ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈ ಮನ ಪುನಃಶ್ಚೇತನಕ್ಕೆ ದೇಹ, ಮನಸ್ಸಿಗೂ 'ರಿಚಾರ್ಜ್'

Published : 23 ಸೆಪ್ಟೆಂಬರ್ 2024, 23:21 IST
Last Updated : 23 ಸೆಪ್ಟೆಂಬರ್ 2024, 23:21 IST
ಫಾಲೋ ಮಾಡಿ
Comments

ನಿಮ್ಮ ಮನಸ್ಸು, ಶರೀರಕ್ಕೆ ರಿಚಾರ್ಜ್‌ ಮಾಡಿದ್ರಾ...?

ಮೊನ್ನೆ ಬೆಳಿಗ್ಗೆ ನನ್ನ ಮೊಬೈಲ್‌ ಫೋನ್‌ಗೆ ಕರೆ ಮಾಡಿದ ಕ್ಯಾನ್ಸರ್‌ ಸಂತ್ರಸ್ತೆಯೊಬ್ಬರಿಗೆ ಈ ಮಾತನ್ನು ಕೇಳಿದಾಗ ಅದಕ್ಕವರು ಕಕ್ಕಾಬಿಕ್ಕಿಯಾದರು.

‘ಅಲ್ಲ; ಫೋನ್‌ ರಿಚಾರ್ಜ್‌ ಮಾಡಿದ್ರಾ ಅಂತಾ ಕೇಳುವವರ ನಡುವೆ, ಮನಸ್ಸು ಶರೀರಕ್ಕೆ ರಿಚಾರ್ಜ್‌ ಮಾಡಿದ್ರಾ ಅಂದ್ರೆ ಏನದರ ಅರ್ಥ’ ಅಂತಾ ಕೇಳಿದ್ರು.

‘ಅಯ್ಯೊ, ಗಾಬರಿಯಾಗ್ಬೇಡ್ರಿ. ಅಗ್ದಿ ಸಿಂಪಲ್‌ರ‍್ರೀ.. ನಾನು ಹೇಳಿದ್ದು, ಮೊಬೈಲ್‌ ಫೋನನ್ನ ಹೇಗೆ ನಿತ್ಯ ರಿಚಾರ್ಜ್‌ ಮಾಡ್ತಿರೋ ಹಾಗೇ ನಮ್ಮ ದೇಹ ಮತ್ತು ಮನಸ್ಸನ್ನು ನಿತ್ಯ ಬೆಳಿಗ್ಗೆ ರೀಚಾರ್ಚ್‌ ಮಾಡಿದ್ರೆ ಫುಲ್‌ ಡೇ ಎನರ್ಜಿಟಿಕ್‌ ಆಗಿರಬಹುದು ನೋಡ್ರಿ. ನಾನೀಗ ಅದೇ ಕೆಲ್ಸ ಮಾಡ್ತಿದ್ದೇನೆ’ ಅಂದೆ.

ನಿಜ. ದೇಹ, ಮನಸ್ಸನ್ನು ರಿಚಾರ್ಜ್‌ ಮಾಡಬೇಕಿರುವುದು ಇಂದಿನ ಒತ್ತಡದ ಬದುಕಿನಲ್ಲಿ ತೀರಾ ಅಗತ್ಯ. ಆದರಿಲ್ಲಿ ಯಾವುದೇ ರಿಚಾರ್ಜ್‌ ವೈರ್‌ ಬೇಕಿಲ್ಲ. ಬೇಕಿರುವುದು ವ್ಯಾಯಾಮ, ಯೋಗ, ಪ್ರಾಣಾಯಾಮ, ಧ್ಯಾನ. ಇದನ್ನು ಮಾಡಲು ಮನಸ್ಸಿನಲ್ಲಿ ಒಂದಿಷ್ಟು ಜಾಗ. ಶ್ರದ್ಧೆ, ಪ್ರಾಮಾಣಿಕತೆ ಮತ್ತು ಛಲ.

ಊಟ, ನಿದ್ದೆ ನಮ್ಮ ಜೀವನದ ಭಾಗವಾಗಿರುವಂತೆಯೇ ನಡಿಗೆ, ವ್ಯಾಯಾಮ, ಯೋಗ, ಪ್ರಾಣಾಯಾಮ, ಧ್ಯಾನವನ್ನು ಜೀವನದ ಭಾಗವಾಗಿಸಿಕೊಂಡಲ್ಲಿ ದಿನಪೂರ್ತಿ ಲವಲವಿಕೆಯಿಂದ, ಚೇತೋಹಾರಿಯಿಂದ ಇರಬಹುದು. ಅನಾರೋಗ್ಯ ಕಾಡುತ್ತಿದ್ದಲ್ಲಿ ಅದರಿಂದ ಬಹುಬೇಗ ಚೇತರಿಸಿಕೊಳ್ಳಬಹುದು. ಆರೋಗ್ಯದಿಂದಿರುವವರು ಆರೋಗ್ಯವನ್ನು ಮತ್ತಷ್ಟು ವೃದ್ಧಿಗೊಳಿಸಬಹುದು. ಕಾಯಿಲೆಗಳನ್ನು ದೂರವಿಡಬಹುದು.

ಅದರಲ್ಲೂ ಕ್ಯಾನ್ಸರ್‌ನಿಂದ ಚೇತರಿಸಿಕೊಂಡವರು, ಅದರಿಂದ ಪೂರ್ತಿ ಗುಣವಾದವರು ಈ ‘ರಿಚಾರ್ಜ್‌’ ಸೂತ್ರವನ್ನು ನಿತ್ಯ ಪಾಲಿಸಲೇಬೇಕು.

ನಿತ್ಯ ಬೆಳಿಗ್ಗೆ ಬೇಗ ಎದ್ದು, ಸೂರ್ಯನ ಎಳೆಬಿಸಿಲಲ್ಲಿ ಅರ್ಧ ತಾಸು ಕಳೆಯಿರಿ. ಈ ಅರ್ಧ ಗಂಟೆ ಅವಧಿಯಲ್ಲಿ ನಡಿಗೆ, ವ್ಯಾಯಾಮ, ಯೋಗ, ಪ್ರಾಣಾಯಾಮ, ಧ್ಯಾನಕ್ಕೆ ಸಮಯ ಹಂಚಿಕೊಳ್ಳಿ. ಇದರಿಂದ ಲಾಭವೇನೆಂದರೆ ವಿಟಮಿನ್‌ ಡಿ ಹೇರಳವಾಗಿರುವ ಎಳೆಬಿಸಿಲು ನಮ್ಮ ಮೈಮನವನ್ನು ಸೋಕಿ ನಮಗೆ ವಿಟಮಿನ್‌ ಡಿ ನೈಸರ್ಗಿಕವಾಗಿ ಲಭ್ಯವಾಗಲಿದೆ. ಮೂಳೆಗಳು ಸದೃಢವಾಗುವುದರೊಂದಿಗೆ, ಥೈರಾಯ್ಡ್‌ ಸಮಸ್ಯೆಯನ್ನು ದೂರವಿಡಬಹುದು.

ನಡಿಗೆ ಮನಸ್ಸನ್ನು ಉಲ್ಲಸಿತಗೊಳಿಸಲಿದೆ. ಪ್ರಾಣಾಯಾಮ ನಮ್ಮ ದೇಹಕ್ಕೆ ಅಗತ್ಯ ಆಮ್ಲಜನಕವನ್ನು ಪೂರೈಸಿ, ರಕ್ತಸಂಚಾರ ಸರಾಗಗೊಳಿಸಲಿದೆ. ವ್ಯಾಯಾಮದಿಂದ ದೇಹದ ಕೊಬ್ಬನ್ನು ಕರಗಿಸಬಹುದು. ಯೋಗದಲ್ಲಿ ಬರುವ ಎಲ್ಲ ಆಸನಗಳನ್ನು ಮಾಡಲಾಗದಿದ್ದರೂ ಹತ್ತಾರು ಆಸನಗಳನ್ನು ಒಳಗೊಂಡ ಸೂರ್ಯನಮಸ್ಕಾರವನ್ನು 13 ಬಾರಿಯಾದರೂ ಮಾಡುವುದರಿಂದ ಆರೋಗ್ಯವಂತರಾಗಬಹುದು.

ಯೋಗಾಸನ ದೇಹ ಮನಸ್ಸನ್ನು ಸ್ವಸ್ಥವಾಗಿಡುವ ಒಂದು ಸಾಧನ. ಒಂದು ಜೀವನಕ್ರಮವೂ ಹೌದು. ಧ್ಯಾನ ನಮ್ಮಲ್ಲಿನ ನಕಾರಾತ್ಮಕ ಅಂಶಗಳಿಂದ ದೂರಗೊಳಿಸಿ ಮನಸ್ಸನ್ನು ಸಕಾರಾತ್ಮಕ ಅಂಶಗಳ ಕಡೆಗೆ ಒಯ್ಯಲಿದೆ. ನಮ್ಮ ಮನಸ್ಸು ಯಾವಾಗ ಸಕಾರಾತ್ಮಕ ಮನೋಭಾವಕ್ಕೆ ಒಗ್ಗಿಕೊಳ್ಳುವುದೋ ಆಗ ದೈಹಿಕವಾಗಿ, ಮಾನಸಿಕ ಸಾಕಷ್ಟು ಕಾಯಿಲೆಗಳಿಂದ ಮುಕ್ತರಾಗಬಹುದು. ಕ್ಯಾನ್ಸರ್‌ ರೋಗಿಗಳು, ಸಂತ್ರಸ್ತರು ಕ್ಯಾನ್ಸರ್‌ ಮರುಕಳಿಸುವ ಭಯದಿಂದ ಹೊರಬರಬಹುದು. ಆಗ ಸಹಜವಾಗಿ ಆತ್ಮವಿಶ್ವಾಸ ವೃದ್ಧಿಗೊಂಡು ಅದು ಮನೋಬಲದ ವೃದ್ಧಿಗೆ ದಾರಿಯಾಗಲಿದೆ. ಈ ಮನೋಬಲದಿಂದ ಕ್ಯಾನ್ಸರ್‌ ಸಂತ್ರಸ್ತರು ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗಲಿದೆ.

ಆದರೆ ನಿತ್ಯವೂ ‘ರಿಚಾರ್ಜ್‌’ ಸೂತ್ರವನ್ನು ಪಾಲಿಸಬೇಕಷ್ಟೆ. ಒಂದು ದಿನ ಮಾಡಿ, ಸಮಯ ಸಿಕ್ಕಾಗ ಮಾಡಿದರಾಯಿತು ಎಂದು ವಾರಕ್ಕೊಮ್ಮೆಯೋ, 2 ವಾರಕ್ಕೊಮ್ಮೆಯೋ ಮಾಡಿದರೆ ಅದರಿಂದ ಸಾಧನೆ ಅಸಾಧ್ಯ. ‘ರಿಚಾರ್ಜ್‌’ ಸೂತ್ರವನ್ನು ತಪಸ್ಸಿನಂತೆ ಮಾಡಿದಾಗ ಮಾತ್ರ ಕ್ಯಾನ್ಸರ್‌ ಸಂತ್ರಸ್ತರು ಆಯುಷ್ಯವನ್ನೂ ಹೆಚ್ಚಿಸಿಕೊಂಡು ಉತ್ತಮ ಜೀವನ ಕಳೆಯಲು ಸಾಧ್ಯ. ಈ ಸೂತ್ರವನ್ನು ಕ್ಯಾನ್ಸರ್‌ ರೋಗಿಗಳು, ಸಂತ್ರಸ್ತರು ಮಾತ್ರ ಅನುಸರಿಸದೇ ಆರೋಗ್ಯ ಕಾಪಿಟ್ಟುಕೊಳ್ಳಲು ಎಲ್ಲರೂ ಅನುಸರಿಸಬೇಕಾದ ಆರೋಗ್ಯ ಸೂತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT