆ. ಈ ಹಂತದಲ್ಲಿ ರೋಗಿಯು ಉಸಿರುಗಟ್ಟಿ ಸಾಯುವ ಸಾಧ್ಯತೆ ಹೆಚ್ಚು.

ರೋಗ ಪತ್ತೆ

ರೋಗಿ ಕೆಲವು ದಿನಗಳ ಹಿಂದೆ ನಾಯಿ ಕಚ್ಚಿದ್ದನ್ನು ಹೇಳಬಹುದು. ಗಾಯದ ಸ್ಥಳದಲ್ಲಿ ನೋವು, ತುರಿಕೆಗಳು ಕಂಡುಬರಬಹುದು. ತಲೆಶೂಲೆ, ಜ್ವರ, ಭಯ, ನಿಃಶಕ್ತಿ, ನೀರಡಿಕೆ ಆಗಬಹುದು. ಆದರೆ ನೀರು ಕುಡಿಯಲು ಹೋದರೆ ಮಾಂಸಖಂಡಗಳ ಸೆಳೆತ ಉಂಟಾಗುತ್ತದೆ. ನಂತರ ಬರಿ ನೀರು ನೋಡಿದರೂ, ನೀರಿನ ಸಪ್ಪಳ ಅಥವಾ ಹೆಸರು ಕೇಳಿದರೂ ಅಂಜುವರು. ಈ ವಿಶಿಷ್ಟ ಲಕ್ಷಣಗಳಿಂದಲೇ ರೋಗ ಪತ್ತೆ ಸಾಧ್ಯ. ರೋಗ ನಿದಾನ ಖಚಿತಪಡಿಸಲು -ಕಚ್ಚಿದ ಪ್ರಾಣಿಯು ಸತ್ತ ನಂತರ ಅದರ ಮೆದುಳನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದರೆ ನೆಗ್ರಿಕಾಯಗಳು ಕಂಡುಬರುತ್ತವೆ.

ಚಿಕಿತ್ಸೆ

ಈ ಕಾಯಿಲೆಗೆ ನಿಶ್ಚಿತ ಚಿಕಿತ್ಸೆಯಿಲ್ಲ. ಪ್ರಾಣಿಗಳು ಕಚ್ಚಿದ ನಂತರ ಜಲಭಯ ರೋಗ ಬರದಂತೆ ತಡೆಗಟ್ಟುವ ಒಂದೇ ಒಂದು ಉಪಾಯವೆಂದರೆ -ತಡಮಾಡದೇ ಚುಚ್ಚುಮದ್ದನ್ನು ಹಾಕಿಸುವುದು. ಇದರ ಉದ್ದೇಶ ಕಚ್ಚಿಸಿಕೊಂಡ ವ್ಯಕ್ತಿಯಲ್ಲಿ ಬೇಗನೆ ರೋಗ ಪ್ರತಿರೋಧಕ ಶಕ್ತಿಯನ್ನು ಬೆಳೆಸುವುದು. ಇದನ್ನು ರೋಗಾಣುಗಳು ನರಮಂಡಲ ಅಥವಾ ಮೆದುಳಿಗೆ ಮುತ್ತಿಗೆ ಹಾಕುವ ಮುನ್ನವೇ ಕೈಗೊಳ್ಳಬೇಕು.

ಪ್ರಥಮ ಚಿಕಿತ್ಸೆ

* ನಾಯಿ ಕಚ್ಚಿದ ಕೂಡಲೇ ಪ್ರಥಮ ಚಿಕಿತ್ಸೆಯನ್ನು ತಕ್ಷಣ ಕೈಗೊಂಡರೆ, ಮುಂದಿನ ಅನಾಹುತಗಳನ್ನು ತಡೆಯಬಹುದು.

* ನಾಯಿ ಕಡಿದ ನಂತರ ಸಾಬೂನಿನಿಂದ ಗಾಯವನ್ನು ಚೆನ್ನಾಗಿ ತೊಳೆಯಬೇಕು.

* ಪೊಟ್ಯಾಶಿಯಂ ಪರಮಾಂಗನೇಟ್ ದ್ರಾವಣ, ಸ್ಪಿರಿಟ್, ಕಾರ್ಬಾಲಿಕ್ ಆಮ್ಲ, ನೈಟ್ರಿಕ್ ಆಮ್ಲ ಮುಂತಾದವುಗಳು ಸಿಕ್ಕರೆ, ಯಾವುದಾದರೂ ಒಂದರಿಂದ ಗಾಯವನ್ನು ಸುಡಬೇಕು.

* ಕಡಿದ ನಾಯಿ ಸಾಕಿದ್ದೊ, ಬಿಡಾಡಿಯೋ, ಅಡವಿ ನಾಯಿಯೋ, ಹುಚ್ಚು ನಾಯಿಯೋ ಎಂಬುದನ್ನು ದೃಢಪಡಿಸಿಕೊಳ್ಳಬೇಕು.

* ಗಾಯಗಳು ಯಾವ ಭಾಗದಲ್ಲಿ, ಎಷ್ಟು ಪ್ರಮಾಣದಲ್ಲಿ ಆಗಿವೆ ಎಂಬುದನ್ನು ಲಕ್ಷ್ಯದಲ್ಲಿಡಬೇಕು.

* ಅಲಕ್ಷ್ಯ ಮಾಡದೇ ಆದಷ್ಟು ಬೇಗನೆ ವೈದ್ಯರ ಸಲಹೆ ಪಡೆಯಲು ಮರೆಯಬಾರದು.

ಪ್ರತಿಬಂಧಕೋಪಾಯಗಳು

ಜಲಭಯರೋಗಕ್ಕೆ ನಾಯಿ ಕಚ್ಚುವಿಕೆ ಪ್ರತಿಶತ 99ರಲ್ಲಿ ಕಾರಣವಾಗಿರುವುದರಿಂದ ಈ ಭಯಾನಕ ಸಮಸ್ಯೆಯ ಪರಿಹಾರ ಕೆಳಗಿನ ಅಂಶಗಳನ್ನು ಅವಲಂಬಿಸಿದೆ.

* ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

* ನಾಯಿಗಳಿಗೆ ರೋಗದ ವಿರುದ್ಧ ಚುಚ್ಚುಮದ್ದನ್ನು ತಪ್ಪದೇ ಹಾಕಿಸಬೇಕು.

* ಸಾಕುನಾಯಿ ಮತ್ತು ಬೆಕ್ಕುಗಳಿಗೆ ಹುಚ್ಚುನಾಯಿ ಕಚ್ಚಿದಾಗ ಸಾಕುಪ್ರಾಣಿಗಳ ಮೇಲಿನ ಪ್ರೀತಿಯನ್ನು ಅದುಮಿಟ್ಟು ಕೊಲ್ಲಬೇಕು.

* ನಾಯಿ ಕಡಿತಕ್ಕೆ ಒಳಗಾದ ವ್ಯಕ್ತಿಗಳೆಲ್ಲರೂ ರೋಗಪ್ರತಿರೋಧಕ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕು. ತಾತ್ಕಾಲಿಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಎ.ಆರ್.ಎಸ್. ಕೊಡಿಸಬೇಕು.

* ರೋಗಿಗಳನ್ನು ಉಪಚರಿಸುವವರು ಕೈಚೀಲ ಹಾಗೂ ಮುಖವಾಡ ಧರಿಸಿ, ಉಪಚಾರ ಮಾಡಬೇಕು.

* ರೋಗಿ ಉಪಯೋಗಿಸಿದ ಪಾತ್ರೆ ಪಗಡಗಳನ್ನು, ಹಾಸಿಗೆ, ಹೊದಿಕೆಗಳನ್ನು, ಬಟ್ಟೆಬರೆಗಳನ್ನು ಕ್ರಿಮಿನಾಶಕಗಳಲ್ಲಿ ತೊಳೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT