ಶನಿವಾರ, ನವೆಂಬರ್ 26, 2022
23 °C

ಹೊಣೆಗಾರಿಕೆಯೋ? ಹೆಗ್ಗಳಿಕೆಯೋ? - ನಮ್ಮೆಲ್ಲ ಕಾರ್ಯಗಳಿಗೆ ನಾವೇ ಹೊಣೆಗಾರರು!

ರಘು ವಿ. Updated:

ಅಕ್ಷರ ಗಾತ್ರ : | |

ಬದುಕಿನ ಕೇಂದ್ರ ಮತ್ತು ಪರಿಧಿಯನ್ನು ಅರಿಯುವುದರೊಳಗೆ ಅಸ್ತಿತ್ವವೇ ಆವಿಯಾಗಿ ಹೋಗುವ ಸಾಧ್ಯತೆಯೇ ಅಧಿಕ. ಯಾರನ್ನು ಕೇಳಿದರೂ ತಮ್ಮದೇ ಬದುಕಿನ ಬಗ್ಗೆ ಹೇಳಿಕೊಳ್ಳುವಾಗ ಪೂರ್ಣತೃಪ್ತಿಯನ್ನು ವ್ಯಕ್ತಪಡಿಸದಿರುವುದನ್ನು ಗಮನಿಸುತ್ತೇವೆ. ಆಗ ಮೇಲಿನ ವಾಕ್ಯ ಸತ್ಯವೆಂದು ಗೋಚರಿಸುತ್ತದೆ. ಏಕೆ ಹೀಗೆಂದು ಪ್ರಶ್ನಿಸಿದಾಗ ಉತ್ತರಗಳಾಗಿ ಹುಡುಕುವ ಕಾರಣಗಳಲ್ಲಿ ಬಹುತೇಕವು ಹೊರಗೆ ಬೊಟ್ಟುಮಾಡಿರುವಂತಹವು.

ಅಂದರೆ ತಮ್ಮ ಜೀವನದ ಅನೇಕ ಏರಿಳಿತಗಳಿಗೆ ಕಾರಣಗಳನ್ನು ಹೊರಗೆ ಕಾಣುವುದು. ಅಂದರೆ ಹೊಣೆಗಾರಿಕೆಯನ್ನು ವರ್ಗಾಯಿಸುವ ಪ್ರಯತ್ನವಿದು. ವಿಧಿಬರಹ, ಹಣೆಬರಹ, ಅದೃಷ್ಟ – ಎಂಬೆಲ್ಲ ಪದಗಳು ಈ ಹೊಣೆಗಾರಿಕೆಯ ಜಾರಿಕೆಗೆ ನೀಡುವ ಸಮಜಾಯಿಷಿಗಳು. ಪುರುಷಪ್ರಯತ್ನಕ್ಕೆ ಒತ್ತುಕೊಡದೆ ವಿಧಿಗೆ ಬದುಕನ್ನು ಒಪ್ಪಿಸುವ ದೌರ್ಬಲ್ಯದಿಂದ ಮೊದಲಿಗೆ ಪಾರಾಗಬೇಕು.

ಹೊಣೆಗಾರಿಕೆಯೆಂದರೆ ಜವಾಬ್ದಾರಿಯೇ. ಅಂದರೆ ನಮ್ಮ ಕ್ರಿಯೆ, ನಡೆ, ಅದರಿಂದಾಗುವ ಪರಿಣಾಮಗಳ ಬಗ್ಗೆ ಪೂರ್ಣ ಹೊಣೆಯನ್ನು ಹೊರುವುದು. ‘ಪರೀಕ್ಷೆ ಬರೆದೆ; ಆದರೆ ನಿರೀಕ್ಷಿತ ಫಲಿತಾಂಶ ಬರಲಿಲ್ಲ, ಮೌಲ್ಯಮಾಪಕರು ಕಾರಣ.’ ‘ಸ್ಫರ್ಧಾತ್ಮಕ ಪರೀಕ್ಷೆ ಬರೆಯುವುದಿಲ್ಲ, ಏಕೆಂದರೆ ಅಲ್ಲಿ ಕೇವಲ ವಂಚನೆ ನಡೆಯುತ್ತಿದೆ’ ಎಂಬೆಲ್ಲ ನಕಾರಾತ್ಮಕ ಹೇಳಿಕೆಗಳನ್ನು ಕೇಳುತ್ತಲೇ ಇರುತ್ತೇನೆ. ಇವು ಸಾರ್ವಜನಿಕ ಸತ್ಯವೆಂದು ಗೋಚರಿಸಬಹುದಾದರೂ, ಇಂಥವು ಸಾರ್ವತ್ರಿಕ ಸತ್ಯವಾಗಲಾರವು. ಇಂಥ ಸಂಗತಿಗಳು ನಡೆಯುವುದಿಲ್ಲವೆಂದಲ್ಲ. ಪ್ರತಿ ಬಾರಿಯೂ ಅದು ನಡೆಯುತ್ತದೆ ಮತ್ತು ಅದು ತಮಗೇ ಆಗುತ್ತದೆ ಎಂದೂ ಹೆದರುವುದು ತಪ್ಪು. ಅದು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಬೇಜವಾಬ್ದಾರಿತನ.

ಶ್ರೀರಾಮಕೃಷ್ಣ ಪರಮಹಂಸರು ಒಂದು ಸೊಗಸಾದ ದೃಷ್ಟಾಂತದ ಮೂಲಕ ಮನುಷ್ಯನ ಹೊಣೆಗಾರಿಕೆಯ ಜಾಣತನದ ಬಗ್ಗೆ ತಿಳಿಸಿಕೊಡುತ್ತಾರೆ. ಬ್ರಾಹ್ಮಣನೊಬ್ಬ ತೋಟವೊಂದನ್ನು ಬೆಳೆಸಿರುತ್ತಾನೆ. ಒಂದು ದಿನ ತುಡುಗು ದನವೊಂದು ಬಂದು ಇವನ ತೋಟವನ್ನು ಮೇಯ್ದು ಹಾಳುಗೆಡವುತ್ತಿರುತ್ತದೆ. ಅವನು ಕೋಪದಿಂದ ದೊಣ್ಣೆಯನ್ನು ಬೀಸಿ ಹಸುವಿಗೆ ಹೊಡೆಯುತ್ತಾನೆ. ಆ ಹೊಡೆತಕ್ಕೆ ಹಸು ಸತ್ತುಬೀಳುತ್ತದೆ. ಆ ಬ್ರಾಹ್ಮಣನಿಗೆ ಈಗ ಗೋಹತ್ಯೆಯ ಪಾಪ ತಗಲುವ ಭಯ ಉಂಟಾಗುತ್ತದೆ. ಆದರೆ ಅವನ ತರ್ಕಬುದ್ಧಿ ಜಾಗೃತವಾಗಿ ಅವನು ಹೀಗೆ ಯೋಚಿಸುತ್ತಾನೆ: ‘ದೇಹದ ಎಲ್ಲ ಅಂಗಗಳೂ ದೇವತೆಗಳಿಗೆ ಸೇರಿದವು. ಕೈ ಇಂದ್ರನ ಸ್ಥಾನ. ಹೀಗಾಗಿ ಹಸುವನ್ನು ಕೊಂದವನು ಇಂದ್ರನೇ ಹೊರತು ತಾನಲ್ಲ.’

ಇಂದ್ರನು ಈ ಬ್ರಾಹ್ಮಣನಿಗೆ ಬುದ್ಧಿಯನ್ನು ಕಲಿಸುವ ಸಲುವಾಗಿ ಮಾರುವೇಷದಲ್ಲಿ ಬಂದು ಅವನನ್ನು ತೋಟದಲ್ಲೇ ಭೇಟಿಯಾಗುತ್ತಾನೆ. ಮೊದಲಿಗೆ ತೋಟವನ್ನು ಮೆಚ್ಚಿಕೊಳ್ಳುತ್ತಾನೆ. ‘ಸೊಗಸಾದ ತೋಟ, ಯಾರದು?’ ಎನ್ನುತ್ತಾನೆ. ಅದಕ್ಕೆ ಆ ಬ್ರಾಹ್ಮಣ, ‘ನನ್ನದು’ ಎನ್ನುತ್ತಾನೆ. ಬಳಿಕ ಸುಂದರವಾಗಿ ಬೆಳೆದ ಗಿಡವೊಂದರ ಬಳಿ ನಿಂತು ‘ಈ ಗಿಡ ಬೆಳೆಸಿದವರಾರು?’ ‘ನಾನೇ ಕೈಯಾರೆ ಬೆಳೆಸಿದ್ದು’ ಎಂಬ ಉತ್ತರ. ಬಳಿಕ ಫಲಭರಿತ ವೃಕ್ಷದ ಬಳಿ ನಿಂತು ಅದೇ ಪ್ರಶ್ನೆ. ‘ನಾನೇ ಕೈಯಾರೆ ನೀರು ಎರೆದು ಪೋಷಿಸಿದೆ. ಮರ ನನ್ನದೇ’ ಎಂದು ಉತ್ತರಿಸುತ್ತಾನೆ, ಆ ಬ್ರಾಹ್ಮಣ. ಬಳಿಕ ಸತ್ತ ಹಸುವನ್ನು ತೋರಿಸಿ ದೇವೇಂದ್ರ, ‘ಇದು ಯಾರ ಕೆಲಸ? ಗಿಡ ಮರ ಪೋಷಿಸಿದಾಗ ಕೈಗಳು ನಿನ್ನವು, ತಪ್ಪೆಸಗಿದಾಗ ಅದು ದೇವೇಂದ್ರನದಾಗುತ್ತದೊ?’ ಎಂದು ಪ್ರಶ್ನಿಸಿ ಮರೆಯಾಗುತ್ತಾನೆ.

ನಮ್ಮೆಲ್ಲ ಕಾರ್ಯಗಳಿಗೆ ನಾವೇ ಹೊಣೆಗಾರರಲ್ಲದೆ ಬೇರಾರೂ ಅಲ್ಲ.

ಹೊಣೆಗಾರಿಕೆ ಎಂದರೆ ನಮ್ಮ ಜೀವನದ ಎಲ್ಲ ಮಜಲುಗಳಲ್ಲಿ ತನ್ನ ಪ್ರಜ್ಞಾಪೂರ್ವಕ ಭಾಗವಹಿಸುವಿಕೆಯನ್ನು ಗುರುತಿಸಿಕೊಳ್ಳುವುದು. ‘ವಿಧಿ’ಗೆ ತನ್ನನ್ನು ಒಪ್ಪಿಸದೆ ಗಟ್ಟಿಯಾಗಿ ನಿಲ್ಲುವ ವಿವೇಕ ಇರಬೇಕು. ‘ಕಗ್ಗ’ ಹೇಳುತ್ತದೆ: ‘ನರಜೀವನದ ರಣದಿ ವಿಧಿಯ ಬಲವೊಂದು ಕಡೆ, ಚಿರವಿವೇಕದಿ ಬೆಳೆದ ನಲುಮೆಯೊಂದು ಕಡೆ, ಉರುಬುತಿರೆ ಪುರುಷಂಗೆ ನಲುಮೆಯುಳಿತವೆ ಗೆಲವು ಪುರುಷತನವೇ ವಿಜಯ – ಮಂಕುತಿಮ್ಮ.’ ಮನುಷ್ಯನ ಜೀವಿತದಲ್ಲಿ ವಿಧಿ ಮತ್ತು ಪುರುಷಪ್ರಯತ್ನದ ಪಾತ್ರವನ್ನು ಕಗ್ಗದ ಈ ಪದ್ಯ ಬಿಂಬಿಸುತ್ತಿದೆ. ವಿಧಿಯ ಬಲ ಅವನ ಜೀವನವನ್ನು ಒಂದು ಕಡೆಗೆ ಸೆಳೆಯುತ್ತಿದ್ದರೆ, ವಿವೇಕದಿಂದ ಉದಿಸಿದ ಬಲ ಇನ್ನೊಂದು ಕಡೆಗೆ ಎಳೆಯುತ್ತಿರುತ್ತದೆ.

‘ವಿಧಿವಶ’ರಾಗುವುದು ಸುಲಭ. ಇದು ನೀರಿನ ಸಹಜ ಸೆಳೆತದ ಜೊತೆಗೆ ಈಜುವಂತಹದ್ದು. ಆದರೆ ವಿವೇಕದ ಬಲ, ಅದರ ವಿರುದ್ಧ ಈಜುವಂತಹದ್ದು. ಹೀಗಾಗಿ ಯಶಸ್ವೀ ಬದುಕು ಪುರುಷಪ್ರಯತ್ನದ ವಿಜಯಕುಸುಮಗಳ ಮಾಲೆ. ಅದನ್ನೇ ಕಗ್ಗವು ‘ಪುರುಷತನವೇ ವಿಜಯ’ ಎನ್ನುತ್ತದೆ. ವಿವೇಕ ಹೀಗೆ ಮಾಡೆಂದರೂ ಅಲ್ಲಿ ಸಂಕಲ್ಪಬಲವೂ ಬೇಕು. ವಿವೇಕ ಮತ್ತು ಸಂಕಲ್ಪ ಸೇರಿ ಪುರುಷಪ್ರಯತ್ನ.

ಹೊಣೆಗಾರಿಕೆಯು ವ್ಯಕ್ತಿಯಲ್ಲಿ ಪರಿಪೂರ್ಣವಾಗಿ ವಿಕಾಸಗೊಂಡಾಗ ಅವನು ಅದನ್ನು ಸಾರ್ವತ್ರಿಕ ಮೌಲ್ಯವಾಗಿ ಕಾಣಬಯಸುತ್ತಾನೆ. ಅದನ್ನು ಸಾರ್ವಜನಿಕ ಜೀವನದಲ್ಲಿ ಅಳವಡಿಸಬಯಸುತ್ತಾನೆ. ಬಾಪೂ ಅವರಿಗೆ ಆದದ್ದು ಅದೇ. ಭಾರತೀಯರಾದ ನಮಗೆ ಸ್ವಾತಂತ್ರ್ಯ ಬೇಕಿತ್ತು. ಆದರೆ ಅದಕ್ಕೆ ಬೇಕಾದ ಜನಾಂಗೀಯ ಆಂತರಿಕ ಮೌಲ್ಯ ಇರಲಿಲ್ಲ. 1902ರಲ್ಲಿ ಸ್ವಾಮಿ ವಿವೇಕಾನಂದರನ್ನು ಸಂದರ್ಶಿಸಿದ ಪತ್ರಕರ್ತನೊಬ್ಬ, ‘ಭಾರತ ಸ್ವಾತಂತ್ರ್ಯ ಪಡೆಯುವ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಪ್ರಶ್ನಿಸಿದಾಗ, ಅವರು ‘ಸ್ವಾತಂತ್ರ್ಯ? ಅದನ್ನು ನಾಳೆಯೇ ದೊರಕಿಸಬಲ್ಲೆ.

ಆದರೆ ಮನುಷ್ಯರೆಲ್ಲಿದ್ದಾರೆ ಇಲ್ಲಿ?’ (ಅದಕ್ಕೆ ಅರ್ಹತೆ ಪಡೆದಿಲ್ಲವೆಂಬ ಸೂಚನೆ) ಎಂದು ಉತ್ತರಿಸುತ್ತಾರೆ. ಮುಂದಿನ 45 ವರ್ಷ ದೇಶದಲ್ಲಿ ನಡೆದದ್ದು ಅದೇ. ಅವರ ಚಿಂತನೆಯ ತಳಹದಿಯ ಮೇಲೆಯೇ ಹೋರಾಟಗಳು ರೂಪುಗೊಂಡವು. ಎಲ್ಲ ರಾಷ್ಟ್ರನಾಯಕರೂ ವಿವೇಕಾನಂದರ ಚಿಂತನೆಯಿಂದ ಪ್ರಭಾವಿತರಾದವರೇ. ಗಾಂಧೀಜಿ ಅವರ ಇಡೀ ಹೋರಾಟ ವ್ಯಕ್ತಿಯ ಆಂತರಿಕ ಶಕ್ತಿಯ ವಿಕಾಸದ ಮೇಲೆ ನಿಂತಿತ್ತು. ಅವರಿಗೆ ಗುರಿಯಷ್ಟೆ ದಾರಿಯೂ ಮುಖ್ಯವಾಗಿತ್ತು.

ಮೌಲ್ಯವನ್ನು ಸಾರ್ವತ್ರಿಕ ಎಂದು ಭಾವಿಸುವ ಕವಿಹೃದಯಿಗಳು ಇದ್ದಾರೆ. ಮನುಷ್ಯನ ಅಂತರಂಗದ ಹೃದಯಶಿವನನ್ನು ಎಚ್ಚರಿಸುವ ಡಿಂಡಿಮದ ಕರೆಯನ್ನು ಅವರು ನೀಡುತ್ತಲೇ ಬಂದಿದ್ದಾರೆ. ‘ದಿ ಪ್ರಾಫೆಟ್‌’ ಕೃತಿಯಲ್ಲಿ ಗಿಬ್ರಾನ್‌ ಸಮುದಾಯವನ್ನು ಪರಿಪೂರ್ಣತೆಯತ್ತ ಸಾಗುವ ಮೆರವಣಿಗೆಯ ಗುಂಪಿಗೆ ಹೋಲಿಸುತ್ತಾನೆ. ತಪ್ಪುಗಳನ್ನು ಸಾರ್ವತ್ರಿಕ ಹೊಣೆಗಾರಿಕೆಗೆ ಜೋಡಿಸುವ ಪ್ರಯತ್ನ ಮಾಡುತ್ತಾನೆ. ಪ್ರತಿಯೊಬ್ಬರೂ ಮತ್ತೊಬ್ಬರ ನಡವಳಿಕೆಗೆ ಜವಾಬ್ದಾರರು ಎನ್ನುತ್ತಾನೆ. ತಪ್ಪೆಸಗಿದವನನ್ನು ಕುರಿತು, ಅವನೆಸಗಿದ ತಪ್ಪಿಗೆ ನೀವೂ ಹೊಣೆಗಾರರೆನ್ನುತ್ತಾನೆ (The wrong-doer cannot do wrong without the hidden will of you all). ಹೀಗೆ ಹೊಣೆಗಾರಿಕೆ ವೈಯಕ್ತಿಕವೂ ಹೌದು, ಸಾರ್ವತ್ರಿಕವೂ ಹೌದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.