ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದ ಆರೋಗ್ಯಕರ ಕಷಾಯಗಳು

Last Updated 16 ಜುಲೈ 2018, 10:37 IST
ಅಕ್ಷರ ಗಾತ್ರ

ಮಳೆಗಾಲದಲ್ಲಿ ಶೀತ, ತಲೆಭಾರ, ಗಂಟಲು ಕೆರೆತ, ಜ್ವರ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಕೆಲವು ಕಷಾಯಗಳನ್ನು ಮಾಡಿ ಕುಡಿದರೆ ಒಳ್ಳೆಯದು. ಕಾಫಿ, ಟೀಗಳ ಬದಲು ಈ ಕಷಾಯಗಳು ಸೇವಿಸದರೆ ಆರೋಗ್ಯಕ್ಕೆ ಒಳ್ಳೆಯದು.

ತುಲಸಿ ಕಷಾಯ

ಬೇಕಾಗುವ ವಸ್ತುಗಳು : 1 ಹಿಡೀ ತುಲಸಿ, 2 ಕಪ್ ನೀರು, 1 ಚಮಚ ಬೆಲ್ಲ, ¼ ಕಪ್ ಹಾಲು.
ಮಾಡುವ ವಿಧಾನ : ತುಳಸಿ ತೊಳೆದು ಸ್ವಲ್ಪ ನೀರು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ನೀರು ಸೇರಿಸಿ ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ. ಬೆಲ್ಲ ಹಾಕಿ. ನೀರು ಕುದಿದು 1 ಕಪ್ ಆದಾಗ ಒಲೆಯಿಂದ ಕೆಳಗಿಳಿಸಿ. ನಂತರ ಸೋಸಿ ಹಾಲು ಹಾಕಿ ಚೆನ್ನಾಗಿ ಬೆರೆಸಿ ಕಪ್ಗೆ ಹಾಕಿ ಕುಡಿಯಿರಿ. ಮಳೆಗಾಲದಲ್ಲಿ ಕಾಡುವ ಶೀತ ಬಾಧೆ ನಿವಾರಣೆಗೆ ಒಳ್ಳೆಯದು.

ಧನಿಯಾ-ಜೀರಿಗೆ ಕಷಾಯ

ಬೇಕಾಗುವ ವಸ್ತುಗಳು :
1 ಚಮಚ ಧನಿಯಾ, 1 ಚಮಚ ಜೀರಿಗೆ, ¼ ಚಮಚ ಮೆಂತೆ, ¼ ಇಂಚು ಉದ್ದದ ಜೇಷ್ಠಮಧು, 10-12 ಕಾಳುಮೆಣಸು, 2-3 ಲವಂಗ, ¼ ಚಮಚ ಓಮ, 1 ಚಮಚ ಒಣಶುಂಠಿ ಪುಡಿ, ¼ ಇಂಚು ಉದ್ದದ ಹಿಪ್ಪಲಿ, ¼ ಚಮಚ ಅರಸಿನ , 1 ಚಮಚ ಬೆಲ್ಲ, 2-3 ಕಪ್ ನೀರು, ½ ಕಪ್ ಹಾಲು.
ಮಾಡುವ ವಿಧಾನ : ಬಾಣಲೆ ಒಲೆಯ ಮೇಲಿಟ್ಟು ಅನುಕ್ರಮವಾಗಿ ಧನಿಯಾ, ಜೀರಿಗೆ, ಮೆಂತೆ, ಜೇಷ್ಠಮಧು, ಕಾಳುಮೆಣಸು, ಲವಂಗ, ಓಮ, ಒಣಶುಂಠಿ ಪುಡಿ, ಹಿಪ್ಪಲಿ, ಅರಸಿನ ಹಾಕಿ ಸ್ವಲ್ಪ ಹುರಿದು ನುಣ್ಣಗೆ ಪುಡಿ ಮಾಡಿ. ನಂತರ ಕುದಿವ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಬೆಲ್ಲ ಹಾಕಿ. ಕುದಿದ ನಂತರ ಶೋಧಿಸಿ. ನಂತರ ಕುದಿಸಿದ ಹಾಲು ಹಾಕಿ ಬೆರೆಸಿ ಕುಡಿಯಿರಿ. ಆರೋಗ್ಯಕ್ಕೆ ಇದು ಒಳ್ಳೆಯ ಕಷಾಯ. ಹೊಟ್ಟೆಯುರಿ, ಮೂತ್ರ ದೋಷ, ದೇಹಕ್ಕೆ ಉಷ್ಣವಾಗುವುದು ಇತ್ಯಾದಿ ತೊಂದರೆಗಳು ನಿವಾರಣೆಯಾಗುತ್ತದೆ.

ಶುಂಠಿ ಕಷಾಯ
ಬೇಕಾಗುವ ವಸ್ತು
ಗಳು : 1 ಇಂಚು ಉದ್ದದ ಶುಂಠಿ, 2 ಕಪ್ ನೀರು, 1½ ಚಮಚ ಬೆಲ್ಲ, ¼ ಕಪ್ ಹಾಲು
ಮಾಡುವ ವಿಧಾನ : ಶುಂಠಿಯನ್ನು ಚೆನ್ನಾಗಿ ತೊಳೆದು, ಜಜ್ಜಿ 2 ಕಪ್ ನೀರು ಹಾಕಿ ಕುದಿಸಿ. ಕುದಿಯುವಾಗ ಬೆಲ್ಲ ಹಾಕಿ. 5 ನಿಮಿಷ ಕುದಿದ ನಂತರ ಒಲೆಯಿಂದ ಕೆಳಗಿಳಿಸಿ. ಕುದಿಸಿದ ಹಾಲು ಸೆರಿಸಿ ಬೆರೆಸಿ. ಬಿಸಿಯಿರುವಾಗಲೇ ಕುಡಿಯಿರಿ. ಗಂಟಲು ಕೆರೆತ, ಶೀತ, ತಲೆಭಾರ ಈ ಸಮಸ್ಯೆಗಳಿಗೆ ಈ ಕಷಾಯ ಒಳ್ಳೆಯದು.


ಕರಿಬೇವಿನ ಎಲೆಯ ಕಷಾಯ

ಬೇಕಾಗುವ ವಸ್ತುಗಳು
: 1 ಹಿಡಿ ಕರಿಬೇವಿನೆಲೆ, 2 ಕಪ್ ನೀರು, ¼ ಕಪ್ ಹಾಲು, 1 ಚಮಚ ಬೆಲ್ಲ, 1 ಲವಂಗ, ಸಣ್ಣ ತುಂಡು ಶುಂಠಿ, ½ ಚಮಚ ಧನಿಯಾ ಪುಡಿ.
ಮಾಡುವ ವಿಧಾನ : ಕರಿಬೇವಿನೆಲೆ ತೊಳೆದು, ಜಜ್ಜಿ ಯಾ ಮಿಕ್ಸಿಯಲ್ಲಿ ರುಬ್ಬಿ. ನಂತರ ನೀರು, ಬೆಲ್ಲ, ಲವಂಗ, ಜಜ್ಜಿದ ಶುಂಠಿ, ಧನಿಯಾ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ. 1-1½ ಕಪ್ ಆದಾಗ ಒಲೆಯಿಂದ ಕೆಳಗಿಳಿಸಿ. ನಂತರ ಸೋಸಿ ಹಾಲು ಬೆರೆಸಿ ಕುಡೀಯಿರಿ. ಇದು ಜೀರ್ಣಕ್ರಿಯೆಗೆ ಸಹಕಾರಿ. ಅಧಿಕ ತೂಕ ಕಡಿಮೆಯಾಗಲು ಸಹಕಾರಿ.


’ವಿಶ್ರಾಂತಿ’
ಬೊಳುವಾರು ಬೈಲ್
ಪುತ್ತೂರು – 574201(ದ.ಕ)
ಮೊಬೈಲ್ – 9481845400

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT