ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು | ಹಗಲುಗನಸುಗಳು ಮನಸ್ಸಿನ ರಕ್ಷಣಾತಂತ್ರ

Last Updated 4 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

*19 ವರ್ಷದ ವಿದ್ಯಾರ್ಥಿನಿ. ನಾನು ಯಾವಾಗಲೂ ನನ್ನದೇ ಲೋಕದಲ್ಲಿದ್ದು ಹಗಲುಗನಸು ಕಾಣುತ್ತೇನೆ. ಇದರಿಂದ ಓದಿಗೆ ತೊಂದರೆಯಾಗುತ್ತಿದೆ. ಈ ಭ್ರಮೆಯಿಂದ ಹೊರಬರುವುದು ಹೇಗೆ?

ಹೆಸರು ಊರು ತಿಳಿಸಿಲ್ಲ.

ವಾಸ್ತವವನ್ನು ಎದುರಿಸುವುದು ಕಷ್ಟವಾದಾಗ ಹಗಲುಗನಸಿನಲ್ಲಿ ನಮಗಿಷ್ಟವಾದ ಜಗತ್ತನ್ನು ಸೃಷ್ಟಿಸಿಕೊಳ್ಳುತ್ತೇವೆ. ಅಂದರೆ ಹಗಲುಗನಸುಗಳು ನೋವನ್ನು ಮರೆಯುವ ಮನಸ್ಸಿನ ಒಂದು ರಕ್ಷಣಾತಂತ್ರ. ಇದನ್ನು ಭ್ರಮೆಯೆಂದು ತಿರಸ್ಕರಿಸಬೇಕಾಗಿಲ್ಲ. ತೀವ್ರ ಸಂಕಷ್ಟದ ಸಮಯದಲ್ಲಿ ಕೆಲವೊಮ್ಮೆ ಇದು ಮನಸ್ಸಿನ ಸಮತೋಲನ ಉಳಿಸಿಕೊಳ್ಳಲು ಸಹಾಯಮಾಡುತ್ತದೆ. ಆದರೆ ನಿಮಗೆ ನಿತ್ಯ ಜೀವನಕ್ಕೆ ತೊಂದರೆ ಕೊಡುತ್ತಿದೆ. ಹಾಗಾಗಿ ತಕ್ಷಣದ ವಾಸ್ತವವನ್ನು ಎದುರಿಸಲು ನಾನೇಕೆ ಕಷ್ಟಪಡುತ್ತಿದ್ದೇನೆ ಎಂದು ಯೋಚಿಸಿ. ನಿಮ್ಮೊಳಗೇ ನಿಮ್ಮ ಬಗೆಗೆ ಇರುವ ಹಿಂಜರಿಕೆ ಕೀಳರಿಮೆಗಳನ್ನು ಪಟ್ಟಿಮಾಡಿಕೊಳ್ಳಿ. ಅವುಗಳು ಎಷ್ಟು ನಿಜ ಎಂದು ಪರೀಕ್ಷಿಸಿ. ಹಾಗೊಮ್ಮೆ ಅವು ನಿಜವೆನ್ನಿಸಿದರೆ ಅಂತಹ ಹಿಂಜರಿಕೆಗಳನ್ನು ಮೀರುವುದು ಹೇಗೆ ಏಂದು ಯೋಚಿಸಿ. ಮನೋಚಿಕಿತ್ಸಕರ ಸೌಲಭ್ಯವಿದ್ದರೆ ಬಳಸಿಕೊಳ್ಳಿ. ಅಥವಾ ಆತ್ಮೀಯ ಸ್ನೇಹಿತೆ ಇಲ್ಲವೇ ಶಿಕ್ಷಕರ ಸಹಾಯ ಪಡೆಯಿರಿ.

*****

*24ರ ಯುವತಿ. 2 ವರ್ಷಗಳಿಂದ ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಅವರ ಮನೆಯಲ್ಲಿ ಒಪ್ಪಿದರೂ ನಮ್ಮ ತಂದೆ ಒಪ್ಪುತ್ತಿಲ್ಲ. ಓಡಿಹೋಗಿ ಮದುವೆಯಾಗಿ ಎಲ್ಲರನ್ನೂ ಕಳೆದುಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಪ್ರಿಯಕರನನ್ನು ಬಿಡಲೂ ಆಗುತ್ತಿಲ್ಲ. ಕುಗ್ಗಿಹೋಗಿದ್ದೇನೆ. ಸಾವು ಒಂದೇ ಪರಿಹಾರ ಎನ್ನಿಸುತ್ತಿದೆ. ಸಹಾಯಮಾಡಿ.

ಹೆಸರು ಊರ ತಿಳಿಸಿಲ್ಲ.

ಮದುವೆಯಾಗಿ ಎಲ್ಲರನ್ನೂ ಕಳೆದುಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ ಎನ್ನುವ ವಾಕ್ಯದಲ್ಲಿಯೇ ನಿಮ್ಮ ಕಷ್ಟಗಳು ಅಡಗಿವೆ. ಕಳೆದುಕೊಳ್ಳುವುದು ಎನ್ನುವುದನ್ನು ನೀವು ಹೇಗೆ ಅರ್ಥೈಸುತ್ತಿದ್ದೀರಿ? ಪೋಷಕರಿಲ್ಲದೆ ನಿಮ್ಮ ಬದುಕು ಕಷ್ಟವಾಗಬಹುದೆಂದೇ? ಹಾಗಿದ್ದರೆ ನಿಮ್ಮ ಸ್ವಂತಶಕ್ತಿಯ ಮೇಲೆ ಇನ್ನೂ ನಂಬಿಕೆ ಬಂದಿಲ್ಲವೆಂದಾಯಿತಲ್ಲವೇ? ಅದನ್ನು ಬೆಳೆಸಿಕೊಳ್ಳುವುದು ಹೇಗೆಂದು ಯೋಚಿಸಿ. ಅಥವಾ ತಂದೆಯ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾದರೆ ಅವರಿಗೆ ನೋವಾಗಬಹುದು ಎನ್ನಿಸುತ್ತಿದೆಯೇ? ನಿಮಗಿಷ್ಟವಾದವರನ್ನು ಮದುವೆಯಾದ ಮೇಲೂ ಪೋಷಕರ ಮೇಲೆ ನಿಮಗಿರುವ ಪ್ರೀತಿಯನ್ನು ತೋರಿಸಲು ಸಾವಿರಾರು ದಾರಿಗಳಿವೆಯಲ್ಲವೇ? ನೀವು ಆತ್ಮಹತ್ಯೆ ಮಾಡಿಕೊಂಡರೆ ಅಂತಹ ದಾರಿಗಳೆಲ್ಲವೆನ್ನೂ ತಿರಸ್ಕರಿಸಿ ತಂದೆಗೆ ನೋವು ಕೊಟ್ಟಂತಾಗುವುದಿಲ್ಲವೇ? ನಿಮ್ಮ ಮನಸ್ಸಿಗೊಪ್ಪುವ ನರ‍್ಧಾರವನ್ನು ತೆಗೆದುಕೊಳ್ಳವುದರ ಹಿಂದಿನ ಗೊಂದಲಗಳಿಗೆ ಪರಿಹಾರವನ್ನು ನಿಮ್ಮೊಳಗೇ ಹುಡುಕಿ. ಅದಕ್ಕೆ ತಂದೆಯವರಾಗಲೀ ಆತ್ಮಹತ್ಯೆಯಾಗಲೀ ಸಹಾಯ ಮಾಡಲಾರದು.

****

*24ರ ಯುವಕ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಐದಾರು ವರ್ಷಗಳಿಂದ ನೀಲಿ ಚಿತ್ರಗಳನ್ನು ನೋಡುತ್ತಾ ಹಸ್ತಮೈಥುನ ಮಾಡಿಕೊಳ್ಳುವ ಅಭ್ಯಾಸವಿದೆ. ಫೋನ್‌ ಕೈಗೆ ಬಂದ ತಕ್ಷಣ ಇದನ್ನೇ ಮಾಡುತ್ತೇನೆ. ಇದರಿಂದ ಓದಿಗೆ ತೊಂದರೆಯಾಗುತ್ತಿದೆ. ಪರಿಹಾರವೇನು?

ಹೆಸರು ಊರು ತಿಳಿಸಿಲ್ಲ.

ಮದುವೆಯಾಗುವವವರೆಗೆ ಲೈಂಗಿಕ ಒತ್ತಡಗಳನ್ನು ನಿಭಾಯಿಸಲು ಹಸ್ತಮೈಥುನ ಆರೋಗ್ಯಕರ ಮಾರ್ಗ. ಆದರೆ, ಅದಕ್ಕಾಗಿ ನೀವು ನೀಲಿಚಿತ್ರಗಳ ಆಕರ್ಷಣೆಗೆ ಮೊರೆಹೋಗಿ ತಪ್ಪಿತಸ್ಥ ಭಾವನೆಯಿಂದ ನರಳುತ್ತಿದ್ದೀರಿ. ಹಸ್ತಮೈಥುನ ಅಥವಾ ನೀಲಿಚಿತ್ರಗಳು ವ್ಯಸನವಾಗುವುದು ಯಾವಾಗ ಗೊತ್ತೇ? ಯಾವುದೋ ನೋವು ಹಿಂಜರಿಕೆಗಳನ್ನು ಮರೆಯಲು ಇಂತಹ ತಕ್ಷಣದ ಸುಖಾನುಭವವನ್ನು ಬಳಸುತ್ತಿದ್ದೀರಿ. ಆದರೆ ಇದರಿಂದ ನಿಮ್ಮ ನೋವು ಪಾಪಪ್ರಜ್ಞೆ ಹೆಚ್ಚಾಗುತ್ತಿದೆಯಲ್ಲವೇ? ಈ ವಿಷವರ್ತುಲದಿಂದ ಹೊರಬರಲು ನನ್ನೊಳಗೆ ಹುದುಗಿರುವ ನೋವು ಹಿಂಜರಿಕೆ ಕೀಳರಿಮೆಗಳೇನು ಎಂದು ಯೋಚಿಸಿ ಪಟ್ಟಿಮಾಡಿಕೊಳ್ಳಿ. ನಿಮ್ಮ ಬಗೆಗೆ ನಿಮ್ಮೊಳಗೇ ಶೇಖರವಾಗಿರುವ ನೋವನ್ನುಂಟು ಮಾಡುವ ಅಭಿಪ್ರಾಯಗಳೆಲ್ಲಾ ಹೊರಬರುತ್ತವೆ. ಉದಾಹರಣೆಗೆ ನನಗೆ ಪರೀಕ್ಷೆಯಲ್ಲಿ ಉತ್ತರ‍್ಣನಾಗುವ ಶಕ್ತಿಯಿದೆಯೇ? ಉದ್ಯೋಗ ಸಿಗದಿದ್ದರೆ ನನ್ನ ಭವಿಷ್ಯದ ಗತಿಯೇನು? ಮುಂತಾಗಿ. ಇವುಗಳು ನಿಮಗೆ ಕೊಡುತ್ತಿರುವ ನೋವನ್ನು ಒಪ್ಪಿಕೊಂಡು ನಿಧಾನವಾಗಿ ಒಂದೊಂದೇ ವಿಷಯಕ್ಕೆ ಪರಿಹಾರ ಹುಡುಕಿ. ನೀಲಿಚಿತ್ರಗಳನ್ನು ನೋಡುವ ಒತ್ತಡವುಂಟಾದಾಗ, ಒಂದೈದು ನಿಮಿಷ ಮುಂದೂಡಿ. ನಿಮ್ಮ ದೇಹ ಮನಸ್ಸುಗಳಲ್ಲಿ ನಡೆಯುತ್ತಿರುವುದನ್ನು ಗಮನಿಸಿ. ದೇಹವನ್ನು ಸಡಿಲಬಿಟ್ಟು ಮನಸ್ಸನ್ನು ಶಾಂತಗೊಳಿಸಿ. ಇದು ನನ್ನ ನೋವಿಗೆ ಪರಿಹಾರವಲ್ಲ ಎಂದು ನೆನಪಿಸಿಕೊಳ್ಳಿ. ನಿಧಾನವಾಗಿ ಒತ್ತಡ ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT